ಪ್ರೀತಿಯ ಅಂಗಡಿ ಮಾಲೀಕನಿಗೆ ಜನ್ಮ ದಿನದ ಶುಭಾಶಯಗಳು

Most read

ನಿಮ್ಮ ಗುರಿ ಸ್ಪಷ್ಟವಿರಲಿ, ದಾರಿ ನ್ಯಾಯಸಮ್ಮತವಾಗಿರಲಿ, ಸಿದ್ಧಾಂತ ಜೀವಪರವಾದುದಿರಲಿ, ನಡೆವ ಹಾದಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿರಲಿ, ಸೋಲುಗಳ ಬಂಡೆಗಳೇ ಇರಲಿ, ಛಲದ ಊರುಗೋಲು ಹಿಡಿದುಕೊಂಡು ಸತ್ಯದ ಹಾದಿಯಲ್ಲಿ ನೀವು ಮುನ್ನಡೆದಲ್ಲಿ ಅಂತಿಮ ಗೆಲುವು ನಿಮ್ಮದೇ ಆಗಿರುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಸದ್ಯ ನಮ್ಮ ಮುಂದೆ ಇರುವ ಒಂದು ಅತ್ಯುತ್ತಮ ಉದಾಹರಣೆ. ಪ್ರೀತಿಯ ಅಂಗಡಿ ಮಾಲೀಕನಿಗೆ ನಮ್ಮದೂ ಒಂದು ಶುಭಾಶಯ ಹೇಳೋಣ- ಶ್ರೀನಿವಾಸ ಕಾರ್ಕಳ.

“ಮೊದಲು ಅವರು ನಿಮ್ಮನ್ನು ಕಡೆಗಣಿಸುತ್ತಾರೆ, ಆ ಬಳಿಕ ಅವರು ನಿಮ್ಮನ್ನು ಗೇಲಿ ಮಾಡುತ್ತಾರೆ, ಆನಂತರ ಅವರು ನಿಮ್ಮೊಂದಿಗೆ ಜಗಳವಾಡುತ್ತಾರೆ, ಆದರೆ ಅಂತಿಮ ಜಯ ನಿಮ್ಮದೇ ಆಗಿರುತ್ತದೆ” ಎಂಬ, ಗಾಂಧೀಜಿಯದ್ದು ಎನ್ನಲಾಗುವ ಒಂದು ಮುತ್ತಿನಂತಹ ಮಾತಿದೆ. ಇದಕ್ಕೆ ನಮ್ಮ ಮುಂದೆ ಸದ್ಯ ಕಾಣುವ ಒಂದು ಅತ್ಯುತ್ತಮ ಉದಾಹರಣೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ನಮಗೆಲ್ಲ ಗೊತ್ತಿರುವ ಹಾಗೆ ರಾಹುಲ್ ಗಾಂಧಿ ಅತ್ಯಂತ ದಾರುಣ ದೃಶ್ಯಗಳನ್ನು ನೋಡುತ್ತ, ಅನುಭವಿಸುತ್ತಾ ಬೆಳೆದವರು. ಅಜ್ಜಿ ಇಂದಿರಾಗಾಂಧಿಯವರನ್ನು ಅವರ ಅತ್ಯಂತ ವಿಶ್ವಾಸಾರ್ಹ ಅಂಗರಕ್ಷಕರೇ 32 ಬಾರಿ ಗುಂಡು ಹಾರಿಸಿ ಕೊಂದರು. ಚಿಕ್ಕಪ್ಪ ಸಂಜಯ್ ಗಾಂಧಿ ಆಕಾಶದಿಂದ ಉದುರಿದ ವಿಮಾನದೊಂದಿಗೆ ನೆಲಕ್ಕಪ್ಪಳಿಸಿ ದಾರುಣ ಅಂತ್ಯ ಕಂಡರು. ಅಪ್ಪ ರಾಜೀವ ಗಾಂಧಿಯನ್ನು ಭಯೋತ್ಪಾದಕರು ಕೊರಳಿಗೆ ಹಾರ ಹಾಕಿ, ಬಾಗಿ, ಕೈ ಮುಗಿದು, ಬಾಂಬ್ ಸಿಡಿಸಿ ಛಿದ್ರ ಛಿದ್ರಗೊಳಿಸಿದರು.

ಇಂತಹ ಒಂದು ದಾರುಣ ಬಾಲ್ಯ ಕಂಡ ರಾಹುಲ್ ಗಾಂಧಿ ಏನಾಗಬೇಕಿತ್ತು? ಬದುಕುವುದೇ ಬೇಡ ಎಂಬ ಖಿನ್ನತೆ ಆತನಲ್ಲಿ ಆವರಿಸಿಕೊಳ್ಳಬೇಕಿತ್ತು. ಇಡೀ ಜಗತ್ತಿನ ಮೇಲೆ ದ್ವೇಷ ಮೂಡಬೇಕಿತ್ತು. ಪ್ರತೀಕಾರದ, ಹಿಂಸೆಯ ಹಾದಿ ಹಿಡಿಯೋಣ ಅನಿಸಬೇಕಿತ್ತು. ತನ್ನ ತಂದೆ ಅಜ್ಜಿಯನ್ನು ಕೊಂದವರನ್ನು ಕೊಲ್ಲಬೇಕು ಅನಿಸಬೇಕಿತ್ತು. ಹೀಗಾಗುತ್ತಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಕೊಂದವರನ್ನೂ ಕ್ಷಮಿಸಿದ ರಾಹುಲ್

ಆದರೆ ರಾಹುಲ್ ಗಾಂಧಿ ಹಾಗಾಗಲಿಲ್ಲ. ತನ್ನ ತಂದೆಯ ಕೊಲೆಗಡುಕರನ್ನು ಉದಾರವಾಗಿ ಕ್ಷಮಿಸಿಬಿಟ್ಟ. ಅವರನ್ನು ಶಿಕ್ಷಿಸಬೇಡಿ ಎಂದ. ಕುದಿ ರಕ್ತದ ಯುವ ದಿನಗಳಲ್ಲಿ ಅನೇಕ ಅಪ್ರಬುದ್ಧ ಮಾತುಗಳನ್ನಾಡಿದರೂ, ಅಪ್ರಬುದ್ಧ ನಡೆಗಳನ್ನು ಇರಿಸಿದರೂ, ವಯಸಿನೊಂದಿಗೆ ಮಾಗುತ್ತಾ ಬಾಗುತ್ತಾ, ಬೌದ್ಧಿಕವಾಗಿ ಬೆಳೆಯುತ್ತ ಹೋದ. ಎಲ್ಲ ಧರ್ಮಗ್ರಂಥಗಳನ್ನು ಅಭ್ಯಸಿಸಿದ. ಧಾರ್ಮಿಕ ಗುರುಗಳನ್ನು ಮಾತನಾಡಿಸಿದ. ಭಾರತದ ನಿಜವಾದ ಅಂತಃಸತ್ವ ಏನೆಂಬುದನ್ನು ತಿಳಿಯುತ್ತ ಹೋದ. ದೇಶದಾದ್ಯಂತ ಸಂಚರಿಸಿ ಜನರಿಗೆ ಉಪದೇಶ ನೀಡುವ ಬದಲು, ಅವರ ಮಾತುಗಳನ್ನು ಆಲಿಸುತ್ತ ಹೋದ. ಈ ಆಲಿಸುವ ವಿನಯವೇ ಜನರನ್ನು ಮತ್ತು ದೇಶವನ್ನು ಅರ್ಥಮಾಡಿಕೊಳ್ಳಲು ಆತನಿಗೆ ಸಹಾಯ ಮಾಡಿತು. ಅತನನ್ನು ಜನನಾಯಕನನ್ನಾಗಿಸಿತು.

ಸೋಲುಗಳು ಆತನನ್ನು ಧೃತಿಗೆಡಿಸಲಿಲ್ಲ. ದ್ವೇಷ ಈ ದೇಶವನ್ನು ನಾಶ ಮಾಡುತ್ತದೆ. ಈ ದೇಶವನ್ನು ಒಂದಾಗಿ ಉಳಿಸಿದರೆ, ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದರೆ ಅದು ಪ್ರೀತಿ ಮಾತ್ರ ಎಂಬುದನ್ನು ಅರಿತು ‘ದ್ವೇಷದ ಬಜಾರಿನಲ್ಲಿ ಪ್ರೀತಿಯ ದುಕಾನು’ ತೆರೆಯ ಹೊರಟ. ಹತ್ತು ವರ್ಷಗಳ ರಾಜಕೀಯ ಸೋಲು ಮತ್ತು ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ. ಎದುರಾಳಿಯು ಮೊಗಲ್, ಮುಸ್ಲಿಂ, ಮುಸ್ಲಿಂ ಲೀಗ್, ಮಚಲಿ, ಮಟನ್, ಮಂಗಲ ಸೂತ್ರದ ಹೆಸರಿನಲ್ಲಿ ಒಡೆಯುವ ಮಾತು ಆಡುತ್ತಾ ಓಟು ಕೇಳಿದರೆ ರಾಹುಲ್ ಅಂಬೇಡ್ಕರ್ ಫೋಟೋ ಮತ್ತು ಭಾರತ ಸಂವಿಧಾನದ ಪುಸ್ತಕ ಹಿಡಿದು ಓಟು ಕೇಳಿದ. ಚುನಾವಣೆ ಮುಕ್ತವೂ ಆಗಿರಲಿಲ್ಲ, ನ್ಯಾಯಸಮ್ಮತವೂ ಆಗಿರಲಿಲ್ಲ. ಬಿಜೆಪಿಯ ಬಳಿಯಲ್ಲಿ ಸಾವಿರ ಸಾವಿರ ಕೋಟಿ ಹಣವಿತ್ತು, ಸರಕಾರಿ ಯಂತ್ರಗಳ ನೆರವಿತ್ತು, ನ್ಯಾಯಾಲಯದ ಬೆಂಬಲವೂ ಇತ್ತು, ಚುನಾವಣಾ ಆಯೋಗವು ಬಿಜೆಪಿಯ ವಿಸ್ತರಿತ ಸಂಸ್ಥೆಯಂತೆಯೇ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಾರಿಕೊಂಡ ಮಾಧ‍್ಯಮಗಳ ಬಲವಿತ್ತು.

ಸತ್ಯಮೇವ ಜಯತೇ

ಆದರೆ, ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿತ್ತು, ಉಮೇದುವಾರರ ಚುನಾವಣಾ ಠೇವಣಿ ಇಡುವುದಕ್ಕೂ ಹಣವಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಪಕ್ಷದ ಅಧ್ಯಕ್ಷ ಖರ್ಗೆಯ ಜತೆಗೂಡಿ ರಾಹುಲ್ ಸುಮಾರು ಎರಡು ತಿಂಗಳ ಕಾಲ ದೇಶದಾದ್ಯಂತ ನಿರಂತರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಚುನಾವಣೆ ಮುಗಿದ ಬಳಿಕವೂ ವಿರೋಧಿಗಳ ಕಪಟ ಆಟ ಮುಗಿಯಲಿಲ್ಲ. ಮತಗಟ್ಟೆ ಸಮೀಕ್ಷೆಯ ಹೆಸರಿನಲ್ಲಿ ಮತ್ತೆ ಬಿಜೆಪಿಗೆ 400 ಸೀಟು ಇಂಡಿಯಾ ಕೂಟಕ್ಕೆ 150 ಸೀಟು ಎನ್ನಲಾಯಿತು. ಆಗಲೂ ರಾಹುಲ್ ಧೃತಿಗೆಡಲಿಲ್ಲ.

ಆದರೆ ಜೂನ್ 4 ರ ಫಲಿತಾಂಶ ಸತ್ಯಕ್ಕೆ ಜಯವನ್ನು ತಂದುಕೊಟ್ಟಿತು. 400 ಬಿಡಿ, ಬಿಜೆಪಿಗೆ ಸರಳ ಬಹುಮತವೂ ಬರಲಿಲ್ಲ. ಈ ಹಿಂದೆ ಇದ್ದ ಸ್ಥಾನಗಳಲ್ಲಿಯೂ 63 ಸ್ಥಾನಗಳನ್ನು ಅದು ಕಳೆದುಕೊಂಡಿತು. ಎನ್ ಡಿ ಎ ಕೂಟದ ಬಲ ಸಿಕ್ಕ ಮೇಲೂ ಬಿಜೆಪಿ ಗಳಿಸಿದ್ದು ಬಹುಮತಕ್ಕಿಂತ ಕೇವಲ 20 ಅಧಿಕ ಸ್ಥಾನಗಳು.

ಬಹಳ ಭರವಸೆಯಿದ್ದ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಯಿತು. ವಾರಣಾಸಿಯಲ್ಲಿ ಮೋದಿಯವರು ಗೆದ್ದುದು ಅಲ್ಪ ಬಹುಮತದೊಂದಿಗೆ. ಉತ್ತರಪ್ರದೇಶದಲ್ಲಿ CSDS ಸಂಸ್ಥೆ ಮಾಡಿದ ಸಮೀಕ್ಷೆಯಲ್ಲಿ ಯಾರು ಪ್ರಧಾನಿಯಾಗಬೇಕು ಎಂಬ ಪ್ರಶ್ನೆ ಇರಿಸಿದಾಗ ಮೊದಲ ಸ್ಥಾನ ಸಿಕ್ಕಿದ್ದು ರಾಹುಲ್ ಗಾಂಧಿಗೆ.

ರಾಯಬರೇಲಿ ಮತ್ತು ವಯನಾಡ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ ರಾಹುಲ್ ಹಲವು ಲಕ್ಷಗಳ ಅಂತರದಿಂದ ಎರಡೂ ಕಡೆ ಗೆದ್ದಿದ್ದಾರೆ. ರಾಹುಲ್ ಗಾಂಧಿಯನ್ನು ಗೇಲಿಮಾಡುತ್ತಾ ರಾಜಕೀಯ ಜೀವನ ಕಳೆದ ಸ್ಮೃತಿ ಇರಾನಿ ಸೋತು ಮನೆ ಸೇರಿದ್ದಾರೆ. ಇದೀಗ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಆಗುವ ಹಾದಿಯಲ್ಲಿದ್ದಾರೆ. ಪ್ರತಿಪಕ್ಷ ನಾಯಕ ಎಂದರೆ PM in waiting, ಮುಂದಿನ ಪ್ರಧಾನಿ ಎಂಬಂತೆಯೇ ಅರ್ಥ.

ತೇಜೋವಧೆಗೆ ಸಾವಿರ ಸಾವಿರ ಕೋಟಿ

ತಮ್ಮ ಪ್ರಾಮಾಣಿಕತೆ, ಛಲ, ದಿಟ್ಟತನ, ಸೈದ್ಧಾಂತಿಕ ಸ್ಪಷ್ಟತೆ, ಆರ್ ಎಸ್ ಎಸ್ ನ ವಿಭಜಕ ನೀತಿಯ ವಿರುದ್ಧದ ಖಚಿತ ನಿಲುವು ಇತ್ಯಾದಿಗಳ ಕಾರಣಕ್ಕೆ ರಾಹುಲ್ ಗಾಂಧಿ ತಮಗೆ ಸದಾ ಒಂದು ಅಪಾಯ ಎಂಬುದು ಬಿಜೆಪಿ/ ಆರ್ ಎಸ್ ಎಸ್ ಗೆ ಗೊತ್ತಿತ್ತು. ಇದೇ ಕಾರಣಕ್ಕೆ ಅತನನ್ನು ಎದೆಗುಂದಿಸಲು, ಅಯೋಗ್ಯ, ಪಪ್ಪು ಎಂದು ಬಿಂಬಿಸಲು, ಆತನನ್ನು ಕೆಳಕ್ಕೆ ತಳ್ಳುವ ಮೂಲಕ ತಮ್ಮನ್ನು ಮೇಲಕ್ಕೆ ಎತ್ತಿಕೊಳ್ಳಲು ಬಿಜೆಪಿ ಪರಿವಾರ ಸಾವಿರ ಸಾವಿರ ಕೋಟಿ ಹೂಡಿಕೆ ಮಾಡಿತ್ತು. ಆದರೆ ‘ಸತ್ಯ ಪರೇಶಾನ್ ಹೋಸಕ್ತಾ ಹೇ, ಪರಾಜಿತ್ ನಹೀಂ’ ಎಂಬ ಮಾತಿನಂತೆ, ಈಗ ಸತ್ಯಕ್ಕೆ ಜಯವಾಗಿದೆ.

ಈಗ ‘ರಾಹುಲ್ ಏನು ಹೇಳುತ್ತಾರೆ’ ಎಂಬುದನ್ನು ಆಲಿಸಲು ಕೋಟ್ಯಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಅವರ ವೀಡಿಯೋಗಳಿಗೆ ಮಿಲಿಯಗಟ್ಟಲೆ ವೀಕ್ಷಕರಿದ್ದಾರೆ. ಈವತ್ತು ಸೋಶಿಯಲ್ ಮೀಡಿಯಾ ನೋಡಿ, ಅಲ್ಲಿ ಸಾವಿರ ಸಾವಿರ ಮಂದಿ, ರಾಜಕೀಯ ಘಟಾನುಘಟಿಗಳೂ ಸೇರಿದಂತೆ, ರಾಹುಲ್ ಗೆ ಶುಭಾಶಯ ಕೋರುತ್ತಿದ್ದಾರೆ.

ನಿಮ್ಮ ಗುರಿ ಸ್ಪಷ್ಟವಿರಲಿ, ದಾರಿ ನ್ಯಾಯಸಮ್ಮತವಾಗಿರಲಿ, ಸಿದ್ಧಾಂತ ಜೀವಪರವಾದುದಿರಲಿ, ನಡೆವ ಹಾದಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿರಲಿ, ಸೋಲುಗಳ ಬಂಡೆಗಳೇ ಇರಲಿ, ಛಲದ ಊರುಗೋಲು ಹಿಡಿದುಕೊಂಡು ಸತ್ಯದ ಹಾದಿಯಲ್ಲಿ ನೀವು ಮುನ್ನಡೆದಲ್ಲಿ ಅಂತಿಮ ಗೆಲುವು ನಿಮ್ಮದೇ ಆಗಿರುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಸದ್ಯ ನಮ್ಮ ಮುಂದೆ ಇರುವ ಒಂದು ಅತ್ಯುತ್ತಮ ಉದಾಹರಣೆ. ಪ್ರೀತಿಯ ಅಂಗಡಿ ಮಾಲೀಕನಿಗೆ ನಮ್ಮದೂ ಒಂದು ಶುಭಾಶಯ ಹೇಳೋಣ. ‘ಜನ್ಮ ದಿನದ ಶುಭಾಶಯಗಳು ಶ್ರೀ ರಾಹುಲ್ ಗಾಂಧಿ’.


ಶ್ರೀನಿವಾಸ ಕಾರ್ಕಳ

ಸಾಮಾಜಿಕ ಕಾರ್ಯಕರ್ತರು

ಇದನ್ನೂ ಓದಿ-ರಾಹುಲ್ ಗಾಂಧಿ ರಾಯ್ ಬರೇಲಿ ಉಳಿಸಿಕೊಂಡು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಗೊತ್ತೇ?

More articles

Latest article