Sunday, July 14, 2024

ಮನುವಾದಿಗಳ ರಾಮರಾಜ್ಯ Vs  ಸಮಾನತೆಯ ಪ್ರಜಾರಾಜ್ಯ

Most read

ಈಗ ದೇಶಾದ್ಯಂತ ರಾಮಮಂದಿರದ ಕುರಿತೇ ಮಾತುಕತೆ. ಬಹುತೇಕ ಮಾಧ್ಯಮಗಳಂತೂ ಶ್ರೀರಾಮನ ಕುರಿತು ಚರ್ಚೆಗೆ ಪ್ರಚಾರಕ್ಕೆ ತಮ್ಮ ಬಹುತೇಕ ಸಮಯ ಮೀಸಲಾಗಿಟ್ಟಿವೆ. ಸಂಘ ಪರಿವಾರದವರು ರಾಮರಾಜ್ಯ ಸ್ಥಾಪನೆಯೇ ತಮ್ಮ ಲಕ್ಷವೆಂದು ಘೋಷಿಸಿದ್ದಾರೆ. ರಾಮರಾಜ್ಯ ಬರಬೇಕು ಎಂದು ಮಾಧ್ಯಮಾಂಗಗಳು ಹೇಳುತ್ತಲೇ ಇವೆ. ಜನರೂ ಅದನ್ನು ನಂಬಿಕೊಂಡು ರಾಮರಾಜ್ಯ ಬಂದರೆ ತಮ್ಮೆಲ್ಲಾ ಗೋಳಿಗೆ ಮುಕ್ತಿ ಸಿಕ್ಕಿ ಸುಖ ಸಮೃದ್ಧಿ ವೃದ್ಧಿಯಾಗುತ್ತದೆ ಎಂದುಕೊಂಡಿದ್ದಾರೆ. 

ಹಾಗಾದರೆ ರಾಮರಾಜ್ಯ ಅಂದರೆ ಏನು? ತೇತ್ರಾಯುಗದಲ್ಲಿ ರಾಮ ತನ್ನ ಪ್ರಜೆಗಳನ್ನೆಲ್ಲಾ ಸುಖವಾಗಿಟ್ಟಿದ್ದು ಕಳ್ಳತನ ಮೋಸ ವಂಚನೆ ಸುಲಿಗೆ ಇಲ್ಲದಂತೆ ನೋಡಿಕೊಂಡಿದ್ದ. ಹೀಗಾಗಿ ಅಂತಹ ವ್ಯವಸ್ಥೆ ಇರುವ ರಾಮರಾಜ್ಯ ಮತ್ತೆ ಸ್ಥಾಪನೆ ಆಗಬೇಕು ಎನ್ನುವುದು ಬಹುತೇಕರ ಆಶಯವಾಗಿದೆ.‌ ಹಾಗೂ ಹಾಗೆ ಜನತೆಯನ್ನು ನಂಬಿಸಲಾಗಿದೆ.

ಆದರೆ.. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳಿಗಾಗಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ  ಆಡಳಿತ ವ್ಯವಸ್ಥೆ ಇರಬೇಕೆಂಬುದು ಸಂವಿಧಾನದ ಉದ್ದೇಶ. ಪ್ರಜಾತಂತ್ರದಲ್ಲಿ ಪ್ರಜೆಗಳ ಬಹುಮತದ ಮೇರೆಗೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುವ ಮೂಲಕ ದೇಶ ಮುನ್ನಡೆಯುತ್ತದೆ. ಆದರೆ ಶ್ರೀರಾಮನದು ರಾಜಪ್ರಭುತ್ವ. ಅಂದರೆ ಜನರು ಇಚ್ಛಿಸಲಿ ಬಿಡಲಿ ತಲೆತಲೆಮಾರುಗಳಿಂದ ರಾಜರುಗಳ ಸಂತಾನವೇ ರಾಜ್ಯಾಡಳಿತಕ್ಕೆ ಉತ್ತರಾಧಿಕಾರಿಯಾಗಿ ಆಳ್ವಿಕೆ ಮಾಡಬೇಕು ಎಂಬುದು ರಾಜಪ್ರಭುತ್ವದ ನಿಯಮ. ಈಗ ಅಂತಹ ರಾಜಪ್ರಭುತ್ವದ ವ್ಯವಸ್ಥೆಯನ್ನು ಮರು ಸ್ಥಾಪಿಸಲಂತೂ ಸಾಧ್ಯವಿಲ್ಲ. ಅದೆಷ್ಟೋ ಶತಮಾನಗಳಷ್ಟು ಮುಂದೆ ಬಂದಿರುವ ಆಧುನಿಕ ಕಾಲವನ್ನು ಮತ್ತೆ ತ್ರೇತಾಯುಗಕ್ಕೆ ಹಿಮ್ಮುಖವಾಗಿ ಚಲಿಸುವಂತೆ ಮಾಡಲು ಅವಕಾಶವೇ ಇಲ್ಲ.

Wikipedia(britishmuseum.org)

ರಾಜಪ್ರಭುತ್ವ ಅಂದರೆ ಸರ್ವಾಧಿಕಾರಿ ವ್ಯವಸ್ಥೆ. ಅಲ್ಲಿ ರಾಜ ಹೇಳಿದ್ದೇ ಶಾಸನ. ಮಾಡಿದ್ದೇ ಕಟ್ಟಲೆ  ಕಾನೂನು. ನ್ಯಾಯ ನಿರ್ಣಯ ಮಾಡುವಲ್ಲಿಯೂ  ರಾಜನಾದವನ ತೀರ್ಪೇ ಅಂತಿಮ. ಆದರೆ ಈಗ ಅಂತಹ ರಾಜ್ಯಾಡಳಿತ ಅಸಾಧ್ಯವಾದರೂ ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆ ಸಾಧ್ಯವಿದೆ. ಅದೇ ಸಂಘ ಪರಿವಾರದ ಉದ್ದೇಶವೂ ಆಗಿದೆ. ಈ ದೇಶವನ್ನು ಹಿಂದೂರಾಷ್ಟ್ರ ಮಾಡಿ, ಪ್ರಜಾಪ್ರಭುತ್ವದ ಬದಲಾಗಿ ಸರ್ವಾಧಿಕಾರಿ ಫ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸಿ ಮತ್ತೆ ಮನುಸ್ಮೃತಿ ಆಧಾರಿತ ವರ್ಣಾಶ್ರಮ ಪ್ರಣೀತ ವ್ಯವಸ್ಥೆಯನ್ನು ರೂಪಿಸುವುದು ಹಿಂದುತ್ವವಾದಿಗಳ ಅಂತಿಮ ಗುರಿಯಾಗಿದೆ. ಆ ಗುರಿಯನ್ನು ಮುಟ್ಟಲು ರಾಮರಾಜ್ಯದ ಪರಿಕಲ್ಪನೆಯನ್ನು ಜನರ ಮನಸಲ್ಲಿ ಅಚ್ಚೊತ್ತುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿಯೇ ರಾಮನ ಸಂಕೀರ್ತನೆ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ.

ಹೋಗಲಿ ರಾಮರಾಜ್ಯ ಅಂದರೆ ರಾಮನ ಆದರ್ಶಗಳ ಪಾಲನೆಯಾಗಬೇಕಲ್ಲವೇ?. ವಚನ ಪಾಲನೆ ಎಂಬುದು ಶ್ರೀರಾಮನ ಆದರ್ಶಗಳಲ್ಲಿ ಪ್ರಮುಖವಾದದ್ದು ತಾನೆ?. ಹಾಗಾದರೆ ರಾಮರಾಜ್ಯ ಸ್ಥಾಪನೆ ಬಯಸಿರುವ ಬಿಜೆಪಿ ಪಕ್ಷ ಹಾಗೂ ಅದರ ವಿಶ್ವಗುರುಗಳಾಗಿರುವ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಜನರಿಗೆ ಕೊಟ್ಟ ಭರವಸೆಗಳನ್ನು ಸಮರೋಪಾದಿಯಲ್ಲಿ ಈಡೇರಿಸಿದ್ದೇ ಆದರೆ ಅವರು ನಿಜವಾದ ರಾಮನ ಆದರ್ಶದ ಪರಿಪಾಲಕರು ಎನ್ನಬಹುದಾಗಿದೆ. ಆದರೆ ಧಾರ್ಮಿಕ ಭಾವನಾತ್ಮಕ ಸಂಗತಿಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಜನರಿಗೆ ಕೊಟ್ಟ ಬಹುತೇಕ ವಚನಗಳನ್ನು ಈಡೇರಿಸದೇ ಇರುವುದರಿಂದ ಈ ವಿಶ್ವಗುರುವನ್ನು ವಚನಭ್ರಷ್ಟ ಎಂದು ಕರೆಯಬಹುದಲ್ಲವೇ. ವಚನ ಭ್ರಷ್ಟರಾದವರು ರಾಮನ ಅನುಯಾಯಿಯಾಗಲೂ ಸಾಧ್ಯವಿಲ್ಲ ಹಾಗೂ ಅಂತವರಿಂದ ರಾಮರಾಜ್ಯ ಸ್ಥಾಪನೆಯೂ ಆಗುವುದಿಲ್ಲ. 

ಗೂಗಲ್‌ ಫೋಟೋ

ವಿದೇಶದ ಕಪ್ಪು ಹಣ ಭಾರತಕ್ಕೆ ತರಲಿಲ್ಲ,  ವರ್ಷಕ್ಕೆರಡು ಕೋಟಿಯಂತೆ ಕಳೆದ ಹತ್ತು ವರ್ಷಗಳಿಂದ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ತೊಲಗಿಸ ಬಹುದಾಗಿತ್ತು ಆದರೆ ಈಗ ನಿರುದ್ಯೋಗ ಸಮಸ್ಯೆಯೇ ದೊಡ್ಡದಾಗಿದೆ. ರೈತರ ಆದಾಯ ದ್ವಿಗುಣವಾಗ ಬಹುದಾಗಿತ್ತು ಆಗಲಿಲ್ಲ. ರಸಗೊಬ್ಬರ ರೇಟು, ಗ್ಯಾಸ್ ದರ, ಇಂಧನ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಇರುವ ಸಬ್ಸಿಡಿಯನ್ನೂ ತೆಗೆದು ಹಾಕಲಾಯಿತು. ಅಭಿವೃದ್ದಿ ಅಂದರೆ ವಿಸ್ತಾರವಾದ ರಸ್ತೆ ಸೇತುವೆ ನಿರ್ಮಿಸಿ ಟೋಲ್ ಸಂಗ್ರಹಿಸಿ ಜನರ ಜೇಬಿಗೆ ಕತ್ತರಿ ಹಾಕುವುದೇ ಆಗಿರುವಾಗ, ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರುವುದೇ ಆರ್ಥಿಕ ನೀತಿಯಾಗಿರುವಾಗ ರಾಮರಾಜ್ಯ ಸ್ಥಾಪನೆ ಎನ್ನುವುದು ಕನಸಿನ ಮಾತೇ ಹೊರತು ಜಾರಿಮಾಡಲು ವಚನ ಭ್ರಷ್ಟತೆಯನ್ನೇ ರೂಢಿಸಿಕೊಂಡಿರುವ ಮಹಾನಾಯಕರಿಂದ ಸಾಧ್ಯವೇ ಇಲ್ಲ. ಆದರೂ ರಾಮರಾಜ್ಯ ಸ್ಥಾಪಿಸುತ್ತೇವೆಂದು ಹೇಳುವ ಸಂಘ ಪರಿವಾರ ಜನರಲ್ಲಿ ಭ್ರಮೆಯನ್ನು ಬಿತ್ತುತ್ತಲೇ ಇದೆ. ಹಾಗೂ ರಾಮರಾಜ್ಯದ ಪರಿಕಲ್ಪನೆ ಹಿಂದುತ್ವವಾದಿ ಸಂಘದ ಕನಸೂ ಆಗಿದೆ.

ಅದು ಹೇಗೆಂದರೆ, ರಾಮರಾಜ್ಯ ಎನ್ನುವುದು ಚಾತುರ್ವರ್ಣ ವ್ಯವಸ್ಥೆಯನ್ನು ಅಳವಡಿಸಿ ಕೊಂಡಿದ್ದಾಗಿತ್ತು. ಕ್ಷತ್ರಿಯರು ಆಳುತ್ತಿದ್ದರು, ಬ್ರಾಹ್ಮಣರು ಮಾರ್ಗದರ್ಶನ ಮಾಡುತ್ತಿದ್ದರು, ವೈಶ್ಯರು ವ್ಯಾಪಾರ ವ್ಯವಹಾರ ನೋಡಿಕೊಳ್ಳುತ್ತಿದ್ದರು, ಅಕ್ಷರ ವಂಚಿತ ಶೂದ್ರರು ಇವರಿಗೆಲ್ಲಾ ದುಡಿದು ಪರಿಶ್ರಮ ಪಡುತ್ತಿದ್ದರು. ಈ ನಾಲ್ಕೂ ವರ್ಣಗಳನ್ನು ಹೊರತುಪಡಿಸಿ ಇದ್ದ ಬಹುಸಂಖ್ಯಾತ ದಲಿತರು ಸಮಾಜದಿಂದಲೇ ಬಹಿಷ್ಕೃತರಾಗಿ ಅಸ್ಪೃಶ್ಯರಾಗಿ ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುತ್ತಿದ್ದರು. ಇದೇ ವರ್ಣಾಶ್ರಮ ಸಿದ್ಧಾಂತದ ಮೂಲ ವ್ಯವಸ್ಥೆ.

ಈ ವ್ಯವಸ್ಥೆಯನ್ನು ವಿರೋಧಿಸಿ ಶೂದ್ರ ಶಂಭೂಕನಂತವರು ತಪಸ್ಸು ಮಾಡಿದರೆ ಅವರ ಶಿರಸ್ಸನ್ನೇ ಸಂಹಾರ ಮಾಡಲು ಬ್ರಾಹ್ಮಣರು ರಾಮನನ್ನು ಬಳಸಿಕೊಂಡರು. ಶೂದ್ರ ಸಮೂಹಕ್ಕೆ ಅಕ್ಷರ ವಿದ್ಯೆ ನಿಷಿದ್ಧವಾಗಿತ್ತು. ಊರುಗಳಲ್ಲಿ ದಲಿತರ ಪ್ರವೇಶ ನಿಷೇಧಿಸಲಾಗಿತ್ತು. ಆದಿವಾಸಿ ಕಾಡು ಜನಾಂಗವನ್ನು ರಾಕ್ಷಸರು ಎಂದು ಹೇಳಿ ಹತ್ಯೆ ಮಾಡಲಾಗುತ್ತಿತ್ತು. ಮಹಿಳೆಯರನ್ನೂ ವಿದ್ಯೆ ಹಾಗೂ ಸಂಪತ್ತಿನಿಂದ ವಂಚಿತರನ್ನಾಗಿಸಿ ನಿಕೃಷ್ಟವಾಗಿ ಪರಿಗಣಿಸಲಾಗುತ್ತಿತ್ತು. ಇದು ರಾಮರಾಜ್ಯದಲ್ಲಿದ್ದ ವರ್ಣಾಶ್ರಮ ಪದ್ಧತಿಯ ಆಚರಣೆ. ಇದಕ್ಕೆ ರಾಜನೂ ಬದ್ದನಾಗಿರಬೇಕಿತ್ತು. ಇಂತಹ ವ್ಯವಸ್ಥೆಯನ್ನು ರಕ್ಷಿಸುವುದೇ ರಾಜನಾದವನ ಕರ್ತವ್ಯವಾಗಿತ್ತು. 

Wikipedia(britishmuseum.org)

ಈಗ ಇಂತಹ ರಾಮರಾಜ್ಯದ ಸ್ಥಾಪನೆ ಸಂಘ ಪರಿವಾರದ ಪ್ರಮುಖರ ಅಂತಿಮ ಗುರಿಯಾಗಿದೆ. ಇಂತಹ ಅಸಮಾನ ವ್ಯವಸ್ಥೆಯನ್ನು ಒಪ್ಪಿಕೊಳ್ಳ ಬಯಸುವವರು, ವೈದಿಕಶಾಹಿ ಶೋಷಣೆಯನ್ನು ಅಪ್ಪಿಕೊಳ್ಳಲು ಇಚ್ಚಿಸುವವರು ರಾಮರಾಜ್ಯದ ಕನಸನ್ನು ಕಾಣಬಹುದಾಗಿದೆ. 

ಇನ್ನು ರಾಮನನ್ನು ಆದರ್ಶ ಪುರುಷ ಎಂದು ಜನರಲ್ಲಿ ಬಿತ್ತಲು ಶತಮಾನಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಅದಕ್ಕೆ ರಾಮನ ಆದರ್ಶಗಳನ್ನು ವೈಭವೀಕರಿಸಲಾಗುತ್ತಿದೆ. ಮಂದಿರಗಳನ್ನು ನಿರ್ಮಿಸುವ ಮೂಲಕ ರಾಮದೇವರ ಕುರಿತು ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯನ್ನು ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಸಂಘದ ಉದ್ದೇಶ ಬಹಳ ಸ್ಪಷ್ಟವಾಗಿದೆ. ದೇವರು ಧರ್ಮದ ಭ್ರಮೆಯನ್ನು ಜನರಲ್ಲಿ ಬಿತ್ತುವ ಮೂಲಕ ಮನುಸ್ಮೃತಿ ಆಧಾರಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಅವರ ಉದ್ದೇಶವಾಗಿದೆ. ಅಂತಹ ವ್ಯವಸ್ಥೆಗೆ ರಾಮರಾಜ್ಯ ಅಂತಾ ಕರೆಯಲಾಗುತ್ತಿದೆ. 

ಹೋಗಲಿ, ರಾಮನ ಆದರ್ಶಗಳನ್ನು ಅಂಧಶ್ರದ್ದೆಯಿಂದ ನಂಬುವ ಬದಲು ವಿಮರ್ಶಾತ್ಮಕವಾಗಿ ನೋಡಬಹುದಾಗಿದೆ. ಏಕಪತ್ನೀವ್ರತಸ್ಥ ಎಂಬುದು ಶ್ರೀರಾಮನ ಆದರ್ಶ ಗುಣದಲ್ಲಿ ಪ್ರಧಾನವಾದದ್ದು. ಅಂದರೆ ಮಹಿಳೆಗೆ ಅತೀ ಹೆಚ್ಚು ಗೌರವವನ್ನು ರಾಮ ಕೊಡುತ್ತಿದ್ದ ಹಾಗೂ ಆಗಿನ ಕಾಲದಲ್ಲಿ ಸಹಜವಾಗಿದ್ದ ಬಹುಪತ್ನಿತ್ವ ವ್ಯವಸ್ಥೆಯನ್ನು ಮುರಿದು ಮರ್ಯಾದಾ ಪುರುಷೋತ್ತಮನಾದ ಎಂಬುದೆಲ್ಲಾ ಸರಿ. ಆದರೆ ಪ್ರಶ್ನೆ ಇರುವುದು ಬರೀ ಏಕಪತ್ನಿವ್ರತಸ್ಥನಾಗಿದ್ದರೆ ಮಾತ್ರ ಮರ್ಯಾದಾ ಪುರುಷೋತ್ತಮನಾಗಲು ಸಾಧ್ಯವಿಲ್ಲ. ತನ್ನನ್ನೇ ನಂಬಿಕೊಂಡು ಬಂದ ಪತ್ನಿಯನ್ನು ಕೊನೆಯವರೆಗೂ ರಕ್ಷಿಸುವುದೂ ಪತಿಯಾಗಿ ಮಾತ್ರವಲ್ಲ ರಾಜನಾಗಿಯೂ ಶ್ರೀರಾಮನ ಕರ್ತವ್ಯವಾಗಿರಬೇಕಿತ್ತಲ್ಲವೇ? ಆದರೆ ಆಗಿದ್ದೇನು? ಅಗಸನೊಬ್ಬನ ಮಾತಿನ  ಹಿನ್ನಲೆಯನ್ನು ಪರಿಶೀಲಿಸದೇ, ಯಾವುದೇ ವಿಚಾರಣೆಯೂ ಇಲ್ಲದೇ ಗರ್ಭಿಣಿಯಾದ ಹೆಂಡತಿಯನ್ನು ದಟ್ಟವಾದ ಅರಣ್ಯದಲ್ಲಿ ಒಂಟಿಯಾಗಿ ಬಿಟ್ಟಿದ್ದು ಮರ್ಯಾದಾ ಪುರುಷೋತ್ತಮನಿಗೆ ಶೋಭೆ ತರುವಂತಹುದಲ್ಲವಲ್ಲವೇ?. ಪ್ರಜೆಗಳ ಮಾತಿಗೆ ಅಷ್ಟು ಗೌರವವನ್ನು ರಾಮ ಕೊಡುತ್ತಿದ್ದ ಎಂದು ನಂಬಿಸಲಾಗಿದೆ. ಆದರೆ ಸೀತೆಯೂ ರಾಮರಾಜ್ಯದ ಪ್ರಜೆಯಲ್ಲವೇ?. ಒಬ್ಬ ಪ್ರಜೆಗಾಗಿ ಇನ್ನೊಬ್ಬ ಪ್ರಜೆಯನ್ನು ವಿನಾಕಾರಣ ಘೋರ ಶಿಕ್ಷೆಗೆ ಅಳವಡಿಸಿದ್ದು ಅಮಾನವೀಯತೆ ಅಲ್ಲವೇ? ಪ್ರೀತಿಯನ್ನು ಬಯಸಿ ಬಂದ ಆದಿವಾಸಿ ಮಹಿಳೆಯ ಮೊಲೆ ಮೂಗು ಕತ್ತರಿಸಿ ಅವಮಾನಿಸಿದ್ದಕ್ಕೆ ಸಾಕ್ಷಿಯಾದ ರಾಮ ಅದು ಹೇಗೆ ಮಹಿಳಾಪರ ಆಗಿರಲು ಸಾಧ್ಯ? 

ಇನ್ನು ಸಹೋದರನ ಪತ್ನಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಅರಣ್ಯವಾದಿ ಸುಗ್ರೀವನಿಗೆ ಬುದ್ಧಿ ಹೇಳುವ ಬದಲಾಗಿ ಆತನ ಅಣ್ಣ ವಾಲಿಯನ್ನು ಮೋಸದಿಂದ ಕೊಂದಿದ್ದು ಯಾವ ಆದರ್ಶ? ವಾನರನನ್ನು ಹೇಗಾದರೂ ಕೊಲ್ಲಬಹುದು ಎನ್ನುವುದು ಶಾಸ್ತ್ರ ಸಮ್ಮತವಂತೆ. ಆದರೆ ವಾನರರೋ ಆದಿವಾಸಿಗಳೋ ಎಲ್ಲರನ್ನೂ ಸಲುಹುವುದು ದೇವರ ಅವತಾರದ ಕಾಯಕವಲ್ಲವೇ? 

ಹೌದು, ರಾಮ ಧರ್ಮ ರಕ್ಷಣೆಗಾಗಿಯೇ ಅವತರಿಸಿದ್ದು. ಆದರೆ ಯಾವ ಧರ್ಮ? ಯಾರ ಧರ್ಮ ರಕ್ಷಣೆ ಎನ್ನುವುದೇ ಪ್ರಶ್ನೆ. ಅರಣ್ಯದಲ್ಲಿ ಆತಂಕ ಸೃಷ್ಟಿಸಿದ್ದ ಋಷಿಮುನಿಗಳ ಯಜ್ಞಯಾಗಾದಿಗಳಿಗೆ ಭಂಗ ತಂದ ಅರಣ್ಯವಾಸಿಗಳನ್ನು ರಾಕ್ಷಸರೆಂದು ಆಪಾದಿಸಿ ಹತ್ಯೆ ಮಾಡಿದ್ದು ಬ್ರಾಹ್ಮಣ ಕುಲಸಂಜಾತ ಮುನಿಗಳಿಗಾಗಿ. ತಪೋನಿರತ ಶೂದ್ರ ಶಂಭೂಕನನ್ನು ಸಂಹರಿಸಿದ್ದು ಅಸಹಿಷ್ಣುತತೆಯ ವೈದಿಕರಿಗಾಗಿ. ನಂಬಿ ಬಂದ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದರೂ ಸಮಾಧಾನವಾಗದೇ ಕುಂಟು ನೆಪ ಹೇಳಿ ಕಾಡಿಗೆ ಕಳುಹಿಸಿದ್ದು ಪುರುಷ ಪ್ರಧಾನ ವ್ಯವಸ್ಥೆಯ ರಕ್ಷಣೆಗಾಗಿ. ಕೊನೆಗೆ ಘನಘೋರ ಯುದ್ಧ ಮಾಡಿದ್ದು ಕ್ಷತ್ರಿಯ ಧರ್ಮ ರಕ್ಷಣೆಗಾಗಿ. ಅಂದರೆ ಪುರೋಹಿತಶಾಹಿ ವೈದಿಕ ಧರ್ಮವನ್ನು ಹಾಗೂ ತನ್ನ ಕ್ಷತ್ರಿಯ ಧರ್ಮವನ್ನು ಪಾಲಿಸಿ, ಪಿತೃಪ್ರಧಾನ ವ್ಯವಸ್ಥೆಯನ್ನು ಪಾಲಿಸಿದ ರಾಮನ ರಾಜ್ಯದಲ್ಲಿ ಶೂದ್ರರು ಶೂದ್ರರಾಗಿಯೇ ಇರಬೇಕಿತ್ತು, ಮಹಿಳೆಯರು ಪುರುಷರ ಆಜ್ಞಾವರ್ತಿಯಾಗಿರಬೇಕಿತ್ತು, ದಲಿತರ ಅಸ್ತಿತ್ವವಂತೂ ನಗಣ್ಯವಾಗಿತ್ತು.

ಚಿತ್ರ : ಗೂಗಲ್

ಒಟ್ಟಾರೆಯಾಗಿ ವೈದಿಕಶಾಹಿಯ ಆಣತಿಯಂತೆ ವರ್ಣಾಶ್ರಮ ಧರ್ಮವನ್ನು ರಕ್ಷಿಸುವುದಕ್ಕೆ ಕ್ಷತ್ರಿಯ ರಾಮನ ಅವತಾರ ಸೃಷ್ಟಿಸಲಾಯಿತು ಎಂಬುದು ನಿರ್ವಿವಾದ. ಈಗ ಹಿಂದೂ ಧರ್ಮದ ಸ್ಥಾಪನೆಯಾಗಬೇಕು ಎನ್ನುವ ಹಿಂದುತ್ವವಾದಿಗಳ ಉದ್ದೇಶವೂ ವೈದಿಕಶಾಹಿ ಮನುಧರ್ಮದ ರಕ್ಷಣೆಯೇ ಆಗಿದೆ. ಅದಕ್ಕಾಗಿ ರಾಮನಂತಹ ಸನಾತನ ಧರ್ಮರಕ್ಷಕ ಹಾಗೂ ರಾಮರಾಜ್ಯದಂತಹ ಸರ್ವಾಧಿಕಾರಿ ವ್ಯವಸ್ಥೆ ಬೇಕಾಗಿದೆ. ಅದಕ್ಕಾಗಿ ಈಗ ರಾಮನಿಲ್ಲದಿದ್ದರೂ ರಾಮನ ನಾಮಬಲದಿಂದ ಹಿಂದುತ್ವ ರಾಷ್ಟ್ರ ಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ. ರಾಮನ ಬದಲಾಗಿ ಮೋದಿಯಂತಹ ವರ್ಣಾಶ್ರಮ ಧರ್ಮರಕ್ಷಕನನ್ನು ಅವತಾರ ಪುರುಷನನ್ನಾಗಿ ಚಿತ್ರಿಸಲಾಗುತ್ತಿದೆ.

ದುಷ್ಟರ ಸಂಹಾರ ರಾಮಾವತಾರದ ಉದ್ದೇಶವಾಗಿದೆ ಎಂಬುದು ರಾಮಾಯಣದ ಸಮರ್ಥನೆ. ಆದರೆ ರಾಮರಾವಣರ ಕದನದಲ್ಲಿ ನೊಂದವರು ಹಾಗೂ ಸತ್ತವರ ಜೀವಕ್ಕೆ ಬೆಲೆ ಇಲ್ಲವೇ?. ಧರ್ಮಸಂಸ್ಥಾಪನೆಗೆ ಹಿಂಸೆಯೂ ಆದರ್ಶ ಅನ್ನುವುದೇ ಆದಲ್ಲಿ ದಯೆ ಇಲ್ಲದ ಧರ್ಮ ಯಾವುದಿದ್ದರೇನು? ಯುದ್ಧವೆಂದರೆ ಮತ್ತದೇ ಹಿಂಸೆ ಪ್ರತಿಹಿಂಸೆ, ತಂತ್ರ ಪ್ರತಿತಂತ್ರ, ಮೋಸ ವಂಚನೆ ಶಡ್ಯಂತ್ರಗಳು ತಾನೆ?. ಇವೆಲ್ಲವನ್ನೂ ಮೀರಿ ಅಹಿಂಸೆಯ ಮೂಲಕ ಶಾಂತಿ ಸ್ಥಾಪನೆ ಮಾಡಿದ್ದೇ ಆಗಿದ್ದರೆ ರಾಮ ನಿಜಕ್ಕೂ ಆದರ್ಶವಾದಿಯಾಗುತ್ತಿದ್ದ. ಅಹಿಂಸೆ ಮೂಲಕ ದುಷ್ಟರ ಮನಪರಿವರ್ತನೆ ಹಾಗೂ ಸಮಾಜ ಪರಿವರ್ತನೆ ಮಾಡುವ ಮಹತ್ಕಾರ್ಯವನ್ನು ಮಾಡಿದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ರಂತವರು ನಿಜವಾದ ಆದರ್ಶ ವ್ಯಕ್ತಿಗಳಾಗಬೇಕಿದೆ. ನಿಜವಾಗಿ ಬೇಕಿರುವುದು ಹಿಂಸಾತ್ಮಕ ದುಷ್ಟ ಸಂಹಾರವಲ್ಲ, ದುಷ್ಟರು ಎನ್ನುವವರ ಪರಿವರ್ತನೆ. ಯಾಕೆಂದರೆ ಪ್ರತಿಯೊಬ್ಬರಲ್ಲೂ ಒಳಿತು ಹಾಗೂ ಕೆಡುಕಿನ ಗುಣಗಳು ಇದ್ದೇ ಇರುತ್ತವೆ. ಕೆಡುಕುತನಕ್ಕೆ ಕೊಲೆಯೇ ಅಂತಿಮವಲ್ಲ.

ಆದರೆ ಹಿಂದುತ್ವವಾದಿಗಳಿಗೆ ಬೇಕಿರುವುದು ಧರ್ಮಸಂಸ್ಥಾಪನೆ. ಅದೂ ಹಿಂದುತ್ವದ ರಕ್ಷಣೆ. ಅಂದರೆ ವರ್ಣಾಶ್ರಮ ಧರ್ಮದ ಸಂರಕ್ಷಣೆ ಮತ್ತು ಪುನರ್ ಪ್ರತಿಷ್ಠಾಪನೆ. ಅದಕ್ಕಾಗಿಯೇ ಅವರಿಗೆ ರಾಮ ಬೇಕು, ರಾಮರಾಜ್ಯ ಬರಬೇಕು. ಚಾತುರ್ವರ್ಣ್ಯದ ಧರ್ಮ ರಕ್ಷಣೆಗಾಗಿ ಅದೆಷ್ಟೇ ಸೌಹಾರ್ದತೆ ಕದಡಲಿ, ಮನಸುಗಳು ಒಡೆಯಲಿ, ಹೆಣಗಳು ಉರುಳಲಿ, ರಕ್ತಪಾತವಾಗಲಿ ಅದೆಲ್ಲವೂ ಸಮರ್ಥನೀಯವೇ ಧರ್ಮದ ಗುತ್ತಿಗೆದಾರರಿಗೆ. ಆದರೆ ನಮಗೆ ಈಗ ಬೇಕಿರುವುದು ಪುರೋಹಿತಶಾಹಿ ಪ್ರಣೀತ ರಾಮರಾಜ್ಯವಲ್ಲ, ಅಂಬೇಡ್ಕರ್ ಸಂವಿಧಾನ ಪ್ರೇರಿತ ಪ್ರಜಾರಾಜ್ಯ. ಧರ್ಮದ ಹೆಸರಲ್ಲಿ ಹಿಂಸೆಯನ್ನು ಪ್ರಚೋದಿಸುವ ಬಿಜೆಪಿಯ ರಾಮನಿಗಿಂತಲೂ ಅಹಿಂಸೆ ಸಮಾನತೆ ಸಾಮರಸ್ಯ ಸಾರುವ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಈಗ ಹೆಚ್ಚು ಪ್ರಸ್ತುತ. ‌

ಇದನ್ನೂ ಓದಿ-ಭಕ್ತಿ ಭಾವಾವೇಶದ ಅಡ್ಡಪರಿಣಾಮಗಳು

ಈಗ ಆಯ್ಕೆ ಈ ದೇಶದ ಜನರ ಮುಂದಿದೆ. ಭಾವಪ್ರಚೋದನೆಗೆ ಒಳಗಾಗಿ ಹಿಂದುತ್ವವಾದಿಗಳ ಹಿಂದೆ ಹೋಗಿ ಸಂವಿಧಾನ ಕೊಟ್ಟ ಸಮಾನತೆಯ ಅವಕಾಶಗಳನ್ನು ಬಿಟ್ಟುಕೊಡುವುದೋ ಇಲ್ಲಾ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ಮತಾಂಧ ಶಕ್ತಿಗಳ ಶಡ್ಯಂತ್ರವನ್ನು ವಿಫಲಗೊಳಿಸುವುದೋ ಎಂಬುದನ್ನು ಈ ದೇಶದ ಜನತೆ ತೀರ್ಮಾನಿಸಬೇಕಿದೆ. ಸರ್ವಾಧಿಕಾರದ ರಾಮರಾಜ್ಯವೋ ಇಲ್ಲಾ ಸಮಾನತೆಯ ಪ್ರಜಾರಾಜ್ಯವೋ ಎನ್ನುವ ಆಯ್ಕೆಯ ಮೇಲೆ ಈ ದೇಶದ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಸಮಾನತೆ ಸೌಹಾರ್ದತೆ, ಸಾಮರಸ್ಯ ಹಾಗೂ ಸ್ವಾತಂತ್ರ್ಯಗಳಿಗಾಗಿ ಪ್ರಜಾತಂತ್ರವನ್ನು ಉಳಿಸಿಕೊಳ್ಳಲೇ ಬೇಕಿದೆ. ಜನರು ಭಾವನಾತ್ಮಕ ಭ್ರಮೆಯನ್ನು ಬದಿಗಿರಿಸಿ ವಾಸ್ತವವನ್ನು ಅರಿತುಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು

More articles

Latest article