Thursday, December 12, 2024

ಕರ್ನಾಟಕದ ಉಪಚುನಾವಣೆ | ರಾಜಕೀಯ ಪಕ್ಷಗಳಿಗೆ ಪಾಠಗಳು

Most read

ಹಣ ಜಾತಿ ಧರ್ಮ ಹಾಗೂ ಕುಟುಂಬ ರಾಜಕಾರಣದಿಂದ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂಬ ದುರಹಂಕಾರ ಸಲ್ಲದು ಎಂಬುದು ಈ ಸಲದ ಉಪಚುನಾವಣೆಗಳಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರಿಂದಾಗುವ ಖುಷಿಗಿಂತ ಈ ಜಾತಿವಾದಿ ಹಾಗೂ ಧರ್ಮಾಂಧ ಪಕ್ಷಗಳ ಸೋಲು ಕರ್ನಾಟಕದ ಜನತೆಗೆ ನೆಮ್ಮದಿ ತರುವಂತಹುದ್ದಾಗಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಬಹುಷಃ ಈ ರೀತಿಯ ಫಲಿತಾಂಶವನ್ನು ಕರ್ನಾಟಕದಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ. ಚನ್ನಪಟ್ಟಣ ಜೆಡಿಎಸ್, ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಸಂಡೂರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಅಂದಾಜಿಸಲಾಗಿತ್ತು. ಚುನಾವಣೋತ್ತರ ಸಮೀಕ್ಷೆಗಳೂ ಇದೇ ರೀತಿಯದ್ದಾಗಿದ್ದವು. ಸಮೀಕ್ಷೆಗಳನ್ನು ನಂಬಿದ ಬೆಟ್ಟಿಂಗ್ ಬಜಾರ್ ಸಹ ಇದೇ ರೀತಿ ಜೂಜಾಟದಲ್ಲಿ ನಿರತವಾಗಿದ್ದವು. ಮೂರೂ ಸ್ಥಾನಗಳನ್ನು ಮೂರೂ ಪಕ್ಷಗಳು ತಲಾ ಒಂದೊಂದು ಹಂಚಿಕೊಳ್ಳುತ್ತವೆ ಎಂದೇ ನಂಬಲಾಗಿತ್ತು ಹಾಗೂ ನಂಬಿಸಲಾಗಿತ್ತು.

ಆದರೆ.. ನವೆಂಬರ್ 23 ರಂದು ಮತಗಳ ಎಣಿಕೆಯ ನಂತರ ಚಿತ್ರಣವೇ ಬದಲಾಯಿತು. ಚನ್ನಪಟ್ಟಣ ಹಾಗೂ ಶಿಗ್ಗಾವಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಕಟ್ಟಿಕೊಂಡಿದ್ದ ಭದ್ರಕೋಟೆಗಳು ಛಿದ್ರವಾದರೆ, ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆಯಾಯ್ತು. ಮತದಾರರ ಶಕ್ತಿಯೇ ಅಂತಹುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು ಕಟ್ಟಿಕೊಂಡ ಭದ್ರ ಗೋಡೆಗಳನ್ನೇ ಪುಡಿಗಟ್ಟಬಲ್ಲವು ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ಪುರಾವೆಗಳಿವೆ.

ಈಗ ಇಲ್ಲಿ ಕರ್ನಾಟಕದಲ್ಲಿ ಆಗಿದ್ದೂ ಅದೇ ರೀತಿಯದ್ದು. ಒಕ್ಕಲಿಗರ ಬಾಹುಳ್ಯದ ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಾಬಲ್ಯ ಗಟ್ಟಿಯಾಗಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ 2023 ರಲ್ಲಿ ಬಹುಮತ ಪಡೆದು ಇಲ್ಲಿಂದ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೆರವಾದ ಸ್ಥಾನಕ್ಕೆ ತಮ್ಮ ಕುಲಪುತ್ರ ನಿಖಿಲ್ ರವರನ್ನೇ ಅಭ್ಯರ್ಥಿಯನ್ನಾಗಿಸಿದ್ದರು. ಇದು ತನ್ನದೇ ಕ್ಷೇತ್ರವಾದ್ದರಿಂದ ಬೇರೆಯವರಿಗೆ ಬಿಟ್ಟುಕೊಡುವ ಮಾತೇ ಇಲ್ಲವೆಂದೂ ಹೇಳಿದ್ದರು. ಕೇಂದ್ರ ಸಚಿವರೂ ಆಗಿರುವ ಕುಮಾರಸ್ವಾಮಿಯವರು  ವಯೋವೃದ್ಧ ದೇವೇಗೌಡರನ್ನೇ ಕರೆತಂದು ಭಾವನಾತ್ಮಕ ಪ್ರಚಾರ ಭಾಷಣ ಮಾಡಿಸಿದ್ದರು. ಯಥೇಚ್ಚವಾಗಿ ಹಣ ಖರ್ಚು ಮಾಡಿದ್ದರು. ಹಳ್ಳಿ ಗಲ್ಲಿಗಳನ್ನೂ ಬಿಡದೇ ಪ್ರಚಾರ ಮಾಡಿದ್ದರು. ಆದರೂ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲೇ ಇಲ್ಲ. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನಿಖಿಲ್ ಸೋತರು. ಜೆಡಿಎಸ್ ಕೋಟೆ ನುಚ್ಚುನೂರಾಗಿತ್ತು. ಅವಕಾಶವಾದಿ ರಾಜಕಾರಣಕ್ಕೆ ತೀವ್ರ ಹಿನ್ನಡೆಯಾಗಿತ್ತು.

ಅದೇ ರೀತಿ ಶಿಗ್ಗಾವಿ ಕ್ಷೇತ್ರದ ಜನ ಬಿಜೆಪಿ ಕೋಟೆಯನ್ನು ಪುಡಿಗಟ್ಟಿ ಇಪ್ಪತ್ತು ವರ್ಷಗಳ ರಿಕಾರ್ಡ್ ಬ್ರೇಕ್ ಮಾಡಿದರು. ಕಳೆದ ನಾಲ್ಕು ಅವಧಿಯಿಂದ ಬಸವರಾಜ ಬೊಮ್ಮಾಯಿಯವರೇ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಮುಖ್ಯಮಂತ್ರಿಯೂ ಆಗಿದ್ದರು. 2023 ರ ಚುನಾವಣೆಯಲ್ಲೂ ಕ್ಷೇತ್ರದ ಜನರು ಬೊಮ್ಮಾಯಿಯವರನ್ನೇ ಬೆಂಬಲಿಸಿದ್ದರು. ಆದರೆ ಬೊಮ್ಮಾಯಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಾರ್ಲಿಮೆಂಟ್ ಗೆ ಹೋದರು. ಅವರಿಂದ ತೆರವಾದ ಸ್ಥಾನಕ್ಕೆ ತಮ್ಮ ಸುಪುತ್ರನನ್ನೇ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದ್ದರು. ಹಿಂದೆ ಹಲವು ಬಾರಿ ಸೋತಿರುವ ಮುಸ್ಲಿಂ ಸಮುದಾಯದ ಪಠಾಣರವರನ್ನೇ ಮತ್ತೆ ಕಾಂಗ್ರೆಸ್ ಕಣಕ್ಕಿಳಿಸಿದ್ದರಿಂದ ಬೊಮ್ಮಾಯಿ ಪುತ್ರನ ಗೆಲುವು ನಿಶ್ಚಿತ ಎಂದೇ ನಂಬಲಾಗಿತ್ತು. ಆದರೆ ಕ್ಷೇತ್ರದ ಜನತೆಯ ತೀರ್ಪು ವ್ಯತಿರಿಕ್ತವಾಗಿತ್ತು. ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿದ ಶಿಗ್ಗಾವಿ ಕ್ಷೇತ್ರದ ಮತದಾರರು ಮಾಜಿ ಮುಖ್ಯಮಂತ್ರಿಯ ಮುಖಭಂಗಕ್ಕೆ ಕಾರಣರಾದರು. ಭರತ್ ಬೊಮ್ಮಾಯಿಯನ್ನು 13 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದರು. ಚೆನ್ನಪಟ್ಟಣದಲ್ಲಿ ಒಕ್ಕಲಿಗರು ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟ ಹಾಗೆ ಶಿಗ್ಗಾವಿಯ ಲ್ಲಿ ಲಿಂಗಾಯತರು ಬಿಜೆಪಿಯ ಕೈಬಿಟ್ಟಿದ್ದರು.

ಹಾಗೆಯೇ ಸಂಡೂರು ಮತಕ್ಷೇತ್ರ ಸಹ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ತುಕಾರಾಂರವರನ್ನೇ ಮತ್ತೆ ಜನರು ಆಯ್ಕೆ ಮಾಡಿ ಗೆಲ್ಲಿಸಿದ್ದರು. ಆದರೆ ತುಕಾರಾಂರವರೂ ಸಹ ಕಾಂಗ್ರೆಸ್ ಪಕ್ಷದ ಆದೇಶದಂತೆ ಲೋಕಸಭೆಗೆ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಪತ್ನಿಯನ್ನೇ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದರು. ಸಂಡೂರಿನ ಜನತೆ ಈ ಸಲವೂ ಕಾಂಗ್ರೆಸ್ಸಿನ ಅಭ್ಯರ್ಥಿ ಅನ್ನಪೂರ್ಣರವರನ್ನು ಗೆಲ್ಲಿಸಿದರಾದರೂ ಹಿಂದಿನ ಚುನಾವಣೆಗೆ ಹೋಲಿಸಿದರೆ ಬಂದ ಮತಗಳ ಅಂತರದಲ್ಲಿ ಭಾರೀ ಕಡಿತವಾಗಿತ್ತು. ನೆಲೆಯೇ ಇಲ್ಲದ ಬಿಜೆಪಿ ಪಕ್ಷದ ಕಾರ್ಯಕರ್ತ ಬಂಗಾರು ಹಣಮಂತು ಅವರಿಗೂ ಗಣನೀಯ ಮತಗಳನ್ನು ಕ್ಷೇತ್ರದ ಜನತೆ ಕೊಟ್ಟಿದ್ದರು.

ಈ ಮೂರೂ ಉಪಚುನಾವಣೆಗಳಲ್ಲಿ ಜನರು ಈ ಪಟ್ಟಭದ್ರ ಪಕ್ಷಗಳಿಗೆ ಕಲಿಸಿದ ಪಾಠ ಆಯಾ ಪಕ್ಷದ ನಾಯಕರುಗಳು ಮುಟ್ಟಿ ನೋಡಿಕೊಳ್ಳುವಂತಹುದು. ಅವುಗಳಲ್ಲಿ ಪ್ರಮುಖವಾದವುಗಳು..

ಕುಟುಂಬ ರಾಜಕಾರಣ ನಿರಾಕರಣೆ:

ಮೂರೂ ಕ್ಷೇತ್ರಗಳಲ್ಲೂ ಸಹ  ಕುಟುಂಬ ರಾಜಕಾರಣಕ್ಕೆ ಮಣೆಹಾಕಲಾಗಿತ್ತು. ಜೆಡಿಎಸ್ ಪಕ್ಷವೇ ದೇವೇಗೌಡರ ಫ್ಯಾಮಿಲಿ ಪಾರ್ಟಿ ಎಂದು ಗೊತ್ತಿರುವಂತಹುದು. ಕುಟುಂಬ ರಾಜಕಾರಣ ಮುಂದುವರೆಸಲು ನಿಖಿಲ್ ರವರನ್ನು ಉತ್ತರಾಧಿಕಾರಿಯನ್ನಾಗಿ ನಿರ್ಣಯಿಸಲಾಗಿತ್ತು. ಚೆನ್ನಪಟ್ಟಣವನ್ನು ತಮ್ಮ ಕುಟುಂಬದ ನಿಯಂತ್ರಣದಲ್ಲಿಟ್ಟುಕೊಳ್ಳಲು ಹಾಗೂ ಪಕ್ಷದ ಉತ್ತರಾಧಿಕಾರಿ ಪಟ್ಟಕಟ್ಟಲು ನಿಖಿಲ್ ರವರನ್ನು  ಚುನಾವಣೆ ಕಣಕ್ಕೆ ಇಳಿಸಲಾಯ್ತು. ಆದರೆ ಕುಟುಂಬ ರಾಜಕಾರಣದ ಮುಂದುವರಿಕೆಗೆ ಚೆನ್ನಪಟ್ಟಣದ ಜನ ಅವಕಾಶ ಕೊಡಲಿಲ್ಲ. ಹಾಗೆಯೇ ಶಿಗ್ಗಾವಿ ಕ್ಷೇತ್ರದ ಜನರೂ ಬೊಮ್ಮಾಯಿ ಕುಟುಂಬ ರಾಜಕಾರಣಕ್ಕೆ ಗುಡ್ ಬೈ ಹೇಳಿದರು. ಸಂಡೂರಲ್ಲೂ ಸಹ ಬಿಜೆಪಿ ಶಕ್ತಿಯುತ ಅಭ್ಯರ್ಥಿಯನ್ನು ಹಾಕಿದ್ದರೆ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೂ ಈ ಸಲ ಇತಿಶ್ರೀ ಹಾಡಬೇಕಾಗುತ್ತಿತ್ತು.  ವಂಶಾಡಳಿತದ ರಾಜಕಾರಣವನ್ನು ವಿರೋಧಿಸುತ್ತೇನೆ ಎನ್ನುವ ಬಿಜೆಪಿಯೇ ಕುಟುಂಬ ರಾಜಕಾರಣಕ್ಕೆ ಕುಮ್ಮಕ್ಕು ನೀಡುತ್ತಿರುವುದು ಆ ಪಕ್ಷದ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ.

ಹಣದಿಂದ ಗೆಲುವೆಂಬ ಭ್ರಮೆ

“ಐದು ವರ್ಷಗಳ ಕಾಲ ಜನರ ಸೇವೆ ಮಾಡುವುದಕ್ಕಿಂತಲೂ ಚುನಾವಣೆಗೆ ಹತ್ತು ದಿನಗಳ ಮುಂಚೆ ಶ್ರಮವಹಿಸಿದರೆ ಗೆಲ್ಲಬಹುದು” ಎಂದು ಮಾನ್ಯ ಕುಮಾರಸ್ವಾಮಿಯವರು ತಮ್ಮ ಬದುಕಿನ ಪರಮ ಸತ್ಯವನ್ನು ಹೇಳಿದರು. ಆ ಹತ್ತು ದಿನಗಳಲ್ಲಿ ತಂತ್ರ ಕುತಂತ್ರಗಳನ್ನು ಮಾಡಿ ಜನರನ್ನು ಯಾಮಾರಿಸಬಹುದೆಂಬುದು ಅವರ ಅನುಭವದ ಮಾತುಗಳು. ಮತದಾರರಿಗೆ ಆಸೆ ಆಮಿಷ ತೋರಿ ಮತಗಳಿಕೆ ಮಾಡಲು ಚುನಾವಣೆಯ ಮುಂಚಿನ ದಿನಗಳೇ ನಿರ್ಣಾಯಕ ಎನ್ನುವುದು ಸತ್ಯ. ಆಗಲೇ ಹಣ ಹೆಂಡ ವಸ್ತು ಒಡವೆಗಳನ್ನು ಹಂಚಿ ಮತದಾರರನ್ನು ಕಮಿಟ್ ಮಾಡಿಸುವ ಕಾರ್ಯ ಎಗ್ಗಿಲ್ಲದೆ ಮಾಡಲಾಗುತ್ತದೆ.

ಈ ಸಲ ಹೇಗಾದರೂ ಮಾಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೇಬೇಕು ಹಾಗೂ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಲಾಂಚ್ ಮಾಡಬೇಕೆಂದು ಸರಿ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ಚೆನ್ನಪಟ್ಟಣದಲ್ಲಿ ಹಂಚಲಾಗಿದೆ ಎಂದು ಅಲ್ಲಿಯ ಮತದಾರರೇ ಹೇಳುತ್ತಿದ್ದಾರೆ. ಒಕ್ಕಲಿಗರ ನಾಯಕತ್ವ ಉಳಿಸಿಕೊಳ್ಳಲು ಡಿಕೆ ಶಿವಕುಮಾರರವರೂ ಸಹ ಕನಿಷ್ಟ ಅಂದರೂ ನೂರು ಕೋಟಿಗಳಷ್ಟು ಖರ್ಚು ಮಾಡಿದ್ದಾರಂತೆ. ಕಾಂಗ್ರೆಸ್ ನಿಂದ ಸಹ ಉಪಚುನಾವಣೆಗಳಲ್ಲಿ ಯಥೇಚ್ಚವಾಗಿ ಹಣ ಖರ್ಚಾಗಿದ್ದರ ಕುರಿತು ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದರವರೇ ಹೇಳಿಕೆ ನೀಡಿದ್ದಾರೆ. ಹಣದ ಹೊಳೆ ಶಿಗ್ಗಾವಿ ಮತ್ತು ಸಂಡೂರಿನಲ್ಲೂ ಹರಿದಿದೆ. ಆದರೆ ಹಣ ಹಂಚಿಯೇ ಕಾಂಗ್ರೆಸ್ ಗೆದ್ದಿತು ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಮೇಲೆ ಆರೋಪಿಸುತ್ತಿವೆ. ಚುನಾವಣಾ ಆಯೋಗವೇ ಬಿಜೆಪಿ ನಿಯಂತ್ರಣದಲ್ಲಿರುವಾಗ ಹಣದ ಹೊಳೆಯನ್ನು ನಿಲ್ಲಿಸಬಹುದಾಗಿತ್ತು. ಅಕ್ರಮಗಳ ಕುರಿತು ಸಾಕ್ಷ್ಯಗಳನ್ನಾದರೂ ಮಾಧ್ಯಮಗಳಿಗೆ ಬಿಡುಗಡೆ ಮಾಡಬಹುದಾಗಿತ್ತು. ಆದರೆ ಎಲ್ಲಾ ಪಕ್ಷಗಳು ಕೇವಲ ಆರೋಪ ಪ್ರತ್ಯಾರೋಪದಲ್ಲಿ ನಿರತವಾಗಿವೆ. ಈಗ ಮತದಾರರು ಇನ್ನೂ ಹೆಚ್ಚು ಪ್ರಬುದ್ಧರಾಗಿದ್ದಾರೆ. ಯಾರು ಹಣ ವಸ್ತು ವಡವೆ ಕೊಟ್ಟರೂ ತೆಗೆದುಕೊಳ್ಳುತ್ತಾರೆ. ಯಾಕೆಂದರೆ ಆ ಹಣ ಜನರಿಂದ ಲೂಟಿ ಮಾಡಿದ್ದೇ ಆಗಿದೆ ಎಂಬುದು ಅವರಿಗೆ ಗೊತ್ತಿದೆ. ಆದರೆ ಅಂತಿಮವಾಗಿ ತಮ್ಮ ಇಚ್ಚೆಗನುಗುಣವಾಗಿ ಮತಚಲಾಯಿಸುತ್ತಾರೆ. ಹೀಗಾಗಿ ಕೇವಲ ಹಣದ ಸುರಿಮಳೆ ಸುರಿಸಿ ಗೆಲುವನ್ನು ಕೊಂಡುಕೊಳ್ಳಬಹುದು ಎನ್ನುವ ರಾಜಕೀಯ ಪಕ್ಷಗಳ ದುರಹಂಕಾರವನ್ನೂ ಈ ಉಪಚುನಾವಣೆಯಲ್ಲಿ ಮತದಾರರು ನಿವಾಳಿಸಿ ಬಿಸಾಕಿದ್ದಾರೆ.

ಜಾತಿ ಧರ್ಮಗಳ ಮೇಲಾಟಕ್ಕೆ ತಡೆ

ಚುನಾವಣೆಗಳಲ್ಲಿ ಜಾತಿ ಧರ್ಮಗಳೇ ನಿರ್ಣಾಯಕ ಎಂದು ಅರಿತಿರುವ ರಾಜಕೀಯ ಪಕ್ಷಗಳು ಜನರಲ್ಲಿರುವ ಜಾತಿ ಪ್ರೀತಿ ಹಾಗೂ ಧರ್ಮಭೀತಿಯನ್ನು ಉದ್ದೀಪನಗೊಳಿಸಿ, ಮತಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಹೆಚ್ಚು ಸಮಯವನ್ನು ಮೀಸಲಿಡುತ್ತಾರೆ. ಈ ಸಲದ ಉಪಚುನಾವಣೆ ಜಾತಿ ಧರ್ಮಗಳ ಗುತ್ತಿಗೆದಾರರಿಗೆ ಸರಿಯಾದ ಪಾಠಗಳನ್ನೇ ಕಲಿಸಿದೆ. ಕರ್ನಾಟಕದಲ್ಲಿ ಮತಾಂಧತೆಯ ಆಟ ನಡೆಯುವುದಿಲ್ಲ ಎಂದು ಸಾಬೀತು ಪಡಿಸಿದೆ. ಕೋಮುವಾದಿ ಪಕ್ಷದ ಮೂರೂ ಅಭ್ಯರ್ಥಿಗಳನ್ನು ಸೋಲಿಸಲಾಗಿದೆ. ಜೆಡಿಎಸ್ ಯಾವಾಗಲೂ ಜಾತಿಯಾಧಾರಿತ ಪಕ್ಷ ಎನ್ನುವುದು ಗೊತ್ತಿರುವಂತಹುದೇ. ಒಕ್ಕಲಿಗ ಮತಗಳನ್ನು ಕ್ರೋಢೀಕರಿಸುತ್ತಲೇ ಈ ಪಕ್ಷ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಈಗ ಬಿಜೆಪಿ ಪಕ್ಷದ ಜೊತೆಗೆ ಕೂಡಿಕೆ ಮಾಡಿಕೊಂಡು ಕೋಮುವಾದಿಯಾಗಿಯೂ ಬದಲಾಗಿದ್ದರಿಂದಾಗಿ ಮುಸ್ಲಿಂ ಸಮುದಾಯದ ಮತದಾರರಿಂದ ದೂರವಾಗಿದೆ. ನಿಖಿಲ್ ಸೋಲಿಗೆ ಇದೇ ಪ್ರಮುಖ ಕಾರಣವಾಗಿದೆ.

ಶಿಗ್ಗಾವಿ ಕ್ಷೇತ್ರದ ಮತದಾರರೂ ಸದಾ ಧರ್ಮದ್ವೇಷ ಕಾರುವ ಮತಾಂಧ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾರೆ. ಲಿಂಗಾಯತ ಬಾಹುಳ್ಯದ ಈ ಕ್ಷೇತ್ರದಲ್ಲಿ, ಲಿಂಗಾಯತ ಅಭ್ಯರ್ಥಿಯನ್ನು ಸೋಲಿಸಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಲಿಂಗಾಯತ ಮತಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯದವರ ಮತಗಳು ಅರ್ಧದಷ್ಟಿವೆ. ಆದರೂ ಮುಸ್ಲಿಂ ಅಭ್ಯರ್ಥಿ ಗೆದ್ದಿದ್ದಾರೆ ಎಂದರೆ ಈ ಕ್ಷೇತ್ರದ ಜನರು ಧರ್ಮದ್ವೇಷದ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎಂದೇ ಅರ್ಥ. ಸಂಡೂರಿನಲ್ಲಿ ಸಹ ಜನಾರ್ಧನ್ ರೆಡ್ಡಿ ಅದೆಷ್ಟೇ ಹರಸಾಹಸ ಮಾಡಿದರೂ, ವಾಲ್ಮೀಕಿ ನಿಗಮದ ಅಕ್ರಮದ ಸದ್ದು ಗದ್ದಲ ಮಾಡಿದರೂ ಆ ಕ್ಷೇತ್ರದ ಜನತೆ ಪ್ರಾಮುಖ್ಯತೆ ಕೊಡಲೇ ಇಲ್ಲ. ಸಂಡೂರಿನಲ್ಲಿ ಇಲ್ಲಿವರೆಗೂ ಕೋಮುವಾದಿ ಶಕ್ತಿಗಳಿಗೆ ಬೇರು ಬಿಡಲು ಅಲ್ಲಿಯ ಜನ ಅವಕಾಶವನ್ನೇ ಕೊಟ್ಟಿಲ್ಲ. ಈ ಉಪಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಬಸವಾದಿ ಶರಣರು ಹಾಗೂ ಸೂಫಿಸಂತರ ಕೋಮುಸೌಹಾರ್ದತೆಯ ನಾಡಲ್ಲಿ ಕೋಮುದ್ವೇಷ ಹಾಗೂ ಮತಾಂಧತೆಗೆ ಅವಕಾಶ ಇಲ್ಲವೆಂದೇ ಜನರು ಕಾಲಕಾಲಕ್ಕೆ ಸಾಬೀತು ಪಡಿಸಿದ್ದಾರೆ. ಮತಾಂಧ ರಾಜಕಾರಣವನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಆದರೂ ಕೋಮುಶಕ್ತಿಗಳು ತಂತ್ರ ಕುತಂತ್ರಗಳನ್ನು ಮಾಡಿ ಹಿಂಬಾಗಿಲಿನ ಮೂಲಕವಾದರೂ, ಅನೈತಿಕ ಮಾರ್ಗ ಹಿಡಿದಾದರೂ ರಾಜ್ಯದ ಆಡಳಿತ ಹಿಡಿಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ ಹಾಗೂ ಇರುತ್ತಾರೆ.

ಹಣ ಜಾತಿ ಧರ್ಮ ಹಾಗೂ ಕುಟುಂಬ ರಾಜಕಾರಣದಿಂದ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂಬ ದುರಹಂಕಾರ ಸಲ್ಲದು ಎಂಬುದು ಈ ಸಲದ ಉಪಚುನಾವಣೆಗಳಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರಿಂದಾಗುವ ಖುಷಿಗಿಂತ ಈ ಜಾತಿವಾದಿ ಹಾಗೂ ಧರ್ಮಾಂಧ ಪಕ್ಷಗಳ ಸೋಲು ಕರ್ನಾಟಕದ ಜನತೆಗೆ ನೆಮ್ಮದಿ ತರುವಂತಹುದ್ದಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆʼ ಎಂಬ ಒಂದು ಬಹು ದೊಡ್ಡ ಜೋಕ್

More articles

Latest article