Friday, December 6, 2024

ಭಾರತ್ ಜೋಡೋ ನ್ಯಾಯ ಯಾತ್ರೆ‌ | 23 ನೆಯ ದಿನ

Most read

“ನೀವು ಅದಾನಿಯ ಕಂಪನಿ ಮ್ಯಾನೇಜ್ ಮೆಂಟ್ ಲಿಸ್ಟ್ ತೆಗೆಯಿರಿ, ಅದರಲ್ಲಿ ಒಬ್ಬನೇ ಒಬ್ಬ ಆದಿವಾಸಿ, ದಲಿತ ಮತ್ತು ಹಿಂದುಳಿದವರು ಸಿಗಲಾರರು. ಆದರೆ ಈ ವ್ಯಕ್ತಿಗೆ ದೇಶದ ಇಡೀ ಸಂಪತ್ತು ಒಪ್ಪಿಸಲಾಗುತ್ತಿದೆ. ದೇಶದ ರಕ್ಷಣಾ ವಲಯದ ಹೆಚ್ಚಿನ ಗುತ್ತಿಗೆ ಅದಾನಿಗೆ ಕೊಡಲಾಗಿದೆ. ಯಾಕೆಂದರೆ ಇದು ಹಿಂದುಸ್ಥಾನದ ಪ್ರಧಾನಿಯ ಬಯಕೆ” -ರಾಹುಲ್‌ ಗಾಂಧಿ

ನ್ಯಾಯ ಯಾತ್ರೆಯ ಇಂದಿನ (05.02.2024) ಕಾರ್ಯಕ್ರಮ ಹೀಗಿತ್ತು.

ಬೆಳಿಗ್ಗೆ 8.00 ಕ್ಕೆ ಜಾರ್ಖಂಡ್, ರಾಮಘಡದ ಮಹಾತ್ಮಾ ಗಾಂಧಿ ಚೌಕದಿಂದ ಯಾತ್ರೆ ಆರಂಭ. ಶಹೀದ್ ಶೇಖ್ ಭಿಖಾರಿ ಮತ್ತು ಟಿಕಾಯತ್ ಉಮರಾವೋ ಸಿಂಗ್ ಹುತಾತ್ಮ ಸ್ಥಳದಲ್ಲಿ ಗೌರವಾರ್ಪರ್ಣೆ. ಬಳಿಕ ಸಾರ್ವಜನಿಕ ಭಾಷಣ. 11.00 ಕ್ಕೆ ಬೆಳಗಿನ ವಿರಾಮ, ಕೊಯಿಲರಿ, ಇರ್ಬಾ, ಇಂದಿರಾಗಾಂಧಿ ಹ್ಯಾಂಡ್ ಲೂಮ್ ಪ್ರೊಸೆಸ್ ಹೌಸ್ ಗ್ರೌಂಡ್ ನಲ್ಲಿ.

ಮಧ‍್ಯಾಹ್ನ 2.00 ಗಂಟೆಗೆ ರಾಂಚಿಯ ಶಹೀದ್ ಮೈದಾನದಲ್ಲಿ ಸಾರ್ವಜನಿಕ ಸಭೆ. ರಾತ್ರಿ ಜಾರ್ಖಂಡ್ ಕುಂಠಿಯ ಕುಟಚೇರಿ ಗ್ರೌಂಡ್ ನಲ್ಲಿ ವಾಸ್ತವ್ಯ.

ರಾಂಚಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ  ರಾಹುಲ್ ಗಾಂಧಿಯವರು, “ನಾನು ಮುಖ್ಯಮಂತ್ರಿ ಚಂಪಾಯಿ ಸೊರೇನ್, ಹೇಮಂತ ಸೊರೇನ್, ಇಡೀ ಮೈತ್ರಿಕೂಟಕ್ಕೆ ಮತ್ತು ನಮ್ಮ ಎಲ್ಲ ಶಾಸಕರಿಗೆ ಧನ್ಯವಾದ ಸಲ್ಲಿಸ ಬಯಸುತ್ತೇನೆ. ನೀವು ಬಿಜೆಪಿ ಆರ್ ಎಸ್ ಎಸ್ ಕುತಂತ್ರವನ್ನು ವಿಫಲಗೊಳಿಸಿದ್ದೀರಿ. ಇಲ್ಲಿನ ಬಡವರ ಸರಕಾರ ಕೊನೆಗೂ ಉಳಿದುಕೊಳ್ಳುವಂತೆ ಮಾಡಿದ್ದೀರಿ.

ಮೋದಿ ಸರಕಾರ ಸಾರ್ವಜನಿಕ ರಂಗದ ಉದ್ಯಮಗಳ (ಪಬ್ಲಿಕ್ ಸೆಕ್ಟರ್)  ಕತ್ತು ಹಿಸುಕುತ್ತಿದೆ. ಇದೀಗ HEC ಯ ಹೆಸರು ಬದಲಾಯಿಸಿ ಅದಾನಿಯ ಹೆಸರಿಡ ಹೊರಟಿದ್ದಾರೆ. ನಾನು ಎಲ್ಲೇ ಹೋಗಲಿ ಅಲ್ಲಿ ಪಬ್ಲಿಕ್ ಸೆಕ್ಟರ್ ನ ಕಾರ್ಮಿಕರು ಬ್ಯಾನರ್, ಪೋಸ್ಟರ್, ಬಾವುಟ ಹಿಡಿದಿರುವುದನ್ನು ನೋಡುತ್ತಿದ್ದೇನೆ. ಮೋದಿ ಸರಕಾರ ಎಲ್ಲ ಸಾರ್ವಜನಿಕ ರಂಗದ ಉದ್ಯಮವನ್ನು ಕೊಂದು ಅದಕ್ಕೆ ಅದಾನಿಯ ನೇಮ್ ಪ್ಲೇಟ್ ಅಂಟಿಸ ಬಯಸುತ್ತಿದೆ. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ.

ಈ ದೇಶದಲ್ಲಿ ಒಬಿಸಿ, ಆದಿವಾಸಿ ಮತ್ತು ದಲಿತ ವರ್ಗದ ಎಷ್ಟು ಜನರಿದ್ದಾರೆ? ಇದಕ್ಕೆ ಯಾರೂ ಸರಿಯಾದ ಉತ್ತರ ಕೊಡಲಾರರು. ಈವತ್ತು ತಮ್ಮ ಆಶ್ವಾಸನೆಯ ಪ್ರಕಾರ ತೆಲಂಗಾಣದಲ್ಲಿ ಜಾತಿಗಣತಿ ಶುರುಮಾಡಿದ್ದೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ. ತೆಲಂಗಾಣದಲ್ಲಿ ಎಷ್ಟು ಮಂದಿ ಒಬಿಸಿ, ಆದಿವಾಸಿ, ದಲಿತ ಮತ್ತು ಅಲ್ಪಸಂಖ್ಯಾತರು ಇದ್ದಾರೆ ಎನ್ನುವುದು ಕೆಲವೇ ತಿಂಗಳಲ್ಲಿ ತಿಳಿಯಲಿದೆ.

ನೀವು ಅದಾನಿಯ ಕಂಪನಿ ಮ್ಯಾನೇಜ್ ಮೆಂಟ್ ಲಿಸ್ಟ್ ತೆಗೆಯಿರಿ, ಅದರಲ್ಲಿ ಒಬ್ಬನೇ ಒಬ್ಬ ಆದಿವಾಸಿ, ದಲಿತ ಮತ್ತು ಹಿಂದುಳಿದವರು ಸಿಗಲಾರರು. ಆದರೆ ಈ ವ್ಯಕ್ತಿಗೆ ದೇಶದ ಇಡೀ ಸಂಪತ್ತು ಒಪ್ಪಿಸಲಾಗುತ್ತಿದೆ. ದೇಶದ ರಕ್ಷಣಾ ವಲಯದ ಹೆಚ್ಚಿನ ಗುತ್ತಿಗೆ ಅದಾನಿಗೆ ಕೊಡಲಾಗಿದೆ. ಯಾಕೆಂದರೆ ಇದು ಹಿಂದುಸ್ಥಾನದ ಪ್ರಧಾನಿಯ ಬಯಕೆ.

ಖಾಸಗಿ ಆಸ್ಪತ್ರೆ, ವಿವಿ, ಕಾಲೇಜಿನ ಮ್ಯಾನೇಜ್ ಮೆಂಟ್ ನ ಲಿಸ್ಟ್ ತೆಗೆದು ನೋಡಿ, ಅಲ್ಲಿ ನಿಮಗೆ ದಲಿತರು ಹಿಂದುಳಿದ ವರ್ಗದವರು ಸಿಗಲಾರರು. ಅಂದರೆ ಈ ಜನರನ್ನು ಜೀತದ ಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ.

ಆದಿವಾಸಿ ಸಹೋದರನೊಬ್ಬ ಸೈಕಲ್ ನಲ್ಲಿ 200 ಕಿಲೋ ಕಲ್ಲಿದ್ದಲು ಒಯ್ಯುತ್ತಿದ್ದನ್ನು ನಾನು ಇವತ್ತು ನೋಡಿದೆ. ಇಂತಹ ಜಾಗದಲ್ಲಿ ನಿಮಗೆ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರು ಕಾಣಸಿಗುತ್ತಾರೆ. ಆದರೆ ದೊಡ್ಡ ದೊಡ್ಡ ಯಾವುದೇ ಕಚೇರಿಯಲ್ಲಿ ಅವರು ಕಾಣಸಿಗುವುದಿಲ್ಲ. ಆದ್ದರಿಂದಲೇ ನಮ್ಮ ಮೊದಲ ಹೆಜ್ಜೆಯೇ ಜಾತಿಗಣತಿ.

ಪ್ರಧಾನಿ ಮೋದಿ ಮತ್ತು ಅವರ ಮಂತ್ರಿಗಳಿಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯ ಕಾಣಿಸುವುದಿಲ್ಲ. ಆದರೆ ಹಿಂದುಸ್ಥಾನದ ಜನತೆಗೆ ಈ ಅನ್ಯಾಯ ದಿನವೂ ಕಾಣಿಸುತ್ತಿದೆ. ಆದ್ದರಿಂದ ನಾವು ಅನ್ಯಾಯದ ವಿರುದ್ಧ ನ್ಯಾಯದ ಯಾತ್ರೆ ನಡೆಸುತ್ತಿದ್ದೇವೆ.

ಬಿಜೆಪಿಯ ಮಂದಿ ನಿಮ್ಮ ನಡುವೆ ಜಗಳ ಉಂಟುಮಾಡುತ್ತಾರೆ. ನೀವು ಜಗಳ ನಿರತರಾಗಿದ್ದ ಅದೇ ಹೊತ್ತಿನಲ್ಲಿ ನಿಮ್ಮ ಜೇಬಿನಿಂದ ಹಣ ಕದ್ದು ಅದಾನಿಯ ಜೇಬಿಗೆ ಹಾಕುತ್ತಾರೆ.

ಹೇಮಂತ ಸೊರೇನ್ ಅವರು ಇಂದು ವಿಧಾನಸಭೆಯಲ್ಲಿ ಬಹಳ ಮಾರ್ಮಿಕ ಮಾತನ್ನುಆಡಿದ್ದಾರೆ. “ನಾವು ಅರಣ್ಯದಿಂದ ಹೊರಬಂದೆವು. ಇವರ ಸಮಾನವಾಗಿ ಪಕ್ಕದಲ್ಲಿ ಕುಳಿತೆವು. ತಕ್ಷಣ ಇವರ ಬಟ್ಟೆ ಕೊಳಕಾಗಿ ಹೋಯಿತು” ಎಂದಿದ್ದಾರೆ. ಇದು ಕೇವಲ ಒಂದು ಹೇಳಿಕೆಯಲ್ಲ. ಇಡೀ ಆದಿವಾಸಿ ಸಮಾಜದ ಒಟ್ಟು ಯಾತನೆಯಾಗಿದೆ.

ಇಲ್ಲಿ ಒಬ್ಬ ಆದಿವಾಸಿ ಮುಖ್ಯಮಂತ್ರಿ ಇದ್ದಾರೆ. ಇದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಇಂದು ಇಡೀ ಜಾರ್ಖಂಡ ರಾಜ್ಯವು ದೇಶಕ್ಕೆ ಒಂದು ಸಂದೇಶ ನೀಡಿದೆ. ಅದೆಂದರೆ – ಜನರ ತಾಕತ್ತನ್ನು ಹೆದರಿಸಿ ಬಗ್ಗಿಸಲಾಗದು. ಇದು ಬಡವರು ಮತ್ತು ಆದಿವಾಸಿಗಳ ಒಗ್ಗಟ್ಟಿನ ವಿಜಯವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು”

ಶ್ರೀನಿವಾಸ ಕಾರ್ಕಳ, ಮಂಗಳೂರು

ಹಿಂದಿನ ದಿನದ ಯಾತ್ರೆ-ಭಾರತ್ ಜೋಡೋ ನ್ಯಾಯ ಯಾತ್ರೆ | 22 ನೆಯ ದಿನ

More articles

Latest article