ಬೆಂಗಳೂರು : ಶಾಸಕ ಎನ್.ಎ. ಹ್ಯಾರಿಸ್ ನಿವಾಸ್ ಮನೆ ಹಾಗೂ ಪುತ್ರ ಮೊಹಮದ್ ನಲಪಾಡ್ ಮನೆಗಳ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ ನಡೆದಿದೆ.
ಅಶೋಕ ನಗರದಲ್ಲಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೆಳಗ್ಗೆ 6.30 ರ ನಂತರ ದಾಳಿ ನಡೆಸಿದರು. ಮನೆ, ಕಚೇರಿ ಸೇರಿದಂತೆ 17 ಕಡೆಗಳಲ್ಲಿ ದಾಳಿ ನಡೆದಿದೆ.
ಹ್ಯಾಕರ್ ಶ್ರೀಕಿ ಜೊತೆ ನಂಟು, ಬಿಟ್ ಕಾಯಿನ್ ಪ್ರಕರಣ ಹಾಗೂ ಕೋಟ್ಕ್ಕೆಯಾಂತರ ರೂಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಹ್ಯಾರಿಸ್ ಮನೆ ಹಾಗೂ ಅವರ ಪುತ್ರ ಮಹಮದ್ ನಲಪಾಡ್ ಮನೆ ಮೇಲೆ ಇಡಿ ದಾಳಿ ನಡೆದಿದೆ. ನಲಪಾಡ್ ಮತ್ತು ಶ್ರೀಕಿ ಮಧ್ಯೆ ನಿರಂತರವಾಗಿ ವ್ಯವಹಾರ ನಡೆದಿದೆ. ಇಬ್ಬರ ನಡುವೆ ಈ ಅವಧಿಯಲ್ಲಿ ಒಟ್ಟು 4.65 ಕೋಟಿ ರೂ. ಹಣ ಕೈಬದಲಾಗಿದೆ. ಬಿಟ್‌ಕಾಯಿನ್ ವಹಿವಾಟಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ದಾಖಲೆ ಪರಿಶೀಲನೆ: ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಬಳಿಕ ಹಣಕಾಸು ವ್ಯವಹಾರ ನಡೆಸಿದವರನ್ನು ವಿಚಾರಣೆಗೆ ಒಳಪಡಿಸಿದರು. ಶಾಸಕ ಹ್ಯಾರಿಸ್, ಪುತ್ರರು ಹಾಗೂ ಶ್ರೀಕಿ ಮನೆಯಿಂದ ಅಗತ್ಯವಾದ ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಕೀಯ ನಾಯಕರ ನಂಟು: ಈ ಪ್ರಕರಣ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ಬೆಳಕಿಗೆ ಬಂತು. ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತ ತನ್ನ ಸಹಚರರ ಜೊತೆ ಸೇರಿ ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್‌ಗಳನ್ನು ಹ್ಯಾಕ್ ಮಾಡಿ ಅದನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಈ ವಂಚನೆ ಹಲವು ಕೋಟಿಗಳನ್ನು ಮೀರಿದೆ. ಈತ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿದ್ದು ಕ್ರಿಪ್ರೋ ಕರೆನ್ಸಿಯನ್ನು ಆನ್‌ಲೈನ್‌ನಲ್ಲಿ ಕದಿಯುತ್ತಿದ್ದ. ಈ ಪ್ರಕರಣದಲ್ಲಿ ಪ್ರಮುಖ ರಾಜಕೀಯ ನಾಯಕರು ಹಾಗೂ ಪೊಲೀಸರ ನಂಟು ಇದ್ದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಹೀಗಾಗಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

