ಬೆಂಗಳೂರು : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾರ್ವಜನಿಕ ಸಂಪರ್ಕ, ಗ್ರಾಹಕ ಸೇವೆ ಹಾಗೂ ಡಿಜಿಟಲ್ ಸೇವೆಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಮೂಲಕ ಕನ್ನಡಿಗ ಯುವಜನರಿಗೆ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಪತ್ರ ಬರೆದಿರುವ ಬಿಳಿಮಲೆ, ಕರ್ನಾಟಕದಲ್ಲಿ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ವಲಯದ ವ್ಯಾಪ್ತಿ ವೇಗವಾಗಿ ವಿಸ್ತರಿಸುತ್ತಿದೆ. ಈ ಸಂಸ್ಥೆಗಳು ಕನ್ನಡದಲ್ಲಿ ಗ್ರಾಹಕ ಸೇವೆ, ಅನುವಾದ, ಡಿಜಿಟಲ್ ವಿಷಯ ರಚನೆ ಹಾಗೂ ಸಾಮಾಜಿಕ ಮಾಧ್ಯಮ ನಿರ್ವಹಣೆಯಂತಹ ಸೇವೆಗಳನ್ನು ಒದಗಿಸುವುದು ಕಡ್ಡಾಯ ಮಾಡುವುದರಿಂದ ಕನ್ನಡ ಬಲ್ಲ ಯುವಜನರಿಗೆ ಉದ್ಯೋಗದ ಹೊಸ ಅವಕಾಶಗಳು ದೊರೆಯಲಿದೆ ಎಂದಿರುವ ಬಿಳಿಮಲೆ, ಕನ್ನಡದ ಬಳಕೆಯನ್ನು ಕೇವಲ ಭಾಷಾ ಸಂರಕ್ಷಣಾ ದೃಷ್ಠಿಯಿಂದ ನೋಡದೇ, ಅದನ್ನು ಒಂದು ಉದ್ಯೋಗ ಕೌಶಲ್ಯವಾಗಿಯೂ, ಆರ್ಥಿಕ ಅವಕಾಶವಾಗಿಯೂ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಕ್ರಮಗಳಿಂದ ಕಂಪನಿಗಳಿಗೆ ಸ್ಥಳೀಯ ಸಮಾಜದೊಂದಿಗೆ ಉತ್ತಮ ಬಾಂಧವ್ಯ ನಿರ್ಮಾಣವು ಸಾಧ್ಯವಾಗುವುದರ ಜೊತೆಗೆ ಕನ್ನಡ ಯುವಕರಿಗೆ ತಮ್ಮ ಭಾಷಾ ಜ್ಞಾನವನ್ನೇ ಉದ್ಯೋಗ ಕೌಶಲ್ಯವಾಗಿ ಬಳಸಿಕೊಳ್ಳುವ ಅವಕಾಶ ದೊರೆಯಲಿದೆ ಎಂದಿರುವ ಬಿಳಿಮಲೆ, ವಿಶೇಷವಾಗಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ವಿಸ್ತರಣೆಯ ಹಿನ್ನೆಲೆಯಲ್ಲಿ ಕನ್ನಡ ಭಾಷಾ ದತ್ತಾಂಶ, ಅನುವಾದ, ವಿಷಯ ಸೃಷ್ಠಿ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಉದ್ಯೋಗಾವಕಾಶಗಳಿಗೆ ಇದು ದಾರಿ ಮಾಡಿಕೊಡಲಿದೆ ಎಂದಿದ್ದಾರೆ. ಕನ್ನಡವನ್ನು ಕೇವಲ ಬಳಸಬೇಕಾದ ಭಾಷೆಯನ್ನಾಗಿ ರೂಪಿಸುವ ಚಿಂತನೆಯಿಂದ ಸಮಾಜವು ಹೊರಬರಬೇಕಾದ ತುರ್ತು ಅವಶ್ಯಕತೆಯಿದೆ ಎಂದಿರುವ ಬಿಳಿಮಲೆ, ಇಂತಹ ಕಾನೂನುಗಳನ್ನು ರೂಪಿಸಿದಲ್ಲಿ, ಅದು ನಮ್ಮ ಯುವಕರಿಗೆ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ಸೃಷ್ಠಿಸಬಲ್ಲ ಭಾಷೆಯಾಗಿ ಬೆಳೆಯಲಿದೆ ಎಂದಿದ್ದಾರೆ.

