Saturday, July 27, 2024

ಕೆರಗೋಡು ವ್ಯವಸ್ಥಿತ ಗಲಭೆ ಹಿನ್ನೆಲೆ: ಧಾರ್ಮಿಕ ಅಮಲಿಗೆ ‘ವೈರಸ್’ ಪದ ಬಳಸಿದ ಅರುಣ್ ಜಾವಗಲ್ ಗೆ ಹಿಂದುತ್ವ ಟ್ರಾಲ್ ನಿಂದನೆ

Most read

ಬೆಂಗಳೂರು: ಕೆರಗೋಡಿನಲ್ಲಿ ಕೇಸರಿ ಧ್ವಜದ ಹೆಸರಿನಲ್ಲಿ ವ್ಯವಸ್ಥಿತ ಗಲಭೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಅಮಲಿಗೆ ‘ವೈರಸ್’ ಪದ ಬಳಸಿದ ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಗೆ ಹಿಂದುತ್ವ ಟ್ರಾಲ್ ಪಡೆ ನಿಂದನೆ, ಬೆದರಿಕೆ ಹಾಕುತ್ತಿದೆ.

ವೈರಸ್ ಹಾಸನ, ಮಂಡ್ಯದ ಹಳ್ಳಿ ಹಳ್ಳಿಯ ಮನೆ ಮನೆಯನ್ನು ತಲುಪಿದೆ. ಮಂಡ್ಯದಲ್ಲಿ ಕಂಡಿರುವುದು ಬರಿ ಟ್ರೈಲರ್ ಅಷ್ಟೆ. #virus #RSS

ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದ ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ವಿರುದ್ಧ ಬಲಪಂಥೀಯ ಟ್ರೋಲ್ ಆರ್ಮಿ ಮುಗಿಬಿದ್ದಿದ್ದು, ಜೀವ ಬೆದರಿಕೆ ಒಡ್ಡುತ್ತಿವೆ.

ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಅಥವಾ ನಾಡಧ್ವಜ ಹಾರಿಸುವುದಾಗಿಯೂ, ಯಾವುದೇ ಅನ್ಯ ಧ್ವಜ ಹಾರಿಸುವುದಿಲ್ಲ ಎಂಬುದಾಗಿಯೂ ಮುಚ್ಚಳಿಕೆ ಬರೆದುಕೊಟ್ಟು ಗಲಭೆ ಸೃಷ್ಟಿಸುವ ಉದ್ದೇಶದಿಂದ ಹನುಮನ ಚಿತ್ರವಿರುವ ಭಗವಾದ್ವಜ ಹಾರಿಸಿದ ಪ್ರಕರಣ ಮತ್ತು ನಂತರದ ಬೆಳವಣಿಗಳಿಗೆ ಸಂಬಂಧಿಸಿದಂತೆ ಅರುಣ್ ಜಾವಗಲ್ ಪೋಸ್ಟ್ ಹಾಕಿದ್ದರು.

ರಾಜಕೀಯದಲ್ಲಿ ಧರ್ಮವನ್ನು‌ ಬೆರೆಸಿ, ಜನರ ಮನಸುಗಳಲ್ಲಿ ವಿಷಬೀಜ ಬಿತ್ತಿ, ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿಯಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ವೇಗವಾಗಿ ಹರಡುತ್ತಿರುವ ಧರ್ಮಾಂಧತೆಯ ಅಮಲನ್ನು ಉದ್ದೇಶಿಸಿ ಅವರು ‘ವೈರಸ್’ ಎಂಬ ಪದ ಬಳಸಿದ್ದರು.

ಇದರಿಂದ ವ್ಯಗ್ರರಾದ ಹಿಂದುತ್ವ ಟ್ರೋಲ್ ಪಡೆ, ಕೀಳುಮಟ್ಟದ ಕಮೆಂಟ್ ಗಳಿಂದ ನಿಂದಿಸುತ್ತಿದ್ದು, ಎಂದಿನಂತೆ ತನ್ನ ಸಂಸ್ಕಾರ ಏನೆಂಬುದನ್ನು ತೋರಿಸಿಕೊಂಡಿದೆ.

ಧರ್ಮದ ಹೆಸರಿನ ರಾಜಕಾರಣದಿಂದ ಆಗುವ ಅಪಾಯಗಳ ಕುರಿತು ನಿನ್ನೆಯಷ್ಟೇ ಅರುಣ್ ಜಾವಗಲ್ ಎಕ್ಸ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಯುದ್ಧಪೀಡಿತ ಇಸ್ರೇಲ್ ನಲ್ಲಿ ನೌಕರಿಗೆಂದು ಸಾಲುಗಟ್ಟಿರುವ ಭಾರತೀಯರ ವಿಡಿಯೋವನ್ನು ಶೇರ್ ಮಾಡಿದ್ದ ಅವರು ನಮ್ಮ ದೇಶದ ಯುವಕರಿಗೆ ಬೇಕಿರುವುದೇನು ಎಂದು ಪ್ರಶ್ನಿಸಿದ್ದರು‌.

“ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದರಲ್ಲಿ ಉತ್ತರ ಪ್ರದೇಶ ಮುಂದಿದೆ ಅನ್ನೋದು ನಮಗೆಲ್ಲರಿಗೂ ಗೊತ್ತಿದೆ. ರಾಜಕಾರಣಿಗಳು ಜನರನ್ನು ಧರ್ಮದ ಹೆಸರಲ್ಲಿ ಉದ್ವೇಗಕ್ಕೊಳಗಾಗುವಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಕೊನೆಗೆ ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಇದೆ. ಯುದ್ಧ ನಡೆಯುತ್ತಿರುವ ಸ್ಥಳದಲ್ಲಿರುವ ಉದ್ಯೋಗಕ್ಕೂ ಸಾವಿರಾರು ಯುವಕರು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ ಅಂದ್ರೆ ನಿರುದ್ಯೋಗದ ಸಮಸ್ಯೆ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಧರ್ಮದ ರಾಜಕಾರಣಕ್ಕೆ ಉದ್ವೇಗಗೊಳ್ಳುವ ಮೊದಲು ಕನ್ನಡ ನಾಡಿನ ಯುವಕರು ಕಣ್ಣೆದುರಿಗಿರುವ ಧರ್ಮದ ಹೆಸರಿನ ರಾಜಕಾರಣ ದೊಡ್ಡ ಮಟ್ಟದಲ್ಲಿರುವ ಉತ್ತರ ಪ್ರದೇಶದ ಪರಿಸ್ಥಿತಿ ಒಮ್ಮೆ ನೋಡಬೇಕಿದೆ. ಉತ್ತರ ಪ್ರದೇಶದ ಪರಿಸ್ಥಿತಿ ಕನ್ನಡ ನಾಡಿಗೆ ಬರುವುದು ಬೇಡ” ಎಂದು ಅರುಣ್ ಜಾವಗಲ್ ಬರೆದಿದ್ದರು.

ಸಂಘಪರಿವಾರದ ಟ್ರೋಲ್ ಪಡೆಗೆ ಈ ಮಾತುಗಳು ರುಚಿಸದೇ ಇರುವ ಹಿನ್ನೆಲೆಯಲ್ಲಿ ಅರುಣ್ ಅವರನ್ನು ಕೊಳಕು ಮಾತುಗಳಿಂದ ನಿಂದಿಸುತ್ತಿವೆ.

More articles

Latest article