Sunday, July 14, 2024

ಅಲೆಮಾರಿ ಜನಾಂಗದ ಕಲಾವಿದರ ಹಾಡು ಪಾಡು

Most read

ಅಲೆಮಾರಿ ಸಮುದಾಯಗಳು ಪೋಷಿಸಿ ಪಾಲಿಸಿಕೊಂಡು ಬಂದ ಪರಂಪರಾಗತ ಕಲೆಗಳಾದ ಬುರ್ರಕಥಾ, ಹಗಲುವೇಷ, ಜನಪದ ಸಂಗೀತ, ಬಾಲಸಂತ, ಕೊಂಡಮಾಮ, ಸಿದ್ಧರ ಕೈಚಳಕ, ತೊಗಲುಗೊಂಬೆಯಾಟ ಮುಂತಾದ ಕಲೆಗಳು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು ರೂಪಿಸಲು ಮತ್ತು ಕಲೆಯ ಉಳಿವಿಗಾಗಿ ಪ್ರತ್ಯೇಕ “ಅಲೆಮಾರಿ ಬುಡಕಟ್ಟು ಕಲಾ ಅಕಾಡೆಮಿ” ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ಸರಕಾರಗಳು ಮುತುವರ್ಜಿ ವಹಿಸಿ ಸ್ಥಾಪಿಸಬೇಕಿದೆ. – ಶಿವರಾಜ್‌ ಮೋತಿ, ಯುವ ಬರಹಗಾರ

ರಾಮನ ಪಾತ್ರ, ಭೀಮನ ಪಾತ್ರ ಹಾಗೆಯೇ ಅನೇಕ ವೇಷಗಳನ್ನು ಪುರಾಣ ಪುರುಷರನ್ನು ಮತ್ತು ರಾಮಾಯಣ, ಮಹಾಭಾರತದ ಪಾತ್ರಗಳನ್ನು ಹಗಲಲ್ಲೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುತ್ತಾ ಬರುವ ಸರ್ವಜ್ಞನ ವಚನಗಳನ್ನೂ ಸಹ ಸರಾಗವಾಗಿ ಹಾಡುತ್ತಾ ಭಾರತೀಯ ಸಮಾಜಕ್ಕೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸಿದ್ದೆ ಅಲೆಮಾರಿಯ ಹಗಲುವೇಷ ಪಾತ್ರಧಾರಿಗಳು.

ಚಿತ್ರ : ಗೂಗಲ್

ಇತ್ತೀಚಿಗೆ ಕರ್ನಾಟಕದಿಂದ ಅರೆ ಅಲೆಮಾರಿಗಳಾಗಿ ಹೆಚ್ಚಾಗಿ ತಮಿಳುನಾಡಿಗೆ ಹೋಗುತ್ತಿರುವ ಈ ವೇಷಧಾರಿಗಳು ಶಿವ, ರಾಮ, ಭೀಮನ ಪಾತ್ರವನ್ನು ಹಾಕಿಕೊಂಡು ಬಿಸಿಲಲ್ಲಿ ಮನೆಮನೆಗೆ ಭಿಕ್ಷಾಟನೆಗೆ (ಗೌರವ ಸೂಚಕವಾಗಿ) ತೆರಳುತ್ತಿದ್ದರೆ ಅಲ್ಲಿನ ಜನ ಕಾಲಿಗೆ ನೀರು ಹಾಕಿ ನಮಸ್ಕರಿಸಿ ಭಕ್ತಿಪೂರ್ವಕವಾಗಿ ದವಸಧಾನ್ಯ ಅಥವಾ ಹಣ ನೀಡುವುದನ್ನು ಆ ಪಾತ್ರಧಾರಿಗಳು ಹೇಳುತ್ತಿದ್ದರೆ ಮೈರೋಮಾಂಚನಗೊಳ್ಳುತ್ತಿರುತ್ತದೆ. ಅಂತಹ ಶ್ರೀಮಂತ ಪರಂಪರೆ ಹೊಂದಿದ ಈ ಸಮುದಾಯಗಳು ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯಮಂದಿರ ಉದ್ಘಾಟನೆ ಆದರೂ ಇವರು ಇನ್ನೂ ಬಿಸಿಲಲ್ಲಿ ಭಿಕ್ಷಾಟನೆ ಮಾಡೋದು ಮಾತ್ರ ತಪ್ಪಿಲ್ಲ. ಯಾವ ಸರಕಾರಗಳು ಬಂದರೂ ಪುನರ್ವಸತಿ ಕಲ್ಪಿಸಿ ಈ ಸಮುದಾಯಗಳಿಗೆ ನೆಮ್ಮದಿಯ ಜೀವನ ಮಾಡಲು ಅನುವು ಮಾಡಿಕೊಡದಿರುವುದು ಖೇದಕರ ಸಂಗತಿಯೇ ಆಗಿದೆ. ಈ ಗ್ಲೋಬಲ್ ಲೆವೆಲ್‌ನಲ್ಲೂ ಜನರಿಗೆ ಇನ್ನೂ ಈ ಮೂಲ ಜನಾಂಗೀಯ ಕಲೆಗಳ ಬಗ್ಗೆ ವಿಶೇಷ ಆಸಕ್ತಿಯಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಚಿತ್ರ: ಗೂಗಲ್

ಊರೊಳಗೆ ಮನೆಯಾದರೂ ಇರಬೇಕು, ಇಲ್ಲದಿದ್ದರೆ ಕನಿಷ್ಟ ಪಕ್ಷ ಅಡವಿಯಲ್ಲಾದರೂ ಹೊಲವಾದರೂ ಇರಬೇಕು ಎಂಬ ಮಾತಿದೆ. ಇವರೆಡರಿಂದ ವಂಚಿತರಾದ ಅಲಕ್ಷಿತ ಸಮಸ್ತ ಅಲೆಮಾರಿ ಸಮುದಾಯಗಳು ಹೆಚ್ಚಾಗಿ ಸಾಂಸ್ಕೃತಿಕವಾಗಿ ಪಲ್ಲಟಗೊಂಡಿರುವುದರಿಂದಲೇ ಸರ್ಕಾರದ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲವೇನೋ. ತಮ್ಮ ಮಕ್ಕಳನ್ನು ತಾವೇ ಶಾಲೆಗೆ ಸೇರಿಸಿ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕೆಂಬ ವಿಚಾರದಿಂದಲೂ ಅಲೆಮಾರಿಗಳಿಗೆ ಎಂದಿಗೂ ಕಳಚಿಕೊಳ್ಳಲಾಗದು ಎಂಬುದನ್ನು ಕೂಡ ಈ ಸಮುದಾಯಗಳು ಮರೆಯಬಾರದು.

ಶಿವಾಜಿ ಮಹಾರಾಜನ ಕಾಲದಲ್ಲಿ ಹಗಲುವೇಷಗಾರಿಕೆ ಪ್ರಾರಂಭವಾಗಿದೆ. ಶಿವಾಜಿ ರಾಜಕೀಯ ಪ್ರಚಾರಕ್ಕೆ ಹಗಲುವೇಷಗಾರಿಕೆಯ ಕಲಾವಿದರನ್ನು ಬಳಸಿದ್ದು ಹಾಗೂ ಗುಪ್ತವೇಷ ಮೊದಲಾದ ರೋಚಕ ಘಟನೆಗಳಿಗೆ ವೇಷಗಾರಿಕೆಯ ಕಲಾವಿದರನ್ನು ರಾಜಕೀಯ ಗುಪ್ತ ಚಲನ ವಲನಗಳಿಗೆ ಬಳಸುತ್ತಿದ್ದನು. ಈ ಪ್ರಾಚೀನತೆಯನ್ನು ನಂಬಲರ್ಹವಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮುಖಕ್ಕೆ ಗಾಢವಾಗಿ ಬಳಿದ ನೀಲಿ ಬಣ್ಣ, ಕೊರಳಲ್ಲಿ ರುದ್ರಾಕ್ಷಿ ಹಾರ, ತಲೆಗೊಂದು ಬಣ್ಣದ ಕಿರೀಟ, ಹಣೆಯಲ್ಲಿ ಮೂರು ನಾಮಗಳು, ಹೆಗಲಿಗೆ ಹಾರ್ಮೋನಿಯಂ ಪೆಟ್ಟಿಗೆ…!

ಚಿತ್ರ: ಗೂಗಲ್

ಇದು ರಾಮಾಯಣ, ಮಹಾಭಾರತದ ದೃಷ್ಟಾಂತಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಹಾಡು, ಕುಣಿತ ಪ್ರದರ್ಶಿಸಿ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಈ ಅಲೆಮಾರಿ ಜನಾಂಗದ ಕಥೆಯೂ ಹೌದು ವ್ಯಥೆಯೂ ಹೌದು. ಪುರಾತನ ಕಾಲದ ಪೌರಾಣಿಕ ನಾಟಕ, ರಾಮಾಯಣ, ಮಹಾಭಾರತ, ಧಾರ್ಮಿಕ, ಸಾಮಾಜಿಕ ನಾಟಕದ ಕಲೆಗಳನ್ನು ಬೀದಿ-ಬೀದಿಯಲ್ಲಿ ಪ್ರದರ್ಶಿಸುತ್ತಾ, ರಾಮ, ಸೀತೆ, ರಾಕ್ಷಸ, ಶಿವ ಪಾರ್ವತಿ, ನರಭಕ್ಷಕ, ಕೃಷ್ಣ, ಆಂಜನೇಯ ನಾನಾ ವೇಷಭೂಷಣಗಳ ಮೂಲಕ ಜನರನ್ನು ರಂಜಿಸುವ ಹಗಲುವೇಷ ಕಲೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಇಂತಹ ಅನೇಕ ಅಲೆಮಾರಿಗಳ ಬದುಕು ದುಸ್ತರವಾಗಿದೆ. ಬೀದಿಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ, ಮನೆಮನೆಗಳಿಗೆ ತೆರಳಿ ಕಲೆ ಪ್ರದರ್ಶಿಸಿ ಸಂಗೀತ, ನೃತ್ಯದೊಂದಿಗೆ ನೋಡುಗರ ಮನ ತಣಿಸಿ ತುತ್ತು ಅನ್ನಕ್ಕಾಗಿ ಇಂದಿಗೂ ಕೈ ಚಾಚಿ ದುಡ್ಡು ಪಡೆಯುವ ಇವರ ಈ ಸ್ಥಿತಿಗೆ ರಾಮನ ಭಕ್ತರಿಗೆ ಒಂದಿಷ್ಟಾದರೂ ಮನ ಕರಗಿ ಭಕ್ತಿ-ಭಾವ ಮೂಡುವುದಿಲ್ಲವೇ? ಇಂತಹ ಕಲಾವಿದರುಗಳಿಗೆ ಸಹಾಯ ಮಾಡಲು ಇನ್ನಾದರೂ ಮುಂದಾಗುವಿರಾ ಎಂದು ಕೇಳಿಕೊಳ್ಳಬಹುದೇ…?

ಬುರ್ರಕಥಾ ಕಮಲಮ್ಮ

ಅಲೆಮಾರಿ ಸಮುದಾಯಗಳು ಪೋಷಿಸಿ ಪಾಲಿಸಿಕೊಂಡು ಬಂದ ಪರಂಪರಾಗತ ಕಲೆಗಳಾದ ಬುರ್ರಕಥಾ, ಹಗಲುವೇಷ, ಜನಪದ ಸಂಗೀತ, ಬಾಲಸಂತ, ಕೊಂಡಮಾಮ, ಸಿದ್ಧರ ಕೈಚಳಕ, ತೊಗಲುಗೊಂಬೆಯಾಟ ಮುಂತಾದ ಕಲೆಗಳು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು ರೂಪಿಸಲು ಮತ್ತು ಕಲೆಯ ಉಳಿವಿಗಾಗಿ ಪ್ರತ್ಯೇಕ “ಅಲೆಮಾರಿ ಬುಡಕಟ್ಟು ಕಲಾ ಅಕಾಡೆಮಿ” ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ಸರಕಾರಗಳು ಮುತುವರ್ಜಿ ವಹಿಸಿ ತುರ್ತಾಗಿ ಸ್ಥಾಪಿಸಬೇಕಿದೆ.

ಹಾಗೆಯೇ ಮುಂದುವರೆದು, ಕಲೆಯನ್ನೆ ನಂಬಿ ಬದುಕುತ್ತಿರುವ ಅಲೆಮಾರಿ ಜನಾಂಗದ ಸಮಸ್ತ ಹುಟ್ಟು ಕಲಾವಿದರಿಗೆ ವಯಸ್ಸನ್ನು (ತಜ್ಞರ ಅಭಿಪ್ರಾಯಗಳನ್ನು ಆಧರಿಸಿಯೂ) ನಿಗದಿ ಪಡಿಸಿ ಯಾ ಯಾವುದೇ ವಯಸ್ಸಿನ ಮಾನದಂಡವಿಲ್ಲದೆಯೂ ಸಹ ಈ ಕಲಾವಿದರಿಗೆ “ಮಾಸಾಶನವನ್ನು” ಅತ್ಯಂತ ಸುಲಭವಾಗಿ ನೀಡುವಂತಾಗಬೇಕಿದೆ.

ಕಲೆಯನ್ನು ನಂಬಿ ಬದುಕಿನ ನೊಗವನ್ನು ಮುನ್ನಡೆಸುತ್ತಿರುವ ಅಲೆಮಾರಿಗಳ ಮುಖದಲ್ಲಿ ಇನ್ನಾದರೂ ಸ್ವಲ್ಪ ಮಂದಹಾಸ ಮೂಡಲೆಂದು ಆಶಿಸುತ್ತೇನೆ.

ಶಿವರಾಜ್ ಮೋತಿ

ಯುವ ಬರಹಗಾರ, ಧಾರವಾಡ 

ಇದನ್ನೂ ಓದಿ-ಸಂಘ ಪರಿವಾರ ಸೃಷ್ಟಿಸಿದ ಸಮೂಹ ಸನ್ನಿಯಲ್ಲಿ ಕೊಚ್ಚಿ ಹೋಗದ ಈ ಸೆಲೆಬ್ರಿಟಿಗಳು…

More articles

Latest article