Thursday, May 23, 2024

“ತುಕ್ಡೆ ತುಕ್ಡೆ ಗ್ಯಾಂಗ್” ಶಬ್ದ ಬಳಸಿದ ಆಜ್ ತಕ್ ಸುದ್ದಿವಾಹಿನಿಗೆ 75 ಸಾವಿರ ರೂ. ದಂಡ

Most read

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಕುರಿತು ಸುದ್ದಿ ಪ್ರಸಾರದ ವೇಳೆ “ತುಕ್ಡೆ ತುಕ್ಡೆ ಗ್ಯಾಂಗ್”, ಖಲಿಸ್ತಾನಿ, ಪಾಕಿಸ್ತಾನಿ ಶಬ್ದಗಳನ್ನು ಬಳಸಿದ ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್‌ ಗುಣಮಟ್ಟ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) 75 ಸಾವಿರ ರೂ. ದಂಡ ವಿಧಿಸಿದೆ.

ದೂರೊಂದರ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸದಸ್ಯತ್ವ ಹೊಂದಿರುವ ಆಜ್ ತಕ್ ಹಿಂದಿ ಸುದ್ದಿ ವಾಹಿನಿಯ ವಿರುದ್ಧ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಆಂಡ್ ಡಿಜಿಟಲ್ ಸ್ಟ್ಯಾಂಡರ್ಡ್ಸ ಅಥಾರಿಟಿ (ಎನ್‌ಬಿಡಿಎಸ್‌ಎ) ಕ್ರಮ ವಹಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಅವರನ್ನು ದರೋಡೆಕೋರ ಎಂಬಂತೆ ತೋರಿಸುವ ಕಾಲ್ಪನಿಕ ವಿಡಿಯೋವನ್ನು ಡಿಲೀಟ್ ಮಾಡುವಂತೆ ನಿರ್ದೇಶನ ನೀಡಿದೆ. ಉತ್ತಮ ಅಭಿರುಚಿ ಹೊಂದಿಲ್ಲದ, ತಪ್ಪು ಸಂದೇಶ ನೀಡುವ ಆ ವಿಡಿಯೋವನ್ನು ತನ್ನ ಚಾನೆಲ್, ಯೂಟ್ಯೂಬ್ ಮತ್ತು ಇತರ ಆನ್‌ಲೈನ್‌ ವೇದಿಕೆಗಳಿಂದ ತೆಗೆದುಹಾಕಬೇಕು ಎಂದು ಆಜ್ ತಕ್ ವಾಹಿನಿಗೆ ಎನ್‌ಬಿಡಿಎಸ್‌ಎ ಆದೇಶಿಸಿದೆ. ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಭದ್ರಾವತಿ ವೆಂಕಟ ಅವರು ಮಾರ್ಚ್ 31, 2023 ರಂದು ಎನ್‌ಬಿಡಿಎಸ್‌ಎಗೆ ಈ ಕುರಿತು ದೂರು ಸಲ್ಲಿಸಿದ್ದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಬೆಂಬಲಿಗರು “ನಾಸೀರ್ ಸಾಬ್ ಜಿಂದಾಬಾದ್” ಎಂದು ಜೈಕಾರ ಕೂಗಿದ್ದನ್ನು ಕನ್ನಡದ ಮಾಧ್ಯಮಗಳು ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ ಎಂದು ಬಿಂಬಿಸುವ ವರದಿ ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದವು. ಪ್ರಸ್ತುತ ಮಾಧ್ಯಮಗಳು ಒಂದು ಪಕ್ಷದ ಏಜೆಂಟರಾಗಿ ವರ್ತಿಸುತ್ತಿರುವ ಕುರಿತು ಹಲವು ಜನನಾಯಕರು, ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿತ್ತು. ಈ ವರ್ತನೆ ರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎನ್‌ಬಿಡಿಎಸ್‌ಎ ಗೆ ನಿರಂತರ ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಧಿಕಾರವು ಕೈಗೊಂಡ ಕ್ರಮ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

More articles

Latest article