ಸಮೋಸಾ ಕಾಣೆಯಾಗಿದ್ದಕ್ಕೆ ಸಿಐಡಿ ತನಿಖೆ?

Most read

ಶಿಮ್ಲಾ: ಮುಖ್ಯಮಂತ್ರಿಗಳಿಗಾಗಿ ತರಿಸಿದ್ದ ‘ಸಮೋಸಾ’ ಕಣ್ಮರೆಯಾಗಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ ಎಂಬ ವಿಚಾರವು ಹಿಮಾಚಲ ಪ್ರದೇಶ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದ ಸ್ಫೋಟಗೊಳ್ಳುತ್ತಿದ್ದಂತೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸ್ಪಷ್ಟನೆ ನೀಡಿದ್ದಾರೆ.


ಅ.21ರಂದು ಇಲ್ಲಿನ ಸಿಐಡಿ ಕೇಂದ್ರ ಕಚೇರಿಗೆ ಸಿಎಂ ಸುಖವೀಂದರ್ ಸಿಂಗ್ ಭೇಟಿ ನೀಡಿದ್ದರು. ಈ ವೇಳೆ ಅವರಿಗಾಗಿ ತರಿಸಿದ್ದ ಸಮೋಸಾ ಮತ್ತು ಕೇಕ್ ಬಾಕ್ಸ್ ಕಾಣೆಯಾಗಿತ್ತು. ಈ ಕ್ಷುಲ್ಲಕ ವಿಚಾರದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ ಎಂಬುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಖು, ಅಂತಹ ಯಾವುದೇ ಘಟನೆ ನಡೆದಿಲ್ಲ. ಸಮೋಸಾವನ್ನು ನಮ್ಮ ಸಿಬ್ಬಂದಿಗೆ ಹಂಚಲಾಗಿತ್ತು. ಸಿಐಡಿ ತನಿಖೆಯು ಅನುಚಿತ ವರ್ತನೆ ಸಂಬಂಧಿಸಿದ್ದಾಗಿದೆಯೇ ವಿನಃ ಸಮೋಸಾದ ಬಗ್ಗೆ ಅಲ್ಲ. ಆದರೆ, ಮಾಧ್ಯಮಗಳು ಸಮೋಸಾದ ಬಗ್ಗೆ ಸುದ್ದಿ ಮಾಡುತ್ತಿವೆ ಎಂದು ಕಿಡಿಕಾರಿದರು.


ಸಿಐಡಿ ಉಪ ನಿರ್ದೇಶಕ ಸಂಜೀವ್ ರಂಜನ್ ಒಜಾ ಸ್ಪಷ್ಟನೆ ನೀಡಿ ಇದು ಸಂಪೂರ್ಣವಾಗಿ ಸಿಐಡಿಯ ಆಂತರಿಕ ವಿಷಯವಾಗಿದ್ದು, ರಾಜಕೀಯಗೊಳಿಸಬಾರದು. ಯಾರಿಗೂ ನೋಟಿಸ್ ನೀಡಿಲ್ಲ. ಅಲ್ಲಿ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಮಾತ್ರ ಹೇಳಿದ್ದೇವೆ. ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂಬ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದರು. ಈ ಮಧ್ಯೆ ಸಮೋಸಾ ವಿಚಾರಕ್ಕೆ ಸಿಐಡಿ ತನಿಖೆ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿಮ್ಲಾದಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ.
ಕ್ಷುಲ್ಲಕ ವಿಚಾರಗಳಿಗೆ ಪೊಲೀಸರು ತಮ್ಮ ಸಮಯ ಹಾಳು ಮಾಡುವ ಬದಲು, ಮುಖ್ಯಮಂತ್ರಿಯಿಂದ ಕಾರ್ಯದರ್ಶಿವರೆಗೆ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸತ್ಪಾಲ್ ಸತ್ತಿ ಟೀಕಿಸಿದ್ದಾರೆ.

More articles

Latest article