Wednesday, December 10, 2025

ಫೆಂಗಲ್ ಮಳೆಯ ಪರಿಣಾಮ; ಹೊಲ ಗದ್ದೆಗಳಲ್ಲೇ ನಾಶವಾಗುತ್ತಿರುವ ರಾಗಿ, ಭತ್ತ, ಹೂ, ತರಕಾರಿ ಬೆಳೆಗಳು

Most read

ಬೆಂಗಳೂರು: ಫೆಂಗಲ್‌ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಕೇವಲ ಮಳೆ ಮಾತ್ರ ಆಗುತ್ತಿಲ್ಲ. ವಿವಿಧ ಜಿಲ್ಲೆಗಳಲ್ಲಿ ಬೆಳೆ ನಾಶವಾಗುತ್ತಿರುವ ವರದಿಗಳು ಬರುತ್ತಿವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ನಾಶವಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತರಕಾರಿ ಬೆಳೆಗಳೂ ನಾಶವಾಗುತ್ತಿವೆ. ಕ್ಯಾರೆಟ್, ಬೀಟ್‌ರೂಟ್, ಹೂಕೋಸು, ಆಲೂಗಡ್ಡೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿಗೆ ಬಂದಿವೆ. ಹಿರೇಕಾಯಿ, ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಹುರಳಿಕಾಯಿಗೆ ರೋಗ ತಗುಲುವ ಆತಂಕ ಎದುರಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ.

ಹೂವಿನ ತೋಟಗಳೂ ಸಂಪೂರ್ಣವಾಗಿ ಮಳೆಯಿಂದ ತೋಯುತ್ತಿವೆ. ಗುಲಾಬಿ, ಸೇವಂತಿ, ಚೆಂಡು ಮೊದಲಾದ ಹೂ ಬೆಳೆಗಳು ನಾಶವಾಗುತ್ತಿವೆ. ಹೂಗಳೂ ಉದುರುತ್ತಿದ್ದು, ನಷ್ಟ ಉಂಟಾಗುವ ಪರಿಸ್ಥಿತಿ ಎದುರಗಿದೆ.
ಅತ್ತ ಕೊಡಗಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ಕಾಫಿ ಮತ್ತು ಭತ್ತದ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಕೊಯ್ಲಿಗೆ ಬಂದಿರುವ ಕಾಫಿ ಮತ್ತು ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುತ್ತಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಮೈಸೂರಿನಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮೈಸೂರಿನ ಜನರು ಹೈರಾಣಾಗಿದ್ದಾರೆ. ಮೈಸೂರಿನಲ್ಲಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ಆದರೆ, ಮೈಸೂರು ವಿವಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಉಂಟಾಗಿತ್ತು.

ಬಂಗಾಳಕೊಲ್ಲಿಯ ಫೆಂಗಲ್ ಚಂಡಮಾರುತದ ಪರಿಣಾಮ ಅರಬ್ಬೀ ಸಮುದ್ರಕ್ಕೂ ತಟ್ಟಿದೆ. ದಕ್ಷಿಣ ಕನ್ನಡದ ಸೋಮೇಶ್ವರ, ಬಟ್ಟಪಾಡಿಯ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಗಂಟೆಗೆ 30ರಿಂದ 35 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

More articles

Latest article