ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ಪ್ರಾಣಪ್ರತಿಷ್ಠೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಬಂದಿದ್ದು, ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಹೇಳಿದ್ದಾರೆ.
ಜನವರಿ 22 ರಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜಕಾರಣಿಗಳು ಸೇರಿದಂತೆ ಸಾವಿರಾರು ವಿಐಪಿ ಅತಿಥಿಗಳು, ಕ್ರೀಡೆ ಮತ್ತು ಸಿನಿಮಾ ಲೋಕದ ಸೆಲೆಬ್ರಿಟಿಗಳು ಮತ್ತು ಸಂತರು ಭಾಗವಹಿಸಲಿದ್ದಾರೆ. ಪ್ರತಿಪಕ್ಷಗಳು ಈಗಾಗಲೇ ಕಾರ್ಯಕ್ರಮಕ್ಕೆ ಹಾಜರಾಗಲು ನಿರಾಕರಿಸಿವೆ. ಈಗ ಪ್ರಕಾಶ್ ಅಂಬೇಡ್ಕರ್ ಕೂಡ ಅಯೋಧ್ಯೆಗೆ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಆರೋಪವನ್ನು ಮತ್ತೆ ಪ್ರತಿಧ್ವನಿಸಿದ ಪ್ರಕಾಶ್ ಅಂಬೇಡ್ಕರ್ ಅವರು, “ಧಾರ್ಮಿಕ ಕಾರ್ಯಕ್ರಮವು ರಾಜಕೀಯ ಪ್ರಚಾರವಾಗಿದೆ” ಎಂದು ಟೀಕಿಸಿದ್ದಾರೆ.
ಈ ಕುರಿತು X ಮಾಡಿರುವ ಅವರು, ರಾಮ ಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿದೆ. ಇದು BJP-RSSನ ರಾಜಕೀಯ ಕಾರ್ಯ ಚಟುವಟಿಕೆ ಆಗಿರುವುದರಿಂದ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿತ್ತು.
ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಯಾಕೆಂದರೆ ಇದನ್ನು ಬಿಜೆಪಿ-ಆರೆಸ್ಸೆಸ್ ತಮ್ಮದಾಗಿ ಮಾಡಿಕೊಂಡಿವೆ. ಒಂದು ಧಾರ್ಮಿಕ ಕಾರ್ಯಕ್ರಮ ಆಗಬೇಕಿದ್ದದ್ದನ್ನು ಚುನಾವಣಾ ಗೆಲುವಿಗಾಗಿ ರಾಜಕೀಯ ಪ್ರಚಾರ ಮಾಡಿಕೊಂಡಿವೆ.
ನನ್ನ ತಾತ ಡಾ. ಬಿ.ಆರ್.ಅಂಬೇಡ್ಕರ್, “ಪಕ್ಷಗಳು ದೇಶದ ಹಿತಕ್ಕಿಂತ ತಮ್ಮ ಸ್ವಾರ್ಥವನ್ನು ಮುಂದೆ ಮಾಡಿದರೆ ನಮ್ಮ ದೇಶದ ಸ್ವಾತಂತ್ರ್ಯ ಅಪಾಯಕ್ಕೀಡಾಗುತ್ತದೆಯಲ್ಲದೆ ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು. ನನ್ನ ತಾತ ಅಂದು ನೀಡಿದ್ದ ಆ ಎಚ್ಚರಿಕೆ ಇಂದು ನಿಜವಾಗಿಬಿಟ್ಟಿದೆ. ಬಿಜೆಪಿ- ಆರೆಸ್ಸೆಸ್ ತಮ್ಮ ರಾಜಕೀಯ ಲಾಭಕ್ಕೆ ಧಾರ್ಮಿಕ ಕಾರ್ಯಕ್ರಮವನ್ನು ಆಪೋಶನ ತೆಗೆದುಕೊಂಡಿವೆ” ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಟ್ವೀಟ್ ಮಾಡಿದ್ದಾರೆ.