ಕನ್ನಡ ನುಡಿ ಸಪ್ತಾಹ
ದೇಶೀಯ ಚಿತ್ರಕಾರರನ್ನು ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿಯನ್ನು ನೀಡಿ ಕನ್ನಡ ಮುದ್ರಣದ ಮೊದಲ ತೇರನ್ನು ಎಳೆದವರು ಬಾಸೆಲ್ ಮಿಶನ್ನವರು ಎಂದು ಹೇಳಿದರೆ ತಪ್ಪಾಗಲಾರದು. ಜಿಲ್ಲೆಯಾದ್ಯಂತ ಇರುವ ಪ್ರೆಸ್ಗಳವರು ಈ ಪ್ರೆಸ್ನ ಉಪಯೋಗ ಪಡೆದುಕೊಳ್ಳುತ್ತಿದ್ದುದು, ಇಲ್ಲಿ ಕೆಲಸ ಮಾಡಿದವರು ಹಾಗೂ ಕಲಿತವರು ಸ್ವಂತ ಪ್ರೆಸ್ ಸ್ಥಾಪಿಸಿದ್ದು ಬಾಸೆಲ್ ಮಿಶನ್ ಪ್ರೆಸ್ನ ಹೆಗ್ಗಳಿಕೆ – ಬೆನೆಟ್ ಜಿ. ಅಮ್ಮನ್ನ, ಸಂಸ್ಕೃತಿ ಚಿಂತಕರು.
ಪ್ರಾಚೀನ ಕಾಲದಲ್ಲಿ ಕನ್ನಡ ಅಥವಾ ತುಳು ಸಾಹಿತ್ಯವು ತಾಳೆಗರಿ ಇಲ್ಲವೆ ಕಾಗದ ಪ್ರತಿಗಳಲ್ಲಿ ಬರೆದವುಗಳಾಗಿವೆ. ಇವುಗಳು ಖಾಸಗಿ ವಸ್ತುಗಳೆನಿಸಿಕೊಳ್ಳುತ್ತವೆ. ತದನಂತರ ಅಚ್ಚಿನ ಮೊಳೆಗಳನ್ನು ಬಳಸಿ ಮುದ್ರಾಯಂತ್ರದಿಂದ ನೂರಾರು ಪ್ರತಿಗಳನ್ನು ಏಕಕಾಲಕ್ಕೆ ಮುದ್ರಿಸಲು ಸಾಧ್ಯವಾಯಿತು. 1817ರಲ್ಲಿ ಪ್ರಕಟಗೊಂಡ ವಿಲಿಯಂ ಕೇರಿಯವರ ಮೊದಲ ಕನ್ನಡದ ವ್ಯಾಕರಣ ಪುಸ್ತಕ ಕನ್ನಡದ ಮೊದಲ ಮುದ್ರಿತ ಪುಸ್ತಕವಾಗಿದೆ. ಮದ್ರಾಸ್, ಕಲ್ಕತ್ತ, ಬಳ್ಳಾರಿಯಲ್ಲಿ ಕನ್ನಡ ಮತ್ತು ತೆಲುಗಿಗೆ ಒಂದೇ ಅಚ್ಚುಮೊಳೆಯನ್ನು ಬಳಸಿ ಮುದ್ರಣ ಮಾಡುವ ಕ್ರಮವಿತ್ತು. ಕನ್ನಡದ ಅಚ್ಚುಮೊಳೆಗಳ ಮುದ್ರಣ ಬಳಕೆಗೆ ಬರುವ ಮೊದಲು ಇನ್ನೊಂದು ಬಗೆಯ ಮುದ್ರಣವಿದ್ದಿತು.ಅದುವೇ ಶಿಲಾ ಮುದ್ರಣ ಅಥವಾ ಕಲ್ಲಚ್ಚು ಮುದ್ರಣ. ಯುರೋಪಿನಲ್ಲಿ ಮುದ್ರಾಯಂತ್ರಗಳು ಲಭ್ಯವಿದ್ದು ರೋಮನ್, ಇಂಗ್ಲಿಷ್ ಮುದ್ರಣ ಮಾತ್ರ ನಡೆಯುತ್ತಿತ್ತು. ಆದರೆ ಕನ್ನಡ, ತುಳು, ಮಲಯಾಳಂ, ತಮಿಳು ಲಿಪಿಯ ಅಕ್ಷರ ಮೊಳೆಗಳು ಲಭ್ಯವಿಲ್ಲದಿದ್ದಾಗ ಆ ಮಧ್ಯಂತರದ ಅವಧಿಯಲ್ಲಿ ಕಲ್ಲಚ್ಚು ಮುದ್ರಣ ಅಸ್ತಿತ್ವಕ್ಕೆ ಬಂದು ಮುಂಬಯಿ, ಮದ್ರಾಸುಗಳಲ್ಲಿ ಬಳಕೆಯಲ್ಲಿತ್ತು.
ತುಳುನಾಡಿನ ಮೊದಲ ಮುದ್ರಣಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಾಸೆಲ್ ಮಿಶನ್ ಪ್ರೆಸ್ 1841ರಲ್ಲಿ ಮಂಗಳೂರಿನಲ್ಲಿ ಆರಂಭಿಸಿದವರು. ಜಿ. ಎಚ್. ವೈಗ್ಲೆ. ಮಂಗಳೂರಿನಲ್ಲಿ ಸ್ಥಾಪಿಸಬೇಕಾದ ಕಲ್ಲಚ್ಚು ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆಯುವುದಕ್ಕಾಗಿ ಬೊಂಬಾಯಿಯಲ್ಲಿದ್ದ ಅಮೇರಿಕನ್ ಮರಾಠಿ ಮಿಶನ್ನವರ ಪ್ರೆಸ್ನ ಸಹಕಾರದಿಂದ ಮಂಗಳೂರಿನಲ್ಲಿ ಪ್ರೆಸ್ ಸ್ಥಾಪಿಸಲು ಒಂದು ಲಿಥೋ ಪ್ರೆಸ್(ಕಲ್ಲಚ್ಚು ಮುದ್ರಣ ಯಂತ್ರವನ್ನು ಮಂಗಳೂರಿಗೆ ತರಿಸಿಕೊಂಡರು. ಮುಂಬಾಯಿಯಿಂದ ಇಬ್ಬರು ಮರಾಠಿ ಮುದ್ರಕರು, ಮತ್ತು ಜರ್ಮನಿಯಿಂದ ತರಿಸಿದ ನಾಲ್ಕು ಕಲ್ಲಚ್ಚಿನ ಹಾಳೆಗಳಲ್ಲಿ ದೇಶೀಯರನ್ನೂ ಬಳಕೆ ಮಾಡಿಕೊಂಡು ಅಕ್ಷರಗಳನ್ನು ಬರೆಯಿಸಿ ಮುದ್ರಣ ಪ್ರಾರಂಭವಾಯಿತು. ನಂತರದ ಕಲ್ಲುಗಳನ್ನು ಕರ್ನೂಲ್ನಿಂದಲೂ ತರಿಸಿಕೊಳ್ಳಲಾಗುತ್ತಿತ್ತು.
1841ರಲ್ಲಿ ತುಳು ಭಾಷೆಯಲ್ಲಿ ಪ್ರಾರಂಭವಾದ ಈ ಶಿಲಾಯಂತ್ರದಲ್ಲಿ ಕೇವಲ ಧಾರ್ಮಿಕ, ಪ್ರಾಥಮಿಕ ಪಠ್ಯಗಳನ್ನು ಮಾತ್ರ ಪ್ರಕಟಿಸದೆ ಇತರ ಸಾಹಿತ್ಯಗಳ ಪ್ರಕಟಣೆಗಳಿಗೂ ಮುಂದಾದರು. ಅಕ್ಷರಮಾಲೆ (1844) ಭೂಗೋಳ (1845) ನೀತಿಪಾಠಗಳು (1848) ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರ ಮಂಗಳೂರು ಸಮಾಚಾರ(1843), ಚನ್ನಬಸವ ಪುರಾಣ (1851), ಜೈಮಿನಿ ಭಾರತ (1848), ದಾಸರ ಪದಗಳು(1850) , ಬಸವ ಪುರಾಣ (1850), ಕನಕದಾಸರ ಭಕ್ತಿಸಾರ(1850), ರಾವಣ ದಿಗ್ವಿಜಯ (1848), ಕನ್ನಡ ಗಾದೆಗಳು (1847) ಮೊದಲಾದ ಬೃಹತ್ ಗ್ರಂಥಗಳು, ಪಠ್ಯ ಪುಸ್ತಕಗಳು, ಶಾಲೆಗಳ ಉಪಯೋಗಕ್ಕಾಗಿ ಭೂಪಟಗಳು ಕಲ್ಲಚ್ಚಿನಿಂದ ಮುದ್ರಣಗೊಂಡಿತು. ಆಗ ಈ ಪ್ರೆಸ್ಗೆ ‘ಜರ್ಮನ್ ಮಿಶನ್ ಪ್ರೆಸ್’ ಎಂದು ಕರೆಯಲಾಗುತ್ತಿತ್ತು. ಮುಂಬಯಿ ಸರಕಾರದವರು ತಮ್ಮ ಆಡಳಿತದ ಶಾಲೆಗಳಿಗೆ ಬೇಕಾದ ಪಠ್ಯ ಪುಸ್ತಕಗಳನ್ನು ಅಚ್ಚು ಹಾಕಿಸುವುದಕ್ಕೂ, ಮದ್ರಾಸ್ ಸರಕಾರದವರು ತಮ್ಮ ಪತ್ರಾಗಾರದಲ್ಲಿದ್ದ ದಾಸ ಸಾಹಿತ್ಯಗಳಂತ ಕನ್ನಡ ಗ್ರಂಥ ಹಸ್ತಪ್ರತಿಗಳನ್ನು ಅಚ್ಚು ಹಾಕಿಸಲು ಬಾಸೆಲ್ ಮಿಶನ್ ಮುದ್ರಣಾಲಯವನ್ನೇ ಆರಿಸಿಕೊಂಡರು
1851ರಲ್ಲಿ ಭಾರತಕ್ಕೆ ಬಂದ ಚಾರ್ಲ್ಸ್ ಜೋರ್ಜ್ ಆಂಡ್ರೂ ಪ್ಲೆಬ್ಸ್ಟ್ ಎಂಬವರ ನಾಯಕತ್ವದಲ್ಲಿ ಇಲ್ಲಿ ಲೆಟರ್ ಪ್ರೆಸ್ನ ಸ್ಥಾಪನೆಗೆ ತಯಾರಿಗಳು ನಡೆದವು. ವಿದೇಶದಿಂದ ಹೊಸ ಮುದ್ರಾಕ್ಷರ ಯಂತ್ರಗಳು, ಅಚ್ಚು ಮೊಳೆಗಳು ತರಿಸಲ್ಪಟ್ಟವು. ಮಾತ್ರವಲ್ಲದೆ 1852 ರಿಂದ ಅಕ್ಷರ ಮೊಳೆಗಳನ್ನು ಉಪಯೋಗಿಸಿ ಮುದ್ರಣಗೊಳ್ಳುವ ಕಾರ್ಯ ಆರಂಭವಾಯಿತು. (ಟೈಪೋಗ್ರಫಿ) ಮೊತ್ತಮೊದಲು ಅಕ್ಷರಗಳನ್ನು ಕೆತ್ತಲು ದೇಶೀಯರನ್ನೇ ನೇಮಿಸಿಕೊಂಡರು ಆಗ ಪ್ರಾರಂಭವಾದ ಇತರ ಸರಕಾರಿ ಪ್ರೆಸ್ಗಳಿಗೆ ಅಚ್ಚುಮೊಳೆಗಳನ್ನೂ , ಮುದ್ರಣ ಸಾಮಾಗ್ರಿಗಳನ್ನೂ, ತರಬೇತಿ ಪಡೆದ ಕೆಲಸಗಾರರನ್ನೂ ಬಾಸೆಲ್ ಮಿಶನ್ ಪ್ರೆಸ್ ಒದಗಿಸುತ್ತಿತ್ತು 1866 ಕನ್ನಡ ಮತ್ತು ಮಲಯಾಳಂ ಅಚ್ಚುಮೊಳೆಗಳು ಬಾಸೆಲ್ನಲ್ಲಿ ಕೆತ್ತಿಸಲ್ಪಟ್ಟು ಇಲ್ಲಿ ಎರಕ ಹೊಯಿಸಲಾಗುತ್ತಿತ್ತು. (ಬಾಸೆಲ್ ಟೈಪ್) ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮುಂಬಯಿ ಪ್ರೆಸಿಡೆನ್ಸಿ ವ್ಯಾಪ್ತಿಯ ಹೆಚ್ಚಿನ ಪ್ರಕಾಶಕರುಗಳ ಮುದ್ರಣಗಳು ಇಲ್ಲಿಯೇ ಮುದ್ರಣವಾಗುತ್ತಿತ್ತು. ಇಂಗ್ಲಿಷ್ ತುಳು ನಿಘಂಟು (1888) ಬ್ರಿಗೆಲ್ರ ತುಳು ವ್ಯಾಕರಣ (1872), ಕ್ರಿಸ್ತಾನುಜ ವಾತ್ಸ ಮತ್ತು ಪಂಜೆ ಮಂಗೇಶರಾಯರ- ಲಘುಕೋಶ (1910), ಕೊಂಕಣಿ ನಿಘಂಟು (1883) ಗುಂಡರ್ಟ್ ರ ಮಲಯಾಳಂ ನಿಘಂಟು (1872), ಕಿಟೆಲ್ ರ ಕನ್ನಡ ನಿಘಂಟು( 1894) ಇಂತಹ ಅಮೂಲ್ಯ ಕೃತಿಗಳು ಮುದ್ರಣಗೊಂಡುದು ಬಾಸೆಲ್ ಮಿಶನ್ ಪ್ರೆಸ್ನಲ್ಲಿಯೇ.
ದೇಶೀಯ ಚಿತ್ರಕಾರರನ್ನು ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿಯನ್ನು ನೀಡಿ ಕನ್ನಡ ಮುದ್ರಣದ ಮೊದಲ ತೇರನ್ನು ಎಳೆದವರು ಬಾಸೆಲ್ ಮಿಶನ್ನವರು ಎಂದು ಹೇಳಿದರೆ ತಪ್ಪಾಗಲಾರದು. ಜಿಲ್ಲೆಯಾದ್ಯಂತ ಇರುವ ಪ್ರೆಸ್ಗಳವರು ಈ ಪ್ರೆಸ್ನ ಉಪಯೋಗ ಪಡೆದುಕೊಳ್ಳುತ್ತಿದ್ದುದು, ಇಲ್ಲಿ ಕೆಲಸ ಹಾಗೂ ಕಲಿತವರು ಸ್ವಂತ ಪ್ರೆಸ್ ಸ್ಥಾಪಿಸಿದ್ದು ಬಾಸೆಲ್ ಮಿಶನ್ ಪ್ರೆಸ್ನ ಹೆಗ್ಗಳಿಕೆ. ಇಲ್ಲಿ ಮುದ್ರಣವಾದ ನಿಘಂಟುಗಳು, ವ್ಯಾಕರಣಗಳು, ಭೂತಾರಾಧನೆ, ಸಂಗೀತ ಪುಸ್ತಕ ಮುಂತಾದವುಗಳು ಬೇರೆ ಬೇರೆ ಸಂಸ್ಥೆಗಳಿಂದ ಮರುಮದ್ರಣಗೊಳ್ಳುತ್ತಿವೆ.. ಮರುಮುದ್ರಣ, ಸಂಶೋಧನೆ ಮುಂತಾದ ಎಲ್ಲಾ ಹಕ್ಕನ್ನು @ಮಿಶನ್21 ಹೊಂದಿದೆ. ಪ್ರಸ್ತತ ಈ ಪ್ರೆಸ್ ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬ ಹೆಸರಿನಿಂದ ಕಾರ್ಯವೆಸಗುತ್ತಿದೆ.
ಬೆನೆಟ್ ಜಿ. ಅಮ್ಮನ್ನ
ಇವರು 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.
ಇದನ್ನೂ ಓದಿ- ಹೆಸರಾದ ಕರ್ನಾಟಕದಲ್ಲಿ ಚೈತನ್ಯದುಸಿರಾಗಲಿ ಕನ್ನಡ