ಈ ಬಜೆಟ್ ಉನ್ನತ ಶಿಕ್ಷಣದ ಮೂಲಸೌಕರ್ಯ, ಗುಣಮಟ್ಟ, ಸಾಮಾಜಿಕ ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಮೇಳೈಸಲು ಪ್ರಯತ್ನಿಸಿದೆ. ಆದರೆ, ಎಡಿಬಿ ಅಂತಹ ಹೊರಗಿನ ಹಣಕಾಸು ಸಂಸ್ಥೆಗಳ ಮೇಲಿನ ಅತಿ ಅವಲಂಬನೆ ಮತ್ತು ಶೀಘ್ರ ನೇಮಕಾತಿಯಂತಹ ಭರವಸೆಗಳು ಎಷ್ಟರ ಮಟ್ಟಿಗೆ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳುತ್ತವೆ ಎಂಬುದು ಬಜೆಟ್‌ನ ಅಂತಿಮ ಯಶಸ್ಸನ್ನು ನಿರ್ಧರಿಸುತ್ತದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ, 2026-27ನೇ ಸಾಲಿನ ಕರ್ನಾಟಕ ರಾಜ್ಯದ ಆಯವ್ಯಯದಲ್ಲಿ ಒಟ್ಟು ವೆಚ್ಚವನ್ನು 4,48,004 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಇದರಲ್ಲಿ ಶಿಕ್ಷಣ ವಲಯ(ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸೇರಿ)ಕ್ಕೆ ಒಟ್ಟಾರೆಯಾಗಿ 47,224 ಕೋಟಿ ರೂ.ಗಳನ್ನು (ಶೇ.10 ರಷ್ಟು) ಮೀಸಲಿಡಲಾಗಿದೆ. ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ, ಎಡಿಬಿ (ADB) ನೆರವಿನೊಂದಿಗೆ ಅನುಷ್ಠಾನಗೊಳಿಸುತ್ತಿರುವ ‘ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ’ಗಾಗಿ 2,500 ಕೋಟಿ ರೂ. ವೆಚ್ಚ ಮಾಡಲಾಗುವುದೆಂದು ಘೋಷಿಸಲಾಗಿದೆ.
ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಬಜೆಟ್‍ನಲ್ಲಿ ಮಂಡಿಸಲಾದ ಉನ್ನತ ಶಿಕ್ಷಣ ವಲಯದ ಘೋಷಣೆಗಳನ್ನು ಗಮನಿಸಿದಾಗ, ಇದು ಕೇವಲ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗದೆ, ಸಾಮಾಜಿಕ ನ್ಯಾಯ, ತಾಂತ್ರಿಕ ಉನ್ನತೀಕರಣ ಮತ್ತು ಮಹಿಳಾ ಸಬಲೀಕರಣದ ಕಡೆಗೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ. ಈ ಬಜೆಟ್ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.

ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರವು ದೊಡ್ಡ ಮಟ್ಟದ ಹೂಡಿಕೆಗೆ ಮುಂದಾಗಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ‘ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ’ಯು ರಾಜ್ಯದ ಉನ್ನತ ಶಿಕ್ಷಣದ ಚಿತ್ರಣವನ್ನೇ ಬದಲಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್‌ಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಪಡಿಸುವುದು ಹಾಗೂ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವುದು ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ದೀರ್ಘಕಾಲೀನ ಯೋಜನೆಯಾಗಿದೆ. ಅಲ್ಲದೆ, ಐತಿಹಾಸಿಕ ಯುವಿಸಿಇ(UVCE) ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 500 ಕೋಟಿ ರೂ. ಯೋಜನೆಯಡಿ ಅನುದಾನ ಒದಗಿಸಿರುವುದು ತಾಂತ್ರಿಕ ಶಿಕ್ಷಣಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ.
ಉದ್ಯೋಗ ಮಾರುಕಟ್ಟೆಯ ಇಂದಿನ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ಕೋರ್ಸ್‌ಗಳನ್ನು ಪರಿಷ್ಕರಿಸುವ ಪ್ರಯತ್ನ ಶ್ಲಾಘನೀಯ. ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್‌ನಂತಹ 15 ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿರುವುದು ಸ್ವಾಗತಾರ್ಹ. ಇದು ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತದೆ.
ಬಜೆಟ್‌ನಲ್ಲಿ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆ ಘೋಷಿಸಿರುವುದು ಅತ್ಯಂತ ಮಾನವೀಯ ನಿರ್ಧಾರವಾಗಿದೆ. ಇದು ಮಹಿಳಾ ಉದ್ಯೋಗಿಗಳ ಹಕ್ಕುಗಳ ರಕ್ಷಣೆಗೆ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ. ಇದೇ ರೀತಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೆ ತರಲು ಮುಂದಾಗಿರುವುದು ಸಾಮಾಜಿಕ ನ್ಯಾಯದ ಪರವಾಗಿ ಸರ್ಕಾರದ ದಿಟ್ಟ ನಿಲುವನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ಮರುಜಾರಿಗೊಳಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಕ್ರಮವಾಗಿದೆ, ಆದರೂ ಇದು ಕ್ಯಾಂಪಸ್‌ಗಳಲ್ಲಿ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಎಚ್ಚರವಹಿಸಬೇಕಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತು ಮಹಿಳಾ ಶಿಕ್ಷಣಕ್ಕೆ ನೀಡಿರುವ ಆದ್ಯತೆ ಗಮನಾರ್ಹ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB)ಮೂಲಕ ಈ ಭಾಗದ 75 ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿರುವುದು ಸ್ವಾಗತಾರ್ಹ. ಹಾಗೆಯೇ, ಈ ಭಾಗದ ನಿರ್ದಿಷ್ಟ ಗ್ರಾಮಗಳಲ್ಲಿ ಹೊಸ ವಸತಿಯುಕ್ತ ಕಾಲೇಜುಗಳನ್ನು ಸ್ಥಾಪಿಸಲು ನೀಡಿರುವ ಒತ್ತು, ಹಿಂದುಳಿದ ಪ್ರದೇಶಗಳ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿ, ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿರುವ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ಮತ್ತು ‘ದೀಪಿಕಾ ವಿದ್ಯಾರ್ಥಿ ವೇತನ’ದ ಮುಂದುವರಿಕೆಯು ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹದಾಯಕವಾಗಿದೆ. ಎಸ್‌ಟಿಇಎಂ (STEM) ವಿಭಾಗದ ಮಹಿಳಾ ಪದವೀಧರರಿಗೆ ತರಬೇತಿ ನೀಡುವ ಯೋಜನೆಗಳು ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುತ್ತವೆ.
ಆದಾಗ್ಯೂ, ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆಯು ನಿರೀಕ್ಷಿತ ವೇಗದಲ್ಲಿ ಸಾಗಬೇಕಿದೆ. 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಿರುವುದು ಸಕಾರಾತ್ಮಕವಾಗಿದ್ದರೂ, ಇದು ಹಿಂದಿನ ಸಾಲಿನಲ್ಲಿ ಘೋಷಿಸಿದ ಹುದ್ದೆಗಳನ್ನೇ ಈ ಸಾಲಿನಲ್ಲಿಯೂ ಮರುಘೋಷಿಸಿದಂತಿದೆ. ಆದ್ದರಿಂದ, ಹಂತ ಹಂತವಾಗಿ ನಡೆಯಬೇಕಿರುವ ಈ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಸಾಲಿನ ಆಯವ್ಯಯಕ್ಕೂ ಮುಂದೂಡದೆ, ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದಂತೆ ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಪೂರ್ಣಗೊಳಿಸುವುದು ಅತ್ಯಗತ್ಯ.
ಡಾ. ರವಿ ಎಂ ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ,ಯುದ್ಧಮತ್ತುಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನುಇವರು ಪಡೆದಿದ್ದಾರೆ.’ಪರ್ಯಾಯ’, ‘ವಿಮರ್ಶೆಓದು’, ‘ಶಾಸನಓದು’ ಪುಸ್ತಕಗಳುಪ್ರಕಟಗೊಂಡಿವೆ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಇರಾನ್ ಅನ್ನು ಸೋಲಿಸುವುದು ಸಾಧ್ಯವೇ?


