ಉಳುವವಗೆ ಹೊಲದೊಡೆತನದ ಸೂತ್ರಧಾರಿ, ಬಡ ಅಶಕ್ತ ಶೋಷಿತರ ಪರವಾಗಿದ್ದ ತುಳುನಾಡ ಕಣ್ಮಣಿ, ಆದರ್ಶ ರಾಜಕಾರಣಿ ಬಿ ಸುಬ್ಬಯ ಶೆಟ್ಟರು ಈಗ ಚಿರನಿದ್ರೆಗೆ ತೆರಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ಮೂರರಂದು ಅವರ ಬೆಂಗಳೂರಿನ ನಿವಾಸದಲ್ಲಿ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆಯವರು ಭೇಟಿಯಾದ ಸಂದರ್ಭದಲ್ಲಿ ಅವರು ಹಂಚಿಕೊಂಡ ಹಳೆಯ ನೆನಪುಗಳನ್ನೊಳಗೊಂಡ ಲೇಖನ ಇಲ್ಲಿದೆ.
ಎಪ್ಪತ್ತರ ದಶಕದಲ್ಲಿ ತುಳುನಾಡಿನ ರೈತಾಪಿ ಜನವರ್ಗದಲ್ಲಿ ಅಚ್ಚಳಿಯದ ಹೊಸಕ್ರಾಂತಿಯ ಸೂತ್ರಧಾರ, ದೇವರಾಜ ಅರಸು ಮಂತ್ರಿಮಂಡಲದಲ್ಲಿ 1972 ರಿಂದ 1978 ರವರೆಗೆ ಸಚಿವರಾಗಿ ಭೂಸುಧಾರಣೆ, ಇಂಧನ ಅಲ್ಲದೆ ಸಂಪರ್ಕ, ಶಿಕ್ಷಣ ಮುಂತಾಗಿ ವಿವಿಧ ಇಲಾಖೆಗಳ ಸಚಿವರಾಗಿ ಅವಕಾಶವಂಚಿತ ವಿಶಾಲ ಜನಸಮುದಾಯದ ಉದ್ಧಾರಕ್ಕಾಗಿ ದಿಟ್ಟ ನಿರ್ಧಾರಗಳೊಂದಿಗೆ ದಣಿವರಿಯದೆ ದುಡಿದು ನ್ಯಾಯ ಒದಗಿಸಿದ ಮಾನವೀಯ ನೋಟದ ಅಪರೂಪದ ರಾಜಕಾರಣಿ, ತುಳು ನಿಘಂಟು ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ ಹಿಂದಿನ ಚಾಲನ ಶಕ್ತಿಗಳಲ್ಲೊಬ್ಬರಾಗಿದ್ದ ಮಾಜಿ ಸಚಿವ ಬಿ ಸುಬ್ಬಯ ಶೆಟ್ಟರು 91 ರ ವಯಸ್ಸಿನಲ್ಲಿ ಈಚೆಗೆ ಮಾರ್ಚ್ 10 ರಂದು ಬೆಂಗಳೂರಿನ ಸ್ವಗೃಹದಲ್ಲಿ ಸ್ವರ್ಗಸ್ಥರಾಗಿದ್ದಾರೆ.
ಮಂಗಳೂರು ಸಮೀಪದ ನೀರುಮಾರ್ಗ ಬೊಂಡಂತಿಲ ಬಾಕ್ರಬೈಲ್ ನಲ್ಲಿ ಪ್ರತಿಷ್ಟಿತ ಜಮೀನ್ದಾರಿ ಮನೆತನದಲ್ಲಿ 1934 ರ ಏಪ್ರಿಲ್ ನಾಲ್ಕರಂದು ಜನಿಸಿದ ಸುಬ್ಬಯ ಶೆಟ್ಟರು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನಲ್ಲಿ ಬಿ ಎಸ್ ಸಿ. ಕಲಿತು ಬಳಿಕ ಮದ್ರಾಸ್ ಗೆ ಹೋಗಿ ಬಿ ಎಲ್. ಪದವಿ ಪಡೆದರು. ತಂದೆಗೆ ಈ ಮಗ ಮಿಲಿಟರಿ ಸೇವೆ ಮಾಡಬೇಕು ಎಂಬ ಹಂಬಲ. ಆ ಮೇರೆಗೆ ಕೇಂದ್ರ ಇಂಟೆಲಿಜೆನ್ಸ್ ಬ್ಯುರೋ ( ಸಿ ಬಿ ಐ ) ಗೆ ಆಯ್ಕೆ ಯಾದ ಸುಬ್ಬಯ ಶೆಟ್ಟರು ಬಾಂಗ್ಲಾ ವಿಮೋಚನಾ ಯುದ್ಧ ಕಾಲದಲ್ಲಿ ಈಶಾನ್ಯ ಭಾರತದ ಇಂಡೋ – ಟಿಬೆಟಿಯನ್ ಗಡಿ ಪ್ರದೇಶದಲ್ಲಿ ಏಳು ವರ್ಷ ಕಾಲ ಸೇವೆ ಸಲ್ಲಿಸಿದರು. ಬಳಿಕ ತಾಯ್ನಾಡಿಗೆ ಹಿಂತಿರುಗಿ ಮಂಗಳೂರಿನಲ್ಲಿ ಅಂದಿನ ಹೆಸರಾಂತ ವಕೀಲ ಶ್ರೀ ವೈಕುಂಠ ಬಾಳಿಗಾ ಅವರ ಸಹಾಯಕರಾಗಿ ವಕಾಲತ್ತು ಆರಂಭಿಸಿದರು.
ಅದು ಎಪ್ಪತ್ತರ ದಶಕ..ಅಂದಿನ ಅಧಿಕಾರಸ್ಥ ಕಾಂಗ್ರೆಸ್ ಪಕ್ಷ ಇವರನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತು. 1972 ರ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಯಾಗಲು, ಸೂಚನೆಯಂತೆ ಸುರತ್ಕಲ್ ಕ್ಷೇತ್ರ ದಲ್ಲಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆ ಗೊಂಡರು. ಆವೇಳೆಗೆ ದೇಶದ ಇಂದಿರಾ ಸರ್ಕಾರವು ಕೆಲವೆಡೆ ಭೂಮಾಲಿಕರ ದಬ್ಬಾಳಿಕೆ, ಬಡ ಗೇಣಿದಾರರ ಶೋಚನೀಯ ಸ್ಥಿತಿ ನಿವಾರಣೆಯ ನಿಟ್ಟಿನಲ್ಲಿ ಭೂಮಸೂದೆಯನ್ನು ದೇಶದಲ್ಲಿ ಜ್ಯಾರಿಗೆ ತಂದಿತು. ಕರ್ನಾಟಕದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ರಾಜ್ಯದಲ್ಲಿ ಭೂಮಸೂದೆಯ ಅನುಷ್ಠಾನಕ್ಕೆ ಮುಂದಡಿ ಇಟ್ಟರು. ಆಗ ಅವರಿಗೆ ಕಂಡವರೇ ರೈತರು, ಹಿಂದುಳಿದವರ ಜನಮನ ಗೆದ್ದ ಉತ್ಸಾಹೀ ಸ್ಫೂರದ್ರೂಪಿ ತರುಣ ಬಿ ಸುಬ್ಬಯ ಶೆಟ್ಟಿ. ಭೂ ಸುಧಾರಣಾ ಖಾತೆಗೆ ಇವರೇ ತಕ್ಕವರು ಎಂದು ಅದೇ ಖಾತೆಗೆ ಮಂತ್ರಿಯನ್ನಾಗಿ ಮಾಡಿದರು.
1972ರಿಂದ 1978 ರ ವರೆಗೆ ಎರಡು ಚುನಾವಣೆಗಳಲ್ಲೂ ಗೆದ್ದ ಸುಬ್ಬಯ ಶೆಟ್ಟರು ಭೂ ಸುಧಾರಣೆ, ಇಂಧನ, ಶಿಕ್ಷಣ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಕಾಯಿದೆ ಅನುಷ್ಠಾನ, ರಕ್ಷಣೆ, ಹಲವು ಸುಧಾರಣೆಗಳಿಗೆ ಅಡಿಪಾಯ ಹಾಕಿದರು. ಎಂ ವೀರಪ್ಪ ಮೊಯಿಲಿ, ಬಿ ಜನಾರ್ದನ ಪೂಜಾರಿ – ಮುಂತಾದ ವಕಾಲತ್ ಹಿನ್ನೆಲೆಯ ರಾಜಕಾರಣಿಗಳು, ಡಾ ದಾಮೋದರ ಮೂಲ್ಕಿ ಯಂತಹ ಹಿಂದುಳಿದ ವರ್ಗದ ಶಾಸಕ -ಮಂತ್ರಿಗಳು – ಬಿ ಸುಬ್ಬಯ ಶೆಟ್ಟರ ಹೆಗಲಿಗೆ ಹೆಗಲಿತ್ತರು. ಮೊದಲಾಗಿ ಸುಬ್ಬಯ ಶೆಟ್ಟರೇ ತನ್ನ ಅನೇಕ ಗೇಣಿ ಒಕ್ಕಲು ಗಳಿಗೆ ಡಿಕ್ಲರೇಷನ್ ಕೊಡಿಸಿ, ಸ್ವಂತ ಜಮೀನನ್ನೂ ನೀಡಿದರು.
1976 ರಲ್ಲಿ ಅಂದಿನ ಬಿಲ್ಲವ ಯೂನಿಯನ್ ಅಧ್ಯಕ್ಷ ದಾಮೋದರ ಆರ್ ಸುವರ್ಣರು ಮೂಲ್ಕಿ ಯಲ್ಲಿ ಬೃಹತ್ ಬಿಲ್ಲವ ಸಮ್ಮೇಳನ ಏರ್ಪಡಿಸಿ, ಸಚಿವ ಬಿ ಸುಬ್ಬಯ ಶೆಟ್ಟರನ್ನು ಸಮ್ಮೇಳನಾಧ್ಯಕ್ಷ ರನ್ನಾಗಿ ಮಾಡಿದರು. ಅದರ ಉದ್ಘಾಟನೆಗೆ ಬಂದ ಮುಖ್ಯಮಂತ್ರಿ ದೇವರಾಜ್ ಅರಸರು ಅಲ್ಲಿ ನೆರೆದ 30,000 ದಷ್ಟು ಬಿಲ್ಲವ ಸಮಾಜವನ್ನು ಕಂಡು, ಅಚ್ಚರಿಗೊಂಡು, ಹಿಂದುಳಿದ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಘೋಷಿಸಿದರು. ಬಿ ಸುಬ್ಬಯ ಶೆಟ್ಟರೂ ತನಗೆ ಬೆಂಬಲವಿತ್ತ ಬಿಲ್ಲವ ಸಮಾಜ ಮತ್ತು ಎಲ್ಲ ಹಿಂದುಳಿದ ಸಮಾಜದ ಸಂಕಷ್ಟ ನಿವಾರಣೆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಂಡರು.
ಶಿಕ್ಷಣ, ಭಾಷೆ, ಸಂಸ್ಕೃತಿ ನಿಟ್ಟಿನಲ್ಲಿಯೂ ಸುಬ್ಬಯ ಶೆಟ್ಟರಿಗೆ ಅಪಾರ ಅಭಿಮಾನ. ಉಡುಪಿಯಲ್ಲಿ ಪ್ರೊ ಕೆ ಹರಿದಾಸ ಭಟ್ಟರು ರಾ.ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ತುಳು ನಿಘಂಟು ಯೋಜನೆಯನ್ನು ಮುಂದಿಟ್ಟಾಗ ಬಿ ಸುಬ್ಬಯ ಶೆಟ್ಟರು ತನ್ನ ಸ್ವಂತ ಮುತುವರ್ಜಿಯಿಂದ ಆ ಯೋಜನೆಗೆ ಅನುದಾನ ಮೊತ್ತವನ್ನು ತಕ್ಷಣವೇ ಒದಗಿಸಿದರು. ತಾನೇ ಸ್ವತಃ ಬಂದು ತುಳು ನಿಘಂಟು ಯೋಜನೆಯನ್ನು ಉದ್ಘಾಟಿಸಿ ಹೋದರು ( ಮಾಹಿತಿ :ಪ್ರೊ ಬಿ ಎ. ವಿವೇಕ ರೈ). ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಾರಂಭವಾಗ ಬೇಕೆಂದು ಕೆ ಸೂರ್ಯನಾರಾಯಣ ಅಡಿಗರೇ ಮುಂತಾದವರಿಂದ ಸರಕಾರಕ್ಕೆ ಒತ್ತಾಸೆಗಳು ನಡೆದಾಗ, ಸ್ಥಾಪನಾ ಸಮಿತಿಯಲ್ಲೊಬ್ಬರಾಗಿ ಸುಬ್ಬಯ ಶೆಟ್ಟರೂ ಮುಂದಿದ್ದರು. 1970 ರಲ್ಲಿ ಮಂಗಳೂರಿನಲ್ಲಿ ನ್ಯಾಯವಾದಿ ಎಸ್ ಆರ್ ಹೆಗ್ಡೆ ನೇತೃತ್ವ ದಲ್ಲಿ ತುಳು ಕೂಟ ಕುಡ್ಲ ( ರಿ ) ಸ್ಥಾಪನೆ ಗೊಂಡಾಗ ಜತೆಗಿದ್ದ ಪ್ರಮುಖರಲ್ಲಿ ಸುಬ್ಬಯ ಶೆಟ್ಟರೂ ಒಬ್ಬರು. 1980 ರ ವರೆಗೆ ಸಚಿವರಾಗಿದ್ದ ಅವರು ರಾಜಕೀಯ ಸ್ಥಿತ್ಯಂತರದ ಬಳಿಕ ರಾಜಕಾರಣದಿಂದ ದೂರವಾದರು.
ವಯೋಸಹಜವಾಗಿ ಕಳೆದ ಹಲವು ವರ್ಷಗಳಿಂದ ತನ್ನ ಬೆಂಗಳೂರು ನಿವಾಸದಲ್ಲಿ ಸಂಸಾರದೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಬಿ ಸುಬ್ಬಯ ಶೆಟ್ಟರನ್ನು ಕಳೆದ ವರ್ಷ ಸೆಪ್ಟೆಂಬರ್ 3 ರಂದು ಅವರ ಬೆಂಗಳೂರಿನ ನಿವಾಸದಲ್ಲಿ ಈ ಲೇಖಕ ಭೇಟಿಯಾದ ಸಂದರ್ಭ ದಲ್ಲಿ ಹಳೆಯ ನೆನಪುಗಳಲ್ಲಿ ಕೆಲವನ್ನು ನೆನಪಿಸಿಕೊಂಡು ಹೇಳಿಕೊಂಡರು. 1912 ರಲ್ಲಿ ಶ್ರೀ ನಾರಾಯಣ ಗುರುಗಳು ಮಂಗಳೂರಿಗೆ ಬಂದು ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಉದ್ಘಾಟಿಸಿದ್ದ ಸಮಯ ಅವರನ್ನು ನೋಡಲೆಂದು ತನ್ನ ಅಜ್ಜ ನಚ್ಚ ಸುಬ್ಬ ಶೆಟ್ಟರು ಬೊಂಡಂತಿಲದಿಂದ ಕಾಲ್ನಡಿಗೆ ಯಲ್ಲಿಯೇ ಮಂಗಳೂರು ಕುದ್ರೋಳಿಗೆ ಬಂದಿದ್ದರು ಎಂಬುದನ್ನು ಸುಬ್ಬಯ ಶೆಟ್ಟರು ನನ್ನಲ್ಲಿ ಅಂದು ಸ್ಮರಿಸಿ ಕೊಂಡರು. ತಾನೂ ನಾರಾಯಣ ಗುರುಗಳ ಅಭಿಮಾನಿ ಎಂದರು.
ಸುಬ್ಬಯ ಶೆಟ್ರ ಪತ್ನಿ ಶ್ರೀಮತಿ ಶಾಲಿನಿ. ಇಬ್ಬರು ಹೆಣ್ಣು ಮಕ್ಕಳು- ಉಮಾ, ರೇಷ್ಮಾ ವೈದ್ಯರು. ಒಬ್ಬಾಕೆ ಯು ಕೆ ಯಲ್ಲಿದ್ದರೆ ಇನ್ನೊಬ್ಬರು ಬೆಂಗಳೂರಿನಲ್ಲಿ ಮಕ್ಕಳ ಚಿಕಿತ್ಸಾ ತಜ್ಞೆ.
ಕಳೆದ ಸೆಪ್ಟೆಂಬರ್ 3 ರ ನನ್ನ ಭೇಟಿಯ ವೇಳೆ ಅವರ ಪತ್ನಿ (ಅನೇಕ ವರ್ಷ ಗಳಿಂದ) ಅಲ್ಜೈಮರ್ ಖಾಯಿಲೆ ಯಿಂದ ಮನೆಯಲ್ಲಿ ವೀಲ್‌ಚೇರ್ ನಲ್ಲಿದ್ದರು. ಹೋಂ ನರ್ಸ್ ಇದ್ದರೂ ಕೂಡ ಸುಬ್ಬಯ ಶೆಟ್ಟರು ಹೊರಗೆಲ್ಲೂ ಹೋಗದೆ ಪತ್ನಿಯ ಸನಿಹದಲ್ಲಿ ಮನೆಯೊಳಗಡೆಯೇ ಇರುತ್ತಿದ್ದರು. ಈಚೆಗೆ ಕಳೆದ ವರ್ಷಾಂತ್ಯ ಅವರ ಪತ್ನಿ ತೀರಿಕೊಂಡರು.
ಇವರ ಸಮಾಜ ಪರ ಸ್ಮರಣಿಯ ಸೇವೆಗಳಿಗಾಗಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, 2014 ರ ದೇವರಾಜ ಅರಸು ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
ಇದೀಗ ತನ್ನ ಇಹಲೋಕದ ಕರ್ತವ್ಯಗಳು ಮುಗಿದವು ಎನ್ನುವಂತೆ ಬಡ ಅಶಕ್ತ ಶೋಷಿತರ ಪರ ವಾಗಿದ್ದ ತುಳುನಾಡ ಕಣ್ಮಣಿ ಆದರ್ಶ ರಾಜಕಾರಣಿ ಬಿ ಸುಬ್ಬಯ ಶೆಟ್ಟರು ಈಗ ಚಿರನಿದ್ರೆಗೆ ತೆರಳಿದ್ದಾರೆ.
ಮುದ್ದು ಮೂಡುಬೆಳ್ಳೆ
ಜಾನಪದ ತಜ್ಞರು, ಸಂಶೋಧಕರು.
ಮೊ : 9482975125
ಇದನ್ನೂ ಓದಿ- ನುಡಿ ನಮನ | ವಾಮನ ನಂದಾವರ ನೆನಪುಗಳು