ಯಾರದೋ ಅಹಂ ಗೆ ಕೃಷ್ಣನ ಬ*ಲಿ ಬೇಕೆ?

Most read

ಈ ತನಕ  ಹುಡುಗಿಯ ಅಂಗಳದಲ್ಲಿದ್ದ ಪುತ್ತೂರಿನ ಪ್ರೀತಿ, ಮಗು, ದೋಖಾ ಘಟನೆಯ ಚೆಂಡು ಇದೀಗ ಡಿ ಎನ್ ಎ ಸ್ಯಾಂಪಲ್ ಫಲಿತಾಂಶ ಪ್ರಕಟನೆಯ ಬಳಿಕ ಹುಡುಗನ ಅಂಗಳಕ್ಕೆ ಬಂದು ಬಿದ್ದಿದೆ. ಆದರೆ, ಅನೇಕರು ನಿರೀಕ್ಷಿಸಿದಂತೆ ಈಗ ಕೂಡ ಮದುವೆಯ ಹಾದಿ ಸುಗಮವಿದ್ದಂತೆ ಕಾಣಿಸುತ್ತಿಲ್ಲ. ಇದನ್ನೊಂದು ಸಮಸ್ಯೆ ಎಂದು ಪರಿಗಣಿಸಿ ಸಂಬಂಧಗಳ ನಡುವೆ ಮತ್ತಷ್ಟು ಗೊಂದಲಗಳ ಹೆಣಿಗೆಯನ್ನು ನೇಯುವ ಬದಲು ಮಾನವಿಕ ಪರಿಹಾರವನ್ನು ಇಲ್ಲಿ ಕಂಡುಕೊಂಡರಷ್ಟೆ  ಅದನ್ನು ಧರ್ಮಕಾರ್ಯ ಎಂದೆನ್ನಬಹುದು -ಶಂಕರ್‌ ಸೂರ್ನಳ್ಳಿ, ಸಾಮಾಜಿಕ ಹೋರಾಟಗಾರರು.

ಕೆಲವಾರು ವರ್ಷಗಳ ಹಿಂದೆ ಹೊಸನಗರದ ಸ್ವಾಮೀಜಿಯೊಬ್ಬರ ಲೈಂಗಿಕ ಪ್ರಕರಣ ಕುರಿತಂತೆ ಮಂಗಳೂರು ಬಲ್ಮಠದ ಬಳಿಯ ಸಭಾ ಭವನವೊಂದರಲ್ಲಿ ಸಮಾನ ಮನಸ್ಕರ ಸಭೆಯೊಂದು ನಡೆದಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಚಿಂತಕ ಶ್ರೀಯುತ ತೋಳ್ಪಾಡಿಯವರು ಸಂಬಂಧಿತ ಘಟನೆಯನ್ನು ವಿಶ್ಲೇಷಿಸಿದ್ದು  ಕೇವಲ ಮೂರೇ ಅಕ್ಷರಗಳಲ್ಲಿ  ಅದೆಂದರೆ ಪ್ರ… ಕೃ… ತಿ.. ಎಂದು.

 ಹೌದು, ಗಂಡು ಹೆಣ್ಣಿನ ಆಕರ್ಷಣೆ, ಪ್ರೇಮ, ಕಾಮಗಳೆಂಬ ಯಾವ ಲೇಬಲ್ ಗಳೇ ಇದ್ದಿರಲಿ ಮನುಷ್ಯನಂತಲ್ಲ ಎಲ್ಲಾ ಪ್ರಾಣಿ ಪ್ರಭೇಧಗಳಲ್ಲೂ ಇದೊಂದು ಪ್ರಕೃತಿ ಸಹಜ ಪ್ರಕ್ರಿಯೆಗಳೇ ಹೊರತು ಅಸಹಜ ಎಂದೆಂಬುದೇನಿಲ್ಲ. ಮನುಷ್ಯ ಸಾಮಾಜಿಕವಾಗಿ ಹಾಕಿಕೊಂಡ ಕೆಲ ಕಟ್ಟುಪಾಡುಗಳ ಚೌಕಟ್ಟುಗಳು  ಮತ್ತು ಈ ಸಂಬಂಧವಾಗಿ ಕೆಲ ಲಿಖಿತ ಯಾ ಅಲಿಖಿತ ನಿಯಮಗಳನ್ನು ಸ್ವಯಂ ಹೇರಿಕೊಂಡಿದ್ದ ನಾದರೂ ಜೈವಿಕ ಜಗತ್ತಿನ ಅತ್ಯಂತ ಪ್ರಭಾವಶಾಲಿಯಾದ ಈ ಶಕ್ತಿ ಯಾರ ನಿಯಂತ್ರಣವನ್ನೂ ಅವಲಂಬಿಸಿಲ್ಲ ಎಂಬುದು ಅಷ್ಟೇ ಸತ್ಯ.

ಒಂದು ಭತ್ತದ ಕಾಳಿನಷ್ಟು ಚಿಕ್ಕ ಹೆಣ್ಣು ಕೀಟ ಹೊರಬಿಟ್ಟಂತಹ ಫೆರಮೋನ್ ರಾಸಾಯನಿಕ, ವಾತಾವರಣದ  ಧೂಳು, ಕೆಮಿಕಲ್ ಗಳು ಹೊಗೆ, ಇನ್ನಿತರ ದುರ್ವಾಸನೆ ಎಲ್ಲವನ್ನೂ ದಾಟಿ ಕಿಲೋಮೀಟರ್  ದೂರದಲ್ಲಿರುವ ಗಂಡು ಕೀಟವನ್ನು ತನ್ನೆಡೆಗೆ ಕರಾರುವಾಕ್ಕಾಗಿ ಸೆಳೆಯ ಬಲ್ಲದು. ಎಷ್ಟೋ ಸಸ್ಯ ಪ್ರಭೇಧಗಳು ಸಂತಾನಾಭಿವೃದ್ಧಿಗಾಗಿ ಹೂ ಬಿಟ್ಟು ಬಳಿಕ ಉದ್ದೇಶ ಸಾಧನೆ ಆಯ್ತೆಂದು ನಂತರ ಸಾಯುತ್ತವೆ. ಬಣ್ಣ ಬಣ್ಣದ ಸುಗಂಧಿತ ಹೂಗಳನ್ನು ಬಿಟ್ಟು, ಹೂವಿನಲ್ಲಿ ಮಕರಂದವನ್ನು ತುಂಬಿಕೊಂಡು ಜೇನು ಮತ್ತಿತರ ಕೀಟಗಳನ್ನು ಆಕರ್ಷಿಸುವ ಮರಗಿಡಗಳಿಗೆ ಯಾವ ಸಮಾಜ ಸೇವೆಯ ಕಾನ್ಸೆಪ್ಟೂ ಗೊತ್ತಿಲ್ಲ. ಅವಕ್ಕದು ಬೇಕಾಗಿಯೂ ಸಹ ಇಲ್ಲ. ಅವುಗಳಿಗೆ ಬೇಕಿರುವುದು ಕೇವಲ ಸಂತಾನಾಭಿವೃದ್ಧಿ. ಅದಕ್ಕಾಗಿ ಈ ಎಲ್ಲ ನಾಟಕ ಶ್ರಮ ಅಷ್ಟೆ. ಶ್ರೀಯುತ ತೋಳ್ಪಾಡಿಯವರು ಹೇಳಿದಂತಹ ಪ್ರ.. ಕೃ.. ತಿ ಇದೇ.

ಈ ತನಕ  ಹುಡುಗಿಯ ಅಂಗಳದಲ್ಲಿದ್ದ ಪುತ್ತೂರಿನ ಪ್ರೀತಿ, ಮಗು, ದೋಖಾ ಘಟನೆಯ ಚೆಂಡು ಇದೀಗ ಡಿ ಎನ್ ಎ ಸ್ಯಾಂಪಲ್ ಫಲಿತಾಂಶ ಪ್ರಕಟನೆಯ ಬಳಿಕ ಹುಡುಗನ ಅಂಗಳಕ್ಕೆ ಬಂದು ಬಿದ್ದಿದೆ. ಆದರೆ, ಅನೇಕರು ನಿರೀಕ್ಷಿಸಿದಂತೆ (ಮಗನ ವಯಸ್ಸು 21 ಕಳೆಯಲಿ ನಂತರ ಮದುವೆ ಮಾಡಿ ಕೊಡುತ್ತೇವೆ ಎಂದು ಬಳಿಕ ಮಾತು ಮುರಿದಿದ್ದ ರೀತಿ) ಈವಾಗಲೂ ಕೂಡ ಮದುವೆಯ ಹಾದಿ ಸುಗಮವಿದ್ದಂತೆ ಯಾಕೋ ಕಾಣಿಸುತ್ತಿಲ್ಲ. ಪ್ರಭಾವಿ ವ್ಯಕ್ತಿ ಎನಿಸಿದವರ ಗುಂಪು ಇವತ್ತಿಗೂ ಜಾಲತಾಣಗಳಲ್ಲಿ ಹುಡುಗಿಯ ನಡತೆಯ ಬಗ್ಗೆ ಪ್ರಶ್ನಿಸಿ  ಟೀಕಿಸುತ್ತಲೇ ಮುಂದುವರೆದಿವೆ. ಸಹಜವಾಗಿ ಆಕರ್ಷಿತರಾಗಿ ವರ್ಷಗಳ ಕಾಲದ ಪ್ರೀತಿ ಪ್ರೇಮದ ನಂಬಿಕೆಯ ಹಿನ್ನೆಲೆಯಲ್ಲಿ ದೈಹಿಕ ಸಂಬಂಧವನ್ನು ನಡೆಸಿ ಏನು ಘಟಿಸ ಬೇಕಿತ್ತೋ ಅದು ಆಗಿದೆ. ಇದೇನು ಪ್ರಪಂಚದಲ್ಲಿ ಈತನಕ ಎಲ್ಲೂ ನಡೆಯದೇ ಇರುವಂತಾದ್ದೇನೂ  ಖಂಡಿತ ಅಲ್ಲ.  ಇದನ್ನೊಂದು ಸಮಸ್ಯೆ ಎಂದು ಪರಿಗಣಿಸಿ ಸಂಬಂಧಗಳ ನಡುವೆ ಮತ್ತಷ್ಟು ಗೊಂದಲಗಳ ಹೆಣಿಗೆಯನ್ನು ನೇಯುವ ಬದಲು ಮಾನವಿಕ ಪರಿಹಾರವನ್ನು ಇಲ್ಲಿ ಕಂಡುಕೊಂಡರಷ್ಟೆ  ಅದನ್ನು ಧರ್ಮಕಾರ್ಯ ಎಂದೆನ್ನಬಹುದು.

ಆರಂಭದಲ್ಲಿ ಜೊತೆಗಾತಿ ಮತ್ತು ಆಕೆಯ ತಾಯಿಯೊಂದಿಗೆ ಸಕಾರಾತ್ಮಕವಾಗೇ ಸ್ಪಂದಿಸುತ್ತಿದ್ದ ಯುವರಾಜರು ಕ್ರಮೇಣ ಯಾತಕ್ಕಾಗಿ ಏಕಾ ಏಕಿ ಬದಲಾದರು ಎಂಬುದಿಲ್ಲಿ ಆಶ್ಚರ್ಯ. ಆದರೆ ಆರಂಭದಲ್ಲಿ ಮುಖಗವಸು ಧರಿಸಿ ಬರುತ್ತಿದ್ದ ಸಂತ್ರಸ್ತೆಯ ತಾಯಿ ನಿಜಕ್ಕೂ ಗಟ್ಟಿಗಿತ್ತಿ. ತನ್ನ ಮಗಳಿಗಾದ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ  ನಡೆಸಿದ ಅವರ ಸುದೀರ್ಘ ಹೋರಾಟಕ್ಕೊಂದು ಸಲಾಮ್ ಹೇಳಲೇ ಬೇಕು. ಮಗುವನ್ನು ತೆಗೆಸಬೇಕು ಎನ್ನುವ ಒತ್ತಡ ಬಂದಾಗಲಾಗಲೀ, ಸಂತ್ರಸ್ತೆಗೆ ಮೂರ್ನಾಲ್ಕು ಜನರ ಸಂಪರ್ಕವಿದೆ (ಇಂತಹ ಆರೋಪವನ್ನ ಯಾವ ಹೆಣ್ಣೂ ಕೂಡ ಮಾನಸಿಕವಾಗಿ ಸಹಿಸಳು) ಡಿ ಎನ್ ಎ ಪರೀಕ್ಷೆ ಎಂದಾಗಲಾಗಲೀ, ಜಾಲತಾಣಗಳ ಟೀಕೆಗಳಿಗಾಗಲಿ ಜಗ್ಗದೇ ನಿಂತು ನಡೆಸಿದ ಆಕೆಯ ಹೋರಾಟ ನಿಜಕ್ಕೂ ಒಂದು ಮಾದರಿ.  

ಹುಡುಗಿಯ ಕಡೆಯವರ ದೆಸೆಯಿಂದ  ಆತ ಜೈಲು ಪಾಲಾದ. ಜೈಲು ಪಾಲಾಗಿಸಿದವಳ ಜೊತೆ ಸಂಸಾರವೇ ? ಇದು ಅಸಾಧ್ಯ ಎಂಬುದು ಕೆಲವರ ತರ್ಕ. ಆದರೆ ಈ ತರ್ಕಕ್ಕೆ ಉತ್ತರ ಕೊಡಬೇಕಾದದ್ದು ಹುಡುಗಿಯೂ ಅಲ್ಲ ಹುಡುಗನೂ ಅಲ್ಲ. ಅವರಿಬ್ಬರಿಗೆ ಹುಟ್ಟಿದ  ಮಗು ಅವರಿಬ್ಬರ ಸಂಪರ್ಕಕ್ಕೆ ಇರುವ ಬಹುದೊಡ್ಡ ಅಲ್ಲಗಳೆಯಲಾಗದಂತಹ ಸಾಕ್ಷಿ ಆದರೆ ಅದೂ ಕೂಡ ಅಲ್ಲ.  ಮಗುವಿನ ’ಗ್ರ್ಯಾಂಡ್  ಪೇರೆಂಟ್ಸು’ ಗಳು ತಮ್ಮೆಲ್ಲ ’ಮೇಲ್‌ಸ್ತರದ’ ಅಹಮಿಕೆ ಬಿಟ್ಟಿದ್ದರೆ ಈ ಜೈಲು ಜಾಮೀನುಗಳ ಪ್ರಮೇಯವೇ ಇರುತ್ತಿರಲಿಲ್ಲ.

ದರ್ಶನ್ ನಂತಹ ದರ್ಶನ್ ನನ್ನೇ ಒದ್ದು ಒಳಹಾಕಲಾಗಿದೆ. ಮಾಜಿ ಪ್ರಧಾನಿ ಮೊಮ್ಮಗ, ರಾಜ್ಯದ ಬಹು ದೊಡ್ಡ ರಾಜಕೀಯ ಕುಟುಂಬಸ್ಥರ ಕುಡಿ, ಸಂಸದ ಪ್ರಜ್ವಲ್ ರೇವಣ್ಣರನ್ನೂ ಯಾರಿಗೂ ಕಾಪಾಡಲಾಗಿಲ್ಲ. ಅದೇ ರೀತಿ  ನಾಳೆ ಇದೇ ಮಗು ಗ್ರ್ಯಾಂಡ್ ಗಳ ಆಶೀರ್ವಾದಕ್ಕಾಗಿ ಕಾಲು ಹಿಡಿಯ ಬರಬೇಕೋ ಅಥವಾ ಕಾಲು ಹಿಡಿದು ಗಿರಿಗಿರಿ ತಿರುಗಿಸುವಂತಾಗಬೇಕೋ ಎನ್ನುವುದು ಜಾತೀವಾದದ ಚೌಕಟ್ಟಿನ ಯಾವ ಭಾಗದಲ್ಲಿ ನಿಂತು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದರ ಮೇಲೆ ನಿಂತಿದೆಯಷ್ಟೆ. ಯಾಕೆಂದರೆ ಕಾಲ ಹಿಂದಿನಂತಿಲ್ಲ. ’ದೊಡ್ಡವರುʼ ಹೇಳಿದ್ದನ್ನೆಲ್ಲ ಮುಚ್ಚಿಕೊಂಡು ಕೇಳೋ ಕಾಲ ಯಾವತ್ತೋ ಮರೆಯಾಗಿದೆ.

ಒಟ್ಟಾರೆ, ಕೃಷ್ಣ ಮತ್ತು ಪೂಜಾ ಒಂದಾಗಬೇಕು. ಅದಕ್ಕೂ ಹೆಚ್ಚು ರಾಜಕೀಯ, ಜಾತಿ, ಮೇಲು ಕೀಳು  ಏನೂ ತಿಳಿಯದ ಮಗುವಿಗೆ ತಂದೆಯ ಪ್ರೀತಿ ಸಿಗುವಂತಾಗಬೇಕು. ಪೇಟೆಯಲ್ಲಿ ನಾಳೆ ಕೈ ಕೈ ಹಿಡಿದು ಹೋಗುವಾಗ ಸಾವಿರ ಜನ ಆಡಿಕೊಳ್ಳುತ್ತಾರೆ ಎಂಬ ಭಯವೇ.. ಅದಕ್ಕೂ ಪರಿಹಾರವಿದೆ. ಅವರೆಲ್ಲ ಹೊಟ್ಟೆಕಿಚ್ಚು ಪಡುವಂತೆ ಬದುಕಿ ತೋರಿಸಿ. ಯಾಕೆಂದರೆ, ಬದುಕು ಅವರದ್ದಲ್ಲ ನಿಮ್ಮದು.

 ಶಂಕರ್ ಸೂರ್ನಳ್ಳಿ

ಸಾಮಾಜಿಕ ಹೋರಾಟಗಾರರು    

More articles

Latest article