Sunday, September 8, 2024

ಜಿಂದಾಬಾದ್ ಹಿಂದೆ ಹಿಂದುತ್ವದ ಹಂದರ

Most read

ನೆರೆಯ ದೇಶವೊಂದು ಅತಂತ್ರವಾದಷ್ಟೂ ನಮ್ಮ ದೇಶಕ್ಕೆ ಅಪಾಯ ಹೆಚ್ಚು. ಅಲ್ಲಿ ಅರಾಜಕತೆ ಹೆಚ್ಚಾದಷ್ಟೂ ಭಯೋತ್ಪಾದಕ ಸಂಘಟನೆಗಳು ಹೆಚ್ಚು ಸಂಘಟಿತವಾಗುತ್ತವೆ. ಬಡತನದಿಂದ ಬಳಲುವ ಯುವಕರನ್ನು ಭಯೋತ್ಪಾದಕರನ್ನಾಗಿಸಿ ಭಾರತದ ಮೇಲೆ ಪರೋಕ್ಷ ಯುದ್ಧವನ್ನು ಈ ಆತಂಕವಾದಿಗಳು ಆರಂಭಿಸುತ್ತಾರೆ. ಮುಂದೊಮ್ಮೆ ತಾಲಿಬಾನಿಗಳ ಹಾಗೆ ಆ ಮುಸ್ಲಿಂ ಮತಾಂಧ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನವನ್ನು ಆಳುವ ಅಧಿಕಾರವನ್ನು ಪಡೆದರೆ ಭಾರತಕ್ಕೆ ಇನ್ನೂ ಹೆಚ್ಚು ಆತಂಕ ಎದುರಾಗುತ್ತದೆ. ಹೀಗಾಗಿ ಪಾಕಿಸ್ತಾನ ಚೆನ್ನಾಗಿರಲಿ ಎಂದು ಬಯಸುವುದರಲ್ಲೇ ಭಾರತದ ನೆಮ್ಮದಿ ಇದೆ. ಇದಕ್ಕಾಗಿಯೇ ಇಲ್ಲಿಯವರೆಗೂ ಬಂದ ಎಲ್ಲಾ ಕೇಂದ್ರ ಸರಕಾರಗಳೂ ಪಾಕಿಸ್ತಾನದ ಜೊತೆಗೆ ಸೌಹಾರ್ದ ಸಂಬಂಧ ಕಾಪಾಡಿ ಕೊಳ್ಳಲು ಪ್ರಯತ್ನಿಸಿವೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಅಮೇರಿಕ ಜಿಂದಾಬಾದ್, ಶ್ರೀಲಂಕಾ ಜಿಂದಾಬಾದ್ ಅಷ್ಟೇ ಯಾಕೆ ಇನ್ನೂರು ವರ್ಷ ನಮ್ಮ ದೇಶವನ್ನು ಆಳಿದ ಬ್ರಿಟನ್ ಜಿಂದಾಬಾದ್ ಎಂದು ಕೂಗಿದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ್ರೋಹದ ಘೋಷಣೆ ಎಂದು ಧರಣಿ ಕೂಡುವುದಿಲ್ಲ. ಆದರೆ..

ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವಾ ಯಾವುದೋ ಪ್ರಚೋದನೆಗೆ ಒಳಗಾಗಿಯೋ “ಪಾಕಿಸ್ತಾನ ಜಿಂದಾಬಾದ್” ಎಂದು ಯಾವನಾದರೂ ಘೋಷಣೆ ಕೂಗಿದ್ದೇ ಆದರೆ ಸಂಘ ಪರಿವಾರದವರು ತಲ್ಲಣಿಸಿ ಹೋಗುತ್ತಾರೆ. ದೇಶಕ್ಕೆ ದೇಶವೇ ಮುಳುಗಿ ಹೋಯಿತೇನೋ ಎಂದು  ಅಬ್ಬರಿಸುತ್ತಾರೆ. ಅಂತಹ ದೇಶದ್ರೋಹಿಗೆ ಶಿಕ್ಷೆಯಾಗಬೇಕು, ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಕೂಗೆಬ್ಬಿಸುತ್ತಾರೆ. ಕೈಗೇನಾದರೂ ಸಿಕ್ಕರೆ ಹಲ್ಲೆ ಮಾಡಿ ತಮ್ಮ ಆಕ್ರೋಶಕ್ಕೆ ಹಿಂಸೆಯ ರೂಪ ಕೊಡುತ್ತಾರೆ. ಆಳುವ ಸರಕಾರದ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಪ್ರತಿಭಟಿಸುತ್ತಾರೆ.

ಹೇಳಿ ಕೇಳಿ ಪಾಕಿಸ್ತಾನ ಯಾವುದೇ ರೀತಿಯಲ್ಲೂ ಭಾರತಕ್ಕೆ ಸರಿಸಾಟಿಯಲ್ಲ. ಆರ್ಥಿಕವಾಗಿ ಸಾಮಾಜಿಕವಾಗಿ ಅದೊಂದು ದುರ್ಬಲ ದೇಶ. ತನ್ನದೇ ಸಮಸ್ಯೆಗಳಲ್ಲಿ ಮುಳುಗಿ ಮೇಲೇಳದೆ ಪರಿತಪಿಸುತ್ತಿರುವ ಅಸಹಾಯಕ ದೇಶದಿಂದ ಭಾರತದ ಏಕತೆ ಸಮಗ್ರತೆಗೆ ಧಕ್ಕೆ ಬರಲು ಸಾಧ್ಯವೇ ಇಲ್ಲ. ಅಸಲಿ ಸಂಗತಿ ಹೀಗಿರುವಾಗ ಪಾಕಿಸ್ತಾನದ ಹೆಸರು ಕೇಳಿದ ಕೂಡಲೇ ಈ ಕೋಮುವಾದಿ ಪಡೆಗೆ ಯಾಕೆ ಆವೇಶ ಹೆಚ್ಚಾಗುತ್ತದೆ? ಯಾಕೆ ಸಂಘ ಪರಿವಾರದ ಅಂಗಗಳು ಹುಚ್ಚೆದ್ದು ಕುಣಿಯುತ್ತವೆ?

ಪಾಕಿಸ್ತಾನ ಜಿಂದಾಬಾದ್

ಯಾಕೆಂದರೆ ಈ ಹಿಂದುತ್ವವಾದಿಗಳ ಅಸ್ತಿತ್ವ ನಿಂತಿರುವುದೇ ಪಾಕಿಸ್ತಾನದ ಮೇಲಿನ ದ್ವೇಷದ ಮೇಲೆ. ಈ ನಕಲಿ ರಾಷ್ಟ್ರೀಯವಾದಿಗಳ ಬುನಾದಿ ನಿಂತಿರುವುದೇ ಅನ್ಯ ಧರ್ಮದ್ವೇಷದ ಮೇಲೆ. ಮತಾಂಧತೆಯನ್ನೇ ಉಸಿರಾಡುವ, ಮತೀಯ ದ್ವೇಷವನ್ನು ಹರಡುವ ಮೂಲಕವೇ ಹಿಂದುತ್ವವಾದಿಗಳು ಹಿಂದೂಗಳನ್ನು ಪ್ರಚೋದಿಸುತ್ತಾ ಬಂದಿದ್ದಾರೆ. ಜನರಲ್ಲಿ ಜನಾಂಗ ದ್ವೇಷವನ್ನು ಬಿತ್ತಿ ಅಧಿಕಾರದ ಬೆಳೆ ತೆಗೆಯಲು ಸಂಘಕ್ಕೆ ಇರುವ ಪ್ರಮುಖ ಅಸ್ತ್ರಗಳೇ ಪಾಕಿಸ್ತಾನ ದೇಶ ಹಾಗೂ ಮುಸ್ಲಿಂ ಧರ್ಮ. ಇದನ್ನೇ ಕೋಮುವಾದ ಎನ್ನುವುದು.

ಹೀಗಾಗಿಯೇ ಸಂಘ ಪರಿವಾರದ ರಾಜಕೀಯ ಅಂಗ ಹಿಂದೂಗಳ ಎದೆಯಲ್ಲಿ ಕೋಮುದಳ್ಳುರಿಯ ಕಿಚ್ಚು ಆರದಂತೆ ನೋಡಿಕೊಳ್ಳುತ್ತದೆ. ಮಸೀದಿಯ ಕೆಳಗೆ ಮಂದಿರ ಹುಡುಕಿ ವಿವಾದ ಸೃಷ್ಟಿಸಿ ಹಿಂದೂಗಳ ಭಾವನೆ ಕೆರಳಿಸುವುದು, ಹಿಜಾಬ್, ಹಲಾಲ್, ಆಜಾನ್ ಮುಂತಾದ ವಿವಾದಗಳನ್ನು ಕೆದಕಿ ಗಲಾಟೆ ಮಾಡಿಸುವ ಮೂಲಕ ಮುಸ್ಲಿಂ ದ್ವೇಷದುರಿಯನ್ನು ಕಾಲಕಾಲಕ್ಕೆ ಸಮಾಜದಲ್ಲಿ ಹೊತ್ತಿಸಿ ಸೌಹಾರ್ದತೆಯನ್ನು ಕದಡುವ ಕೋಮುವಾದಿಗಳ ಪ್ರಯತ್ನ ಸತತವಾಗಿ ಜಾರಿಯಲ್ಲಿದೆ.

ಮೋದಿಯವರು ಪ್ರಧಾನಿಯಾದ ಕೂಡಲೇ ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಪ್ರಧಾನಿಯ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದರಲ್ಲಾ ಆಗ ಪಾಕಿಸ್ತಾನ ಸಂಘಿಗಳಿಗೆ ಶತ್ರು ರಾಷ್ಟ್ರ ಆಗಿರಲಿಲ್ಲವಾ? ಹೋಗಲಿ ಬಿಜೆಪಿಯ ಉನ್ನತ ನಾಯಕ ಲಾಲ್‌ ಕೃಷ್ಣ ಅಡ್ವಾಣಿಯವರು ಪಾಕಿಸ್ತಾನದ ನೆಲದಲ್ಲಿ ನಿಂತು ಮಹಮದ್ ಆಲಿ ಜಿನ್ನಾರವರನ್ನು ದೇಶಭಕ್ತ ಎಂದು ಹೊಗಳಿದರಲ್ಲಾ ಆಗ ಈ ನಕಲಿ ದೇಶಭಕ್ತರು ಬಾಯಿ ಬಿಡಲಿಲ್ಲ ಯಾಕೆ?. ಅದೇ ಕೆಲಸವನ್ನು ಮನಮೋಹನ್ ಸಿಂಗ್ ರವರೋ ಇಲ್ಲಾ ಸೋನಿಯಾ ಗಾಂಧಿಯವರೋ ಮಾಡಿದ್ದರೆ ಈ ಮತಾಂಧರು ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದರು.

ಪರಿಷತ್ತಿನಲ್ಲಿ ಬಿಜೆಪಿಯವರ ಪ್ರತಿಭಟನೆ

ಈಗ ಭಾರತಕ್ಕೆ ಅತೀ ಹೆಚ್ಚು ಆತಂಕಕಾರಿಯಾಗಿರುವುದು ಪಾಕಿಸ್ತಾನವಲ್ಲ ಅದು ಡ್ರ್ಯಾಗನ್ ದೇಶ ಚೀನಾ. ಪಾಕಿಸ್ತಾನದ ಭಯೋತ್ಪಾದಕರನ್ನು ಮಟ್ಟ ಹಾಕಬಹುದು ಆದರೆ ನಮ್ಮ ದೇಶದ ಗಡಿಯೊಳಗೆ ಚೀನೀ ಮಿಲಿಟರಿಯನ್ನು ನುಗ್ಗಿಸಿ ಭಾರತದ ಭೂಭಾಗವನ್ನು ಆಕ್ರಮಿಸಲು ಪ್ರಯತ್ನಿಸುತ್ತಿರುವುದು ತಲ್ಲಣದ ಸಂಗತಿ. ಭಾರತ ಚೀನಾ ಗಡಿಯಲ್ಲಿ ಚೀನಾ ದೇಶವು ಯುದ್ಧಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡು ಅವಕಾಶಕ್ಕಾಗಿ ಕಾಯುತ್ತಿದೆ. ಭಾರತದ ನೆರೆಹೊರೆಯಲ್ಲಿ ಯಾವುದಾದರೂ ಶತ್ರುರಾಷ್ಟ್ರ ಇದ್ದಿದ್ದೇ ಆದರೆ ಚೀನಾ ಎನ್ನುವುದು ಸತ್ಯ. ಆದರೆ ಸಂಘ ಪರಿವಾರದವರು ದುರ್ಬಲ ಪಾಕಿಸ್ತಾನವನ್ನೇ ಅತೀ ದೊಡ್ಡ ಶತ್ರುದೇಶವೆಂದು ಬಿಂಬಿಸಿ ಅದರ ವಿರುದ್ಧ ದ್ವೇಷವನ್ನು ಭಾರತದಾದ್ಯಂತ ಹರಡುತ್ತಿದ್ದಾರೆ.

ಭಾರತ, ಚೈನಾ

ಹಿಂದುತ್ವವಾದಿಗಳ ಉದ್ದೇಶವೂ ದ್ವೇಷೋತ್ಪಾದನೆಯೇ ಆಗಿದೆ. ಈ ದೇಶವನ್ನು ಹಿಂದೂರಾಷ್ಟ್ರ ಮಾಡಿ ಮನುಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿ ಮಾಡುವುದೇ ಸಂಘದ ಅಂತಿಮ ಗುರಿ. ಈ ಗುರಿ ಸಾಧನೆ ಅಲ್ಪಸಂಖ್ಯಾತರಾದ ವೈದಿಕರಿಂದ ಸಾಧ್ಯವಿಲ್ಲ. ಇವರ ಹಂಬಲಕ್ಕಾಗಿ ಬಹುಸಂಖ್ಯಾತ ಹಿಂದುಗಳ ಬೆಂಬಲ ಬೇಕೇ ಬೇಕು. ಅವರನ್ನು ಒಪ್ಪಿಸಬೇಕೆಂದರೆ ಒಬ್ಬ ಖಳನಾಯಕನನ್ನು ಸೃಷ್ಟಿಸಬೇಕು ಹಾಗೂ ಆತನಿಂದ ಆತಂಕ ಇದೆ ಎಂದು ಜನರನ್ನು ನಂಬಿಸಬೇಕು. ಅದಕ್ಕಾಗಿಯೇ ಇಲ್ಲಿ ಪಾಕಿಸ್ತಾನದ ಭಯವನ್ನು ಹುಟ್ಟಿಸಿ ಹಿಂದೂಗಳಲ್ಲಿ ದ್ವೇಷೋತ್ಪಾದನೆಯನ್ನು ಹೆಚ್ಚಿಸಿ, ಹಿಂದುತ್ವವಾದಿ ಪ್ಯಾಸಿಸ್ಟ್ ಪ್ರಭುತ್ವವನ್ನು ಪ್ರತಿಷ್ಠಾಪಿಸುವುದೇ ಸಂಘದ ಪ್ರಮುಖ ವೈದಿಕರ ಗುರಿಯಾಗಿದೆ. ಅದಕ್ಕಾಗಿಯೇ ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಎಂದರೆ ಅದನ್ನೇ ದೊಡ್ಡದು ಮಾಡಿ ಗದ್ದಲ ಎಬ್ಬಿಸಲು ಸಂಘ ಪರಿವಾರ ಸದಾ ಸಿದ್ಧವಾಗಿರುತ್ತದೆ.

ಹೋಗಲಿ ಈ ಸನಾತನವಾದಿ ಸಂಘಿಗಳು ಆರಾಧಿಸುವ ಪವಿತ್ರ ಗ್ರಂಥಗಳಲ್ಲಿ “ಸರ್ವೇ ಜನಾಃ ಸುಖಿನೋ ಭವಂತು” ಅಂತಾ ಹೇಳಿದೆಯಲ್ವಾ. ಸರ್ವೇ ಜನ ಅಂದ್ರೆ ಕೇವಲ ಈ ದೇಶದವರಾ ಅಥವಾ ಇಡೀ ಮನುಕುಲದ ಪ್ರಜೆಗಳಾ? ಪಾಕಿಸ್ತಾನವೂ ಅಖಂಡ ಭಾರತದ ಭಾಗವೇ ಎಂದು ಹೇಳುವ ಈ ಸನಾತನಿಗಳಿಗೆ ಪಾಕಿಸ್ತಾನದ ಪ್ರಜೆಗಳೂ “ಸರ್ವೇ ಜನಾಃ..” ವ್ಯಾಪ್ತಿಯೊಳಗೆ ಬರುವುದಿಲ್ಲಾ. ಬರುವುದೇ ಆಗಿದ್ದರೆ ಆ ಜನರು ಪ್ರತಿನಿಧಿಸುವ ದೇಶಕ್ಕೆ ಒಳಿತಾಗಲಿ ಎನ್ನುವುದು ತಪ್ಪೇನಿಲ್ವಲ್ಲಾ. ಇದೇ ಸನಾತನ ಹಿಂದೂ ಗ್ರಂಥ ಮಹಾ ಉಪನಿಷತ್ತಿನಲ್ಲಿ “ಉದಾರಚರಿತಾನಾಂ ತು ವಸುಧೈವ ಕುಟುಂಬಕಂ” ಎನ್ನುವ ಸಂಸ್ಕೃತ ಶ್ಲೋಕ ಇದೆಯಲ್ವಾ? ಈ ಶ್ಲೋಕದ ಅರ್ಥ ಜಗತ್ತೇ ಒಂದು ಕುಟುಂಬ ಎನ್ನುವುದೇ ಅಲ್ವಾ?. ಅಷ್ಟೊಂದು ವಿಶಾಲಾರ್ಥದಲ್ಲಿ ಹೇಳಿದ ಪ್ರಪಂಚವೇ ಒಂದು ಕುಟುಂಬ ಎನ್ನುವ ಸಮೀಕರಣದಲ್ಲಿ ಪಾಕಿಸ್ತಾನವೂ ಭಾರತದಂತೆ ಜಗತ್ತಿನ ಕುಟುಂಬದ ಭಾಗವೇ ಅಲ್ಲವೇ?. ಕುಟುಂಬದ ಸದಸ್ಯನೊಬ್ಬನಿಗೆ ಜಯವಾಗಲಿ ಎಂದು ಹೇಳುವುದು ಯಾಕೆ ಸರಿಯಲ್ಲ? ಹಾಗೆ ಹೇಳುವುದೇ ಅಪರಾಧ ಎನ್ನುವುದೇ ಆದರೆ ಈ ಸನಾತನಿಗಳು ತಮ್ಮ ಪರಂಪರೆಯ ಗ್ರಂಥದ ವಿರೋಧಿಗಳು ಆಗುತ್ತಾರಲ್ವಾ? ಮನುಷ್ಯಜಾತಿ ತಾನೊಂದೇ ವಲಂ” ಎಂದು ಆದಿ ಕವಿ ಪಂಪ ಹೇಳಿದ್ದಕ್ಕಾದರೂ ಮರ್ಯಾದೆ ಕೊಡಬೇಕಲ್ವಾ?

ಆದರೆ ಧರ್ಮದ್ವೇಷಪೀಡಿತರಿಗೆ ಇದ್ಯಾವುದೂ ಬೇಕಾಗಿಲ್ಲ. ಇಸ್ಲಾಮೋಫೋಬಿಯಾ ಎನ್ನುವ ರೋಗ ಪೀಡಿತರಾಗಿರುವ ಸಂಘದ ನಾಯಕರು ಆ ಅಂಟುರೋಗವನ್ನು ಇಡೀ ದೇಶಕ್ಕೆ ಅಂಟಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ದೇಶದ್ರೋಹಿಗಳೆಂದು ನಿಂದಿಸುತ್ತಿದ್ದಾರೆ. ಮುಸ್ಲಿಂ ಧರ್ಮೀಯರನ್ನು ಆತಂಕವಾದಿಗಳು ಎಂದು ನಿಂದಿಸುತ್ತಲೇ ಇರುತ್ತಾರೆ. ಹಿಂದೂಗಳ ಎದೆಯಲ್ಲಿ ಧರ್ಮದ್ವೇಷದ ಕಿಡಿ ಆರದಂತೆ ನೋಡಿಕೊಳ್ಳುತ್ತಾ ಅವಕಾಶ ಸಿಕ್ಕಾಗಲೆಲ್ಲಾ ಬೆಂಕಿಯಾಗಿಸಿ ತಮ್ಮ ಅಧಿಕಾರದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ-ಎಚ್ಚರಿಕೆ, ಗಲಭೆ ಎಬ್ಬಿಸಲು ಸಂಚು ನಡೆಸುತ್ತಿದ್ದಾರೆ ಮೀಡಿಯಾ ಭಯೋತ್ಪಾದಕರು!

ಹಿಂದುತ್ವವಾದಿಗಳ ಹುನ್ನಾರವನ್ನು ಈ ದೇಶದ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ. ಬೇಕೋ ಬೇಡವೋ ಈ ದೇಶದ ಎಲ್ಲಾ ಮುಸ್ಲಿಂ ಜನತೆ ಭಾರತೀಯರೇ ಆಗಿದ್ದಾರೆ. ಹಿಂದೂಗಳಲ್ಲಿ ಕೆಟ್ಟವರು ದುಷ್ಟರು ನೀಚರು ಸಮಯಸಾಧಕರು ಇದ್ದ ಹಾಗೆ ಮುಸ್ಲಿಮರಲ್ಲೂ ಇದ್ದಾರೆ. ಆದರೆ ಎಲ್ಲರೂ ಆತಂಕವಾದಿಗಳಲ್ಲ. ಈ ದೇಶದ ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನಿಸುವವರೇ ನಿಜವಾದ ಆತಂಕವಾದಿಗಳು. ಈ ದೇಶವಾಸಿಗಳಲ್ಲಿ ಧರ್ಮದ್ವೇಷವನ್ನು ಬಿತ್ತುತ್ತಿರುವವರೇ ನಿಜವಾದ ಭಯೋತ್ಪಾದಕರು. ಈ ದೇಶದ ಸಮಗ್ರತೆ ಸಹೋದರತೆ ಹಾಗೂ ಅಖಂಡತೆಗೆ ಧಕ್ಕೆ ತರುತ್ತಿರುವವರೇ ದೇಶದ್ರೋಹಿಗಳು. ಇಂತಹ ವಿಭಜಕ ಶಕ್ತಿಗಳಿಂದ ಈ ದೇಶದ ಸಮಸ್ತ ಜನರು ಎಚ್ಚರವಾಗಿರಬೇಕಿದೆ. ಧರ್ಮದ್ವೇಷೋತ್ಪಾದಕರು ಸೃಷ್ಟಿಸುವ ಭಾವತೀವ್ರತೆಗೆ ಒಳಗಾಗದೆ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾವುದೇ ದೇಶಕ್ಕೆ ಜಿಂದಾಬಾದ್ ಹೇಳುವುದು ಅಪರಾಧವಲ್ಲ ಆದರೆ ಹಾಗೆ ಹೇಳಿದ್ದನ್ನೇ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ಬಳಸಿಕೊಂಡು ಜನರನ್ನು ಒಡೆದಾಳುವ ದುಷ್ಟಶಕ್ತಿಗಳ ಶಡ್ಯಂತ್ರವನ್ನು ಈ ದೇಶದ ಜನರು ಸೋಲಿಸಬೇಕಿದೆ. ನಿಜವಾದ ಅರ್ಥದಲ್ಲಿ ? “ಮನುಷ್ಯಜಾತಿ ತಾನೊಂದೇ ವಲಂ” ಆಗಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇ಼ಷಕರು.

ಇದನ್ನೂ ಓದಿ- ಪತ್ರಿಕೋದ್ಯಮವನ್ನು ಸಾಮಾಜಿಕ ಜವಾಬ್ದಾರಿಯಾಗಿ ಸ್ವೀಕರಿಸಬೇಕು

More articles

Latest article