ನವದೆಹಲಿ: ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಎಕ್ಸ್ ನಲ್ಲಿ ದೇಶದ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿರುವ ಅವರು ದೀನ ದಲಿತರ ಏಳಿಗೆಗಾಗಿ ಅಂಬೇಡ್ಕರ್ ಅವರು ಮಾಡಿದ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.
ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಸಾಮಾಜಿಕ ಬದಲಾವಣೆ ಮತ್ತು ನ್ಯಾಯದ ಪರ ಅವರ ವಿಚಾರಗಳಿಗೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಸಾಂವಿಧಾನಿಕ ಮೌಲ್ಯಗಳ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಪಕ್ಷ ಬದ್ಧವಾಗಿರುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿರುವ ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಬಾಬಾ ಸಾಹೇಬರ ಸಂವಿಧಾನವನ್ನು ರಕ್ಷಣೆ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಬಾಬಾ ಸಾಹೇಬರ ಅವಿರತ ಪ್ರಯತ್ನದಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ ಮತ್ತು ಮಾನವ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನವೊಂದು ಸಿಕ್ಕಿದೆ. ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ರಕ್ಷಣಾ ಗುರಾಣಿಯಾಗಿದ್ದು, ಇಂದು ಈ ರಕ್ಷಣಾ ಗುರಾಣಿಯನ್ನು ಮುರಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.