ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮರಸ್ಯವನ್ನು ಕದಡುವ ದುಷ್ಟ ಶಕ್ತಿಗಳ ವಿರುದ್ಧ ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ಭಾರತದ ಪ್ರಜೆಗಳಾದ ಎಲ್ಲರ ಮೇಲೂ ಇದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ನವೆಂಬರ್ 26, ಭಾರತದ “ಸಂವಿಧಾನ ದಿನ”. ಸಂವಿಧಾನದ ಅಂತಿಮ ಕರಡಿಗೆ ಅಂಗೀಕಾರ ದೊರೆತು 75 ವರ್ಷಗಳು ತುಂಬಿದ ಸಂಭ್ರಮದ ದಿನ. ಜಗತ್ತಿನಲ್ಲೇ ನಮ್ಮದು ಸರ್ವಶ್ರೇಷ್ಠ ಸಂವಿಧಾನ ಎಂಬ ಹೆಮ್ಮೆ ಇದೆ. 1.45 ಲಕ್ಷ ಪದಗಳಿರುವ ಈ ಸಂವಿಧಾನವು ವಿಶ್ವದಲ್ಲೇ ಅತೀ ದೊಡ್ಡದಾದ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ಇದೆ. ಸರಿಸುಮಾರು ಮೂರು ವರ್ಷಗಳ ಕಾಲ 2,473 ತಿದ್ದುಪಡಿಗಳ ಮೂಲಕ ಅಂತಿಮ ರೂಪ ಪಡೆದ ಅದ್ಭುತ, ಅನನ್ಯ ಸಂವಿಧಾನವೆಂಬ ಸಾರ್ಥಕತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ರವರಂತಹ ಮಹಾ ಮೇಧಾವಿಯ ಮುಂದಾಳತ್ವದಲ್ಲಿ ಸಮಾನತೆಯ ಆಧಾರದಲ್ಲಿ ರಚಿತವಾದ ಈ ಸಂವಿಧಾನ ಶೋಷಿತರ ಧ್ವನಿಯಾಗಿ ಮೂಡಿಬಂದಿದೆ ಎಂಬುದು ಗಮನಾರ್ಹವಾಗಿದೆ.
ಭಾರತದ ಭಾಗ್ಯವಿಧಾತವಾದ, ಸಕಲ ಭಾರತೀಯರ ಪಾಲಿನ ಪರಮ ಪವಿತ್ರ ಗ್ರಂಥವಾಗಿರುವ ಸಂವಿಧಾನಕ್ಕೆ 75 ವರ್ಷ ತುಂಬಿದ ಸಂಭ್ರಮದ ಸಂದರ್ಭದಲ್ಲಿ ಸಂವಿಧಾನದ ಆಶಯಗಳು ಈಡೇರಿವೆಯಾ? ಸಂವಿಧಾನದ ಮೌಲ್ಯಗಳು ಅನುಷ್ಠಾನಗೊಂಡಿವೆಯಾ? ಸಂವಿಧಾನದ ಉದ್ದೇಶಗಳು ನಿಜಕ್ಕೂ ಜಾರಿಯಾಗಿವೆಯಾ? ಎಂಬುದರ ಕುರಿತು ಭಾರತೀಯರಾದ ನಾವು ಅವಲೋಕನ ಮಾಡಿಕೊಳ್ಳಲೇಬೇಕಿದೆ.
ವಿವಿಧ ನಂಬಿಕೆ ಆಚರಣೆಗಳಿರುವ, ವಿಭಿನ್ನ ಧರ್ಮ, ಜಾತಿ ಜನಾಂಗ ಸಮುದಾಯಗಳಿರುವ, ಅನೇಕ ಭಾಷೆ ಸಂಸ್ಕೃತಿಗಳನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಸಂವಿಧಾನವನ್ನು ರಚಿಸಿದ್ದೇ ಕ್ಲಿಷ್ಟಕರ ಸಾಧನೆ. ಅದನ್ನು ಜಾರಿಗೆ ತರುವುದಂತೂ ಅತ್ಯಂತ ಸವಾಲಿನ ಕೆಲಸ. ಆದರೂ ಕಳೆದ 75 ವರ್ಷಗಳಿಂದ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಈ ಬಹುತ್ವದ ದೇಶವನ್ನು ಈ ಸಂವಿಧಾನವು ನಿಯಂತ್ರಣದಲ್ಲಿಟ್ಟುಕೊಂಡು ಮನ್ನಡೆಸಿಕೊಂಡು ಹೋಗುತ್ತಿರುವುದೇ ಬಹು ದೊಡ್ಡ ಸಾಧನೆಯಾಗಿದೆ. ಈ ಸಾಧನೆಯ ಹಾದಿಯಲ್ಲಿ ಸಂವಿಧಾನದ ಆಶಯಗಳಿಗೆ ಹಿನ್ನಡೆಯಾಗಿದ್ದನ್ನು, ಸಂವಿಧಾನದ ಮೌಲ್ಯಗಳ ಅಪಮೌಲ್ಯೀಕರಣ ಆಗಿದ್ದನ್ನು ಮೌಲ್ಯಮಾಪನ ಮಾಡದೇ ಹೋದರೆ ಸಂವಿಧಾನ ಎನ್ನುವುದು ಕೇವಲ ತೋರಿಕೆಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಆಳುವ ವರ್ಗಗಳ ಅಧಿಕಾರಸ್ಥರಿಂದಲೇ ಸಂವಿಧಾನದ ಗುರಿ ಈಡೇರದೆ ಹೇಗೆಲ್ಲಾ ದಾರಿತಪ್ಪಿದೆ ಎಂಬುದರ ಆತ್ಮವಿಮರ್ಶೆ ನಡೆಯಬೇಕಿದೆ.
ಸಂವಿಧಾನದ ಕರ್ತೃ ಅಂಬೇಡ್ಕರ್ ರವರಿಗೂ ಇದೇ ಆತಂಕವಿತ್ತು. 1949 ಸೆಪ್ಟಂಬರ್ 17 ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಈ ಕುರಿತು ಸ್ಪಷ್ಟನೆಯನ್ನೂ ಕೊಟ್ಟಿದ್ದರು. “ಸಂವಿಧಾನದ ಉದ್ದೇಶ ಕೇವಲ ಪ್ರಭುತ್ವದ ಅಂಗಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಅಧಿಕಾರಸ್ಥರು ತಮ್ಮ ವ್ಯಾಪ್ತಿಯನ್ನು ಮೀರಿ ಶೋಷಣೆ ಹಾಗೂ ದಬ್ಬಾಳಿಕೆ ಮಾಡುವುದನ್ನು ತಡೆಯುವುದಾಗಿದೆ. ಪ್ರಭುತ್ವಕ್ಕೆ ಕಾನೂನಾತ್ಮಕ ಕಡಿವಾಣ ಹಾಕುವುದೇ ಸಂವಿಧಾನದ ಪ್ರಮುಖ ಉದ್ದೇಶವಾಗಿದೆ” ಎಂದು ಡಾ.ಅಂಬೇಡ್ಕರರು ಸ್ಪಷ್ಟವಾಗಿ ಹೇಳಿದ್ದರು. ಅಂಬೇಡ್ಕರರ ಈ ಹೇಳಿಕೆಯ ಹಿಂದೆ ಆಳುವ ವರ್ಗಗಳಿಂದಲೇ ಸಂವಿಧಾನದ ಉದ್ದೇಶ ಹಾಳಾಗಲು ಸಾಧ್ಯವೆಂಬ ಆತಂಕವಿತ್ತು. ಅವರು ವ್ಯಕ್ತಪಡಿಸಿದ ಆತಂಕ ಕಳೆದ 75 ವರ್ಷಗಳಲ್ಲಿ ನಿಜವಾಗುತ್ತಲೇ ಬಂದಿದೆ. ಅಧಿಕಾರಸ್ಥರು ತಮ್ಮ ಶೋಷಣೆ, ದಮನವನ್ನು ಸಂವಿಧಾನದ ಹೆಸರಲ್ಲಿ ಮುಂದುವರೆಸಿಕೊಂಡೇ ಬಂದಿದ್ದಾರೆ.
ಅಂಬೇಡ್ಕರ್ ರವರ ಸಂವಿಧಾನ ರಚನೆಯ ಹಿಂದಿರುವ ಉದ್ದೇಶವೇ “ಜನರನ್ನು ಅಧಿಕಾರಸ್ಥರ ನಿರಂಕುಶತ್ವದಿಂದ ರಕ್ಷಿಸುವುದಾಗಿತ್ತು. ಚುನಾಯಿತ ಸರಕಾರಗಳನ್ನು ಕಾನೂನಿನ ಪರಿಮಿತಿಯಲ್ಲಿ ನಿಯಂತ್ರಿಸುವುದಾಗಿತ್ತು. ಜನರ ಮೂಲಭೂತ ಹಕ್ಕುಗಳನ್ನು ಪ್ರಭುತ್ವದ ದಾಳಿಯಿಂದ ಕಾಪಾಡುವುದಾಗಿತ್ತು. ಪ್ರಭುತ್ವದ ಅಧಿಕಾರವನ್ನು ನಿಯಂತ್ರಿಸಿ ಕಾನೂನಿನ ಮೂಲಕ ಸಾಮಾಜಿಕ ಪರಿವರ್ತನೆ ಮಾಡುವ ಹಾಗೂ ಸಮುದಾಯಗಳ ನಡುವೆ ಸಾಮರಸ್ಯವನ್ನು ಹೊಂದುವುದಾಗಿತ್ತು.”
ಸಂವಿಧಾನದ ಈ ಎಲ್ಲಾ ಆಶಯಗಳು ಕಳೆದ 75 ವರ್ಷಗಳಲ್ಲಿ ಒಂದಿಷ್ಟಾದರೂ ಈಡೇರಿವೆಯಾ? ಎಂದು ಅವಲೋಕನ ಮಾಡಿದರೆ ದೊಡ್ಡದಾದ ನಿರಾಸೆ ಆಗುತ್ತದೆ. ಸಂವಿಧಾನದ ಉದ್ದೇಶಗಳಿಗೆ ವಿರುದ್ಧವಾದದ್ದೇ ನಡೆಯುತ್ತಾ ಬಂದಿರುವುದು ಸ್ಪಷ್ಟವಾಗುತ್ತಿದೆ. ಕಳೆದ ಒಂದು ದಶಕದಿಂದ ಪ್ರಭುತ್ವವೇ ಸಂವಿಧಾನದ ಮೇಲೆ ನಿಯಂತ್ರಣ ಸಾಧಿಸಲು ಸರ್ವ ಪ್ರಯತ್ನ ಮಾಡುತ್ತಿದೆ. ಸಮುದಾಯಗಳ ನಡುವೆ ಸಾಮರಸ್ಯವನ್ನು ಹಾಳುಮಾಡಲಾಗುತ್ತಿದೆ. ಸಾಮಾಜಿಕ ಪರಿವರ್ತನೆಯ ಕನಸು ಕನಸಾಗಿಯೇ ಉಳಿದಿದೆ. ಸಾಂವಿಧಾನಿಕ ಅಂಗಗಳು ಭ್ರಷ್ಟಗೊಂಡು ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುತ್ತಿವೆ. ಪ್ರಭುತ್ವದ ನಡೆ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಸಾಗುತ್ತಿರುವುದು ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ.
ಭಾರತದ ಸಂವಿಧಾನ ಪ್ರಮುಖವಾಗಿ ಮೂರು ಮುಖ್ಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅವು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ. ಆದರೆ ಈ ಮೌಲ್ಯಗಳೇ ಈಗ ಅಪಮೌಲ್ಯಗಳಿಗೆ ಒಳಗಾಗುತ್ತಿರುವುದು ವಿಪರ್ಯಾಸ. ಭಾರತೀಯರಿಗೆ ಬ್ರಿಟೀಷರಿಂದ ರಾಜಕೀಯ ಸ್ವಾತಂತ್ರ್ಯವೇನೋ ದೊರಕಿತು. ಆದರೆ ಈಗಲೂ ಭಾರತದ ಬಹುತೇಕ ಪ್ರಜೆಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ವಾತಂತ್ರ್ಯವನ್ನು ಪಡೆಯಲು ಹರಸಾಹಸ ಪಡುತ್ತಲೇ ಇದ್ದಾರೆ. ಏಳೂವರೆ ದಶಕಗಳು ಕಳೆದರೂ ಸಮಾನತೆ ಎನ್ನುವುದು ಈಗಲೂ ಗಗನ ಕುಸುಮವೇ ಆಗಿದೆ. ಜಾತಿ, ಲಿಂಗ, ವರ್ಗ ತಾರತಮ್ಯ ದೇಶಾದ್ಯಂತ ತಾಂಡವವಾಡುತ್ತಿದೆ. ಹೋಗಲಿ ಸಮುದಾಯಗಳ ನಡುವೆ ಸಾಮರಸ್ಯ ಹಾಗೂ ಸಹೋದರತ್ವವಾದರೂ ಉಳಿದಿದೆಯಾ? ಅದೂ ಸಹ ಮತಕೇಂದ್ರಿತ ಚುನಾವಣಾ ವ್ಯವಸ್ಥೆಯಲ್ಲಿ ಸರ್ವನಾಶವಾಗಿದೆ. ಸಮುದಾಯಗಳನ್ನು ಜಾತಿ ಧರ್ಮಗಳ ಆಧಾರದಲ್ಲಿ ಒಡೆದು ಸೌಹಾರ್ದತೆಯನ್ನು ನಾಶಮಾಡುವುದರಲ್ಲೇ ಆಳುವ ವರ್ಗಗಳು ತಮ್ಮ ಅಸ್ತಿತ್ವವನ್ನು ಕಾಣುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ಸಂವಿಧಾನ ಅದೆಷ್ಟೇ ಶ್ರೇಷ್ಠವಾಗಿದ್ದರೇನು? ಅದರ ಅನುಷ್ಠಾನದಲ್ಲೇ ಲೋಪಗಳಿರುವಾಗ ಎಂತಹ ಉದಾತ್ತ ಗುರಿ ಹೊಂದಿದ್ದರೇನು? ಸಂವಿಧಾನವನ್ನು ರಕ್ಷಿಸಬೇಕಾದ ಅಧಿಕಾರಸ್ಥರೇ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸುತ್ತಿರುವಾಗ ಎಂತಹ ಸಂವಿಧಾನವಿದ್ದರೂ ಪ್ರಯೋಜನವೇನು?
ಹೀಗಂತ ಸಂವಿಧಾನದಿಂದ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದೂ ತಪ್ಪಾಗುತ್ತದೆ. ಬಂಡವಾಳಶಾಹಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಪ್ರಭುತ್ವದ ಭ್ರಷ್ಟಾಚಾರ ಹಾಗೂ ದಮನಗಳಿಂದ ಜನರು ದಂಗೆ ಏಳದಂತೆ ನೋಡಿಕೊಳ್ಳಲು, ನಮ್ಮದೂ ಪ್ರಜಾಸತ್ತಾತ್ಮಕ ಜನತಂತ್ರ ಎಂದು ತೋರಿಸಿಕೊಳ್ಳಲು ಸಂವಿಧಾನವನ್ನು ಎಷ್ಟು ಬೇಕೋ ಅಷ್ಟು, ಹೇಗೆ ಬೇಕೋ ಹಾಗೆ ಬಳಸಲಾಗುತ್ತಿದೆ. ತೋಳಗಳ ಆಡಳಿತದಲ್ಲಿ ಅಸಂಖ್ಯಾತ ಅಸಹಾಯಕ ಕುರಿಗಳಿಗೂ ನ್ಯಾಯ ಕೇಳುವ ಹಕ್ಕನ್ನು ಕೊಡಲಾಗಿದೆ. ಆದರೆ ಮತ್ತೆ ಅಂತಿಮ ನ್ಯಾಯನಿರ್ಣಯ ತೋಳಗಳ ಪರವಾಗಿಯೇ ಬಹುತೇಕ ಸಂದರ್ಭದಲ್ಲಿ ಬರುವಂತೆ ನೋಡಿಕೊಳ್ಳಲಾಗಿದೆ. ಸಂವಿಧಾನವನ್ನು ಜಾರಿಗೆ ತರಲು ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳಿವೆ. ಆದರೆ ಅಧಿಕಾರಸ್ಥ ಶಾಸಕಾಂಗ ಕಾರ್ಯಾಂಗವನ್ನು ದುರುಪಯೋಗ ಪಡಿಸಿಕೊಂಡು ನ್ಯಾಯಾಂಗದ ಮೇಲೆ ನಿಯಂತ್ರಣ ಪಡೆಯಲು ಪ್ರಯತ್ನಿಸುತ್ತಲೇ ಇದೆ. ಕಾರ್ಯಾಂಗದ ಸಹಾಯದಿಂದ ನ್ಯಾಯಾಂಗವನ್ನೂ ದಾರಿ ತಪ್ಪಿಸುವ ಕೆಲಸವನ್ನು ಶಾಸಕಾಂಗ ಅವ್ಯಾಹತವಾಗಿ ಮಾಡಿಕೊಂಡೇ ಬಂದಿದೆ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತಲೇ ಉಳ್ಳವರು, ಅಧಿಕಾರಸ್ಥರು ಹೆಚ್ಚು ಸಮಾನರು ಎಂಬುದು ಸಾಬೀತಾಗುತ್ತಲೇ ಬಂದಿದೆ. ಎಲ್ಲೋ ಕೆಲವು ದಮನಕಾರಿ ಭ್ರಷ್ಟ ತೋಳಗಳಿಗೆ ಕನಿಷ್ಟ ಶಿಕ್ಷೆಯಾದರೂ ಕಾನೂನಿನ ಬಲೆಯಿಂದ ಹೇಗೆ ಪಾರಾಗಬೇಕು ಎನ್ನುವ ಕಲೆ ಆಳುವ ವರ್ಗಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಸಂವಿಧಾನ ಎನ್ನುವುದು ಹಲ್ಲಿದ್ದರೂ ಕಚ್ಚದೇ ಕೇವಲ ಬುಸುಗುಟ್ಟಿ ತನ್ನ ಅಸ್ತಿತ್ವವನ್ನು ಸಾರುವ ಸರ್ಪದಂತಾಗಿದೆ. ಅದನ್ನು ಪಳಗಿಸಿ ತಮ್ಮಿಚ್ಛೆಯಂತೆ ನಡೆಸಿಕೊಳ್ಳುವ ಕೆಲಸವನ್ನು ಆಳುವ ವರ್ಗಗಳು ನಿಷ್ಠೆಯಿಂದ ಮಾಡುತ್ತಿದ್ದಾರೆ. ಹೀಗಾಗಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಅಸಮಾನತೆ ಅತಿಯಾಗುತ್ತಿದೆ, ತಾರತಮ್ಯ ದೇಶದಾದ್ಯಂತ ತಾಂಡವವಾಡುತ್ತಿದೆ. ಕಾನೂನಾತ್ಮಕ ನ್ಯಾಯವೆಂಬುದು ತೋರಿಕೆಯದ್ದಾಗಿ ಬಹುಸಂಖ್ಯಾತ ಬಡವರಿಗೆ ಕೈಗೆಟುಕದಂತಾಗಿದೆ.
ಸಂವಿಧಾನದ ಅಡಿಯಲ್ಲಿ, ಈ ದೇಶದಲ್ಲಿ ಕಾನೂನುಗಳಿವೆ. ಉಲ್ಲಂಘಿಸಿದವರಿಗೆ ಶಿಕ್ಷೆಯೂ ಇದೆ. ಆದರೆ ಉಳ್ಳವರು ನುಣುಚಿಕೊಳ್ಳುವ ಮಾರ್ಗಗಳೂ ಬೇಕಾದಷ್ಟಿವೆ. ತನಿಖಾ ತಂಡಗಳು ಆಳುವವರ ಕೈಗೊಂಬೆಗಳಾಗಿವೆ. ನ್ಯಾಯನಿರ್ಣಯದಲ್ಲಾಗುವ ವಿಳಂಬ ಹಾಗೂ ಖರ್ಚುಗಳಿಂದಾಗಿ ಬಡವರು ಬೇಸತ್ತಿದ್ದರೆ, ಅದನ್ನೇ ಬಂಡವಾಳವಾಗಿಸಿಕೊಂಡ ಉಳ್ಳವರು ನ್ಯಾಯವನ್ನು ತಮ್ಮ ಪರವಾಗಿ ಬದಲಾಯಿಸಿಕೊಳ್ಳುತ್ತಾರೆ. ಏನೇ ಆದರೂ ಆಗಾಗ ಕಾನೂನುಗಳು ಕೆಲಸ ಮಾಡುತ್ತವೆ, ಸಂವಿಧಾನವೂ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳಲಾದರೂ ಅಪರೂಪಕ್ಕೆ ಶೋಷಕರಿಗೆ, ಭ್ರಷ್ಟರಿಗೆ, ದುಷ್ಟರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಿಕ್ಷೆಗಳು ಆಗುತ್ತವೆ. ಆದರೆ ಅವು ಅಪರೂಪ. ಬೇಟೆಗಾರರ ವಿರುದ್ಧ ಬೇಟೆ ದಾವೆ ಹೂಡಿ ಗೆಲ್ಲುವುದು ಅಪರೂಪದಲ್ಲಿ ಅಪರೂಪ. ಬೇಟೆಗಾರರೆಲ್ಲಾ ಸೇರಿ ಅಘೋಷಿತ ಪರ್ಯಾಯ ಸಂವಿಧಾನವನ್ನು ಜಾರಿಗೆ ತರುತ್ತಲೇ ಇರುತ್ತಾರೆ. ಬೇಟೆಯಾದವರಲ್ಲಿ ನ್ಯಾಯದ ಭರವಸೆಯನ್ನು ಬಿತ್ತುತ್ತಲೇ ತಮ್ಮ ವರ್ಗ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಾರೆ.
ವಿಪರ್ಯಾಸ ಏನೆಂದರೆ ಅಧಿಕಾರಸ್ಥರು ತಮ್ಮ ದಮನ ದೌರ್ಜನ್ಯ ಗಳಿಂದಾಗುವ ದುಷ್ಪರಿಣಾಮಗಳಿಗೆ ಸಂವಿಧಾನವನ್ನೇ ಗುರಾಣಿಯಾಗಿ ಬಳಸುತ್ತಾ ಬಂದಿದ್ದಾರೆ. ಶೋಷಕರ ವಿರುದ್ಧ ಶೋಷಿತರು ಮಾಡುವ ಪ್ರತಿ ದಾಳಿ, ಬಂಡಾಯ ಹಾಗೂ ದಂಗೆಗಳನ್ನು ಕಾನೂನು ಮತ್ತು ಸುವ್ಯವಸ್ಥೆಯ ಹೆಸರಲ್ಲಿ ದಮನಗೊಳಿಸಲಾಗುತ್ತದೆ. ವ್ಯವಸ್ಥೆಯನ್ನು ಪ್ರಶ್ನಿಸುವವರನ್ನೇ ಹತ್ತಿಕ್ಕಲಾಗುತ್ತದೆ. ಹೀಗೇ ಆಗಬಹುದು ಎಂಬುದು ಡಾ.ಅಂಬೇಡ್ಕರ್ ರವರ ಆತಂಕವಾಗಿತ್ತು. ಅಧಿಕಾರಸ್ಥರು ಮಾಡಬಹುದಾದ ಶೋಷಣೆ ದಬ್ಬಾಳಿಕೆಯನ್ನು ತಡೆಯುವುದೇ ಸಂವಿಧಾನದ ಮುಖ್ಯ ಉದ್ದೇಶ ಎಂದರು. ಆದರೆ ಕಳೆದ ಏಳೂವರೆ ದಶಕದಲ್ಲಿ ಅಂಬೇಡ್ಕರ್ ರವರ ಆಶಯವೇ ನಾಶವಾಗಿದೆ. ಅಧಿಕಾರಸ್ಥರೇ ಸಂವಿಧಾನವನ್ನು ನಿಯಂತ್ರಿಸುವಂತಾಗಿದೆ. ಸಂವಿಧಾನ ಅಪಾಯದಲ್ಲಿದೆ ಎಂಬ ಆತಂಕವನ್ನು ಹುಟ್ಟುಹಾಕಿದೆ.
ಸಂವಿಧಾನ ಅಪಾಯದಲ್ಲಿದೆ..
ಹೌದು, ಸಂವಿಧಾನ ಅಪಾಯದಲ್ಲಿದೆ ಎನ್ನುವ ಆತಂಕ ಕಳೆದೊಂದು ದಶಕದಲ್ಲಿ ಅಧಿಕವಾಗಿದೆ. ಸಂವಿಧಾನ ರಕ್ಷಣೆಯ ಕೂಗು ಕೇಳಿಬರುತ್ತಿದೆ. ಸನಾತನಿಗಳಿಂದ ಸಂವಿಧಾನ ಉಳಿಸಿ ಎನ್ನುವ ಆಗ್ರಹ ಹೆಚ್ಚಾಗುತ್ತಿದೆ. ಮನುವಾದಿ ಶಕ್ತಿಗಳು ಆಡಳಿತಾಧಿಕಾರವನ್ನು ಪಡೆದಿವೆ. ಸಂವಿಧಾನದ ಬದಲಾವಣೆಯೇ ತಮ್ಮ ಗುರಿ ಎಂದು ಹೇಳುತ್ತಿದ್ದಾರೆ. ಸಂವಿಧಾನದ ಪ್ರತಿಯನ್ನು ಸಾರ್ವಜನಿಕವಾಗಿ ಸುಡುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಈ ದೇಶವನ್ನು ಜಾತ್ಯತೀತ ಧರ್ಮನಿರಪೇಕ್ಷದ ಬದಲಾಗಿ ಹಿಂದೂರಾಷ್ಟ್ರವನ್ನಾಗಿ ಮಾಡಬೇಕೆಂಬ ಪ್ರಯತ್ನವನ್ನು ಹಿಂದುತ್ವವಾದಿ ವೈದಿಕಶಾಹಿ ಶಕ್ತಿಗಳು ಮಾಡುತ್ತಲೇ ಇವೆ. ಸರ್ವರಿಗೂ ಸಮಾನತೆ ಸಾರುವ ಹಾಲಿ ಸಂವಿಧಾನದ ಬದಲಾಗಿ, ಮನುಸ್ಮೃತಿ ಆಧರಿಸಿದ ವರ್ಣಾಶ್ರಮ ಪದ್ಧತಿಯ ಸಂವಿಧಾನವನ್ನು ಜಾರಿಗೆ ತರಬೇಕೆಂಬ ಕೂಗು ಸನಾತನಿಗಳು ಹಾಗೂ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾಗಿ ಸಮಾಜದಲ್ಲಿ ಮತಾಂಧತೆಯನ್ನು ಬಿತ್ತುವ, ಸಮೂಹಗಳ ನಡುವೆ ಧರ್ಮದ್ವೇಷವನ್ನು ಹರಡುವ, ಹಿಂದೂ ಹೆಸರಲ್ಲಿ ಹಿಂದುಳಿದ ದಲಿತ ಸಮುದಾಯಗಳನ್ನು ಅನ್ಯ ಧರ್ಮೀಯರ ಮೇಲೆ ಎತ್ತಿಕಟ್ಟುವ ತಂತ್ರಗಳು ಭರದಿಂದ ಸಾಗುತ್ತಿವೆ. ದೇಶವನ್ನು ಈಗ ಆಳುತ್ತಿರುವ ಸಂವಿಧಾನಕ್ಕೆ 75 ವರ್ಷ ತುಂಬಿದ ಸಂಭ್ರಮವನ್ನು ದೇಶಾದ್ಯಂತ ಆಚರಿಸಬೇಕಿತ್ತು, ಆಚರಿಸಲಿಲ್ಲ. ಈ ಸಂವಿಧಾನವನ್ನೇ ಬಳಸಿಕೊಂಡು ಅದನ್ನು ಬದಲಾಯಿಸಬೇಕೆನ್ನುವ ಗುರಿಯನ್ನು ಹೊಂದಿರುವವರಿಗೆ ಈ ಸಂಭ್ರಮ ಬೇಕಾಗಿಲ್ಲ.
ಇದಕ್ಕೆ ಪರ್ಯಾಯವಾಗಿ ಸಂವಿಧಾನವನ್ನು ರಕ್ಷಿಸಬೇಕೆನ್ನುವ ಧ್ವನಿಗಳೂ ಹೆಚ್ಚಾಗುತ್ತಿವೆ. ಪ್ರತೀ ಪಕ್ಷಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಸನಾತನಿಗಳ ಸುನಾಮಿ ಹೊಡೆತದಿಂದ ಪಾರಾಗಲು ಸಂವಿಧಾನ ರಕ್ಷಿಸಿಕೊಳ್ಳುವ ಅಗತ್ಯವಿದೆ. ಅಸಂಖ್ಯಾತ ದಲಿತ ದಮನಿತ ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ಅಸ್ತಿತ್ವ ಇರುವುದೇ ಈಗಿರುವ ಸಂವಿಧಾನದ ಉಳಿವಿನ ಮೇಲೆ. ಅಧಿಕಾರಸ್ಥರು ಸಂವಿಧಾನದ ಮೇಲೆ ನಿಯಂತ್ರಣ ಪಡೆದಿದ್ದರೂ ಸಂವಿಧಾನ ಜನರಿಗೆ ಕೊಟ್ಟಿರುವ ಸ್ವಾತಂತ್ರ್ಯ ಸಮಾನತೆ ಹಾಗೂ ಸಹೋದರತ್ವದ ಮೇಲೆ ಜನರಿಗೆ ವಿಶ್ವಾಸವಿದೆ. ಇಂದಲ್ಲಾ ನಾಳೆ ಈ ಆಶಯಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಸಂವಿಧಾನವನ್ನು ಕಾಪಾಡಿಕೊಳ್ಳಲು ಪ್ರಜ್ಞಾವಂತ ಜನಸಮುದಾಯ ಸನಾತನಿ ಶಕ್ತಿಗಳಿಗೆ ಪ್ರತಿರೋಧ ಒಡ್ಡುತ್ತಲೇ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಬಹುಮತ ಬರದಂತೆ ಜನತೆ ನೋಡಿಕೊಂಡಿದೆ. ಅಪೂರ್ವ ಬಹುಮತ ಕೊಟ್ಟರೆ ಸನಾತನಿಗಳ ಸರ್ವಾಧಿಕಾರ ಆರಂಭವಾಗಿ ಸಂವಿಧಾನ ಬದಲಾಗುತ್ತದೆ ಎಂಬ ಅರಿವೂ ಪ್ರಜ್ಞಾವಂತ ಮತದಾರರಿಗಿದೆ. ಎಲ್ಲರಿಗೂ ಸಮಾನತೆ ಕೊಡುವ ಆಶಯದ ಸಂವಿಧಾನವನ್ನು ಶತಾಯ ಗತಾಯ ಉಳಿಸಿಕೊಳ್ಳಲೇ ಬೇಕಿದೆ. ಸಂವಿಧಾನದ ಉಳಿಯುವಿಕೆಯಲ್ಲಿ ಈ ದೇಶದ ಬಹುಸಂಖ್ಯಾತರ ಆಶೋತ್ತರಗಳಿಗೆ ಉತ್ತರವಿದೆ. ಹೀಗಾಗಿ ಸಂವಿಧಾನ ಉಳಿಸಿ ಎನ್ನುವ ಕೂಗು ಜನಾಂದೋಲನವಾಗಬೇಕಿದೆ. ಸಂವಿಧಾನ ಬದಲಾವಣೆಯ ಪ್ರಯತ್ನಕ್ಕೆ ತೀವ್ರವಾದ ಪ್ರತಿರೋಧ ಜನರಿಂದಲೇ ಬರಬೇಕಿದೆ. ಇಲ್ಲಿಯವರೆಗೂ ಸಂವಿಧಾನದ ಆಶಯಗಳು ಈಡೇರದೇ ಇದ್ದರೂ ಇಂದಿಲ್ಲಾ ಮುಂದೆಂದಾದರೂ ಸರ್ವರಿಗೂ ಸ್ವಾತಂತ್ರ್ಯ ಸಮಾನತೆ ಸಿಗಬಹುದು ಎನ್ನುವ ನಿರೀಕ್ಷೆಯೇ ಸಂವಿಧಾನ ಪರವಾದ ಒಲವನ್ನು ಗಟ್ಟಿಗೊಳಿಸುತ್ತಿದೆ. ಮನುವಾದಿ ಆಶಯಗಳುಳ್ಳ ಹಿಂದುತ್ವವಾದಿ ಸಂವಿಧಾನಕ್ಕಿಂತಲೂ ಈಗಿರುವ ಸಂವಿಧಾನವೇ ಸಕಲ ಶೋಷಿತ ವರ್ಗಗಳಿಗೂ ಆಶಾಕಿರಣವಾಗಿದೆ. ಸಂವಿಧಾನವನ್ನು ಉಳಿಸುವ ಹಾಗೂ ಅದರ ಉದ್ದೇಶಗಳನ್ನು ಬದ್ಧತೆಯಿಂದ ಅನುಷ್ಠಾನಕ್ಕೆ ತರಲೇಬೇಕೆಂದು ಪ್ರಭುತ್ವವನ್ನು ಪ್ರಜೆಗಳು ಜನಾಂದೋಲನಗಳ ಮೂಲಕ ಎಚ್ಚರಿಸಬೇಕಿದೆ.
ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮರಸ್ಯವನ್ನು ಕದಡುವ ದುಷ್ಟ ಶಕ್ತಿಗಳ ವಿರುದ್ಧ ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ಭಾರತದ ಪ್ರಜೆಗಳಾದ ಎಲ್ಲರ ಮೇಲೂ ಇದೆ. ಸಂವಿಧಾನವನ್ನು ಕಾಪಾಡಿಕೊಂಡಷ್ಟೂ ಸಂವಿಧಾನ ಭಾರತೀಯರನ್ನು ರಕ್ಷಿಸುತ್ತದೆ. ಸಂವಿಧಾನದ ಉದ್ದೇಶಗಳು ಈಡೇರಿದರೆ ಭಾರತೀಯರು ಸುರಕ್ಷಿತರಾಗಿರುತ್ತಾರೆ. ದಮನ ದೌರ್ಜನ್ಯಗಳಿಂದ ಮುಕ್ತರಾಗುತ್ತಾರೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ನ್ಯಾಯಾಂಗದಲ್ಲಿ ಮನುವಾದಿಗಳು; ಸಂವಿಧಾನದ ಆಶಯಗಳೇ ಹಾಳು