Thursday, December 12, 2024

ಕರ್ನಾಟಕದ ಧಾರ್ಮಿಕ / ಮತೀಯ ಸೌಹಾರ್ದತೆಯ ನೆಲೆಗಳು

Most read

ಈಗಾಗಲೇ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡ ಪ್ರಜ್ಞೆಯನ್ನು ಅನ್ಯಪ್ರಭಾವಗಳಿಂದ ಮುಕ್ತಗೊಳಿಸಿ ನೋಡಲಾಗುವುದಿಲ್ಲ. ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕರ್ನಾಟಕ – ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ ಅನೇಕ ಭಾಷೆಗಳಿಗೆ ಈ ಗುಣವಿಲ್ಲ- ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.

ಕರ್ನಾಟಕದ ನೆಲವು ಸದಾ ಸೌಹಾರ್ದ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ. ಅದನ್ನು ಗಮನಿಸಿಯೇ ಕುವೆಂಪು ಅವರು ಕರ್ನಾಟಕವನ್ನು ʼ ಸರ್ವಜನಾಂಗದ ಶಾಂತಿಯ ತೋಟವೆಂದುʼ ಕರೆದರು. ಕ್ರಿ.ಶ. 840ರಲ್ಲಿ ರಚಿತವಾದ ‘ವಡ್ಡಾರಾಧನೆ’ ಎಂಬ ಗದ್ಯ ಕೃತಿಯಲ್ಲಿನ ಭದ್ರಬಾಹು ಭಟಾರರ ಕತೆಯ ಪ್ರಕಾರ ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. “ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವೃತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣ” ಎಂದು ಹೇಳುವ ಭದ್ರಬಾಹು ಭಟಾರರು ಮುಂದೆ ಸಂಪ್ರತಿ ಚಂದ್ರಗುಪ್ತರ ಜೊತೆ ದಕ್ಷಿಣಾ ಪಥಕ್ಕೆ ತೆರಳುತ್ತಾರೆ. ದಕ್ಷಿಣಾ ಪಥದಲ್ಲಿ ಅತ್ಯಂತ ಪ್ರಶಸ್ತವಾದ ‘ಕಳ್ಬಪ್ಪು ನಾಡು ‘ (ಈಗಣ ಶ್ರವಣಬೆಳಗೊಳ) ವಿಗೆ ಬಂದು ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಈ ಘಟನೆ ನಡೆದಿರಬಹುದಾದ ಕಾಲ ಸುಮಾರು ಕ್ರಿಸ್ತ ಶಕ ಪೂರ್ವ 3 ನೇ ಶತಮಾನ. ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕರ್ನಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲದ ತಂಜಾವೂರು ಪ್ರದೇಶ ಹೆಚ್ಚು ಫಲವತ್ತಾಗಿತ್ತು. ಬದುಕುವುದಕ್ಕೆ ಅನುಕೂಲವಾಗಿದ್ದ ಸ್ಥಳವಾಗಿತ್ತು. ಆದರೆ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ತಮ್ಮ ದಕ್ಷಿಣಾ ಪಥದ ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭೂ ಭಾಗವನ್ನಲ್ಲ, ಬದಲು ಕರ್ನಾಟಕದ ಕನ್ನಡ ಭಾಷಾ ಪ್ರದೇಶವನ್ನು. ಜೈನರು ಮುಂದೆ ಕರ್ನಾಟಕವನ್ನು “ಜಿನ ಧರ್ಮದ ಆಡುಂಬೊಲಂ” ಮಾಡಿಕೊಂಡರು. ಕನ್ನಡಕ್ಕೆ ಶ್ರೀವಿಜಯ, ಶಿವಕೋಟ್ಯಾಚಾರ್ಯ, ಪಂಪ, ಪೊನ್ನ, ರನ್ನ, ನಾಗಚಂದ್ರ, ನಾಗವರ್ಮ, ನೇಮಿಚಂದ್ರ, ಕೇಶೀರಾಜ, ಜನ್ನ , ರತ್ನಾಕರ ವರ್ಣಿ, ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟ ಜೈನರು ಕನ್ನಡ ಸಂವೇದನೆಯನ್ನು ಅತ್ಯಂತ ನವಿರಾಗಿ ರೂಪಿಸಿದರು. ಕನ್ನಡಕ್ಕೆ ಮೊದಲು ರಾಮಾಯಣ ( ನಾಗಚಂದ್ರ) ಮತ್ತು ಮಹಾಭಾರತಗಳನ್ನು ( ಪಂಪ) ಕೊಟ್ಟವರು ಜೈನರೇ ಹೊರತು ವೈದಿಕರಲ್ಲ.

ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಸನ್ನತಿ, ಡಂಬಳ, ಗವೀಮಠ, ಮಸ್ಕಿ, ಬ್ರಹ್ಮಗಿರಿ, ಕದಿರೆ ಮೊದಲಾದ ಪ್ರದೇಶಗಳನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಮೇಲುನೋಟಕ್ಕೆ ಕಾಣೆಯಾದಂತಿರುವ ಬೌದ್ಧ ಧರ್ಮವು ಕರ್ನಾಟಕದ ಅನೇಕ ಜನಪದ ಆಚರಣೆಗಳಲ್ಲಿ ಸೂಕ್ಷ್ಮವಾಗಿ ಇಂದಿಗೂ ಉಳಿದು ಬಂದಿದೆ. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳುವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸದೆ ಮೇಲುಕೋಟೆಯಲ್ಲಿ ಸ್ಥಳನೀಡಿದರು. ಕೇರಳದ ಕಾಲಟಿಯಿಂದ ಹೊರಟ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದರು. ಬಿಹಾರದ ಮಂಡನಮಿಶ್ರರು ಶಂಕರರ ಶಿಷ್ಯತ್ವ ಸ್ವೀಕರಿಸಿ, ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಶೃಂಗೇರಿಯಲ್ಲಿ ನೆಲೆಸಿದರೆಂದು ಹೇಳಲಾಗಿದೆ. ಮುಂದೆ ಶೃಂಗೇರಿಯು ಅದ್ವೈತದ ದೊಡ್ಡ ಕೇಂದ್ರವಾಗಿ ಬೆಳೆಯಿತು. ಉಡುಪಿಯಲ್ಲಿ ಮಧ್ವಾಚಾರ್ಯರು ದ್ವೈತ ಮನತವನ್ನು ಸ್ಥಾಪಿಸಿ ಪ್ರಸಾರ ಮಾಡಿದರು.

ಕ್ರಿಶ್ತಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಕನ್ನಡ ಸಂಸ್ಕೃತಿಯೊಡನೆ ಸೇರಿಹೋಗಿದ್ದಾರೆ. ಮುಂದೆ ಬಿಜಾಪುರದಿಂದ ಮುಸ್ಲಿಮರು ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ್ಯ ಎಂಬ ಮುಸ್ಲಿಂ ದೈವಗಳು ಭೂತಗಳು ಸೃಷ್ಟಿಯಾಗಿ ಪೂರ್ಣ ದೇಸೀ ಎಂದೇ ಪರಿಗಣಿತವಾದ ಪಾಡ್ದನಗಳ ಒಳಗೂ ಕಾಣಿಸಿಕೊಂಡರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆಯಿತು.

ಕರಾವಳಿಯ ಆಲಿ ಭೂತ (ಸಾಂದರ್ಬಿಕ ಚಿತ್ರ)

ಚಾರಿತ್ರಿಕವಾಗಿ ಕನ್ನಡದ ಮಣ್ಣು ಅನೇಕ ಜನಸಮುದಾಯಗಳನ್ನು ತನ್ನಲ್ಲಿಗೆ ಬರಮಾಡಿಕೊಂಡಿದೆ. ಇಥಿಯೋಪಿಯಾದಿಂದ ಕ್ರಿಸ್ತ ಶಕದಾರಂಭದಲ್ಲಿ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ ‘ಹಬಶಿ’ ಗುಂಪಿನ ಯೋಧರು, ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, 1459ರ ಹೊತ್ತಿಗೆ ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕರ್ನಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕದಲ್ಲಿಯೇ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ಧಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನೂ ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು.

ಹೀಗೆ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡ ಪ್ರಜ್ಞೆಯನ್ನು ಅನ್ಯಪ್ರಭಾವಗಳಿಂದ ಮುಕ್ತಗೊಳಿಸಿ ನೋಡಲಾಗುವುದಿಲ್ಲ. ಜೈನ ರಾಮಾಯಣದ ಪ್ರಭಾವದಿಂದ ಕರ್ನಾಟಕದ ಮಣ್ಣಿನ ಕಲೆಯೆಂದೇ ಬಣ್ಣಿಸಲಾದ ಯಕ್ಷಗಾನವು ಪ್ರಭಾವಿತಗೊಂಡು ದುರಂತ ರಾವಣನನ್ನು ಸೃಜಿಸಿಕೊಂಡಿದೆ. ಬಾಗಲಕೋಟೆಯ ಇಬ್ರಾಹಿಂ ಸುತಾರರು ಕನ್ನಡದಲ್ಲಿ ಪವಿತ್ರ ಕುರಾನಿನ ಸಂದೇಶವನ್ನು ಸರಳವಾಗಿ ಜನರಿಗೆ ರವಾನಿಸಿದ್ದಾರೆ. ಉತ್ತರದಿಂದ ಆಗಮಿಸಿದ ಬೌದ್ಧರ ಕೇಂದ್ರವಾಗಿದ್ದ ಕದರಿಯು ಇಂದು ಕನ್ನಡಿಗರ ಕೇಂದ್ರವಾಗಿ ಬೆಳೆದಿದೆ. ವ್ಯಾಸನ ಭಾರತವು ಪಂಪಭಾರತವಾಗಿ ಕುಮಾರವ್ಯಾಸ ಭಾರತವಾಗಿ ನಮ್ಮ ಮುಂದಿದೆ. ಜೈಮಿನಿಯ ಭಾರತವು ಲಕ್ಷ್ಮೀಶನ ಜೈಮಿನಿ ಭಾರತವಾಗಿ ಕನ್ನಡದ ಮಣ್ಣಲ್ಲಿ ಆಳವಾಗಿ ಬೇರೂರಿದೆ. ಕರಾವಳಿ ಕರ್ನಾಟಕದಲ್ಲಿ ಕನ್ನಡ ಜೈಮಿನಿ ಭಾರತದ ನಾಲ್ಕಾರು ಪದ್ಯಗಳನ್ನು ಬಾಯಿ ಪಾಠ ಹೇಳದಿದ್ದರೆ ಅವನಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ ಎಂಬುದು ಈ ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಹೀಗೆ ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕರ್ನಾಟಕ – ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ ಅನೇಕ ಭಾಷೆಗಳಿಗೆ ಈ ಗುಣವಿಲ್ಲ.

ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

ಇದನ್ನೂ ಓದಿ- ಹೆಸರಾದ ಕರ್ನಾಟಕದಲ್ಲಿ ಚೈತನ್ಯದುಸಿರಾಗಲಿ ಕನ್ನಡ

More articles

Latest article