ನಕಲಿ ಔಷಧಿ ಸ್ಕ್ಯಾಮ್ ಪ್ರಮುಖ ಆರೋಪಿ ಪ್ರಶಾಂತ್, ಅಜರ್‌ಬೈಜಾನ್‌ನಲ್ಲಿ ಸೆರೆ: ಬೆಂಗಳೂರಿನ ಔಷಧಿ ಮಳಿಗೆಗಳಿಗೆ ವಿಸ್ತರಿಸಿದ ತನಿಖೆ

ಬೆಂಗಳೂರು ಆ 23: ಬೆಂಗಳೂರಿನಲ್ಲಿ ಬಯಲಾಗಿರುವ ಆಘಾತಕಾರಿ ನಕಲಿ ಔಷಧ ದಂಧೆ ಪ್ರಕರಣ ದಿನದಿಂದ ದಿನಕ್ಕೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧ, ಪ್ಯಾಕಿಂಗ್ ಸಾಮಗ್ರಿ ಹಾಗೂ ಔಷಧ ತುಂಬುವ ಉಪಕರಣಗಳು ಪತ್ತೆಯಾದ ಬೆನ್ನಲ್ಲೇ, ಇದೀಗ ಪ್ರಕರಣದ ತನಿಖೆ ಬೆಂಗಳೂರಿನ ಔಷಧ ಮಳಿಗೆಗಳಿಗೂ ವಿಸ್ತರಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಆರ್. ಪ್ರಶಾಂತ್‌ನನ್ನು ವಿದೇಶದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಹೊರಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಇದ್ದಾಗ, ಆತನ ಸೂಚನೆಯಂತೆ ಔಷಧಗಳನ್ನು ಸಾಗಿಸುತ್ತಿದ್ದ ಇಬ್ಬರು ಸಹಚರರು ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಗೆ ಸಿಕ್ಕಿಬಿದ್ದಿದ್ದಾರೆ. ಅವರ ವಿಚಾರಣೆಯಲ್ಲಿ ಪ್ರಶಾಂತ್‌ನ ಹೆಸರು ಬಹಿರಂಗವಾದ ಬಳಿಕ ಆತನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಪ್ರಶಾಂತ್ ದುಬೈನಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. 36 ವರ್ಷದ ಪ್ರಶಾಂತ್ ಈ ಹಿಂದೆ ಬೆಂಗಳೂರಿನಲ್ಲೂ ಹಾಗೂ ತೆಲಂಗಾಣದ ವಿವಿಧೆಡೆ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ತಾವರೆಕೆರೆ ಸಮೀಪದ ಸಿ.ಕೆ. ತಾಂಡ್ಯ ಗ್ರಾಮದ ಸ್ಟಾಕ್‌ಹೌಸ್‌ನ್ನು ಸುಮಾರು ಒಂದು ವರ್ಷದ ಹಿಂದೆ ಆತ ಬಾಡಿಗೆಗೆ ಪಡೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಮೂಲ ತಾವರೆಕೆರೆ ಸಮೀಪದ ಸಿ.ಕೆ. ತಾಂಡ್ಯ ಗ್ರಾಮದಲ್ಲಿರುವ ಅಕ್ರಮ ಔಷಧ ಸಂಗ್ರಹ ಘಟಕ. ಕೃಷಿ ಕಾರ್ಮಿಕರು ಅಲ್ಲಿ ವಯಲ್‌ಗಳು, ಟ್ಯೂಬ್‌ಗಳು ಹಾಗೂ ದುರ್ವಾಸನೆ ಬೀರುವ ಪುಡಿಯ ಪ್ಯಾಕೆಟ್‌ಗಳನ್ನು ಪದೇಪದೇ ಎಸೆಯುತ್ತಿರುವುದನ್ನು ಗಮನಿಸಿದ್ದರು. ಈ ಬಗ್ಗೆ ತಾವರೆಕೆರೆ ಠಾಣೆಯ ಕಾನ್‌ಸ್ಟೆಬಲ್ ಶಿವರಾಜ್ ಅವರಿಗೆ ಮಾಹಿತಿ ನೀಡಿದ ಬಳಿಕ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ನಂತರ ಪೊಲೀಸರು ದಾಳಿ ನಡೆಸಿದಾಗ ಭಾರೀ ಪ್ರಮಾಣದ ಔಷಧ ಸಂಗ್ರಹ ಪತ್ತೆಯಾಗಿತ್ತು.

ತನಿಖೆಯಲ್ಲಿ ಮತ್ತೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಿಂದ ಕಡಿಮೆ ಬೆಲೆಗೆ ಔಷಧಗಳನ್ನು ಪಡೆದು, ಅವುಗಳನ್ನು ಹೊಸ ವಯಲ್‌ಗಳಿಗೆ ತುಂಬಿ, ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು ಎಂಬ ಆರೋಪವಿದೆ. ₹600ರಿಂದ ₹700ರಷ್ಟು ಬೆಲೆಗೆ ಪಡೆಯುತ್ತಿದ್ದ ವಯಲ್‌ಗಳನ್ನು ₹7,000ರಿಂದ ₹8,000ರವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ 5,640 ವಯಲ್‌ಗಳಷ್ಟು ತಪ್ಪು ಲೇಬಲ್ ಹಾಕಲಾಗಿದ್ದ Ceftivigent 2.5 ಮತ್ತು 1,531 ವಯಲ್‌ಗಳಷ್ಟು Hizlam ಇಂಜೆಕ್ಷನ್‌ಗಳು ಸೇರಿದಂತೆ ಅಪಾರ ಪ್ರಮಾಣದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು ₹35 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧಗಳೂ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಚಾಮರಾಜಪೇಟೆಯ ‘Bangalore Special Life’ ಔಷಧ ಮಳಿಗೆಯ ಮಾಲೀಕ ಹಾಗೂ ಫಾರ್ಮಸಿಸ್ಟ್ ವೆಂಕಟೇಶ್ ಕೂಡ ಸೇರಿದ್ದಾರೆ. ಪ್ರಶಾಂತ್ ಮತ್ತು ವೆಂಕಟೇಶ್ ಸೇರಿಕೊಂಡು ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಿಂದ ಔಷಧಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಇದೀಗ ವಿಶೇಷ ತನಿಖಾ ತಂಡ ಬೆಂಗಳೂರಿನ ಔಷಧ ಮಳಿಗೆಗಳತ್ತಲೂ ಗಮನ ಹರಿಸಿದೆ. ಚಾಮರಾಜಪೇಟೆ ಸೇರಿದಂತೆ ವಿವಿಧ ಪ್ರದೇಶಗಳ ಔಷಧ ಮಳಿಗೆಗಳಲ್ಲಿ ಅಕ್ರಮವಾಗಿ ನಕಲಿ ಅಥವಾ ಸಂಶಯಾಸ್ಪದ ಔಷಧ ಸಂಗ್ರಹಿಸಲಾಗಿದೆಯೇ, ಬಿಡದಿ ಫಾರ್ಮ್‌ಹೌಸ್‌ನಿಂದ ಹೊರಬಂದ ಔಷಧಗಳು ಯಾವ ಮಾರ್ಗದಲ್ಲಿ ಮಾರುಕಟ್ಟೆಗೆ ಬಂದಿವೆ ಮತ್ತು ಯಾವೆಲ್ಲಾ ಮಳಿಗೆಗಳಿಗೆ ಪೂರೈಕೆಯಾಗಿವೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ಜಾಲ ಇನ್ನಷ್ಟು ವಿಸ್ತಾರವಾಗಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅತ್ಯಂತ ಗಂಭೀರ ಸಂಗತಿಯೆಂದರೆ, ವಶಪಡಿಸಿಕೊಂಡ ನಕಲಿ ಔಷಧಗಳಲ್ಲಿ ಗಂಭೀರ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಇಂಜೆಕ್ಷನ್‌ಗಳೂ ಸೇರಿವೆ. ನಕಲಿ ಔಷಧಗಳು ಆಸ್ಪತ್ರೆಗಳು, ಐಸಿಯುಗಳು ಅಥವಾ ಮೆಡಿಕಲ್ ಶಾಪ್‌ಗಳ ಮೂಲಕ ಈಗಾಗಲೇ ರೋಗಿಗಳನ್ನು ತಲುಪಿವೆಯೇ ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಇಂತಹ ಔಷಧ ಪಡೆದ ರೋಗಿಗಳು, ಅವು ಪೂರೈಕೆಯಾದ ಆಸ್ಪತ್ರೆಗಳು ಮತ್ತು ಐಸಿಯುಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.

ಆರೋಪಿಗಳು ಈ ದಂಧೆ ಸುಮಾರು ಐದು ತಿಂಗಳಿನಿಂದ ನಡೆಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದ್ದರೂ, ಇಷ್ಟು ದೊಡ್ಡ ಪ್ರಮಾಣದ ಔಷಧಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಂಧೆ ಕೇವಲ ಐದು ತಿಂಗಳದ್ದೇ ಎಂಬುದನ್ನು ಪೊಲೀಸರು ನಂಬುತ್ತಿಲ್ಲ. ಇತರ ರಾಜ್ಯಗಳ ತಯಾರಿಕಾ ಘಟಕಗಳು ಮತ್ತು ದೇಶದ ಬೇರೆ ಭಾಗಗಳಲ್ಲಿರುವ ಔಷಧ ವಿತರಕರ ಸಂಪರ್ಕದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಹೀಗಾಗಿ ಬೆಂಗಳೂರಿನ ನಕಲಿ ಔಷಧ ದಂಧೆ ಇದೀಗ ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದ ಜಾಲದ ರೂಪ ಪಡೆದಿರುವ ಶಂಕೆ ಮೂಡಿಸಿದೆ. ಕಿಂಗ್‌ಪಿನ್ ಪ್ರಶಾಂತ್‌ನ ವಿಚಾರಣೆ ಹಾಗೂ ಬೆಂಗಳೂರಿನ ಔಷಧ ಮಳಿಗೆಗಳ ಮೇಲಿನ SIT ದಾಳಿಯಿಂದ ಈ ಜಾಲದಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ, ನಕಲಿ ಔಷಧಗಳು ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಿಗೆ ತಲುಪಿವೆ ಮತ್ತು ಎಷ್ಟು ಮಂದಿ ರೋಗಿಗಳು ಇವುಗಳನ್ನು ಬಳಸಿದ್ದಾರೆ ಎಂಬ ಮಹತ್ವದ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಯಿದೆ.

More articles

Latest article

Most read