ಬಿ.ಸಿ.ರೋಡ್ (ಮಂಗಳೂರು): ಬಿ.ಸಿ.ರೋಡ್ ನಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಿಸಲು ಸಂಘಪರಿವಾರದ ನಾಯಕರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ನಾಲಿಗೆ ಹರಿಬಿಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ. ನೇರವಾಗಿ ಕೋಮುಗಲಭೆಗೆ ಪ್ರಚೋದನೆ ನೀಡುವ ಮಾತಾಡಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿ.ಸಿ.ರೋಡ್ ಪ್ರಕರಣವನ್ನು ಉಲ್ಲೇಖಿಸಿ ‘ಯುದ್ದವನ್ನು ನಾವು ಯುದ್ದವಾಗಿ ಸ್ವೀಕರಿಸಿ ಉತ್ತರಿಸುತ್ತೇವೆ. ಯುದ್ದಕ್ಕೆ ಸವಾಲು ಹಾಕಿದಾಗ ಯುದ್ದದಿಂದಲೇ ಗೆಲ್ಲಬೇಕು. ನಾವು ಕತ್ತಿಯಿಂದಲೇ ಉತ್ತರ ಕೊಡುತ್ತೇವೆ. ಇಲ್ಲವಾದರೆ ನಮ್ಮ ದೇಶ ಬಾಂಗ್ಲಾ , ಪಾಕ್ ರೀತಿ ಆಗುತ್ತೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ.
ಬಿ.ಸಿ.ರೋಡ್ ನಲ್ಲಿ ಇಂದು ಅತ್ಯಂತ ಶಾಂತಿಯುತವಾಗಿ ಈದ್ ಮಿಲಾದ್ ಮೆರವಣಿಗೆ ನಡೆಯಿತು. ಆದರೆ ಮೆರವಣಿಗೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಲು ಕೆಲವು ಹಿಂದುತ್ವವಾದಿ ಸಂಘಟನೆಗಳು ಮೆರವಣಿಗೆ ನಡೆಸಲು ಮುಂದಾದವು. ಈ ಸಂದರ್ಭದಲ್ಲಿ ಪೊಲೀಸರು ತಡೆದರು.
ಕೆಲ ಕೋಮುವಾದಿ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ಶಾಂತವಾಗಿ ಇತ್ಯರ್ಥ ಮಾಡಿದ್ದಾರೆ. ಕೆಲವರ ಮಾತಿನಿಂದ ಉದ್ವೇಗಕ್ಕೊಳಗಾಗಿ ಈ ರೀತಿ ಘಟನೆ ನಡೆದಿದೆ. ಕೆಲ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಅತಿ ಕೋಮುವಾದ ಮನಸ್ಥಿತಿಯಿಂದ ಹೀಗಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿಂದು ಹೇಳಿಕೆ ನೀಡಿದ್ದಾರೆ.