Wednesday, May 22, 2024

ಸಂಘ ಪರಿವಾರ ಸೃಷ್ಟಿಸಿದ ಸಮೂಹ ಸನ್ನಿಯಲ್ಲಿ ಕೊಚ್ಚಿ ಹೋಗದ ಈ ಸೆಲೆಬ್ರಿಟಿಗಳು…

Most read

ಕೆಳಗಿನ ಮೂರು ಹೇಳಿಕೆಗಳನ್ನು ಗಮನವಿಟ್ಟು ಓದಿ.

“ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ…

ನಾವು ನೋಡದ್ದೇವಲ್ಲ..

ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ..

ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ,

ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ,

ದೇಗುಲದ ಶಿಲ್ಪಿಯ ಕೈ ಕತ್ತರಿಸಿ,

ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ, ಅಜರಾಮರರಾದ ದೊರೆಗಳು …

ಉಧೋ ಉಧೋ ಎಂದ ಪ್ರಜೆಗಳು, ಭಟ್ಟಂಗಿಗಳು …

ಧರ್ಮ ಮತ್ತು ದೇವರು ರಾಜಕಾರಿಣಿಗಳ ಕೈಗೆ ಹೋಗಿ ತಾವೂ ಪ್ರಶ್ನಾತೀತವಾಗಿ ಅವರನ್ನೂ ಪ್ರಶ್ನಾತೀತರನ್ನಾಗಿಸಿಬಿಡುವುದು ಸಂಸ್ಕೃತಿಯ ಚಲನಶೀಲತೆಗೆ, ನಾಡಿನ ಭವಿಷ್ಯಕ್ಕೆ ಅತೀ ಅಪಾಯಕಾರಿ”

***

“ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕು. ಜತೆಗೆ ಯಾವುದೇ ನಿರ್ದಿಷ್ಟ ಧರ್ಮವನ್ನು ಪೋಷಿಸುವುದು ಅಥವಾ ಅದರ ವಿರುದ್ಧ ತಾರತಮ್ಯ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಇಂದು ಧರ್ಮವನ್ನು ರಾಜಕೀಯಗೊಳಿಸಲಾಗುತ್ತಿದೆ. ಇದನ್ನು ನೋಡಿಯೂ ಸುಮ್ಮನೆ ಕೂತು ಗಮನಿಸುವುದೂ ಸರಿಯಲ್ಲ”

***

“ನಾವು ನಮ್ಮ ಮನೆಗಳಲ್ಲಿ ಕರ್ಪೂರದಾರತಿ ಬೆಳಗದಿದ್ರೆ ನಮ್ಮನ್ನು ಟೆರರಿಸ್ಟ್ ಎಂದು ಪರಿಗಣಿಸುವ ಹಂತದಲ್ಲಿ ನಾವಿದ್ದೇವೆ. ದೇಶ ಅಪಾಯಕಾರಿ  ಭವಿಷ್ಯದತ್ತ ಮುನ್ನಡೆಯುತ್ತಿದೆ. ಮುಂದಿನ ಐದು ಹತ್ತು ವರ್ಷಗಳ ಕಾಲ ನಾವು ಯಾವ ರೀತಿಯ ಭಾರತದಲ್ಲಿ ವಾಸಿಸಬೇಕೆಂದು ಭಯವಾಗುತ್ತಿದೆ.  ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಪ್ರತಿಗಾಮಿ ರಾಜಕೀಯದ ಅಭಿವ್ಯಕ್ತಿಯಾಗಿದೆ… ದೇವಸ್ಥಾನದ ಉದ್ಘಾಟನೆಯೊಂದಿಗೆ 500 ವರ್ಷ ಹಳೆಯ ಸಮಸ್ಯೆಗೆ ಮುಕ್ತಿ ದೊರಕಿತು ಎಂದು ಹೇಳುತ್ತಿದ್ದಾರೆ. ಆದರೆ ನಾವು ಆ ಸಮಸ್ಯೆಯ ಹಿಂದಿನ ರಾಜಕೀಯವನ್ನು ಪ್ರಶ್ನಿಸಬೇಕಿದೆ”

ಈ ಮೇಲಿನ ಮಾತುಗಳನ್ನು ಆಡಿದವರು ಕ್ರಮವಾಗಿ ಕನ್ನಡ ಚಿತ್ರನಟ ಕಿಶೋರ್ ಕುಮಾರ್, ಚಿತ್ರನಟಿ ಶೃತಿ ಹರಿಹರನ್ ಮತ್ತು ತಮಿಳು ಚಿತ್ರ ನಿರ್ದೇಶಕ ಪಾ. ರಂಜಿತ್.

ಈ ಮಾತುಗಳನ್ನು ಇವರು ಆಡಿರುವುದು ಎಂತ ಸಮಯದಲ್ಲಿ ಎಂದರೆ ‘ಜೈ ಶ್ರೀರಾಮ್” ಎನ್ನದಿದ್ದವರು ದೇಶದ್ರೋಹಿಗಳು, ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಂಭ್ರಮಿಸದಿದ್ದರೆ ಅವರು ಹಿಂದೂ ವಿರೋಧಿಗಳು ಎಂಬಂತಹ ವಾತಾವರಣ ಸೃಷ್ಟಿಯಾಗಿ ದೇಶದಲ್ಲಿ ಒಂದು ಬಗೆಯ ಸಮೂಹ ಸನ್ನಿ ಅಥವಾ ಮಾಸ್ ಹಿಸ್ಟೀರಿಯಾ ಉಂಟಾಗಿದ್ದ ಸಂದರ್ಭದಲ್ಲಿ. ಈ ಮೂರೂ ಜನರು ದೊಡ್ಡ ಸೆಲೆಬ್ರಿಟಿಗಳು. ಇವರ ಬಹುತೇಕ ಸಹೋದ್ಯೋಗಿ ಸೆಲೆಬ್ರಿಟಿ ಚಿತ್ರನಟರು, ನಟಿಯರು, ನಿರ್ದೇಶಕರು ಅತ್ತ ಈ ಸಮೂಹ ಸನ್ನಿಯಲ್ಲಿ ಸೇರಿಕೊಂಡು ತಾವೂ ಮತ್ತಷ್ಟು ಸನ್ನಿ ಹಿಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು. ತಮಿಳು ನಟ ರಜನಿಕಾಂತ್ ಅಯೋಧ್ಯೆಯ ಬಾಲರಾಮನ ದರ್ಶನ ಪಡೆದ ಮೊದಲ 150 ಜನರಲ್ಲಿ ತಾನೊಬ್ಬ ಎಂದು ಸಂಭ್ರಮಿಸುತ್ತಿದ್ದರೆ ದೊಡ್ಡ ದೊಡ್ಡ ತೆಲುಗು ನಟರು ಕೋಟಿ ಕೋಟಿ ದೇಣಿಗೆಯನ್ನು ರಾಮ ಮಂದಿರಕ್ಕೆ ಘೋಷಿಸಿ ಭಕ್ತರಿಂದ ಶಹಬ್ಬಾಸ್ ಎನಿಸಿಕೊಳ್ಳುತ್ತಿದ್ದರು. ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಕಂಗನಾ ರನಾವತ್, ಮಾಧುರಿ ರೀಕ್ಷಿತ್, ಹೇಮಾಮಾಲಿನಿ, ಸನ್ನಿ ಡಿಯೋಲ್, ಗಾಯಕಿ ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಸೋನು ನಿಗಮ್, ಟಾಲಿವುಡ್ ನ ಅಲ್ಲೂ ಅರ್ಜುನ್, ಜ್ಯೂನಿಯರ್ ಎನ್ ಟಿ ಆರ್, ಚಿರಂಜೀವಿ. ಮಲಯಾಳಂ ನಟ ಮೋಹನ್ ಲಾಲ್ ಹೀಗೆ ಸೆಲೆಬ್ರಿಟಿಗಳ ದಂಡೇ ಬಿಜೆಪಿಯ ಶ್ರೀರಾಮನ ಸೈನ್ಯದಲ್ಲಿ ಸೇರಿಕೊಂಡಿತ್ತು.

ಹೀಗೆ ದೊಡ್ಡ ಪ್ರವಾಹವೇ ಒಂದು ದಿಕ್ಕಿನಲ್ಲಿ ರಭಸವಾಗಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿದ್ದಾಗ ಅದರ ವಿರುದ್ಧ ತಿರುಗಿ ಈಜುತ್ತೇವೆ ಎನ್ನುವುದು ಸುಲಭದ ಮಾತಲ್ಲ. ‘ವಾತಾವರಣ ಸ್ವಲ್ಪ ತಿಳಿಯಾಗಲಿ, ಈಗ ಸುಮ್ಮನಿದ್ದು ಬಿಡೋಣ, ಈಗ ಏನೇ ಹೇಳಿದರೂ ಪ್ರಚೋದನೆ ನೀಡಿದಂತೆ’ ಎಂದು ಯೋಚಿಸಿದವರು ಅನೇಕರಿರಬಹುದು. ಆದರೆ ಇಲ್ಲ ಎದುರಿಗೆ ಒಂದು ಅನ್ಯಾಯ, ಅನಾಚಾರ ರಾರಾಜಿಸುತ್ತಿರುವಾಗ ಅದರ ಕುರಿತು ಆ ಕ್ಷಣದಲ್ಲಿ ಪ್ರತಿರೋಧ ವ್ಯಕ್ತಪಡಿಸದೇ ಇರುವುದೂ ಸಹ ಆ ಅನ್ಯಾಯ, ಅಕ್ರಮದಲ್ಲಿ ಪಾಲ್ಗೊಂಡಂತೆಯೇ ಆಗುತ್ತದೆ ಎಂಬ ಆಲೋಚನೆಯಲ್ಲಿ ಈ ದೇಶದ ಹಲವು ಮಂದಿ ಮಾತಾಡಿದರು.

ವಿಶೇಷವಾಗಿ ಮಲಯಾಳಂ ಸಿನಿಮಾ ರಂಗದ ಪಾರ್ವತಿ, ರಿಮಾ, ದಿವ್ಯಪ್ರಭಾ, ಕಣಿ ಕುಸೃತಿ, ನಿರ್ದೇಶಕರಾದ ಜಿಯೋ ಬೇಬಿ, ಆಶಿಕ್ ಅಬು, ಗಾಯಕ ಸೂರಜ್ ಸಂತೋಷ್ ಇವರೆಲ್ಲಾ ಜನವರಿ 22ರಂದು ಸಂವಿಧಾನದ ಪೀಠಿಕೆಯ ಚಿತ್ರಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪ್ರದರ್ಶಿಸಿಸುವ ಮೂಲಕ ಸಮೂಹಸನ್ನಿಗೆ ದಿಟ್ಟ ಪ್ರತಿರೋಧ ತೋರಿದ್ದರು. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಹ ಅತುಲ್ ಮೋಂಗಿಯಾ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದ ಸಂವಿಧಾನದ ಪೀಠಿಕೆಯ ಚಿತ್ರವನ್ನು ಹಂಚಿಕೊಂಡು ತಮ್ಮ ಭಿನ್ನದನಿಯನ್ನು ದಾಖಲಿಸಿದ್ದರು. ಈ ಕೆಲವು ಮಂದಿ ಯಾಕೆ ಹೀಗೆ ಮಾಡಿದರೆಂದರೆ ಹೀಗೆ ಮಾಡುವಂತೆ ಅವರ ಆತ್ಮಸಾಕ್ಷಿ ಕೆಣಕಿತ್ತು. ಹೀಗೆ ಭಿನ್ನ ಧ್ವನಿ ದಾಖಲಿಸುವುದು ಕೆಲವೊಮ್ಮೆ ಅಪಾಯಕಾರಿಯಾಗಿರುತ್ತದೆ, ಉನ್ಮಾದದಲ್ಲಿ ಮುಳುಗಿದವರ ಕ್ರೋಧಕ್ಕೆ ಒಳಗಾಗಲೂಬೇಕಾಗುತ್ತದೆ. ಆದರೂ ಇದಕ್ಕೆಲ್ಲಾ ಲೆಕ್ಕಿಸದೆಯೇ ಇವರು ತಮ್ಮ ಪ್ರತಿರೋಧ ದಾಖಲಿಸಿದ್ದಾರೆ. ‘ಇಲ್ಲಿ ನಡೆಯುತ್ತಿರುವುದು ಸಂಭ್ರಮವಲ್ಲ ಈ ದೇಶ ಸಾವಿರಾರು ವರ್ಷಗಳಿಂದ ಪೋಷಿಸಿಕೊಂಡು ಬಂದ ಬಹುಸಂಸ್ಕೃತಿ, ಜನತಂತ್ರಗಳ ಸಮಾಧಿಯ ಮೇಲೆ ಇಲ್ಲೊಂದು ಸಂಭ್ರಮ ನಡೆಯುತ್ತಿದೆ; ದೇಶದ ಸಂವಿಧಾನದ ಆಶಯಗಳನ್ನು ಹೂತು ಹಾಕಲು ಒಂದು ದೊಡ್ಡ ತಯಾರಿ ನಡೆಯುತ್ತಿದೆ’ ಎಂಬ ಅರಿವು ಮತ್ತು ಅವರೊಳಗೆ ಜಾಗೃತವಾದ ಅಪ್ರತಿಮ ದೇಶಪ್ರೇಮವೇ ಅವರನ್ನು ಹೀಗೆ ಮಾತಾಡಲು ಪ್ರೇರೇಪಿಸಿದ್ದು. ಇಂತಹ ದೊಡ್ಡ ಸೆಲೆಬ್ರಿಟಿಗಳು ಇಂತಹ ಸಂದರ್ಭದಲ್ಲಿ ಆಡುವ ಸತ್ಯವಾಕ್ಯಗಳು ಸಮಾಜದಲ್ಲಿ ಅತ್ಯಂತ ಪ್ರಭಾವ ಉಂಟು ಮಾಡುವ ಶಕ್ತಿ ಇರುತ್ತದೆ ಎಂಬುದನ್ನು ಗಮನಿಸಬಹುದು.

ಇದೇ ಸಂದರ್ಭದಲ್ಲಿ ಇನ್ನೊಂದು ವಿದ್ಯಮಾನ ದೇಶದಲ್ಲಿ ನಡೆಯಿತು. ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂಬ ಬಿರುದಾಂಕಿತವಾದ ಮಾಧ್ಯಮ ರಂಗದ ಪ್ರತಿನಿಧಿಗಳು ಜನವರಿ 22ರಂದು ವರ್ತಿಸಿದ ಬಗೆ ಇತ್ತಲ್ಲಾ ಅದು ಅತ್ಯಂತ ಹೇಸಗೆಯದು. ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲು ಇನ್ನೂ ಹಲವಾರು ತಿಂಗಳುಗಳೇ ಬೇಕಾಗಬಹುದು. ಪೂರ್ಣಗೊಳ್ಳದ ಮಂದಿರ ಉದ್ಘಾಟನೆ ಶಾಸ್ತ್ರಬದ್ಧವಲ್ಲ ಎಂಬ ಕಾರಣ ನೀಡಿ ಶಂಕರಾಚಾರ್ಯ ಸ್ಥಾಪಿತ ನಾಲ್ಕು ದೊಡ್ಡ ಮಠಗಳ ಮಠಾಧೀಶರು ಇಡೀ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ರಾಮಮಂದಿರದ ಒಟ್ಟಾರೆ ಕೆಲಸವನ್ನು ಸರ್ಕಾರೇತರ ಸಂಘಟನೆಗಳೇ ನಿರ್ವಹಿಸಿದ್ದರೂ ಇದರ ಸಂಪೂರ್ಣ ಪ್ರಚಾರ ಮತ್ತು ಲಾಭ ಪಡೆಯಲು ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತವಾಗಿ ಇಡೀ ಸರ್ಕಾರಿ ಯಂತ್ರಾಂಗವನ್ನು ಬಳಸಿಕೊಂಡರಲ್ಲದೆ ಸರ್ಕಾರದ ಬೊಕ್ಕಸದ ಹಣವನ್ನೂ ದುರ್ಬಳಕೆ ಮಾಡಿಕೊಂಡರು. ಭಾರತದ ಸಂವಿಧಾನವು ಸರ್ಕಾರವು ಯಾವುದೇ ಒಂದು ಧರ್ಮಕ್ಕೆ ನಿಷ್ಟೆಯನ್ನು ತೋರಿಸಬಾರದು, ಧರ್ಮ ದೇವರ ವಿಷಯದಲ್ಲಿ ಸರ್ಕಾರ ಯಾವತ್ತೂ ತಟಸ್ಥತೆ ಕಾಪಾಡಬೇಕು ಎಂದು ತನ್ನ ಸೆಕ್ಯುಲರ್ ತತ್ವದಲ್ಲಿ ಹೇಳುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡರು. ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜನವರಿ 22ನ್ನು ರಜಾದಿನವಾಗಿಯೂ ಘೋಷಿಸಿದ್ದರು. 11 ದಿನಗಳ ಕಾಲ ಮೋದಿ ಬರೀ ಮಂದಿರ ಸಂಬಂಧಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದರು.

ಆದರೆ ನಮ್ಮ ಮೀಡಿಯಾಗಳು ಇವನ್ನು ಪ್ರಶ್ನಿಸುವ ಹೊಣೆಯನ್ನು ತೋರುವ ಪರಿಸ್ಥಿತಿಯಲ್ಲೇ ಇರಲಿಲ್ಲ. ಬಿಯರ್ ಕುಡಿದವನಿಗೆ ಹೆಂಡ ಕುಡಿದವರು ಬುದ್ದಿ ಹೇಳಲು ಹೇಗೆ ಸಾಧ್ಯವಿಲ್ಲವೋ ಹಾಗೇ ಬಹುತೇಕ ಮೀಡಿಯಾಗಲೂ ಹೆಂಡ ಕುಡಿದು ತೂರಾಡುವ ಸ್ಥಿತಿಯಲ್ಲಿದ್ದವು.

ಕೆಲವು ಉದಾಹರಣೆಗಳನ್ನು ನೋಡುವುದಾದರೆ,

ಮರ್ಯಾದಾ ಪುರುಷೋತ್ತಮ ರಾಮನ ಪ್ರತಿಷ್ಠಾಪನೆಯ ಅಂಗವಾಗಿ ನ್ಯೂಸ್ 18 ಚಾನೆಲ್ ನಡೆಸಿದ ಸಂದರ್ಶನ ಯಾರದು ಗೊತ್ತೆ? ಅಪ್ರಾಪ್ರ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಅಪವಾದ ಹೊಂದಿರುವ ಬಿಜೆಪಿ ಗೂಂಡಾ ಸಂಸದ ಎಂದೇ ಕುಖ್ಯಾತನಾಗಿರುವ ಬ್ರಿಜ್ ಭೂಷಣ್ ಸಿಂಗ್ ನದ್ದು! ಇದಕ್ಕೆ ಈ ಸುದ್ದಿವಾಹಿನಿಯವರು ನೀಡಿದ್ದ ತಲೆಬರೆಹ’ ದಿವ್ಯ ಕವರೇಜ್! ಹೇ ರಾಮ್!!

ಕನ್ನಡದ ಟಿವಿ ಚಾನೆಲ್ ವೊಂದರ ಮುಖ್ಯಸ್ಥರು ಜನವರಿ 22ರಂದು ಮಡಿಯುಟ್ಟು ಭಕ್ತಿ ಭಾವದಿಂದ ಕುಳಿತಿದ್ದ ಫೋಟೋ ಹರಿದಾಡಿತು. ಮತ್ತೊಬ್ಬ ಟೀವಿ ನಿರೂಪಕ ಹಣೆಯ ಮೇಲೆ ಜೈ ಶ್ರೀರಾಂ ಎಂದು ಬರೆದುಕೊಂಡು ಸಂಭ್ರಮಿಸುತ್ತಿದ್ದ. ಪ್ರತಿಷ್ಠಿತ ಕನ್ನಡ ಪತ್ರಿಕೆಯೊಂದರ ಕಚೇರಿಯಲ್ಲಿ ಮದ್ಯಾಹ್ನ ಬಾಳೆಎಲೆ ಹಾಕಿಕೊಂಡು ಹಬ್ಬದಂತೆ ಮೃಷ್ಟಾನ್ನ ಭೋಜನ ಉಂಡು ಸಂಭ್ರಮಿಸಲಾಯಿತಂತೆ. ಇನ್ನು ವಿಮಾನಗಳಲ್ಲಿ ಅಯೋಧ್ಯೆಗೆ ಸಾಕ್ಷಾತ್ ವರದಿಗೆಂದು ತೆರಳಿದ್ದ ಸುದ್ದಿ ವಾಹಿನಿಗಳ ನಿರೂಪಕ ನಿರೂಪಕಿಯರು ತಾವೇ ಸಾಕ್ಷಾತ್ ಕರಸೇವಕರಾಗಿ ಪರಿವರ್ತನೆಗೊಂಡಿದ್ದರು!

ಹೀಗೆ, ಗೋದಿ ಮೀಡಿಯಾ ಎಂದು ಹೆಸರಾಗಿರುವ ದೇಶದ ಮಾಧ್ಯಮ ರಂಗ ಸಂಪೂರ್ಣ ರಾಮ ಭಜನೆ ಅರ್ಥಾತ್ ಮೋದಿ ಭಜನೆಯಲ್ಲಿ ವಾರಗಟ್ಟಲೆ ಬ್ಯುಸಿಯಾಗಿಬಿಟ್ಟಿತ್ತು.

***

ಇದೇ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಹಿಡಿದುಕೊಂಡು ಒಂದು ಹೊಡಿಬಡಿ ಗುಂಪು(Mob) ಆ ಬಾಲಕನನ್ನು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವಂತೆ ಮಾಡಿ, ಅವನು ದೇವರ ಮೂರ್ತಿಗೆ ಕೈಮುಗಿಯುವಂತೆ ಮಾಡಿ, ತೀರ್ಥ ಪ್ರಸಾದ ಪಡೆಯುವಂತೆ ಮಾಡುತ್ತದೆ. ಅಷ್ಟಾದ ಮೇಲೂ ಅವನ ಮೇಲೆ ಅಲ್ಲಿದ್ದ ಕೆಲವರು ಹಲ್ಲೆ ನಡೆಸುತ್ತಾರೆ. ಕ್ರೌರ್ಯ ತುಂಬಿದ ಈ ವಿಡಿಯೋ ವೈರಲ್ ಆಗುತ್ತದೆ. ನಂತರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇಂತಹ ಹಲವಾರು ಘಟನೆಗಳು ಉತ್ತರ ಭಾರತದಲ್ಲಿ ನಡೆದವು.

ಈ ಹಿನ್ನೆಲೆಯಲ್ಲಿಯೇ ಪಾ ರಂಜಿತ್ ಹೇಳಿದ ‘ನಾವು ನಮ್ಮ ಮನೆಗಳಲ್ಲಿ ಕರ್ಪೂರದಾರತಿ ಬೆಳಗದಿದ್ರೆ ನಮ್ಮನ್ನು ಟೆರರಿಸ್ಟ್ ಎಂದು ಪರಿಗಣಿಸುವ ಹಂತದಲ್ಲಿ ನಾವಿದ್ದೇವೆ’ ಎಂಬ ಮಾತು ಪ್ರಸ್ತುತವಾಗುತ್ತದೆ.  

ಈ ಎಲ್ಲಾ ಬೆಳವಣಿಗೆಗಳು ನಾವು ಎಂತಹ ಕಾಲಘಟ್ಟವನ್ನು ಹಾದು ಹೋಗುತ್ತಾ ಇದ್ದೇವೆಂಬುದಕ್ಕೆ ಇದು ಸಾಕ್ಷಿ. ಇಂತಹ ದುರಿತ ಕಾಲದಲ್ಲೇ ಸಮಾಜದಲ್ಲಿ ಪ್ರಜ್ಞಾವಂತರು, ಪ್ರಗತಿಪರರು, ಬುದ್ಧಿಜೀವಿಗಳು, ರಾಜಕಾರಣಿ ಎನಿಸಿಕೊಂಡವರು ತಮ್ಮ ನಿಜವಾದ ಹೊಣೆಗಾರಿಕೆಯನ್ನು ತೋರಿಸಬೇಕಾಗಿರುವುದು. ಕೆಲವೊಮ್ಮೆ ನಮ್ಮೆದುರಿನ ಸನ್ನಿವೇಶ, ಸಂದರ್ಭಗಳು ನಮ್ಮನ್ನು ಕತ್ತಲಿಗೆ ದೂಡಿರುತ್ತವೆ, ಹತಾಶೆ ಆವರಿಸುವ ಘಟನಾವಳಿಗಳು, ದೃಶ್ಯಗಳು ನಮ್ಮ ಜ್ಞಾನೇಂದ್ರಿಯಗಳಿಗೆ ಬಂದೆರಗುತ್ತಿರುತ್ತವೆ. ಆದರೆ ನಮ್ಮ ಆತ್ಮಸಾಕ್ಷಿ ಜಾಗೃತಗೊಳ್ಳಬೇಕಿರುವುದೇ ಅಂತಹ ಸನ್ನಿವೇಶಗಳಲ್ಲಿ. ತೆಲುಗು ಕವಿ ವರವರ ರಾವ್ ಹೇಳಿದಂತೆ,  “ಅಪರಾಧವೇ ಅಧಿಕಾರವಾಗಿ,

ಜನರನ್ನೂ ಅಪರಾಧಿಗಳಾಗಿಸಿ

 ಬೇಟೆಯಾಡುತ್ತಿದ್ದಾಗ, ಬಾಯಿದ್ದೂ

ಸುಮ್ಮನೇ ಕುಳಿತ

ಪ್ರತಿಯೊಬ್ಬನೂ ಅಪರಾಧಿಯೇ”

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ಕಿರಿಯ ರಾಜಕಾರಣಿಗಳೂ ಸಹ ಬಿಜೆಪಿಯ ರಾಮನನ್ನೂ, ಸಂಘಪರಿವಾರ ಆಯೋಜಿತ ಕಾರ್ಯಕ್ರಮವನ್ನೂ ಕೊಂಡಾಡುತ್ತಾ ತಾವೂ ಅದರ ಭಾಗಿಗಳಾಗಿ ಸಂಭ್ರಮಿಸುತ್ತಾ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕೊಂಚ ಭಿನ್ನ ನಿಲುವು ತಳೆದರು. ಜ.22ರಂದು ರಜೆ ಘೋಷಿಸಲೇಬೇಕು ಎಂಬ ತೀವ್ರ ಒತ್ತಡವನ್ನು ರಾಜ್ಯ ಸರ್ಕಾರದ ಮೇಲೆ ಸಂಘಪರಿವಾರ ಹೇರುತ್ತಿದ್ದರೂ ಅಂತಹ ಪೊಳ್ಳು ಒತ್ತಡಕ್ಕೆ ಮಣಿಯದೆ ರಜೆ ಘೋಷಿಸದೇ ಸಂವಿಧಾನ ಬದ್ಧತೆಯನ್ನು ಸಿದ್ದರಾಮಯ್ಯ ಮೆರೆದಿದ್ದು ಮೆಚ್ಚುಗೆಯ ವಿಷಯ. ಆದರೆ ಮಾನ್ಯ ಮುಖ್ಯಮಂತ್ರಿಗಳು ಅದೇ ದಿನವೇ ಮತ್ತೊಂದು ರಾಮಮಂದಿರ ಉದ್ಘಾನೆಯಲ್ಲಿ ತೊಡಗಿಕೊಂಡಿದ್ದು, ತಾನೂ ರಾಮ ಭಕ್ತನೇ ಆದರೆ ಗಾಂಧೀಜಿ ಹೇಳಿದ ರಾಮನ ಭಕ್ತ ಎಂದು ಸಮಜಾಯಿಷಿ ನೀಡತೊಡಗಿದ್ದರು. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ತಾವು ಈ ಸಮೂಹಸನ್ನಿಯಲ್ಲಿ ಜನರ ದೃಷ್ಟಿಯಲ್ಲಿ ವಿಲನ್ ಆಗಿಬಿಡುವ ಆತಂಕ ಎದುರಿಸಿದ್ದರೇ ಎಂಬ ಪ್ರಶ್ನೆ ಹುಟ್ಟುತ್ತದೆ. ಇದೇ ಸನ್ನಿವೇಶದಲ್ಲಿ ಇಂದು ರಾಜ್ಯದ ಮಂತ್ರಿ ಹುದ್ದೆಯಲ್ಲಿರುವ ಯುವ ರಾಜಕಾರಣಿ ಪ್ರಿಯಾಂಕ್ ಖರ್ಗೆ ಅವರ ನಡೆ ಮಾದರಿ ಎನಿಸಿಕೊಂಡಿತು. ಜನವರಿ 24ರಂದು ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡ ಮಾತು ಇಲ್ಲಿ ಉಲ್ಲೇಖನೀಯವಾಗಿದೆ:

“ಹೌದು, ನಾನು ಯಾವ ಧೈವ ಭಕ್ತನೂ ಅಲ್ಲ, ನಾನು ಸಂವಿಧಾನದ ಭಕ್ತ, ನಾನು ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರುಗಳು, ನಿಜಶರಣ ಅಂಬಿಗರ ಚೌಡಯ್ಯ ಪ್ರತಿಪಾದಿಸಿದ ಸಮಾನತೆ, ಸ್ವಾಭಿಮಾನ ತತ್ವಗಳ ಭಕ್ತ. ದಯೆಯೇ ಧರ್ಮ, ಮಾನವತೆಯೇ ಪರಮದೈವ ಎಂದು ನಂಬಿದವನು ನಾನು, ಸಂವಿಧಾನದಲ್ಲಿ ಆಸ್ತಿಕನಿಗೂ ನಾಸ್ತಿಕನಿಗೂ ಸಮಾನ ಅವಕಾಶವಿದೆ, ಸಮಾನ ಹಕ್ಕುಗಳಿವೆ.. ಇದನ್ನು ಬಿಜೆಪಿಯವರು ಅರಿತುಕೊಳ್ಳಬೇಕು. ಬಹುಶಃ ನಾನು ಪರಂಪರೆಯ ದೇವಾಲಯಗಳನ್ನು ಸಂದರ್ಶಿಸಿದಷ್ಟು ಬಿಜೆಪಿಯವರು ಹೋಗಿರಲಿಕ್ಕಿಲ್ಲ! ನಾನು ಕಾಶಿ, ಮಥುರಾ, ಬುದ್ಧಗಯಾ, ಅಜ್ಮಿರ್ ದರ್ಗಾ, ಚರ್ಚ್ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿದ್ದೇನೆ, ಭಕ್ತನಾಗಿ ಅಲ್ಲ, ಅಧ್ಯಯನಕಾರನಾಗಿ. ವಿವಿಧ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸಗಳನ್ನು ಅಧ್ಯಯನ ಮಾಡುವುದು ನನ್ನ ಆಸಕ್ತಿ. ಮುಂದೆಯೂ ನನ್ನ ಈ ಅಧ್ಯಯನದ ಪ್ರವಾಸಗಳನ್ನು ಮಾಡುತ್ತಿರುತ್ತೇನೆ. ಭಕ್ತಿ, ನಂಬಿಕೆಗಳನ್ನು ಬಲವಂತವಾಗಿ ಹೇರುವುದಕ್ಕೂ ಸಾಧ್ಯವಿಲ್ಲ, ಬಲವಂತವಾಗಿ ಕಿತ್ತೂಹಾಕಲೂ ಸಾಧ್ಯವಿಲ್ಲ ಎಂಬ ಸತ್ಯವನ್ನು ಟೀಕಿಸುವವರು ಅರ್ಥ ಮಾಡಿಕೊಂಡರೆ ಒಳಿತು. ನನ್ನ ಭಕ್ತಿ ಏನಿದ್ದರೂ ಸತ್ಯ, ಸಮಾನತೆಯೆಡೆಗೆ ಮಾತ್ರ. ಯಾರನ್ನೋ ಮೆಚ್ಚಿಸಲು ಡಾಂಬಿಕ ದೈವಭಕ್ತನಂತೆ ತೋರಿಸಿಕೊಳ್ಳುವುದು ನನ್ನ ಜಾಯಮಾನವಲ್ಲ. ಹಾಗೆಯೇ, ರಾಜಕಾರಿಣಿಯೊಬ್ಬನ ಮೌಲ್ಯಮಾಪನವನ್ನು ಆತನ ಕೆಲಸಗಳಿಂದ ಮಾಡಬೇಕೇ ಹೊರತು ಆತನ ಭಕ್ತಿಯಿಂದಲ್ಲ ಎಂಬ ವಾಸ್ತವವನ್ನು ಟೀಕಾಕಾರರು ಅರಿತುಕೊಳ್ಳಬೇಕು”

ನಮ್ಮ ಸಮಾಜ ಅನೇಕಾನೇಕ ತುಮುಲಗಳನ್ನು ಹೊತ್ತು ಸಾಗುತ್ತಲೇ ಇರುತ್ತದೆ. ಎಂತಹ ಗಾಢಾಂಧಕಾರದಲ್ಲೂ ಬೆಳಕಿನ ಕಿರಣಗಳು ಗೋಚರಿಸುತ್ತಾ ಇರುತ್ತವೆ. ಸುಳ್ಳಿನ ಮೆರವಣಿಗೆಯಲ್ಲಿ ಸತ್ಯದ ದೊಂದಿ ಹಿಡಿದ ಒಂದೇ ಕೈ ಇದ್ದರೂ ಅದರೊಂದಿಗೆ ಸೇರಿಕೊಳ್ಳುವ ನೂರು, ಸಾವಿರ ಕೈಗಳು, ಮನಸುಗಳು ಹೊಸ ದಾರಿ ತೋರಬಲ್ಲವು ಎನ್ನಲು ಜಗತ್ತಿನ ಇತಿಹಾಸವೇ ಸಾಕ್ಷಿಯಾಗಿದೆ.

More articles

Latest article