ಹೆಗ್ಗಡೆಯವರು ಕರೆದು ಕರೆದು ರೈತರಿಗೆ ಭೂಮಿ ನೀಡಿದರು ಎಂದು ಚಕ್ರವರ್ತಿ ಸೂಲಿಬೆಲೆಯವರು ಇತ್ತಿಚೆಗೆ ಹೇಳಿರುವುದು ಅಪ್ಪಟ ಸುಳ್ಳು. ಕಮ್ಯೂನಿಷ್ಟರ ಸಂಘರ್ಷದಿಂದ ಧರ್ಮಸ್ಥಳದ ಕೃಷಿ ಕಾರ್ಮಿಕರು, ಕೃಷಿಕರಿಗೆ ಭೂಸುಧಾರಣಾ ಕಾಯ್ದೆಯ ಭೂಮಿ ಲಭಿಸಿತ್ತು. ಹೋರಾಟದಿಂದ ನೇರವಾಗಿ ದಕ್ಕದೇ ಇದ್ದಾಗ ಲ್ಯಾಂಡ್ ಟ್ರಿಬ್ಯುನಲ್, ನ್ಯಾಯಾಲಯಗಳ ಮೂಲಕ ರೈತರು ಭೂಮಿ ತಮ್ಮದಾಗಿಸಿಕೊಂಡರು. . ಕಾನೂನಿನ ಮೂಲಕ ರೈತರು ಭೂಮಿಯನ್ನು ತಮ್ಮದಾಗಿಸಿಕೊಂಡರೂ ಮತ್ತೆ ಅದನ್ನು ಕಿತ್ತುಕೊಳ್ಳಲು ಹೆಗ್ಗಡೆಯವರು ಹೈಕೋರ್ಟ್ ಮೆಟ್ಟಿಲೇರಿದರು. ಇದನ್ನು ಲ್ಯಾಂಡ್ ಟ್ರಿಬ್ಯುನಲ್ ದಾಖಲೆಗಳು, ಹೈಕೋರ್ಟ್ ದಾಖಲೆಗಳು ಮಾತನಾಡುತ್ತವೆ – ನವೀನ್ ಸೂರಿಂಜೆ, ಪತ್ರಕರ್ತರು.
ಚಕ್ರವರ್ತಿ ಸೂಲಿಬೆಲೆಯವರು ಇತ್ತಿಚೆಗೆ ಮಾತನಾಡುತ್ತಾ ‘ಭೂಸುಧಾರಣಾ ಕಾಯ್ದೆ ಬಂದಾಗ ಧರ್ಮಸ್ಥಳದ ಭೂಮಿಯನ್ನು ಪಡೆಯಲು ರೈತರೇ ಹಿಂದೇಟು ಹಾಕಿದರು. ಆಗ ಹೆಗ್ಗಡೆಯವರೇ ರೈತರನ್ನು ಕರೆದು ಭೂಮಿ ನೀಡಿದರು’ ಎಂದು ಹೇಳಿದ್ದಾರೆ. ಇದು ಅಪ್ಪಟ ಸುಳ್ಳು.
ಇಡೀ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಭೂಮಿ ಹೊಂದಿರುವ ಧರ್ಮಸ್ಥಳ ಟ್ರಸ್ಟ್, ಜನಸಾಮಾನ್ಯರ ಸಣ್ಣ ಭೂಮಿಯನ್ನು ಬಿಡದೇ ಕಬಳಿಕೆ ಮಾಡಿರುವುದರಿಂದಲೇ ಇಂದು ಬೆಳ್ತಂಗಡಿ, ಉಜಿರೆಯ ಜನಸಾಮಾನ್ಯರು ಹೋರಾಟದ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಭೂಸುಧಾರಣಾ ಕಾಯ್ದೆ ಜಾರಿಯಾದಾಗ ಧರ್ಮಸ್ಥಳ ಮಂಜುನಾಥ ದೇವರ ಹೆಸರಿನಲ್ಲಿದ್ದ ಭೂಮಿ, ಧರ್ಮಸ್ಥಳ ಬೀಡುವಿನ ಹೆಸರಿನಲ್ಲಿದ್ದ ಭೂಮಿ ರೈತರಿಗೆ ಸಿಗುವಂತೆ ಮಾಡಿದ್ದು ಕಮ್ಯುನಿಷ್ಟ್ ಹೋರಾಟ. ಕೊಲೆಯಾದ ಪದ್ಮಲತಾ ಅವರ ತಂದೆ ಎಂ ಕೆ ದೇವಾನಂದರು ಕೂಡಾ ಈ ಹೋರಾಟದ ಭಾಗವಾಗಿದ್ದರು.
ಭೂಸುಧಾರಣಾ ಕಾಯ್ದೆ ಜಾರಿಯಾದಾಗ ಧರ್ಮಸ್ಥಳ ಟ್ರಸ್ಟ್ ಗೇಣಿದಾರ ರೈತರಿಗೆ ಭೂಮಿ ನೀಡಲು ಸಿದ್ದರಿರಲಿಲ್ಲ. ಹಾಗಾಗಿ ಬಹುತೇಕ ರೈತರು ಕಮ್ಯೂನಿಷ್ಟ್ ಚಳವಳಿಯ ಆಶ್ರಯ ಪಡೆದು ಭೂಮಿ ಧಕ್ಕಿಸಿಕೊಂಡರು. ಹೋರಾಟ ಮಾಡಿಯೂ ಭೂಮಿ ಸಿಗದೇ ಇದ್ದ ರೈತರು ಲ್ಯಾಂಡ್ ಟ್ರಿಬ್ಯುನಲ್(ಭೂ ನ್ಯಾಯಾಧಿಕರಣ)ದ ಮೊರೆ ಹೋದರು. ರೈತರು ಮಾತ್ರವಲ್ಲ, ಧರ್ಮಸ್ಥಳ ಟ್ರಸ್ಟ್ನ ವಿರೇಂದ್ರ ಹೆಗ್ಗಡೆಯವರೂ ಕೂಡಾ ಲ್ಯಾಂಡ್ ಟ್ರಿಬ್ಯುನಲ್ಗೆ ಹೋಗಿ ರೈತರಿಂದ ವಾಪಸ್ ನಮಗೇ ಭೂಮಿ ಕೊಡಿಸಿ ಎಂದು ಕೇಸು ಹಾಕಿದರು. ಈ ರೀತಿ ಬೆಳ್ತಂಗಡಿ, ಸುಳ್ಯ, ಮಂಗಳೂರು, ಬಂಟ್ವಾಳದ ಹಲವು ಗೇಣಿ ಜಮೀನುಗಳಲ್ಲಿ ಭೂ ಮಾಲಕ ವಿರೇಂದ್ರ ಹೆಗ್ಗಡೆ ಮತ್ತು ಸಣ್ಣ ರೈತರು ವಾದಿ ಪ್ರತಿವಾದಿಗಳಾಗಿ ಲ್ಯಾಂಡ್ ಟ್ರಿಬ್ಯುನಲ್ ಮೊರೆ ಹೋದರು. ಲ್ಯಾಂಡ್ ಟ್ರಿಬ್ಯುನಲ್ ನಲ್ಲಿ ವಿಚಾರಣೆ ನಡೆದು ಹಲವು ಪ್ರಕರಣಗಳಲ್ಲಿ ರೈತರಿಗೆ ಜಯವಾಯ್ತು. ಧರ್ಮಸ್ಥಳದ ಭೂಮಿ ರೈತರ ಪಾಲಾಯ್ತು. ಇಷ್ಟಾದರೂ ಹೆಗ್ಗಡೆಯವರು ಸುಮ್ಮನೆ ಕೂರಲಿಲ್ಲ. ಉಳುವವನೇ ಹೊಲದೊಡೆಯ ಕಾನೂನಿನಂತೆ ರೈತರ ಪಾಲಾದ ಭೂಮಿಯನ್ನು ಮರಳಿ ಪಡೆಯಲು ಅವರು ಹೈಕೋರ್ಟ್ ಮೆಟ್ಟಿಲೇರಿದರು.
ಗೇಣಿದಾರ ರೈತರ ಪರವಾಗಿ ಲ್ಯಾಂಡ್ ಟ್ರಿಬ್ಯುನಲ್ ಆದೇಶ ನೀಡಿದಾಗ ಹೆಗ್ಗಡೆಯವರು ಹೈಕೋರ್ಟ್ ನಲ್ಲಿ ರಿಟ್ ಪಿಟೀಷನ್ ಹಾಕಿದರು. ಲ್ಯಾಂಡ್ ಟ್ರಿಬ್ಯುನಲ್ ಹೆಗ್ಗಡೆಯವರ ಪರ ಆದೇಶ ನೀಡಿದಾಗ ಹಲವು ರೈತರುಗಳು ಹೈಕೋರ್ಟ್‌ನಲ್ಲಿ ರಿಟ್ ಪಿಟೀಷನ್ ದಾಖಲಿಸಿದರು. ಹೈಕೋರ್ಟ್ ರಿಟ್ ಪಿಟೀಷನ್(writ petition) ಗಳಲ್ಲಿ ಕೆಲವು ತೀರ್ಪುಗಳು ರೈತರ ಪರವಾಗಿ ಬಂದಾಗ ಅದನ್ನು ಪ್ರಶ್ನಿಸಿ ಹೆಗ್ಗಡೆಯವರು ವಿಭಾಗೀಯ ಪೀಠದಲ್ಲಿ ರಿಟ್ ಅಪೀಲ್ (writ appeal) ಸಲ್ಲಿಸಿದರು. ಉದಾಹರಣೆಗೆ WP 5191/95, WA 758 ಸೇರಿದಂತೆ ನೂರಾರು ಪ್ರಕರಣಗಳು ಹೈಕೋರ್ಟ್ ನಲ್ಲಿ ಇತ್ಯರ್ಥಗೊಂಡಿರುವುದನ್ನು ನಾವು ಗಮನಿಸಬಹುದು.
ಗೇಣಿದಾರರಿಗೆ, ಭೂಮಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹೆಗ್ಗಡೆಯವರು ಹೈಕೋರ್ಟ್ ನಲ್ಲಿ ವಾದಿ-ಪ್ರತಿವಾದಿಯಾಗಿದ್ದಾರೆ.
ಕೋರ್ಟ್ ದಾಖಲೆಗಳನ್ನು ಓದಲು ಸಾಧ್ಯವಾಗದವರು ಧರ್ಮಸ್ಥಳ, ಬೆಳ್ತಂಗಡಿ, ಉಜಿರೆಯ ಗ್ರಾಮಸ್ಥರನ್ನು ಮಾತಾಡಿಸಿಕೊಂಡು ಬಂದರೆ ಭೂಸುಧಾರಣಾ ಕಾಯ್ದೆ ಧರ್ಮಸ್ಥಳದಲ್ಲಿ ಜಾರಿಯಾದ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ನೂರಾರು ರೈತರ ಪೈಕಿ ಸಣ್ಣ ಉದಾಹರಣೆಯಾಗಿ ಬೆಳ್ತಂಗಡಿಯ ಲಾಯಿಲ ಗ್ರಾಮದ ರಾಘವೇಂದ್ರ ನಗರ ರುಕ್ಮಯ್ಯ ಪೂಜಾರಿಯವರ ಮನೆ ಯಾವುದು ಎಂದು ಹುಡುಕಿಕೊಂಡು ಹೋದರೆ ತಿಳಿಯುತ್ತದೆ.
ರೈತರೂ, ಗೋವಾ ವಿಮೋಚನಾ ಹೋರಾಟಗಾರರೂ, ರೈತಸಂಘದ ಮುಖಂಡರೂ ಆಗಿದ್ದ ರುಕ್ಮಯ್ಯ ಭಂಡಾರಿಯವರಿಗೆ ಭೂಸುಧಾರಣಾ ಕಾಯ್ದೆಯಂತೆ ಧರ್ಮಸ್ಥಳ ದೇವರ ಹೆಸರಿನಲ್ಲಿದ್ದ ಜಮೀನು ಬರಬೇಕಿತ್ತು. ಆದರೆ ಧರ್ಮಸ್ಥಳದ ಹೆಗ್ಗಡೆಯವರು ಭೂಮಿ ನೀಡಲು ಹಿಂದೇಟು ಹಾಕಿದಾಗ ರುಕ್ಮಯ್ಯ ಭಂಡಾರಿಯವರು ಲ್ಯಾಂಡ್ ಟ್ರಿಬ್ಯುನಲ್ ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ರುಕ್ಮಯ್ಯ ಭಂಡಾರಿಯವರ ಮೇಲೆ ದೈಹಿಕ ದಾಳಿಗಳು ನಡೆಯುತ್ತದೆ. ರುಕ್ಮಯ್ಯ ಭಂಡಾರಿಯವರಿಗೆ ಕಮ್ಯೂನಿಷ್ಟ್ ಚಳವಳಿ ಬೆಂಗಾವಲಾಗಿ ನಿಂತು ಭೂಸುಧಾರಣಾ ಕಾಯ್ದೆಯ ಭೂಮಿ ದೊರಕುವಂತೆ ಮಾಡುತ್ತದೆ. ಲ್ಯಾಂಡ್ ಟ್ರಿಬ್ಯುನಲ್ ಮಾತ್ರವಲ್ಲದೇ, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲೂ ಭೂಮಿ ರುಕ್ಮಯ್ಯ ಭಂಡಾರಿಯವರಿಗೇ ಸೇರಿದ್ದು ಎಂಬ ಆದೇಶ ಬರುತ್ತದೆ. ಇಷ್ಟಾದರೂ ಹೆಗ್ಗಡೆಯವರು ಪಟ್ಟು ಬಿಡದೇ ಹೈಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ. ಹೈಕೋರ್ಟ್ ಕೂಡಾ ಲ್ಯಾಂಡ್ ಟ್ರಿಬ್ಯುನಲ್ ಆದೇಶವನ್ನೇ ಎತ್ತಿ ಹಿಡಿದು ರುಕ್ಮಯ್ಯ ಭಂಡಾರಿಯವರಿಗೆ ಭೂಮಿ ಸೇರಿದ್ದು ಎಂದು ತೀರ್ಪು ನೀಡುತ್ತದೆ. ಈ ರೀತಿ ಪ್ರತಿಭಟನೆ-ಕಾನೂನು ಹೋರಾಟಗಳ ಮೂಲಕ ತುಂಡು ಭೂಮಿ ದಕ್ಕಿಸಿಕೊಂಡ ರುಕ್ಮಯ್ಯ ಭಂಡಾರಿಯವರು ಸಾಯುವ ಕಾಲಕ್ಕೆ ಮಕ್ಕಳಿಗೆ ಭೂಮಿ ಹಂಚಿಕೆ ಮಾಡುವಾಗ ಹೋರಾಟದ ಹೆಗ್ಗುರುತಾಗಿ ಸಿಪಿಐಎಂ ಪಕ್ಷಕ್ಕೆಂದು 8 ಸೆಂಟ್ಸ್ (ಅಂದಾಜು ಮೂರುಕಾಲು ಗುಂಟೆ) ಜಮೀನಿನ ಪಾಲು ಮೀಸಲಿರಿಸುತ್ತಾರೆ.
ಭೂಸುಧಾರಣಾ ಕಾಯ್ದೆ ಜಾರಿಯಾದಾಗ ನಡೆದ ಜನ ಸಂಘರ್ಷದ ಇತಿಹಾಸದಲ್ಲಿ ಬೆಳ್ತಂಗಡಿ, ಧರ್ಮಸ್ಥಳಕ್ಕೊಂದು ಪ್ರಮುಖ ಸ್ಥಾನವಿದೆ. ಬಡ, ಅನಕ್ಷರಸ್ಥ ರೈತರನ್ನು ಪ್ರತಿನಿಧಿಸಿದ್ದ ಅಂದಿನ ಕಮ್ಯೂನಿಷ್ಟ್ ನಾಯಕರು ರೈತರಿಗೆ ಧರ್ಮಸ್ಥಳದಿಂದ ಭೂಮಿ ಕೊಡಿಸಿದರು. ಅದಕ್ಕೆ ಪ್ರತಿಯಾಗಿ ಕಮ್ಯೂನಿಷ್ಟ್ ನಾಯಕರು ದೈಹಿಕ ಹಲ್ಲೆ, ಕುಟುಂಬಸ್ಥರ ಸಾವು, ನೋವುಗಳನ್ನು ಎದುರಿಸಬೇಕಾಯಿತು. ಹಲವು ಕಮ್ಯೂನಿಷ್ಟರನ್ನು ಊರು ಬಿಟ್ಟು ಓಡಿಸಿದರು. ರೈತರ ಭೂಮಿಗಾಗಿ ಹೋರಾಟ ಮಾಡಿದರು ಎಂಬ ಒಂದೇ ಕಾರಣಕ್ಕಾಗಿ ಎಂ ಕೆ ದೇವಾನಂದರು ತಮ್ಮ ಮಗಳು ಪದ್ಮಲತಾರನ್ನೇ ಕಳೆದುಕೊಳ್ಳಬೇಕಾಯಿತು. ಪದ್ಮಲತಾ ನ್ಯಾಯಕ್ಕಾಗಿ ನಡೆದ ಹೋರಾಟ ಎಂತಹ ಸಂಘರ್ಷದ ವಾತಾವರಣ ನಿರ್ಮಿಸಿತು ಎಂದರೆ ಬೆಳ್ತಂಗಡಿಯಲ್ಲಿ ಸಿಪಿಐಎಂ ಕಚೇರಿಯನ್ನೇ ಕ್ಲೋಸ್ ಮಾಡಬೇಕಾಯಿತು. ಇದೆಲ್ಲದರ ಪ್ರಾರಂಭ ಯಾವುದೆಂದರೆ. ಧರ್ಮಸ್ಥಳದ ಗೇಣಿದಾರ ರೈತರ ಹೋರಾಟ !
ಹಾಗಾಗಿ, ಹೆಗ್ಗಡೆಯವರು ಕರೆದು ಕರೆದು ರೈತರಿಗೆ ಭೂಮಿ ನೀಡಿದರು ಎಂಬುದು ಅಪ್ಪಟ ಸುಳ್ಳು. ಕಮ್ಯೂನಿಷ್ಟರ ಸಂಘರ್ಷದಿಂದ ಧರ್ಮಸ್ಥಳದ ಕೃಷಿ ಕಾರ್ಮಿಕರು, ಕೃಷಿಕರಿಗೆ ಭೂಸುಧಾರಣಾ ಕಾಯ್ದೆಯ ಭೂಮಿ ಲಭಿಸಿತ್ತು. ಹೋರಾಟದಿಂದ ನೇರವಾಗಿ ದಕ್ಕದೇ ಇದ್ದಾಗ ಲ್ಯಾಂಡ್ ಟ್ರಿಬ್ಯುನಲ್, ನ್ಯಾಯಾಲಯಗಳ ಮೂಲಕ ರೈತರು ಭೂಮಿ ತಮ್ಮದಾಗಿಸಿಕೊಂಡರು. ಆ ಸಂದರ್ಭದಲ್ಲೂ ಧರ್ಮಸ್ಥಳದ ದಾಳಿಯನ್ನು ರೈತರು ಎದುರಿಸಿ ನಿಂತಿದ್ದ ಕಮ್ಯೂನಿಷ್ಟ್ ಚಳವಳಿಯ ಬೆಂಬಲದಿಂದ ಎಂಬುದು ನಿರ್ವಿವಾದ. ಕಾನೂನಿನ ಮೂಲಕ ರೈತರು ಭೂಮಿಯನ್ನು ತಮ್ಮದಾಗಿಸಿಕೊಂಡರೂ ಮತ್ತೆ ಅದನ್ನು ಕಿತ್ತುಕೊಳ್ಳಲು ಹೆಗ್ಗಡೆಯವರು ಹೈಕೋರ್ಟ್ ಮೆಟ್ಟಿಲೇರಿದರು. ಇದನ್ನು ಲ್ಯಾಂಡ್ ಟ್ರಿಬ್ಯುನಲ್ ದಾಖಲೆಗಳು, ಹೈಕೋರ್ಟ್ ದಾಖಲೆಗಳು ಮಾತನಾಡುತ್ತದೆ. ವಸ್ತುಸ್ಥಿತಿ ಹೀಗಿದ್ದಾಗ, ಹೆಗ್ಗಡೆಯವರು ಭೂಸುಧಾರಣಾ ಕಾಯ್ದೆಯ ಕಾಲದಲ್ಲಿ ರೈತರಿಗೆ ಕರೆದು ಕರೆದು ಭೂ ವಿತರಣೆ ಮಾಡಿದರು ಎನ್ನುವ ಸೂಲಿಬೆಲೆ ಭಾಷಣ ಅಪ್ಪಟ ಸುಳ್ಳು ಎಂದು ಸಾಬೀತಾಗುತ್ತದೆ.
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- http://ಎಸ್ಐಟಿಯನ್ನು ‘ಕ್ಲೋಸ್’ ಮಾಡಬಹುದೇ ? ಕಾನೂನಿನ ಕುಣಿಕೆಗೆ ಸಿಲುಕಲಿರುವ ಸಿಎಂ ಮತ್ತು ಗೃಹ ಸಚಿವರು ! https://kannadaplanet.com/can-the-sit-be-closed/