Sunday, July 14, 2024

Body Shaming ಎಂಬ ಕೆಟ್ಟ ಚಾಳಿ.

Most read

ಬಿಳಿ ಬಣ್ಣದ ಚರ್ಮ, ತೆಳುವಾದ ಸೊಂಟ ಉಬ್ಬಿದ ಸ್ತನಗಳು ಇತ್ಯಾದಿ ಮಾನದಂಡಗಳನ್ನ ಹೊಂದಿದವರು ಮಾತ್ರವೇ ಸುಂದರ ಎಂಬ ಸುಳ್ಳು ಕಲ್ಪನೆಗಳನ್ನ ಸೃಷ್ಟಿಸಲಾಗಿದೆ. ನನ್ನ ಪ್ರಕಾರ ಚೆಂದದ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಇದ್ಯಾವುದೂ ಮಾನದಂಡವಾಗಬಾರದು. ನಾವು ಸರಳವಾಗಿ, ಸ್ವಾಭಾವಿಕವಾಗಿಯೇ ಬದುಕಬೇಕು. ಇತರರನ್ನು ಅವರಿದ್ದ ಹಾಗೆಯೇ ಸ್ವೀಕರಿಸಿಬೇಕು – ಶೃಂಗಶ್ರೀ ಟಿ, ಉಪನ್ಯಾಸಕಿ, ಶಿವಮೊಗ್ಗ

ಬಿಟ್ಟುಬಿಡಬೇಕು ಕೆಲವು ಕೆಟ್ಟ ಚಾಳಿಗಳನ್ನ. ಮುಖ್ಯವಾಗಿ ಮತ್ತೊಬ್ಬರ ದೇಹದ ಭಾಗಗಳನ್ನ ಹೀಯಾಳಿಸುವುದನ್ನ. ನಮಗೇ ಎಷ್ಟೋ ಬಾರಿ ಅನುಭವಗಳಾಗಿರುತ್ತವೆ. ಬಹುಕಾಲದ ಗೆಳೆಯರು ಅಥವಾ ಪರಿಚಿತರು ಆಕಸ್ಮಿಕವಾಗಿ ಸಿಕ್ಕಾಗ ಅಥವಾ ತುಂಬಾ ದಿನಗಳ ನಂತರ ಭೇಟಿ ಆದಾಗ ನಾವು ಮೊದಲು ಮಾಡಬೇಕಾದದ್ದು ಎದುರಿಗಿರುವವರನ್ನ ಪ್ರೀತಿಯಿಂದ ಆಲಂಗಿಸಿ ಅಥವಾ ಅವರ ಆರೋಗ್ಯದ ಬಗೆಗೆ ಕುಶಲೋಪರಿಯನ್ನ ವಿಚಾರಿಸುವದರ ಮೂಲಕ ಬರಮಾಡಿಕೊಳ್ಳಬೇಕು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವರಿಗೆ ಇನ್ನೊಬ್ಬರ ದೇಹದ ಬಗೆಗೆ ಕೆಟ್ಟದಾಗಿ ಹೀಯಾಳಿಸುವುದೇ ಚಾಳಿಯಾಗಿ ಬಿಟ್ಟಿರುತ್ತದೆ. ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡಬಾರದು ಎಂಬ ಸಣ್ಣ ಕಾಮನ್ ಸೆನ್ಸ್ ಕೂಡ ಇಲ್ಲದ ವ್ಯಕ್ತಿಗಳು ಮತ್ತೊಬ್ಬರ ದೇಹಸ್ಥಿತಿ ಬಗ್ಗೆ ಕಂಡ ತಕ್ಷಣ ಹೀಯಾಳಿಸಿ ನೋಯಿಸಿ ಅವರ ದೇಹದ ಬಗೆಗೆ ಅವರಿಗೇ ಇಲ್ಲದ ಚಿಂತೆ ಹತ್ತಿಸಿ ತನ್ನ ದೇಹದ ಬಗೆಗೇ ಅಸಹ್ಯ ಪಡುವಷ್ಟು ಹೀಯಾಳಿಸಿ ಬಿಡುತ್ತಾರೆ.

ಇಲ್ಲಿ ಎಲ್ಲರೂ ಕೂಡ ಚೆಂದವಾಗಿ ಕಾಣಬೇಕು, ಚೆಂದವಾಗಿ ಬದುಕಬೇಕು ಅಂತಲೇ ಬದುಕುವರಿದ್ದಾರೆ. ಜಗತ್ತು ಕೂಡ ಹಾಗೆಯೇ ಒಂದು ವ್ಯವಸ್ಥೆಯನ್ನ ನಿರ್ಮಿಸಿದೆ. ಹೆಣ್ಣಿನ ಸೊಂಟ ತೆಳ್ಳಗೆ ಬೆಳ್ಳಗೆ ಇರಬೇಕು, ಆಕರ್ಷಕ ಮೈಕಟ್ಟು ಹೊಂದಿರಬೇಕು ಒಂಚೂರು ಕೂಡ ಬೊಜ್ಜಿರಬಾರದು ಹಾಗೆ ಹೀಗೆ ಅಂತ ಒಂದು ವ್ಯವಸ್ಥೆಯನ್ನ ಸೃಷ್ಟಿಸಿದೆ. ಹೌದು ಬೊಜ್ಜಿರಬಾರದು. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅಲ್ಲ ಎಂಬ ಪ್ರಜ್ಞೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚೆಚ್ಚು ಯಾಂತ್ರಿಕ ಯುಗದಲ್ಲಿ ಬದುಕುತ್ತಾ ಹೆಸರು, ಹಣ, ಗೌರವ ಮುಂತಾದ ಆಸೆ-ದುರಾಸೆಗಳಿಗೆ ಬಲಿಯಾಗಿ ತಮಗೇ ತಾವು ಸಮಯ ಮೀಸಲಿಡಲು ಹೆಣಗುತ್ತಿದ್ದಾರೆ. ಅನುವಂಶೀಯವಾಗಿ ಬಂದ ದೇಹಕ್ರಮ,‌ ಆಧುನಿಕ ಬದುಕಿನ ಶೈಲಿ, ಕೆಲಸದ ಒತ್ತಡ, ಬದುಕಿನ ಬಗೆಗಿನ ಚಿಂತೆ, ಕಲಬೆರಕೆ ಆಹಾರಗಳು, ಆರೋಗ್ಯದಲ್ಲಿ ಏರು-ಪೇರು, ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳು  ಮುಖ್ಯವಾಗಿ, ಮಗುವಾದ ನಂತರ ಅವರ ದೇಹದ ಸ್ಥಿತಿ ಸಂಪೂರ್ಣ ಬದಲಾಗಿ ಬಿಡುತ್ತದೆ.

ಇಷ್ಟಲ್ಲದೆ ಇನ್ನೂ ಹಲವಾರು ಕಾರಣಗಳಿವೆ. ಆದರೆ ನಾವು ಇದಾವುದನ್ನೂ ಪರಿಗಣಿಸದೆ, ಯೋಚಿಸದೆ ಇನ್ನೊಬ್ಬರ ದೇಹದ ಬಗೆಗೆ ಮನಸೋ ಇಚ್ಛೆ ಮಾತಾಡಿ ಅವರನ್ನು ನೋಯಿಸುತ್ತೇವೆ. ಇದರಿಂದಾಗಿ ಎಷ್ಟೋ ಸಾವು ನೋವುಗಳಾಗಿವೆ. ಇತ್ತೀಚೆಗೆ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಇದೆ. ದೇಹವನ್ನ ಸರಿಯಾಗಿ ಅದರಲ್ಲೂ  ಮುಖ್ಯವಾಗಿ ಜನರನ್ನು ಮೆಚ್ಚಿಸುವ ಸಲುವಾಗಿ ಜಿಮ್, ವ್ಯಾಯಾಮ, ಡಯಟ್ ಎಂಬ ಹತ್ತು ಹಲವಾರು ಮಾರ್ಗಗಳನ್ನ ಆರಿಸಿಕೊಂಡಿದ್ದೇವೆ. ಈ ಡಯಟ್ ಎಂಬ ದಾರಿಯಲ್ಲಿ ಸರಿಯಾದ ಮಾಹಿತಿ ಇಲ್ಲದೆ ಎಷ್ಟೋ ಜನ ಜೀವ ಕಳೆದು ಕೊಂಡವರಿದ್ದಾರೆ. ಅತಿಯಾದ ಜಿಮ್ ಕೂಡ ಹಲವಾರು ಸಮಸ್ಯೆಗಳನ್ನ ಸೃಷ್ಟಿಸಿದೆ. ಎಷ್ಟೋ ಜನ ಮಾತ್ರೆಗಳಿಗೆ ಅಡಿಕ್ಟ್ ಆಗಿರುವ, ಅದರಿಂದ ಸಣ್ಣ- ದಪ್ಪ ಆದವರು, ಆಗದೆ ಸೈಡ್ ಎಫೆಕ್ಟ್ಸ್ ಗಳಿಗೆ ಒಳಗಾಗಿ ಇನ್ಯಾವುದೋ ಖಾಯಿಲೆಗಳಿಗೆ ತುತ್ತಾದ ಉದಾಹರಣೆಗಳಿವೆ.

Cindy Jackson
Shridevi

Cindy Jackson ಎಂಬಾಕೆ 52  ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದಾರೆ. ಈ ಸಂಗತಿ ವರ್ಲ್ಡ್ ರೆಕಾರ್ಡ್ ದಾಖಲೆಗೆ ಸೇರಿದೆ. ಅಷ್ಟೇ ಅಲ್ಲದೇ ಎವರ್‌ ಗ್ರೀನ್‌ ಬ್ಯೂಟಿ ಎಂದು ಕರೆಸಿಕೊಳ್ಳುವ ನಟಿ  ಶ್ರೀದೇವಿ ಕೂಡ 29 ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನ ಮಾಡಿಸಿ ಕೊಂಡಿದ್ದಾರೆ. ಈ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಇದೆಲ್ಲದಕ್ಕೂ ಕಾರಣ ಸುಂದರವಾಗಿ ಕಾಣಬೇಕು ಎಂಬುದಷ್ಟೇ.

ಹೆಣ್ಣಿನ ದೇಹ ಆಕರ್ಷಕವಾಗಿ ಕಾಣುವುದು, ಅವಳ ಬಣ್ಣ, ತೆಳುವಾದ ಸೊಂಟ, ಉಬ್ಬಿದ ಸ್ತನಗಳಿಂದ ಎಂದಾಗಿ ವ್ಯವಸ್ಥೆಯನ್ನ ನಿರ್ಮಿಸಲಾಗಿದೆ. ಸುಂದರವಾಗೇ ಕಾಣಬೇಕೆಂಬ ಎಷ್ಟೋ ಹೆಣ್ಣುಮಕ್ಕಳು ಸ್ತನಗಳ ಸರ್ಜರಿಗಳನ್ನೂ‌ ಮಾಡಿಸಿ ಕೊಂಡಿದ್ದಾರೆ. ಅದಕ್ಕೆ ಸ್ತನದ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯೆಂದು ಕರೆಯಲಾಗುತ್ತದೆ. ಹೆಣ್ಣಿನ ದೇಹದ ಬಹಳ ಮುಖ್ಯವಾದ ಮತ್ತು ಸೂಕ್ಷ್ಮವಾದ ಭಾಗಗಳಲ್ಲಿ ಸ್ತನಗಳ ಪಾಲೂ ಇದೆ. ಜಗತ್ತನ್ನು ಮೆಚ್ಚಿಸುವ ಸಲುವಾಗಿ ಹೆಣ್ಣು ಸ್ತನದ ಶಸ್ತ್ರಚಿಕಿತ್ಸೆಯ ದಾರಿಯನ್ನೂ ಆರಿಸಿ ಕೊಂಡಿದ್ದಾಳೆಂದರೆ ಅದರ ಹಿಂದಿರುವ ನೋವು, ಸೌಂದರ್ಯದ ಬಗೆಗಿನ ಒಲವು ಮತ್ತು ದೇಹರಾಜಕಾರಣವನ್ನ ಸೂಕ್ಷ್ಮವಾಗಿ ಅವಲೋಕಿಸಬೇಕು.

ಇದು ಕೇವಲ ಹೆಣ್ಣಿಗಷ್ಟೇ ಅಲ್ಲ ಗಂಡಸರಿಗೂ ಕೂಡ. ಅವರ ದೇಹದ ಭಾಗಗಳ ಮೇಲೆ ಅವರನ್ನ ಹೀಯಾಳಿಸಿ, ನೋಯಿಸುವುದರ ಮೂಲಕ ಅವರನ್ನೂ ಕೂಡ  ಪುರುಷ ಜನನಾಂಗದ ಶಸ್ತ್ರಚಿಕಿತ್ಸೆಯ ದಾರಿಗಳನ್ನ ಕಂಡುಕೊಳ್ಳುವಂತೆ ಮಾಡಿದ್ದೇವೆ. ಕೇವಲ ತರಕಾರಿ ಹೆಚ್ಚುವಾಗ ಕೈ ಘಾಸಿಗೊಂಡಾಗ ಆಗುವ ನೋವನ್ನೇ ಸಹಿಸದ ನಾವು ಅಂತಹ ಶಸ್ತ್ರಚಿಕಿತ್ಸೆಯ ಮೊರೆ ಹೋದವರ ವೇದನೆ ಊಹಿಸಿಕೊಳ್ಳಿ.

ಕೊನೆಗೆ ಇದ್ಯಾವುದನ್ನೂ ಮಾಡಲಾಗದೆ ಉಳಿದ ಎಷ್ಟೋ ಜನ ಸಮಾಜದ ಕಟ್ಟುಪಾಡುಗಳಿಗೆ ಹೋಲಿಕೆಯಾಗದಾಗ ತಮ್ಮನ್ನು ತಾವೇ ಶಿಕ್ಷಿಸಿ ಕೊಂಡದ್ದಿದೆ, ಶಪಿಸಿಕೊಂಡದ್ದಿದೆ. ಸಪೂರವಾಗ ಬೇಕು, ದಪ್ಪವಾಗ ಬೇಕು, ಸುಂದರವಾಗಿ ಕಾಣಬೇಕು ಇವೇ ಎಷ್ಟೋ ಮಾನಸಿಕ ಹಿಂಸೆಗೆ ಗುರಿ ಮಾಡಿಬಿಡುತ್ತವೆ. ತನ್ನ ಬಣ್ಣದ ಕಾರಣದಿಂದಲೇ ಎಷ್ಟೋ ಹೆಣ್ಣುಮಕ್ಕಳು ಬದುಕಿನುದ್ದಕ್ಕೂ ನೋವು ಅನುಭವಿಸುವವರಿದ್ದಾರೆ. ಇಂತಹವರ ಮನಸ್ಥಿತಿಯೇ ಎಷ್ಟೋ ಕಂಪನಿಗಳಿಗೆ ಬಹುಮುಖ್ಯವಾದ ಆದಾಯ ತರುವ ದಾರಿಗಳಾಗಿವೆ. ಯಾವುದೇ ಜಾಹೀರಾತುಗಳನ್ನ ನೋಡಿದರೂ ಕಾಣುವುದು ಇದೇ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯ ಬೇಕೇ ನೀವು ಸುಂದರವಾಗಿ ಕಾಣಬೇಕೇ ನೀವು ದಪ್ಪವಾಗಬೇಕೇ, ಸಪೂರವಾಗಬೇಕೇ ಹಾಗಾದರೆ ಈ ಪ್ರಾಡಕ್ಟ್ಸ್ ಗಳನ್ನ ಬಳಸಿ ಅಂತಲೇ ಹೇಳುತ್ತವೆಯೇ ವಿನಃ ನೀವು ಇದ್ದ ಹಾಗೆ ನೀವಿರಿ ಅಂತ ಯಾವ ಜಾಹೀರಾತು ಹೇಳಿರುವುದು ನಾ ನೋಡಲಿಲ್ಲ. ಇಲ್ಲಿ ಬಿಳಿಬಣ್ಣವೇ ಶ್ರೇಷ್ಠ, ಕಪ್ಪು ಬಣ್ಣವೇ ಕನಿಷ್ಠ, ಹೀನ ಮತ್ತು ಅಪರಾಧವೆಂಬಂತೆ ಸೃಷ್ಟಿಸಲಾಗಿದೆ.

ಯಾವ ಸಿನಿಮಾದಲ್ಲೂ ಯಾವ ಸೀರಿಯಲ್ ನಲ್ಲೂ ಕೂಡ ಕಪ್ಪಗೆ ಇರುವ ಹೀರೋಯಿನ್ ಗಳನ್ನ ನೋಡಿಲ್ಲ. ಇದ್ದರೂ ಅದು ತೀರಾ ವಿರಳ. ಬಹಳ ಮುಖ್ಯವಾಗಿ ಅವರನ್ನು ಕೂಡ ಮೇಕಪ್ ಮಾಯೆ ಅವರ ನಿಜಬಣ್ಣವನ್ನೇ ಮರೆಮಾಚುವ ಆಯುಧವಾಗಿದೆ. ಇದಕ್ಕೆ ಮಾಡೆಲಿಂಗ್ ಕ್ಷೇತ್ರವೂ ಹೊರತಾಗಿಲ್ಲ. ಒಂದು ವೇಳೆ ಕಪ್ಪು ವರ್ಣದವರು ಮಾಡೆಲಿಂಗ್ ಕ್ಷೇತ್ರದಲ್ಲಿ ಪಾಲ್ಗೊಂಡಿದ್ದರೂ ಅವರನ್ನ ರಾಜಕೀಯ ಅಥವಾ ಇನ್ಯಾವುದೋ ಹಿತಾಸಕ್ತಿಗೆ ಬಳಸಿಕೊಳ್ಳಲಾಗುತ್ತದೆ.

ಬಿಳಿ ಬಣ್ಣದ ಚರ್ಮ, ತೆಳುವಾದ ಸೊಂಟ ಉಬ್ಬಿದ ಸ್ತನಗಳು ಇತ್ಯಾದಿ ಮಾನದಂಡಗಳನ್ನ ಹೊಂದಿದವರು ಮಾತ್ರವೇ ಸುಂದರ ಎಂಬ ಸುಳ್ಳು ಕಲ್ಪನೆಗಳನ್ನ ಸೃಷ್ಟಿಸಲಾಗಿದೆ. ನನ್ನ ಪ್ರಕಾರ ಚೆಂದದ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಇದ್ಯಾವುದೂ ಮಾನದಂಡವಾಗಬಾರದು. ಮುಖ್ಯವಾಗಿ ತಮ್ಮನ್ನೇ ತಾವು  ಹೀಯಾಳಿಸಿಕೊಳ್ಳುವುದನ್ನು, ಇತರರನ್ನು ಗೇಲಿ ಮಾಡುವುದನ್ನ ಬಿಟ್ಟು ಬಿಡಬೇಕು. ನೆಲ್ಸನ್ ಮಂಡೇಲಾ ಅವರು ಹೇಳುವಂತೆ “ಯಾರೂ ಹುಟ್ಟುತ್ತಲೇ ಇನ್ನೊಬ್ಬರನ್ನು ಚರ್ಮದ ಬಣ್ಣಕ್ಕಾಗಿಯೋ, ಹಿನ್ನೆಲೆ ಗಾಗಿಯೋ, ಅಥವಾ ಧರ್ಮದ ಕಾರಣಕ್ಕಾಗಿಯೋ ದ್ವೇಷಿಸುವುದಿಲ್ಲ. ಜನರಿಗೆ ದ್ವೇಷಿಸಲು ಕಲಿಸಲಾಗುತ್ತದೆ. ದ್ವೇಷ ಮಾಡಲು ಕಲಿಸ ಬಹುದಾದರೆ ಪ್ರೀತಿಸಲು ಸಹ ಕಲಿಸ ಬಹುದು. ಯಾಕೆಂದರೆ ಮನುಷ್ಯರ ಮನಸ್ಸುಗಳಿಗೆ ದ್ವೇಷಕ್ಕಿಂತಲೂ ಪ್ರೀತಿ ಹೆಚ್ಚು ಸ್ವಾಭಾವಿಕವಾದದ್ದು”.  

ನಾವು ಕೂಡ ಸರಳವಾಗಿ ಸ್ವಾಭಾವಿಕವಾಗಿಯೇ ಬದುಕಬೇಕು. ಇತರರನ್ನು ಇದ್ದ ಹಾಗೆಯೇ ಸ್ವೀಕರಿಸಿಬೇಕು.

ಶೃಂಗಶ್ರೀ ಟಿ.

ಉಪನ್ಯಾಸಕಿ, ಶಿವಮೊಗ್ಗ

More articles

Latest article