ದಪ್ಪವಾಗಿ ಇರುವುದು ಸಂಪತ್ತಿನ ಸಂಕೇತವೆಂದೇ ನಂಬಿಸಲಾಗಿದೆ. ಅಲ್ಲಿನ ಹೆಣ್ಣಿನ ಕರ್ತವ್ಯ ಮಕ್ಕಳನ್ನು ಹೆರುವುದರ ಜೊತೆಗೆ ಗಂಡನಿಗಾಗಿ ತನ್ನ ದೇಹವನ್ನೇ ಮೃದುವಾದ ಮೆತ್ತನೆಯ ಹಾಸಿಗೆಯಂತೆ ಮಾಡಬೇಕಾಗಿರುವುದು!. ಇದಕ್ಕಾಗಿ ಎಷ್ಟೋ ಕುಟುಂಬದ ಜನರು ಹಲವಾರು ಸಮಸ್ಯೆಗಳಿಂದ ಮುಖ್ಯವಾಗಿ ಹಣದ ಸಮಸ್ಯೆಯಿಂದ ತಮ್ಮಲ್ಲಿದ್ದ ಮನೆ, ಪ್ರಾಣಿ ವಸ್ತುಗಳನ್ನ ಮಾರಾಟ ಮಾಡಿ ಹೆಚ್ಚು ಕ್ಯಾಲೋರಿ ಇರುವ ಆಹಾರಗಳನ್ನು ತರುವುದರಲ್ಲಿ ಸೋತು ಮತ್ತಷ್ಟು ಬಡತನಕ್ಕೆ ಸಿಲುಕುತ್ತಿದ್ದಾರೆ – ಶೃಂಗಶ್ರೀ ಟಿ, ಅತಿಥಿ ಉಪನ್ಯಾಸಕಿ
ಸಾವಿರಾರು ವರ್ಷಗಳಿಂದಲೂ ಹೆಣ್ಣನ್ನು ಅವಳ ಲಿಂಗ ಮತ್ತು ದೇಹದ ಆಧಾರದ ಮೇಲೆ ರಕ್ಷಣೆಯ ಹೆಸರಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ತೀರ ಅಮಾನುಷವಾಗಿ ನಡೆಸಿಕೊಂಡು ಬರಲಾಗಿದೆ. ಗಂಡಿನೊಟ್ಟಿಗೆ ಹೆಣ್ಣನ್ನು ಸರಿಸಮಾನವಾಗಿ, ಸಹಜೀವಿಯಾಗಿ ಎಂದಿಗೂ ನೋಡಲಾಗಿಲ್ಲ. ಹೆಣನ್ನು ಯಾವಾಗಲೂ ಸುಖದ, ಭೋಗದ ವಸ್ತುವಂತೆ ಪ್ರಾಣಿಯಂತೆ, ಮನೆಕೆಲಸದವಳಂತೆ, ಜೀವವಿದ್ದರೂ ಜೀವವಿಲ್ಲದ ವಸ್ತುವಂತೆ, ತನ್ನಡಿಯಾಳನ್ನಾಗಿ ಮಾಡಿದ್ದಾರೆಯೇ ವಿನಃ ಅವಳನ್ನ ಮನುಷ್ಯಳಂತೆ, ಅವಳಿಗೂ ಜೀವವಿರುವಂತೆ, ಅವಳಿಗೊಂದು ಅಸ್ತಿತ್ವವಿರುವಂತೆ ಕಂಡದ್ದು ಇತಿಹಾಸದಲ್ಲೇ ಇಲ್ಲ. ಕಾಲಾನುಕ್ರಮೇಣ ಹೆಣ್ಣಿನ ಸ್ಥಿತಿ ಸ್ವಲ್ಪ ಬದಲಾಗಿದೆ ಎನ್ನುವಷ್ಟರಲ್ಲಿ ಕಣ್ಣಿಗೆ ಕಾಣದ ಆಚರಣೆಗಳು ಇನ್ನೂ ಜೀವಂತವಾಗಿವೆ ಎಂಬ ಸಂಗತಿ ಬಹಳ ಆಶ್ಚರ್ಯ ಮತ್ತು ಆತಂಕವನ್ನು ಉಂಟುಮಾಡುತ್ತದೆ.
ಬ್ರೆಸ್ಟ್ ಐರನಿಂಗ್
ಬಹಳ ಮುಖ್ಯವಾಗಿ ಬ್ರೆಸ್ಟ್ ಐರನಿಂಗ್ ಅಥವಾ ಬ್ರೆಸ್ಟ್ ಫ್ಲಾಟನಿಂಗ್ (ಸ್ತನ ಚಪ್ಪಟೆಗೊಳಿಸುವಿಕೆ) ಎಂಬ ಕೆಟ್ಟ ಸಾಂಸ್ಕೃತಿಕ ಆಚರಣೆಯು ಇನ್ನೂ ಜೀವಂತವಾಗಿದೆ. ಈ ಆಚರಣೆಯು ಆಫ್ರಿಕಾ, ನೈಜೀರಿಯಾ, ಬೆನಿನ್, ಕೀನ್ಯಾ, ಗಿನಿಯಾ, ಬಿಸ್ಸು, ಟೋಗೋ, ಜಿಂಬಾಬ್ವೆ, ಚಾಡ್, ಚೋನಾಕ್ರಿ. ಕ್ಯಾಮೆರೂನ್, ಐವರಿ ಕೋಸ್ಟ್ ಮುಂತಾದ ದೇಶಗಳಲ್ಲಿ ಇವತ್ತಿಗೂ ಕಂಡುಬರುತ್ತಿದೆ. ಇದಕ್ಕೆ ಬಹಳ ಮುಖ್ಯವಾಗಿ ವಲಸೆಯು ಮೂಲ ಕಾರಣ.
ಯುನೈಟೆಡ್ ನೇಶನ್ಸ್ ನ ಪ್ರಕಾರ 3.8 ಮಿಲಿಯನ್ ಹೆಣ್ಣು ಮಕ್ಕಳು ಇಡೀ ಪ್ರಪಂಚದಾದ್ಯಂತ ಈ ಕ್ರೂರ ಆಚರಣೆಗೆ ಒಳಗಾಗಿದ್ದಾರೆ. ಫ್ರೌಡಾವಸ್ಥೆಗೆ ಬರುವಂತಹ 9 ವರ್ಷದಿಂದ 15 ವರ್ಷದ ಹೆಣ್ಣು ಮಕ್ಕಳ ಸ್ತನಗಳನ್ನು ಚೂಪಾದ ಕಲ್ಲುಗಳು, ಲೋಟಗಳು, ವುಡನ್ ಪೆಸ್ಟಲ್ಸ್, ಎಲೆಕ್ಟ್ರಾನಿಕ್ ಐರನ್ಸ್, ಹ್ಯಾಮರ್ಸ್, ಚಮಚ ಅಥವಾ ಬ್ರೂಮ್ ಮುಂತಾದ ವಸ್ತುಗಳನ್ನು ಬಳಸಿ, ಬಿಸಿ ಮಾಡಿ ಸ್ತನಗಳನ್ನು ಇಸ್ತ್ರಿ ಮಾಡಲಾಗುತ್ತದೆ. ಪ್ರೆಸ್ ಮಾಡಲಾಗುತ್ತದೆ. ರಬ್, ಮಸಾಜ್ ಅಥವಾ ಪೌಂಡ್ ಮಾಡಲಾಗುತ್ತದೆ. ಬಿಗಿಯಾದ ಬೆಲ್ಟ್‌ಗಳನ್ನು, ಕೋಕೋನಟ್ ಶೆಲ್‌ಗಳನ್ನು, ಬ್ಯಾಂಡೇಜ್ ಗಳನ್ನು ಬಳಸಿ ಸ್ತನಗಳನ್ನು ಕಾಣದಂತೆ ಮಾಡಲಾಗುತ್ತದೆ. ಈ ಆಚರಣೆಯನ್ನು ಅವರ ಅಜ್ಜಿ, ತಾಯಿ, ಅಕ್ಕ, ದಾದಿ, ಚಿಕ್ಕಮ್ಮ ಹಾಗೂ ಮುಖ್ಯವಾಗಿ ಶೇಕಡಾ 58 ರಷ್ಟು ಅವರ ತಾಯಂದಿರಿಂದಲೇ ನಡೆಸಲಾಗುತ್ತದೆ.
ಇವೆಲ್ಲವೂ ಸ್ತನಗಳನ್ನ ಸಂಪೂರ್ಣವಾಗಿ ಇಲ್ಲವಾಗಿಸುವಂತೆ ಮಾಡುವ ಸಾಂಸ್ಕೃತಿಕ ಆಚರಣೆಯಾಗಿದೆ. ಹೆಣ್ಣನ್ನು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗಂಡಿನ ಆಕರ್ಷಣೆಗೆ ಒಳಗಾಗದಂತೆ, ಬಹಳ ಮುಖ್ಯವಾಗಿ ಅವಳ ಕನ್ಯತ್ವವನ್ನು ಕಾಪಾಡುವುದಕ್ಕೆ ಈ ವಿಕೃತ ಆಚರಣೆಗೆ ಒಳಪಡಿಸಲಾಗುತ್ತದೆ. ರಕ್ಷಣೆಯ ಹೆಸರಲ್ಲಿ ಅವಳ ಸ್ತನಗಳನ್ನೇ ಇಲ್ಲವಾಗಿಸುವಂತಹ ಈ ಆಚರಣೆಯಿಂದಾಗಿ ಕ್ಯಾನ್ಸರ್, ಹುಣ್ಣುಗಳು, ತೀವ್ರ ಜ್ವರ, ಸೋಂಕು, ಸ್ತನಗಳ ಅಸಮತೋಲನ, ತುರಿಕೆ, ಹಾಲಿನ ವಿಸರ್ಜನೆ, ಸ್ತನ ಸೋಂಕುಗಳು ಜೊತೆಯಲ್ಲಿ ಮಾನಸಿಕ ಹಿಂಸೆ, ಒಂಟಿತನ, ಖಿನ್ನತೆ ಮುಂತಾದ ಕಾಯಿಲೆಗಳಿಗೆ ಹೆಣ್ಣನ್ನು ಮತ್ತು ಅವಳ ದೇಹವನ್ನು ಹಿಂಸಾಚಾರಕ್ಕೆ ಒಳಪಡಿಸಲಾಗುತ್ತಿದೆ.
ಬಲವಂತವಾಗಿ ಆಹಾರ ತಿನ್ನಿಸುವುದು
ಇಂತಹ ಕ್ರೂರವಾದ ಆಚರಣೆ ಒಂದು ಕಡೆಯಾದರೆ Force Feeding ಅಥವಾ Gavage ಎಂಬ ಮತ್ತೊಂದು ಅಮಾನುಷ ಸಾಂಸ್ಕೃತಿಕ ಆಚರಣೆಯು ಪಶ್ಚಿಮ ಆಫ್ರಿಕಾದ ಅಲೆಮಾರಿ ಸಮುದಾಯಗಳಲ್ಲಿ ಚಾಲ್ತಿಯಲ್ಲಿದೆ. ಸಾವಿರಾರು ವರ್ಷಗಳಿಂದಲೂ ಕೂಡ ಹೆಣ್ಣನ್ನು ತಿರಸ್ಕಾರದ ಭಾವನೆಯಿಂದಲೇ ನೋಡಲಾಗಿದೆ. ಅಂತೆಯೇ ಆಫ್ರಿಕಾದ ಅಲೆಮಾರಿ ಸಮುದಾಯಗಳಲ್ಲಿ ಪ್ರಾಯಕ್ಕೆ ಬರುವುದಕ್ಕೆ ಮೊದಲೇ ಅಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಅವರ ಇಚ್ಛೆಯ ಸಾಮರ್ಥ್ಯದ ವಿರುದ್ಧ ಬಹಳಷ್ಟು ಕ್ಯಾಲೋರಿಸ್ ಗಳು ಇರುವಂತಹ ಒಂಟೆಯ ಹಾಲು, ಕಡಲೆಕಾಯಿ ಎಣ್ಣೆಯಲ್ಲಿ ಅದ್ದಿದ ಬ್ರೆಡ್ ಕ್ರಮ್ಸ್ ಗಳನ್ನ ತಿನ್ನಿಸಲಾಗುತ್ತದೆ, ಶುದ್ಧವಾದ ಪ್ರಾಣಿಯ ಕೊಬ್ಬು, ಮೇಕೆಯ ಮಾಂಸ, couscous, ಮುಂತಾದ ಆಹಾರಗಳನ್ನು ತಿನ್ನಿಸಿ ಅವರನ್ನ ಧಡೂತಿ ದೇಹದವರನ್ನಾಗಿ ಮಾಡಲಾಗುತ್ತದೆ.
ಅಂದರೆ ಸರಿ ಸುಮಾರು 14 ಸಾವಿರದಿಂದ 16 ಸಾವಿರದಷ್ಟು ಕ್ಯಾಲೋರಿ ಇರುವಂತಹ ಆಹಾರಗಳನ್ನು ಜೊತೆಗೆ ಪ್ರತಿನಿತ್ಯವೂ 20 ಲೀಟರ್ ನಷ್ಟು ಹಾಲನ್ನು ಹಿಂಸಾತ್ಮಕವಾಗಿ ಕುಡಿಸಿ ತಿನ್ನಿಸಲಾಗುತ್ತದೆ. ಮುಖ್ಯವಾಗಿ ಗಮನಿಸಬೇಕಾದದ್ದು ನಮ್ಮ ದೇಹಕ್ಕೆ ಬೇಕಾದದ್ದು ಕೇವಲ 1.500 ರಿಂದ 1.600 ಕ್ಯಾಲೋರಿಯ ಆಹಾರವಷ್ಟೇ. ಆದರೆ ಊಹಿಸಿಕೊಳ್ಳಿ ಅವರಿಗೆ ಪ್ರತಿನಿತ್ಯ 16 ಸಾವಿರದಷ್ಟು ಕ್ಯಾಲರಿ ಉಳ್ಳ ಆಹಾರವನ್ನು ಹೊಡೆದು, ಬಡಿದು ತಿನ್ನಿಸಲಾಗುತ್ತದೆ. ಇದರಿಂದ ಹೆಣ್ಣಿನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳಾಗುತ್ತಿವೆ. ಪೂವರ್ ಚೈಲ್ಡ್ ಬರ್ತ್, ಅರ್ಲಿ ಪ್ರೆಗ್ನೆನ್ಸಿ, ಹೆಚ್ಐವಿ ಮುಂತಾದ ತೊಂದರೆಗಳಿಗೆ ಆಕೆ ಒಳಗಾಗುತ್ತಿದ್ದಾಳೆ. ತನ್ನ ಮಾನಸಿಕ ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ. ಈ ಆಚರಣೆಗಳು ಪ್ರಪಂಚದ ಅತ್ಯಂತ ಬಡ ರಾಷ್ಟ್ರ ಎನಿಸಿಕೊಂಡಿರುವ ಮೌರಿಟಾನೀಯ , ಉಗಾಂಡಾ, ಸುಡಾನ್, ನೈಜೀರಿಯಾ , ಕೀನ್ಯಾ, ಟುನಿಸಿಯಾ, ರೂರಲ್ ಸಹರಾನ್ ರಿಜನ್ಸ್, ಸಹೇಲಿಯನ್ ಪ್ರಾಂತ್ಯದ ಸೆನೆಗಲ್ ರಿವರ್ ನ ತಟದಲ್ಲಿರುವ ಪ್ರದೇಶ ಮುಂತಾದೆಡೆ ಆಚರಿಸಲಾಗುತ್ತಿದೆ.
ಇದನ್ನೂ ಓದಿ-Body Shaming ಎಂಬ ಕೆಟ್ಟ ಚಾಳಿ.
ಅಂದಾಜು 3.1 ಮಿಲಿಯನ್ ಜನರು ಈ ಆಚರಣೆಗೆ ಒಳಗಾಗಿದ್ದಾರೆ. ಹೆಚ್ಚು ಕ್ಯಾಲೋರಿ ಇರುವ ಕೇವಲ ಆಹಾರವನ್ನಷ್ಟೇ ಕೊಡದೆ ಸ್ಟೆರಾಯ್ಡ್ ಮಾತ್ರೆಗಳನ್ನು ಕೂಡ ಕೊಡಲಾಗುತ್ತದೆ. ಈ ಆಚರಣೆಯು ಮನೆಯಲ್ಲಷ್ಟೇ ಅಲ್ಲದೆ ಅಲ್ಲಿರುವಂತಹ ಹೆಣ್ಣುಮಕ್ಕಳನ್ನು “fattening farms” ಗಳೆಂಬ ಜಾಗಕ್ಕೆ ಕಳಿಸಲಾಗುತ್ತದೆ. ಫೋರ್ಸ್ ಫೀಡಿಂಗ್ ಮಾಡಲೆಂದೇ ನಿಯಂತ್ರಕರನ್ನು ಆಯೋಜಿಸಲಾಗಿರುತ್ತದೆ. ಇವೆಲ್ಲದರ ಹಿಂದಿನ ಉದ್ದೇಶ ಹೆಣ್ಣು ಮಕ್ಕಳನ್ನು ಪ್ರಾಯಕ್ಕೆ ಬರುವುದಕ್ಕೂ ಅಂದರೆ ಸ್ವಾಭಾವಿಕವಾಗಿ ದೊಡ್ಡವರಾಗುವುದಕ್ಕೂ ಮುನ್ನವೇ ಚೆನ್ನಾಗಿ ತಿನ್ನಿಸಿ ಕೊಬ್ಬಿಸಿ ದಪ್ಪ ಮಾಡಿ ಅವರನ್ನ ಮದುವೆಗೆ ತಯಾರಿ ಮಾಡುವುದು. ಒಂದರ್ಥದಲ್ಲಿ ಬಾಲ್ಯ ವಿವಾಹ ಮಾಡಿಸಿದಂತೆ. ಅಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಮದುವೆಯಾಗಬೇಕಾದರೆ ಅವರು ದಪ್ಪವಾಗಿ ಇರಲೇಬೇಕು. ಇದೊಂಥರಾ ಮಾನದಂಡವಿದ್ದಂತೆ.
ದಪ್ಪವಾಗಿ ಇರುವುದು ಸಂಪತ್ತಿನ ಸಂಕೇತವೆಂದೇ ನಂಬಿಸಲಾಗಿದೆ. ಅಲ್ಲಿನ ಹೆಣ್ಣಿನ ಕರ್ತವ್ಯ ಮಕ್ಕಳನ್ನು ಹೆರುವುದರ ಜೊತೆಗೆ ಗಂಡನಿಗಾಗಿ ತನ್ನ ದೇಹವನ್ನೇ ಮೃದುವಾದ ಮೆತ್ತನೆಯ ಹಾಸಿಗೆಯಂತೆ ಮಾಡಬೇಕಾಗಿರುವುದು!. ಇದಕ್ಕಾಗಿ ಎಷ್ಟೋ ಕುಟುಂಬದ ಜನರು ಹಲವಾರು ಸಮಸ್ಯೆಗಳಿಂದ ಮುಖ್ಯವಾಗಿ ಹಣದ ಸಮಸ್ಯೆಯಿಂದ ತಮ್ಮಲ್ಲಿದ್ದ ಮನೆ, ಪ್ರಾಣಿ ವಸ್ತುಗಳನ್ನ ಮಾರಾಟ ಮಾಡಿ ಹೆಚ್ಚು ಕ್ಯಾಲೋರಿ ಇರುವ ಆಹಾರಗಳನ್ನು ತರುವುದರಲ್ಲಿ ಸೋತು ಮತ್ತಷ್ಟು ಬಡತನಕ್ಕೆ ಸಿಲುಕುತ್ತಿದ್ದಾರೆ.
ಹೆಣ್ಣಿನ ಲೈಂಗಿಕತೆ ಮತ್ತು ಅವಳ ದೇಹವನ್ನು ಇಂತಹ ಅಮಾನುಷ ಆಚರಣೆಗಳು ಸಂಪೂರ್ಣ ನಿಯಂತ್ರಿಸುತ್ತಿವೆ. ದುರಂತವೆಂದರೆ ಇಂತಹ ಅಮಾನುಷ ಆಚರಣೆಗಳ ವಿರುದ್ಧ ಸಿಡಿದೆಳಬೇಕಾದ ಹೆಣ್ಣೇ ಬಹುಮುಖ್ಯವಾಗಿ ಎಲ್ಲಾ ಆಚರಣೆಗಳನ್ನು ಮೌನವಾಗಿಯೇ ಪಾಲನೆ ಮಾಡುತ್ತಿರುವುದು. ಮುಖ್ಯವಾಗಿ ಗಂಡಾಳ್ವಿಕೆಯ ಸಮಾಜ ಪಾಲನೆ ಮಾಡುವಂತೆ ಮಾಡಿಸುತ್ತಿರುವುದು. ಇಂತಹ ಆಚರಣೆಗಳನ್ನು ಸದ್ದಿಲ್ಲದೆ ಆಚರಿಸಲಾಗುತ್ತಿದೆ. ಹೆಣ್ಣನ್ನು ಅವಳ ದೇಹ, ಬಣ್ಣ, ಸೊಂಟ, ಸ್ತನಗಳ ಮೂಲಕವೇ ಆಕರ್ಷಣೀಯವಾಗಿ ಕಾಣುವಂತೆ ಅದಕ್ಕಾಗಿ ಸರ್ಜರಿಗಳನ್ನೂ ಮಾಡಿಸಿಕೊಳ್ಳುವ ವ್ಯವಸ್ಥೆಗೆ ಅವರನ್ನು ತಳ್ಳುವುದು ಒಂದು ಕಡೆಯಾದರೆ ಅದೇ ಸ್ತನಗಳ ಊನಗೊಳಿಸುವಿಕೆಯ ಮೂಲಕ ಅವಳನ್ನು ಅವಳ ದೇಹವನ್ನು ದಾಳದಂತೆ ಬಳಸುವುದು ಮತ್ತು ರಕ್ಷಣೆಯ ಹೆಸರಲ್ಲಿ ಅಮಾನುಷವಾಗಿ ನಡೆಸಿಕೊಳ್ಳುವ, ಧಡೂತಿ ದೇಹವನ್ನ ಹೊಂದಿರುವ ಹೆಣ್ಣು ಮಾತ್ರ ಸುಂದರ ಅಂತವರಷ್ಟೇ ಮದುವೆಗೆ ಅರ್ಹ ಎಂದು ಸೃಷ್ಟಿಸಿರುವ ವ್ಯವಸ್ಥೆ ಮತ್ತೊಂದೆಡೆ. ಇವೆಲ್ಲವೂ ಹೆಣ್ಣಿನ ದೇಹವನ್ನು ಅವಳ ಎಲ್ಲಾ ಹಕ್ಕುಗಳನ್ನು ನಾಶಗೊಳಿಸಿ ನಿಯಂತ್ರಿಸುವ ಸಾಂಸ್ಕೃತಿಕ ರಾಜಕೀಯ ಹುನ್ನಾರಗಳಲ್ಲದೆ ಮತ್ತೇನಲ್ಲ.
ಸ್ತ್ರೀ ಜನನಾಂಗದ ಊನಗೊಳಿಸುವಿಕೆ
ಸೋಮಾಲಿಯ ದೇಶದ ಮಾನವ ಹಕ್ಕುಗಳ ಕಾರ್ಯಕರ್ತೆ, ಹೋರಾಟಗಾರ್ತಿ, ನಟಿ, ಬರಹಗಾರ್ತಿ, ಮಾಡೆಲ್ ಆಗಿರುವ ವಾರೀಸ್ ಡೈರಿ ತನ್ನ “ಡೆಸರ್ಟ್ ಫ್ಲವರ್ ” ಎಂಬ ಆತ್ಮಕತೆಯಲ್ಲಿ ಸೋಮಾಲಿಯ ದೇಶದ ಹಾಗೂ ಜಗತ್ತಿನಾದ್ಯಂತ ಆಚರಿಸುತ್ತಿರುವ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ (Female Genital Mutilation), ಬ್ರೆಸ್ಟ್ ಐರನಿಂಗ್ ಮತ್ತು ಫೋರ್ಸ್ ಫೀಡಿಂಗ್ ಎಂಬ ಅಮಾನುಷ ಪದ್ಧತಿಗಳ ಬಗ್ಗೆ ಸ್ವತಃ ಈ ಆಚರಣೆಗೆ ಒಳಗಾಗಿ ತಾನನುಭವಿಸಿದ ಯಾತನೆಗಳ ಬಗೆಗೆ ಬರೆದುಕೊಂಡಿದ್ದಾಳೆ. ತನ್ನ ಮತ್ತೊಂದು ಆತ್ಮಕಥನವಾದ “Saving Safa” ದಲ್ಲಿ ಸಫಾ ಎಂಬ ಹುಡುಗಿಯನ್ನು FGM ನಿಂದ ಪಾರು ಮಾಡುವ, ಅದಕ್ಕಾಗಿ ಅವಳು ಪಟ್ಟ ಶ್ರಮ, ಅದಕ್ಕೊದಗಿದ ವಿರೋಧಗಳ ಬಗೆಗೂ ಬರೆದಿದ್ದಾಳೆ. ಕೇವಲ ಆತ್ಮಕಥೆಯನ್ನಷ್ಟೇ ಬರೆಯದೆ 1997 ರಿಂದ 2003 ರ ವರೆಗೆ UN ವಿಶೇಷ ರಾಯಭಾರಿಯಾಗಿ FGM ನ ವಿರುದ್ಧ ಹೋರಾಡಿದ್ದಾಳೆ. ಅಷ್ಟೇ ಅಲ್ಲದೆ 2002 ರಲ್ಲಿ ತನ್ನದೇ ಆದ ʼ ಡೆಸರ್ಟ್ ಫ್ಲವರ್ ಫೌಂಡೇಶನ್ ʼ ಅನ್ನು ಸ್ಥಾಪಿಸಿ FGM ನ ವಿರುದ್ಧ ಹೋರಾಟ, ಕಾರ್ಯಕ್ರಮಗಳನ್ನು, ಯೋಜನೆಗಳನ್ನು, ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾಳೆ. ಇದರ ಪ್ರಧಾನ ಕಛೇರಿ ವಿಯೆನ್ನಾ ಮತ್ತು ಆಸ್ಟ್ರಿಯಾ ಹಾಗೂ ಅದರ ಪ್ರಾದೇಶಿಕ ಕಚೇರಿಗಳು ಜರ್ಮನಿ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಮೊನಾಕೊ, ಫ್ರಾನ್ಸ್, ಸ್ಪೇನ್, ಯುನೈಟೆಡ್ ಕಿಂಗ್ಡಮ್, ಸ್ವೀಡನ್, ಜಿಬೌಟಿ , ಸಿಯೆರಾ ಲಿಯೋನ್ ಮತ್ತು ಪೋಲೆಂಡ್ ದೇಶಗಳಲ್ಲಿವೆ. ಅಷ್ಟಲ್ಲದೇ ಫೇಸ್ಬುಕ್, ವಾಟ್ಸ್ ಆ್ಯಪ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯವೂ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಲೇ ಇದ್ದಾಳೆ.
ಈ ದಿನ ಎಷ್ಟೆಲ್ಲಾ ವಿಜ್ಞಾನ ತಂತ್ರಜ್ಞಾನ ಮುಂದುವರಿದಿದೆ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಚಂದ್ರಗ್ರಹಕ್ಕೆ ಮಂಗಳಗ್ರಹಕ್ಕೆ ಹೋಗುವಷ್ಟು ಬೆಳೆದಿದ್ದೇವೆ. ಆದರೆ ನಮ್ಮೊಡನೇ ಇರುವ ನಮ್ಮವಳೇ ಆದ ಹೆಣ್ಣನ್ನು ಅನ್ಯಳನ್ನಾಗಿ, ಅಸ್ತಿತ್ವವೇ ಇಲ್ಲದಂತೆ ಮಾಡಿರುವ ನಾವು ಹೆಣ್ಣಿನ ರಕ್ಷಣೆಗಾಗಿ ಅವಳ ಅಸ್ತಿತ್ವಕ್ಕಾಗಿ, ಬದುಕಿಗಾಗಿ, ಹಕ್ಕುಗಳಿಗಾಗಿ, ಸಮಾನತೆಗಾಗಿ ಇನ್ನೂ ಹೋರಾಡುತ್ತಲೇ ಇದ್ದೇವೆಯೇ ಹೊರತು ಅವಳಿಗೆ ಇನ್ನೂ ನ್ಯಾಯಯುತವಾದ ಬದುಕು ದೊರೆತಿಲ್ಲ. ಅವಳ ದೇಹದ ಮೇಲೆ ಅವಳಿಗೆ ಅಧಿಕಾರ ಹಕ್ಕು ಇಲ್ಲವಾಗಿದೆ. ಬಹುಮುಖ್ಯವಾಗಿ ಹೆಣ್ಣಿಗೆ ತಾನು ಶೋಷಣೆಗೆ ಒಳಗಾಗಿದ್ದೇನೆ, ಇಂತಹುದರ ವಿರುದ್ಧ ಸಿಡಿದೇಳಬೇಕಾದ ಅನಿವಾರ್ಯತೆ ಇದೆ ಎಂಬ ಅರಿವು ಕೂಡ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಧರ್ಮದ ಹೆಸರಲ್ಲಿ ಸಂಪ್ರದಾಯದ ಹೆಸರಲ್ಲಿ ದೇಹ ರಾಜಕೀಯ ನಡೆಯುತ್ತಲೇ ಇವೆ.
ಇವೆಲ್ಲವನ್ನೂ ನೋಡಿಯೂ ನೋಡದಂತೆ ಮೌನ ವಹಿಸಿರುವ ನಾವು ಸಿಡಿದೇಳದಿದ್ದರೆ, ಪ್ರತಿಭಟಿಸದಿದ್ದರೆ, ಪ್ರಶ್ನೆ ಮಾಡದಿದ್ದರೆ ನಮ್ಮ ಅವನತಿಗೆ ನಾವೇ ದಾರಿ ಮಾಡಿ ಕೊಡಬೇಕಾಗುತ್ತದೆ. ಇವೆಲ್ಲಕ್ಕೂ ತೀವ್ರತರವಾದ ಹೋರಾಟ, ವೈಜ್ಞಾನಿಕ ಮತ್ತು ವೈಚಾರಿಕ ಅರಿವು ಮೂಡಿಸುವ ಕೆಲಸಗಳು ಹೆಚ್ಚಾಗಬೇಕಿದೆ. ಹೆಣ್ಣಿನ ದೇಹವನ್ನೇ ಅಸ್ತ್ರವಾಗಿಸಿಕೊಂಡು ಹಿಂಸಿಸುವ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಿದೆ ಅರಿವು ಮೂಡಿಸಬೇಕಿದೆ.
ಅತಿಥಿ ಉಪನ್ಯಾಸಕಿ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.