ಒಂದು ವೇಳೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡದೇ ಕೇವಲ ವರದಿ ನೀಡಲು ಎಸ್ಐಟಿ ನೇಮಿಸಿದ್ದರೆ ಅದರ ಕಾರ್ಯಸ್ಥಗಿತವನ್ನು ಸರ್ಕಾರ ಸಮರ್ಥಿಸಬಹುದಿತ್ತು. ಆದರೆ, ಎಸ್ಐಟಿಗೆ ಎಫ್ಐಆರ್ ದಾಖಲಿಸಿ ಚಾರ್ಜ್ ಶೀಟ್ ಹಾಕುವ ಅಧಿಕಾರ ನೀಡಿದ ಮೇಲೆ ಎಸ್ಐಟಿ ತನಿಖೆಯನ್ನು ಸರ್ಕಾರ ತಡೆಯುವಂತಿಲ್ಲ -ನವೀನ್ ಸೂರಿಂಜೆ, ಪತ್ರಕರ್ತರು.
– ಅಸ್ತಿಪಂಜರಕ್ಕೂ ಎಸ್ಐಟಿಗೂ ಸಂಬಂಧವೇ ಇಲ್ಲ !
– ಎಸ್ಐಟಿ ರಚನೆ ಆದೇಶವನ್ನೇ ಓದದ ಡಿಸಿಎಂ, ಮಂತ್ರಿಗಳು !
ಧರ್ಮಸ್ಥಳದ ಕುರಿತು ವಿಧಾನಸಭೆಯಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಒಂದೇ ಧ್ವನಿಯಲ್ಲಿ ಜನ ವಿರೋಧಿ ನಿಲುವು ತಾಳಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರ ಜೊತೆಗೆಯೇ ಸರ್ಕಾರ ಬಯಸಿದ್ದಲ್ಲಿ ‘ಎಸ್ಐಟಿ ಕ್ಲೋಸ್’ ಮಾಡಿಸಬಹುದೇ ಎಂಬ ಆತಂಕ ಜನರ ಮಧ್ಯೆ ಇದೆ. ಹಾಗೆ ಎಸ್ಐಟಿಯನ್ನು ಸರ್ಕಾರ ಅವರಿಗಿಷ್ಟ ಬಂದ ರೀತಿಯಲ್ಲಿ ಕ್ಲೋಸ್ ಮಾಡಿಸಬಹುದಾ ? ಕಾನೂನು ಏನು ಹೇಳುತ್ತದೆ ? ಎಸ್ಐಟಿ ರಚನೆ ಸಂಬಂಧ ಸರ್ಕಾರ ಹೊರಡಿಸಿದ್ದ ಎರಡು ಆದೇಶದಲ್ಲಿ ಏನಿದೆ ? ಹಾಗಿದ್ದರೂ ಪ್ರಭಾವಕ್ಕೊಳಗಾಗಿ ಎಸ್ಐಟಿ ಕ್ಲೋಸ್ ಮಾಡಿದರೆ ಸಿಎಂ, ಗೃಹ ಸಚಿವರು ಕಾನೂನಿನ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಡಿ ಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಸಚಿವರಿಗೆ ಅರಿವಿರಬೇಕು. ಅದಕ್ಕಾಗಿ ಅವರುಗಳು ಕರ್ನಾಟಕ ರಾಜ್ಯ ಸರ್ಕಾರವೇ ಹೊರಡಿಸಿದ ಆದೇಶಗಳನ್ನು ಓದಬೇಕು.
ಮೊದಲನೆಯದಾಗಿ ಹಿರಿಯ ಪ್ರಾಮಾಣಿಕ, ದಕ್ಷ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಸರ್ಕಾರವು 19.07.2025 ರಂದು ಎಸ್ಐಟಿ ರಚಿಸಿದ್ದು ಮೂಳೆ ಹುಡುಕಲು, ಗುಡ್ಡ ಅಗೆಯಲು ಅಲ್ಲ. ನೆಲ ಅಗೆದು ತನಿಖೆ ಮಾಡಿ ಎಂದು ಆದೇಶದಲ್ಲಿ ಹೇಳಲಾಗಿಲ್ಲ. ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವು, ಅತ್ಯಾಚಾರ, ದೌರ್ಜನ್ಯ, ನೂರಾರು ನಾಪತ್ತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ಎಸ್ಐಟಿ ರಚಿಸಿ ಆದೇಶ ಹೊರಡಿಸಿದೆ. ಎಸ್ಐಟಿ ರಚನೆ ಆದೇಶದ ಯಥಾವತ್ತು ಹೀಗಿದೆ:
‘ಕರ್ನಾಟಕ ರಾಜ್ಯ ಮಹಿಳಾ ಆಯೋಗ ರವರ ಪತ್ರದಲ್ಲಿ ಧರ್ಮಸ್ಥಳದ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ದಿನಾಂಕ: 12-07-2025ರಂದು ಟೈಮ್ಸ್ ನೌ ಮತ್ತಿತರ ಮಾಧ್ಯಮಗಳು ಮನುಷ್ಯರೊಬ್ಬರ ತಲೆಬುರುಡೆ ದೊರಕಿದ ಬಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯ ವರದಿ ಪ್ರಸಾರವಾಗಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಮಾಧ್ಯಮ ವರದಿ ಮತ್ತು ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ಹಲವು ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಬಗ್ಗೆ ತಿಳಿಸಲಾಗಿದೆ. ಹಾಗಾಗಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸುವಂತೆ ಕೋರಿರುತ್ತಾರೆ. ಮೇಲೆ ಓದಲಾದ (2)ರಂತ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ರವರ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ), ಬಿ.ಎನ್.ಎಸ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಒಂದು ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ’ ಎಂದು ಬರೆಯಲಾಗಿದೆ.
ಮುಂದುವರೆದು, ‘ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ / ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿ ರವರು ಈ ವಿಶೇಷ ತನಿಖಾ ತಂಡ (Special Investigation Team) ಕ್ಕೆ ವರ್ಗಾಯಿಸುವುದು ಹಾಗೂ ವಿಶೇಷ ತನಿಖಾ ತಂಡಕ್ಕೆ ಅವಶ್ಯವಿರುವ ಇತರೆ ಅಧಿಕಾರಿ/ಸಿಬ್ಬಂದಿಗಳನ್ನು ಒದಗಿಸುವುದು. ಈ ವಿಶೇಷ ತನಿಖಾ ತಂಡವು (Special Investigation Team) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು. ವಿಶೇಷ ತನಿಖಾ ತಂಡವು ತನಿಖೆಗೆ ಸಂಬಂಧಿಸಿದ ತನಿಖಾ ಪ್ರಗತಿಯನ್ನು ಆಗಿಂದಾಗ ಡಿಜಿ ಮತ್ತು ಐಜಿಪಿ ರವರಿಗೆ ವರದಿ ಮಾಡುವುದು.
ವಿಶೇಷ ತನಿಖಾ ತಂಡವು ಮೇಲ್ಕಂಡಂತೆ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಮಹಾ ನಿರ್ದೇಶಕರು ಹಾಗೂ ಅರಕ್ಷಕ ಮಹಾನಿರೀಕ್ಷಕರು, ಬೆಂಗಳೂರು ರವರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು’ ಎಂದು ಎಸ್ಐಟಿಗೆ ಆದೇಶಿಸಲಾಗಿದೆ.
ಸರ್ಕಾರದ ಈ ಆದೇಶದಲ್ಲಿ ‘ನೆಲ ಅಗೆಯುವುದು/ಉತ್ಖನನ ನಡೆಸುವುದು’ ಎಂಬ ಪದಗಳು ಎಲ್ಲಿದೆ ? ನೂರಾರು ಮಹಿಳೆಯರ ನಾಪತ್ತೆ, ಅತ್ಯಾಚಾರ ತನಿಖೆಗೆ ಗುಂಡಿ ಅಗೆಯಬೇಕೇ ? ಗುಂಡಿ ಅಗೆದು ಅಸ್ತಿಪಂಜರ ಹುಡುಕುವುದು ಇಡೀ ತನಿಖಾ ಪ್ರಕ್ರಿಯೆಯಲ್ಲಿ ಒಂದು ಸಣ್ಣ ಭಾಗ ಮಾತ್ರ ! ಉಳಿದಂತೆ ನಾಪತ್ತೆ ಅತ್ಯಾಚಾರ ಕೊಲೆ ಪ್ರಕರಣಗಳ ಪೊಲೀಸ್ ತನಿಖೆಗೆ ಅದರದ್ದೇ ಆದ ದೀರ್ಘ ಮಾದರಿಗಳಿವೆ. ಅದನ್ನು ಎಸ್ಐಟಿ ಪೊಲೀಸರು ನಿರ್ವಹಿಸುತ್ತಾರೆ. ಅಸ್ತಿಪಂಜರಕ್ಕೂ ನಾಪತ್ತೆಗೂ, ಅತ್ಯಾಚಾರಕ್ಕೂ ಸಂಬಂಧವಿಲ್ಲ. ಅಲ್ಲದೆ, ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಎಲ್ಲಾ ಅಸಹಜ ಸಾವು (UDR) ಮತ್ತು ನಾಪತ್ತೆ ಪ್ರಕರಣಗಳು, ಸಾರ್ವಜನಿಕರು ನೀಡುವ ಕೊಲೆ, ಸಾವು ಕೇಸುಗಳನ್ನು ಮಾತ್ರವಲ್ಲ, ಈ ಸಂಬಂಧ ಇಡೀ ರಾಜ್ಯದ ಯಾವುದೇ ಠಾಣೆಯಲ್ಲಿ ಪ್ರಕರಣ, ದೂರು ದಾಖಲಾಗಿದ್ದರೂ ಅದನ್ನು ಎಸ್ಐಟಿ ತನಿಖೆ ಮಾಡಬೇಕಿದೆ. ಅದು ಎಸ್ಐಟಿ ರಚನೆಯ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಎಸ್ಐಟಿ ಆದೇಶದ ಪ್ರಕಾರ 2005 ರಿಂದ 2025 ರವರೆಗೆ ಅಸ್ವಾಭಾವಿಕ ಸಾವುಗಳ ಬಗ್ಗೆ ತನಿಖೆ ನಡೆಸಬೇಕಿದೆ. ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನೂರಾರು ಅಸ್ವಾಭಾವಿಕ ಸಾವುಗಳ ಯುಡಿಆರ್ ದಾಖಲಾಗಿದೆ. ಅಷ್ಟೂ ಯುಡಿಆರ್ ಗಳ ಪ್ರತ್ಯೇಕ ತನಿಖೆಯನ್ನು ಎಸ್ಐಟಿ ಮಾಡಬೇಕಿದೆ. ಇದು ಸರ್ಕಾರ ಎಸ್ಐಟಿ ರಚನೆ ಸಂಬಂಧ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿದೆ.
ದಿನಾಂಕ 06.08.2025 ರಂದು ಎಸ್ಐಟಿಗೆ ರಾಜ್ಯ ಸರ್ಕಾರವು “ಪೊಲೀಸ್ ಠಾಣೆ” ಸ್ಥಾನಮಾನ ನೀಡಿದೆ. ಒಂದು ವೇಳೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡದೇ ಕೇವಲ ವರದಿ ನೀಡಲು ಎಸ್ಐಟಿ ನೇಮಿಸಿದ್ದರೆ ಅದರ ಕಾರ್ಯಸ್ಥಗಿತವನ್ನು ಸರ್ಕಾರ ಸಮರ್ಥಿಸಬಹುದಿತ್ತು. ಆದರೆ, ಎಸ್ಐಟಿಗೆ ಎಫ್ಐಆರ್ ದಾಖಲಿಸಿ ಚಾರ್ಜ್ ಶೀಟ್ ಹಾಕುವ ಅಧಿಕಾರ ನೀಡಿದ ಮೇಲೆ ಎಸ್ಐಟಿ ತನಿಖೆಯನ್ನು ಸರ್ಕಾರ ತಡೆಯುವಂತಿಲ್ಲ. ದೂರುದಾರ/ಅಪ್ರೂವರ್ ನೀಡಿರುವ ಮಾಹಿತಿ, ನ್ಯಾಯಾಲಯದಲ್ಲಿ ದಾಖಲಿಸಿರುವ ಹೇಳಿಕೆಯ ಪ್ರತೀ ಘಟನೆಗಳು, ಪ್ರತೀ ಹೂತಿಟ್ಟ ಪ್ರಕರಣಗಳನ್ನು ಎಸ್ಐಟಿ ವಿಚಾರಣೆ ನಡೆಸಿ ಒಂದೋ ಚಾರ್ಜ್ ಶೀಟ್ ಹಾಕಬೇಕು ಅಥವಾ ಬಿ ರಿಪೋರ್ಟ್ ಹಾಕಬೇಕು ಅಥವಾ ಪತ್ತೆಯಾಗದ ಪ್ರಕರಣ ಎಂದು ಸಿ ರಿಪೋರ್ಟ್ ಹಾಕಬೇಕು. ಇದನ್ನು ತಡೆಯಲು ಆರೋಪಿಗಳು ಹೈಕೋರ್ಟ್/ಸುಪ್ರೀಂ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರಬಹುದೇ ಹೊರತು ಸರ್ಕಾರ ತಡೆ ಮಾಡಲು ಸಾಧ್ಯವಿಲ್ಲ.
ಹಾಗೊಂದು ವೇಳೆ ಎಸ್ಐಟಿ ತನಿಖೆಯನ್ನು ತಡೆ ಹಿಡಿಯುವುದು, ಚಾರ್ಜ್ ಶೀಟ್/ ಬಿ ರಿಪೋರ್ಟ್/ ಸಿ ರಿಪೋರ್ಟ್ ದಾಖಲಿಸಲು ಯಾರಾದರೂ ಆದೇಶ ನೀಡಿದರೆ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಲ್ಲಾ ಅವಕಾಶಗಳು ಎಸ್ಐಟಿಯಲ್ಲಿ ಈಗಾಗಲೇ ದೂರುದಾರರಾಗಿರುವ ಹಲವು ವ್ಯಕ್ತಿಗಳಿಗಿದೆ. ಜೆಎಂಎಫ್ ಸಿ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಯಾವುದೇ ಪ್ರಕರಣದಲ್ಲಿ ಚಾರ್ಜ್ ಶೀಟ್/ಬಿ ರಿಪೋರ್ಟ್/ ಸಿ ರಿಪೋರ್ಟ್ ಹಾಕಿ ಅಥವಾ ಹಾಕಬೇಡಿ ಎಂದು ತನಿಖಾಧಿಕಾರಿಗೆ ಹೇಳುವ ಅಧಿಕಾರ ಯಾವ ನ್ಯಾಯಾಧೀಶ/ ನ್ಯಾಯಮೂರ್ತಿಗೂ ಇರುವುದಿಲ್ಲ. ಅದು ತನಿಖಾಧಿಕಾರಿಯ ಪರಮಾಧಿಕಾರ. ತನಿಖಾಧಿಕಾರಿಯ ಅಂತಹ ಯಾವುದೇ ವರದಿಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಬಹುದು ಅಥವಾ ರದ್ದು ಮಾಡಬಹುದು ಅಥವಾ ಖುಲಾಸೆಗೊಳಿಸಬಹುದು. ಹಾಗಾಗಿ ಎಸ್ಐಟಿ ತನಿಖೆಯನ್ನು ಆರೋಪಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ, ರದ್ದು, ಖುಲಾಸೆ ಆದೇಶ ತರುವವರೆಗೂ ಎಸ್ಐಟಿ ತನಿಖೆಯನ್ನು ಯಾರೂ ತಡೆಯಲಾಗದು !
ಇನ್ನೂ ಸರಳವಾಗಿ ಹೇಳುವುದಾದರೆ, ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿರುತ್ತದೆ. ಆ ಕೊಲೆಯನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ಠಾಣೆಯನ್ನೇ ಸರ್ಕಾರ ಬರ್ಕಾಸ್ತುಗೊಳಿಸಿದರೆ ಹೇಗಿರುತ್ತದೆ ? ಆ ಪೊಲೀಸ್ ಠಾಣೆಯ ವಿಚಾರಣೆಯಲ್ಲಿ ಲೋಪವಾಗಿದೆ ಅಥವಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಪ್ಪೆಸಗಿದ್ದರೆ ಮಾತ್ರ ಆ ಪೊಲೀಸ್ ಅಧಿಕಾರಿಯನ್ನು ಬದಲಿಸಬಹುದೇ ಹೊರತು ಇಡೀ ಪೊಲೀಸ್ ಠಾಣೆಯನ್ನೇ ಬರ್ಕಾಸ್ತುಗೊಳಿಸುವ ಉಗ್ರ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವಂತಿಲ್ಲ. ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳುವ ನೈತಿಕ, ಕಾನೂನಾತ್ಮಕ ಅಧಿಕಾರ ಇರುವುದು ದೂರುದಾರರಿಗೆ ಮಾತ್ರ ! ದೂರುದಾರರು ತನಿಖೆಯ ಬಗ್ಗೆ ಆರೋಪಿಸುವವರೆಗೂ ಪ್ರಕರಣವನ್ನು ಸರ್ಕಾರ ಬೇರೆಡೆ ವರ್ಗಾಯಿಸುವಂತಿಲ್ಲ. ಆರೋಪಿಗಳಿಗೆ ಬೇಕಾದ ಕಡೆ ತನಿಖೆ ನಡೆಸುವಂತೆ ಸರ್ಕಾರ ವ್ಯವಸ್ಥೆ ಮಾಡಿಕೊಡುವುದು ಅಪರಾಧವಾಗುತ್ತದೆ. ಹಾಗಾಗಿ ಕೂಡಾ ಎಸ್ಐಟಿ ಕ್ಲೋಸ್ ಮಾಡಲು ಸರ್ಕಾರಕ್ಕೆ ಯಾವ ದಾರಿಯೂ ಇಲ್ಲ. ಇಷ್ಟಾದರೂ ಕ್ಲೋಸ್ ಮಾಡಿದರೆ ಈ ದೇಶದ ಕಾನೂನು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ತನಿಖೆಯನ್ನು ‘ಹೀಗೇ ಮಾಡಿ’ ಎಂದು ತನಿಖಾಧಿಕಾರಿಗೆ ನಿರ್ದೇಶಿಸಲು ಸರ್ಕಾರ ಅಥವಾ ಸದನಕ್ಕೆ ಅಧಿಕಾರವಿಲ್ಲ. ಸರ್ಕಾರದ ಎಸ್ಐಟಿ ರಚನೆಯ ಆಧಾರದಲ್ಲಿ ತನಿಖಾಧಿಕಾರಿಯು ಪೊಲೀಸ್ ಮ್ಯಾನುವಲ್, ಬಿಎನ್ಎಸ್ಎಸ್(ಸಿಆರ್ಪಿಸಿ), ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್, ಹೈಕೋರ್ಟ್ ಗೈಡ್ ಲೈನ್ಸ್, ಎನ್ಎಚ್ಆರ್ಸಿ ಗೈಡ್ ಲೈನ್ಸ್ ಪ್ರಕಾರವೇ ವಿಚಾರಣೆ ನಡೆಸಬೇಕು. ಎಸ್ಐಟಿಗೆ ಇರುವ ಆದೇಶದ ಪ್ರಕಾರ ನೂರಾರು ನಾಪತ್ತೆ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳು ‘ಪೊಲೀಸ್ ಮಾದರಿ’ಯ ತನಿಖೆಗೆ ಒಳಪಡುತ್ತವೆ. ಅದರಲ್ಲಿ ಸಿಎಂ, ಗೃಹ ಸಚಿವರು ಮಧ್ಯಪ್ರವೇಶ ಮಾಡುವುದು ಅಪರಾಧವಾಗುತ್ತದೆ.
ಯಾವುದೇ ಕೊಲೆ, ಅತ್ಯಾಚಾರ ಅಥವಾ ಕ್ರಿಮಿನಲ್ ಪ್ರಕರಣದಲ್ಲಿ ಸರ್ಕಾರ ತಟಸ್ಥವಾಗಿರಬೇಕು. ಸರ್ಕಾರಿ ವಕೀಲರು ಕೂಡಾ ನಿಷ್ಪಕ್ಷಪಾತವಾಗಿರಬೇಕು ಎಂದು ಕೋರ್ಟ್ ಆಫ್ ಲಾ ಹೇಳುತ್ತದೆ. ಹಾಗಾಗಿ ಸರ್ಕಾರ ದೂರುದಾರ ಅಥವಾ ಆರೋಪಿ ಪರವಾಗಿ ಇರಕೂಡದು. ‘ಎಸ್ಐಟಿಯನ್ನು ರಚನೆ ಮಾಡಿರುವುದೇ ಪೂಜ್ಯರನ್ನು ಆಪಾದನೆಯಿಂದ ಹೊರತರಲು’ ಎಂದು ಖುದ್ದು ಗೃಹ ಸಚಿವ ಡಾ ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ಹೇಳಿರುವುದೇ ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಮುಂಡಾಸುಧಾರಿಗಳಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ನೂರಾರು ಮಹಿಳೆಯರ ನಾಪತ್ತೆ, ಅತ್ಯಾಚಾರ, ಕೊಲೆಯ ಪ್ರಕರಣದಲ್ಲಿ ನೇರವಾಗಿ ಮುಂಡಾಸುಧಾರಿಯ ಹೆಸರನ್ನು ಹೇಳಲು ಹೋರಾಟಗಾರರೇ ಹಿಂಜರಿಯುತ್ತಿದ್ದರು. ಆದರೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಧರ್ಮಾಧಿಕಾರಿಯ ಹೆಸರನ್ನು ಈ ಪ್ರಕರಣಕ್ಕೆ ಥಳಕು ಹಾಕಿದ ನಂತರ ಮುಂಡಾಸುಧಾರಿಯ ಪಾತ್ರದ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟತೆ ಸಿಕ್ಕಿದೆ. ‘ದೊಡ್ಡವರ’ ಪಾತ್ರ ಇರುವುದರಿಂದಲೇ ಡಿ ಕೆ ಶಿವಕುಮಾರ್ ಅಂತವರು ಎಸ್ಐಟಿ ಕಾರ್ಯಾಚರಣೆ ನಡೆಯುತ್ತಿರುವಾಗ ದೂರುದಾರರಿಗೆ, ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಕೃತ್ಯವನ್ನು ಮಾಡಿದ್ದಾರೆ.
ಒಂದಂತೂ ಸ್ಪಷ್ಟವಾಗಿ ತಿಳಿದಿರಬೇಕು. ದೂರುದಾರ/ಳು, ಸಂತ್ರಸ್ತ/ಸ್ಥೆಯ ಪರವಾಗಿ ನಿಲ್ಲುವುದು ಅಪರಾಧವಲ್ಲ, ಬದಲಾಗಿ ನಾಗರಿಕರ ಕರ್ತವ್ಯ. ಈ ದೇಶದ ನಾಗರಿಕರೆಲ್ಲರ ಬದುಕಿನ ಹಕ್ಕಿಗಾಗಿ ಎಲ್ಲಾ ಭಾರತೀಯರು ಅವರದ್ದೇ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ನಮ್ಮ ಸಂವಿಧಾನ ಬಯಸುತ್ತದೆ. ಜನರೆಲ್ಲರೂ ಆ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷ ಮಾತ್ರ ಎಲ್ಲಾ ‘ಸೈದ್ದಾಂತಿಕ ನಾಚಿಕೆ’ ಗಳನ್ನು ತೊರೆದು ಜನವಿರೋಧಿ, ಮಹಿಳಾ ವಿರೋಧಿ ನಿಲುವನ್ನು ತಳೆದಿದೆ. ಹಾಗೆಂದು ಅವರು ತಮ್ಮ ವ್ಯಾಪ್ತಿ ಮೀರಿ ಎಸ್ಐಟಿ ಕ್ಲೋಸ್ ಮಾಡಿದರೆ ಇಂದಲ್ಲಾ ನಾಳೆ ಕಾನೂನಿನ ಬಲೆಯಲ್ಲಿ ಸಿಲುಕಲೇ ಬೇಕು.
ನವೀನ್ ಸೂರಿಂಜೆ
ಪತ್ರಕರ್ತರು.
ಇದನ್ನೂ ಓದಿ- ಧರ್ಮಸ್ಥಳ ಪ್ರಕರಣ: ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್