Saturday, July 27, 2024

ಬೋಜೇಗೌಡರೇ ನೀವು ಸೆಕ್ಯುಲರ್ ಆದ್ರೆ ಈ ಕಡೆ ಬನ್ನಿ, ಕೋಮುವಾದಿಯಾಗಿದ್ದರೆ ಅಲ್ಲೇ ಇರಿ: ಸಿ.ಎಂ

Most read

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಕುಟುಕಿದರು.

ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವ ವೇಳೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನ ರಾಷ್ಟ್ರೀಯವಾದಿ ಹೋರಾಟ ಮತ್ತು ಚಳವಳಿಯ ಚರಿತ್ರೆಯನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದವರು, ಹುತಾತ್ಮರಾದವರು, ಬ್ರಿಟಿಷರಿಂದ ಹಿಂಸೆ ಅನುಭವಿಸಿದವರು ಕಾಂಗ್ರೆಸ್ಸಿನವರು. ಬಿಜೆಪಿ ಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೇ ಇಲ್ಲ. ಅವರು ದೇಶಕ್ಕಾಗಿ ಹೋರಾಡಿದ ಚರಿತ್ರೆಯೇ ಇಲ್ಲ. ನಮ್ಮ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಗ ಇವರು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಭಾರತದ ಇತಿಹಾಸ ಮತ್ತು ಚರಿತ್ರೆಯಲ್ಲಿ ಯಾರು ನಿಜವಾದ ರಾಷ್ಟ್ರೀಯವಾದಿಗಳು ಎನ್ನುವುದು ದಾಖಲಾಗಿದೆ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ನ ದಾಖಲೆ, ಸಾಧನೆಗಳನ್ನು ಮುಖ್ಯಮಂತ್ರಿಗಳು ಪರಿಷತ್ ನಲ್ಲಿ ವಿವರವಾಗಿ ಹೇಳುವಾಗ ಜೆಡಿಎಸ್ ನ ಸದಸ್ಯ ಬೋಜೇಗೌಡರು ಮಧ್ಯ ಪ್ರವೇಶಿಸಿ ಏನನ್ನೋ ಹೇಳಲು ಮುಂದಾದರು.

ಈ ವೇಳೆ ಮುಖ್ಯಮಂತ್ರಿಗಳು ತಮ್ಮ ಮಾಮೂಲು ಹಾಸ್ಯದ ಶೈಲಿಯಲ್ಲಿ “ಬೋಜೇಗೌಡರೇ ನೀವು ಸೆಕ್ಯುಲರ್ ಆದ್ರೆ ಈ ಕಡೆ ಬನ್ನಿ. ಕೋಮುವಾದಿಯಾಗಿದ್ದರೆ ಅಲ್ಲೇ ಇರಿ ಎಂದರು.

ಮುಖ್ಯಮಂತ್ರಿಗಳ ಮಾತನ್ನು ಗೌರವದಿಂದ ಸ್ವೀಕರಿಸಿದ ಬೋಜೇಗೌಡರು ಸಿಎಂ ಗೆ ಕೈ ಮುಗಿದು ಕುಳಿತರು.

ಸಂಪಾದಕೀಯಗಳ ಶ್ಲಾಘನೆ

ರಾಜ್ಯಪಾಲರ ಭಾಷಣವನ್ನು ಮೆಚ್ಚಿ ವಿಶ್ಲೇಷಣೆ ಮಾಡಿ ಬರೆದ ನಾಡಿದ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳು ಮತ್ತು ವರದಿಗಳನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿ ರಾಜ್ಯಪಾಲರ ಭಾಷಣವನ್ನು ಸುಳ್ಳು ಎಂದು ಆರೋಪಿಸಿದ್ದ ಬಿಜೆಪಿ-ಜೆಡಿಎಸ್ ಸದಸ್ಯರ ಮಾತಿಗೆ ಕನ್ನಡಿ ಹಿಡಿದರು.

ನಿಮ್ಮ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ

ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಭರ್ಜರಿಯಾಗಿ ಜಯಗಳಿಸಿದ ಪುಟ್ಟಣ್ಣ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 5 ನೇ ಬಾರಿಗೆ ಪುಟ್ಟಣ್ಣ ಪರಿಷತ್ ಪ್ರವೇಶಿಸಿದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, “ಸಭಾಧ್ಯಕ್ಷರೇ ನೀವು ಎಂಟು ಬಾರಿ ಗೆಲುವು ಸಾಧಿಸಿದ್ದೀರಿ. ನಿಮ್ಮ ದಾಖಲೆಯನ್ನು ಸದ್ಯಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ” ಎಂದು ಹೊರಟ್ಟಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

More articles

Latest article