ರಾಜ್ಯ ಸರ್ಕಾರ ಕರ್ನಾಟಕದ ಮಹಾಮಾನವ, ಜಗತ್ತಿಗೆ ಪ್ರಜಾಪ್ರಭುತ್ವದ ಮೂಲಕಲ್ಪನೆಯನ್ನು ನೀಡಿದ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ. ಆದರೆ ಒಬ್ಬ ಅಧಿಕಾರಿ ಮಾಡಿದ ತಪ್ಪಿನಿಂದಾಗಿ ಸಾಂಸ್ಕೃತಿಕ ನಾಯಕ ಎನ್ನುವ ಬದಲು ಸಾಂಸ್ಕೃತಿಕ ರಾಯಭಾರಿ ಎಂಬ ಪದ ಸೇರಿಕೊಂಡಿತ್ತು. ಅದು ಸರಿಹೋಗಿದ್ದು ಹೇಗೆ ಗೊತ್ತೆ?
ಕರ್ನಾಟಕದ ನಿಜವಾದ ಅರ್ಥದ ಆತ್ಮಸಾಕ್ಷಿಯೇ ಆಗಿರುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಮೊದಲು ಪ್ರಸ್ತಾಪ ಮಾಡಿದವರು ಹಿರಿಯ ನ್ಯಾಯವಾದಿಗಳಾದ ಡಾ.ಸಿ.ಎಸ್.ದ್ವಾರಕಾನಾಥ್. ನಂತರ ಹಲವು ಪ್ರಾಜ್ಞರು ಈ ಕುರಿತು ಧ್ವನಿ ಎತ್ತಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಹೆಚ್ಚು ತಡಮಾಡದೇ ನಿರ್ಧಾರ ಕೈಗೊಂಡರು. ಆದರೆ ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಯಭಾರಿ ಎಂಬ ಪದವೇ ಅಂತಿಮವಾಗಿಬಿಡುವ ಅಚಾತುರ್ಯ ತಪ್ಪಿತು. ಈ ತಪ್ಪನ್ನು ಸರಿಪಡಿಸಿದ್ದು ಹೇಗೆ ಎಂಬುದನ್ನು ಬಸವಪ್ರಜ್ಞೆಯ ಚಿಂತಕ ಜಿ.ಬಿ.ಪಾಟೀಲ ಸ್ವಾರಸ್ಯಕರವಾಗಿ ಬರೆದಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.
ಇಂದು ಬೆಳ್ಳಂಬೆಳಗ್ಗೆ ಪೂಜ್ಯ ನಿಜಗುಣಾನಂದ ಶ್ರಿಗಳಿಂದ ಕರೆ.
“ಶರಣರಿ ಬುದ್ಧಿ” ಅನ್ನುತ್ತಿದ್ದಂತೆ, ಅವರು ನೇರ ವಿಷಯಕ್ಕೆ ಬಂದರು.
“ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸುತ್ತಾರಂತೆ, ಅದು ತಪ್ಪಾಗುತ್ತದೆ, ಅವರು ರಾಯಭಾರಿಯಲ್ಲ ನಾಯಕರು” ಎಂದರು. ಮುಂದುವರಿಯುತ್ತ
“ಇದೆ ರೀತಿಯಲ್ಲಿ ವೀರಶೈವರು ಲಿಂಗಾಯತರು ಒಂದೇ ಎಂದು ಹೇಳಿ ವೀರಶೈವ ಮಹಾಸಭಾ ಆಗಿದೆಯಲ್ಲ ಈಗ ಅದರ ಫಜೀತಿ ಅನುಭವಿಸುತ್ತಿದ್ದೇವೆ, ಇನ್ಮುಂದೆ ಆ ಥರ ಆಗಬಾರದು” ಎಂದರು. “ನಾವು ಶಬ್ದಗಳ ಅರ್ಥವನ್ನು ಸರಿಯಾಗಿ ಗ್ರಹಿಸದೆ ಹೋದರೆ ನಾಯಕರಾದವರು ರಾಯಭಾರಿಯಾಗಬೇಕಾಗುತ್ತದೆ” ಎಂದರು. “ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು. ಅವರು ಲಿಂಗಾಯತರ ನಾಯಕರು ರಾಯಭಾರಿಯಲ್ಲ” ಎಂದರು ಬೇಸರದಿಂದ.
“ಬುದ್ಧಿ ತಾವಲ್ಲವೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು” ಎಂದೆ. “ಮು.ಮಂತ್ರಿಗಳಿಗೆ ಮನವಿ ಸಲ್ಲಿಸುವ ಸಭೆಯಲ್ಲಿ ನಾನಿರಲಿಲ್ಲ” ಎಂದು ಸ್ಪಷ್ಟಪಡಿಸಿದರು.
“ಸರಿ,ಈಗೇನು ಮಾಡಬೇಕು ಅಪ್ಪಣೆ ಕೊಡಿ ” ಎಂದೆ.
“ಯಾವೂದೇ ಕಾರಣಕ್ಕೂ ರಾಯಭಾರಿಯಂದು ಘೋಷಿಸಬಾರದು ಅವರು ನಾಯಕರು, ಅವರನ್ನು ನಾಯಕರೆಂದೇ ಘೋಷಣೆ ಮಾಡಬೇಕು, ಅದಕ್ಕಾಗಿ ನಿಮ್ಮ ಕೈಲಾದದ್ದನ್ನು ಮಾಡಿ” ಎಂದರು.
“ವಿಷಯ ಮೊದಲು ಪ್ರಸ್ತಾಪಿಸಿದ್ದರೆ ಚೆನ್ನಾಗಿತ್ತು ಪ್ರಯತ್ನ ಪಡುವೆ ಬುದ್ದಿ” ಎಂದು ಫೋನಿಟ್ಟೆ.
ತಕ್ಷಣಕ್ಕೆ ನೆನಪಾದವರು ಸಚಿವ
ಶ್ರೀ ಎಂ.ಬಿ.ಪಾಟೀಲರು. ಅವರಿಗೆ ಕರೆ ಮಾಡಿದೆ. ಫೊನು ರಿಂಗಣಿಸಿತು. ಪಾಟೀಲರು ಫೋನು ತೆಗೆಯಲಿಲ್ಲ. ತಕ್ಷಣ ನೆನಪಾಯಿತು ಅವರು ವಿದೇಶದಲ್ಲಿರುವ ಸಂಗತಿ. ನಂತರ ಅವರ ಸಿಬ್ಬಂದಿಗೆ ಕರೆ ಮಾಡಿ ವಿಷಯ ಚರ್ಚಿಸಿದೆ. ಅವರಿಗೂ ಪೂಜ್ಯರಿಂದ ಕರೆ ಬಂದಿದೆ ಎಂದು ತಿಳಿಸಿದರು. ಆಪತ್ ಬಾಂಧವ ಪಾಟೀಲರ ಅನುಪಸ್ಥಿತಿ ಕಾಡಲಾರಂಭಿಸಿತು. ನಂತರ ನೆನಪಾದವರು ಕ್ಯಾಬಿನೆಟ್ ದರ್ಜೆಯ ಸಿ. ಎಂ. ರಾಜಕೀಯ ಸಲಹೆಗಾರ ಶ್ರೀ ಬಿ. ಆರ್. ಪಾಟೀಲ ಸಾಹೇಬರು. ಅವರಿಗೆ ವಿಷಯ ಮುಟ್ಟಿಸಿ ಮನದಟ್ಟು ಮಾಡಿದೆ. ರಾಯಭಾರಿ ಒಂದು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ, ಬಸವಣ್ಣ ಅಧಿಕಾರಿಯಲ್ಲ ಅವರು ಲಿಂಗಾಯತರ ನಾಯಕ, ನಾಡಿನ ನಾಯಕ ಅವರನ್ನು ರಾಯಭಾರಿ ದರ್ಜೆಗೆ ಇಳಿಸಲಾಗುವುದಿಲ್ಲ. ಅವರೆ ಸರಕಾರವನ್ನು ನಿಯಂತ್ರಿಸುವ ನಾಯಕರು ಎಂದು ವಿಷಯ ಮನದಟ್ಟು ಮಾಡಿದೆ. ಪಾಟೀಲ ಸಾಹೇಬರು ತಾವು ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ವಿಷಯ ಚರ್ಚಿಸುತ್ತೇನೆ, ಆದರೆ “ನಾನು ಕ್ಯಾಬಿನೆಟ್ ನಲ್ಲಿ ಇರುವದಿಲ್ಲ ಕಾರಣ ನೀವು ಶ್ರೀ ಶರಣ ಪ್ರಕಾಶ ಪಾಟೀಲರೊಂದಿಗೆ ಮಾತಾಡಿ” ಎಂದರು.
ಅದನ್ನೂ ಮಾಡಿದೆ.
ಸಚಿವ ಶ್ರೀ ಎಂ.ಬಿ. ಪಾಟೀಲರ ಅನುಪಸ್ಥಿತಿಯಲ್ಲಿ ಇದರ ಬಗ್ಗೆ ಗಡುಸಾಗಿ ಮಾತಾಡಬಲ್ಲವರು ಈಶ್ವರ ಖಂಡ್ರೆ ಸಾಹೇಬರು ಎಂದು ಅರಿವಿಗೆ ಬಂತು. ಅವರನ್ನು ಸಂಪರ್ಕಿಸಲು ಪ್ರಯತ್ನ ಶುರುವಾಯಿತು. ಅವರಿಗಿರುವ ಎರಡೂ ಫೋನುಗಳು ರಿಂಗಣಿಸಲೇ ಇಲ್ಲ. ದಾರಿ ಕಾಣದೆ ನನ್ನ ಸ್ನೇಹಿತರಾಗಿರುವ ಅವರಿಗೂ ಆಪ್ತರಾಗಿರುವವರಿಗೆ ಫೋನಾಯಿಸಿ ಪ್ರಸ್ತಾವನೆ ಸಲ್ಲಿಸಿದೆ.
“ಒಂದು ನಿಮಿಷ ಇರಿ, ಎಂದು ಸದಾಕಾಲ ಅವರೊಂದಿಗಿರುವ ಅವರ ಸ್ನೇಹಿತರಿಗೆ ಕರೆ ಮಾಡಿದರು. ಆಗ ಸಂಪರ್ಕಕ್ಕೆ ಬಂದರು ಖಂಡ್ರೆ ಸಾಹೇಬರು. “ಈಗಾಗಲೇ ಅದರ ಬಗ್ಗೆ ಕರೆಗಳು ಬಂದಿವೆ ನೀವೇನು ಕಾಳಜಿ ಮಾಡಬೇಡ್ರಿ, ನಾನು ಆ ಕೆಲಸ ಮಾಡತೀನಿ” ಅಂದರು.
ಕ್ಯಾಬಿನೆಟ್ ಅಜೆಂಡಾ ತಯಾರಾಗುವ ಮೊದಲೆ ಸಿಬ್ಬಂದಿಗೆ ವಿಷಯ ತಿಳಿಸಿ ಬದಲಾವಣೆ ಮಾಡಬೇಕಾಗಿತ್ತು ಎಂದಿತು ಇನ್ನೊಂದು ಮನಸ್ಸು. ಕ್ಯಾಬಿನೆಟ್ ಸೆಕ್ರೆಟರಿಯವರ ಸ್ನೇಹಿತರಿಗೆ ಕರೆ ಮಾಡಿ, ಅವರ ಮುಖಾಂತರ ಕ್ಯಾಬಿನೆಟ್ ನೋಟ್ನಲ್ಲಿ ಸಣ್ಣ (ಟೆಕ್ನಿಕಲ್) ಶಬ್ದ ಬದಲಾಯಿಸಲು ವಿನಂತಿಸಿಕೊಂಡೆ. ಕೆಲಸ ಆಗಬಹುದು ಎಂದು ಅಂದಾಜಿಸಿದೆ. ಸಮಾಧಾನವಾಯಿತು.
ನಮ್ಮವರೊಂದಿಗೆ ಶ್ರೀ ಪ್ರಿಯಂಕಾ ಖರ್ಗೆಯವರು ಇದ್ದರೆ ಹೆಚ್ಚಿಗೆ ತೂಕ ಬರುವುದೆಂದು ಅವರಿಗೂ ಒಂದು ಮಾತು ತಿಳಿಸಿದ್ದಾಯಿತು. ಅಂಕದ ಪರದೆ ಜಾರಿತು.
ಕ್ಯಾಬಿನೆಟ್ ಮೀಟಿಂಗ ಆದನಂತರ ಪತ್ರಕರ್ತರ ಫೊನು ಬರಲಾರಂಭಿಸಿದವು. “ಶುಭಾಶಯಗಳು” ಎಂದರು “ಯಾತಕ್ಕೆ” ಎಂದೆ “ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಸರಕಾರ ಘೋಷಣೆ ಮಾಡಿದೆ” ಎಂದರು.
ಸಮಾಧಾನದಿಂದ ಚಹಾ ತರಲು ಮನೆಯವರಿಗೆ ಹೇಳಿದೆ.