ನವದೆಹಲಿ: ಭಾರತ ತಾನು ವಿಧಿಸುತ್ತಿರುವ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸಿದೆ.
ಡೊನಾಲ್ಡ್ ಟ್ರಂಪ್ ಹೇಳಿಕೆ ಸಂಬಂಧ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ದೇಶದ ರೈತರು ಮತ್ತು ಉತ್ಪಾದಕರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಮೆರಿಕನ್ನರ ಜತೆಗೆ ದ್ವಿಪಕ್ಷೀಯ ವ್ಯಾಪಾರ ಕುರಿತು ಮಾತುಕತೆ ನಡೆಸಲು ವಾಷಿಂಗ್ಟನ್‌ಗೆ ತೆರಳಿದ್ದಾರೆ. ಏತನ್ಮಧ್ಯೆ, ಭಾರತ ತನ್ನ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಮೋದಿ ಸರ್ಕಾರ ಏನನ್ನು ಒಪ್ಪಿಕೊಂಡಿದೆ?, ದೇಶದ ರೈತರು ಮತ್ತು ಉತ್ಪಾದಕರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗುತ್ತಿದೆಯೇ?, ಮಾರ್ಚ್ 10ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಮೋದಿ ಅವರು ಈ ಕುರಿತು ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭಾರತವು ಅಮೆರಿಕದ ವಸ್ತುಗಳ ಮೇಲೆ ಭಾರಿ ಸುಂಕವನ್ನು ವಿಧಿಸುತ್ತಿದೆ. ಇದರಿಂದಾಗಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿದೆ. ಸದ್ಯ ಭಾರತವು ತನ್ನ ಸುಂಕಗಳನ್ನು ತೀರಾ ಕಡಿಮೆ ಮಾಡಲು ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಹಲವಾರು ದೇಶಗಳಿಗೆ ಹೆಚ್ಚಿನ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಹೊಗಳಿಕೆ’ (ತಾರೀಫ್) ಪಡೆದುಕೊಳ್ಳುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ. ಸುಂಕ ಏರುತ್ತಿರುವ (ಟ್ಯಾರಿಫ್) ಕುರಿತು ಅವರಿಗೆ ಕಳವಳ ಇಲ್ಲ ಎಂದು ಜೈರಾಮ್ ರಮೇಶ್ ಶುಕ್ರವಾರ ಟೀಕಿಸಿದ್ದರು. ಅಮೆರಿಕದಿಂದ ಎದುರಾಗಿರುವ ಸುಂಕದ ಸಮಸ್ಯೆ ವಿಷಯದಲ್ಲಿ ಪ್ರಧಾನಿಯ 56 ಇಂಚಿನ ಎದೆಗಾರಿಕೆ ಎಲ್ಲಿಹೋಯಿತು ಎಂದು ಅವರು ಪ್ರಶ್ನಿಸಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸುತ್ತಿರುವ ಪ್ರತಿಸುಂಕದ ಕುರಿತು ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಸದನದಲ್ಲಿ ಪ್ರಸ್ತಾಪಿಸಲಿದೆ. ಬೆದರಿಕೆ ಎದುರಿಸಲು ಸಾಮೂಹಿಕ ಸಂಕಲ್ಪ ತೆಗೆದುಕೊಳ್ಳಬೇಕು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಭಾರತವು ಅತಿ ಹೆಚ್ಚು ತೆರಿಗೆ ಹೇರುತ್ತಿರುವ ದೇಶವಾಗಿದೆ. ಏಪ್ರಿಲ್ 2ರಿಂದ ಭಾರತದ ಉತ್ಪನ್ನಗಳ ಮೇಲೆ ಪ್ರತಿ ಸುಂಕ ಹಾಕಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಈಚೆಗೆ ಪುನರುಚ್ಛರಿಸಿದ್ದರು. ಅಮೆರಿಕದ ಉತ್ಪನ್ನಗಳಿಗೆ ಹೆಚ್ಚು ಆಮದು ಸುಂಕ ವಿಧಿಸುತ್ತಿರುವ ದೇಶಗಳ ಮೇಲೆ ಪ್ರತಿಸುಂಕವು ಏಪ್ರಿಲ್ 2ರಿಂದ ಆರಂಭವಾಗಲಿದೆ. ಪ್ರತಿ ಸುಂಕದ ವಿಚಾರಕ್ಕೆ ಬಂದರೆ, ಭಾರತವಾಗಿರಲಿ ಅಥವಾ ಚೀನಾ ಆಗಿರಲಿ. ಯಾವುದೇ ದೇಶವಾದರೂ ದೊಡ್ಡ ನಿರ್ಧಾರ ಜಾರಿಗೆ ಬರಲಿದೆ’ ಎಂದು ಟ್ರಂಪ್ ಹೇಳಿದ್ದರು.