ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಕೃಷ್ಣ ಅವರ ಮೊಮ್ಮಗ, ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ಥ್ಯ ಹೆಗ್ಡೆ ಅಗ್ನಿಸ್ಪರ್ಶ ಮಾಡಲಿದ್ದಾರೆ. ಈಗಾಗಲೇ ಪಾರ್ಥೀವ ಶರೀರದ ಮೆರವಣಿಗೆ ಚನ್ನಪಟ್ಟದಿಂದ ಮುಂದೆ ಸಾಗಿದೆ.
ಈ ಮಧ್ಯೆ ಮದ್ದೂರು ತಾಲ್ಲೂಕಿನ ಹೊಸೂರಿನ ರೈತ ದೇವರಾಜ್ ತಾನೇ ಬೆಳೆದ ಶ್ರೀಗಂಧದ ಮರದ ತುಂಡುಗಳನ್ನು ತಂದಿದ್ದಾರೆ. ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ ನೀಡಿದ್ದ ಕೃಷ್ಣ ಸಾಹೇಬರು. ಅವರು ಜಾರಿಗೊಳಿಸಿದ ಯೋಜನೆಯಿಂದ ನಾನು ಗಂಧ ಬೆಳೆದಿದ್ದೇನೆ.. ನಾನು ಬೆಳೆದ ಗಂಧವನ್ನು ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯೂ ಶ್ರೀಗಂಧದ ಕಟ್ಟಿಗೆಗಳನ್ನು ಪೂರೈಕೆ ಮಾಡಿದೆ. ಈಗಾಗಲೇ ಅಂತ್ಯಕ್ರಿಯೆ ನಡೆಯುವ ಕಾಫಿಡೇ ಕಟ್ಟಡದ ಸ್ಥಳದಲ್ಲಿ ಡಿಐಜಿ ಬೋರಲಿಂಗಯ್ಯ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 700ಕ್ಕೂ ಹೆಚ್ಚು ಸಿಬ್ಬಂದಿ, ಕೆಎಸ್ಆರ್ಪಿ, ಡಿಎಆರ್ ತುಕಡಿ ಸೇರಿ 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನೂ ಅಳವಡಿಸಲಾಗಿದೆ.
ಸಂಜೆ 4 ಗಂಟೆ ವೇಳೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಚಿವ ಸಂಪುಟದ ಸದಸ್ಯರು, ಕೇಂದ್ರ ಸರ್ಕಾರದ ಪರವಾಗಿ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ರಾಜಕೀಯ ಮುಖಂಡರು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಡಿಸಿಎಂ ಶಿವಕುಮಾರ್ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಮೃತದೇಹ ಇಡಲಾಗುವ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು ಬ್ಯಾರೀಕೇಡ್ ಅಳವಡಿಸಲಾಗಿದೆ. ಮೂರು ಸರತಿ ಸಾಲುಗಳ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ವಿಶೇಷ ಗ್ಯಾಲರಿ ನಿರ್ಮಾಣ ಮಾಡಿದೆ. ಎಸ್.ಎಂ ಕೃಷ್ಣರ ಕುಟುಂಬದ ಸದಸ್ಯರಿಗೆ ಕಾಫಿ ಡೇ ಕಟ್ಟಡದ ಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ. 4 ಗಂಟೆಗೆ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭವಾಗಲಿದ್ದು 5 ಗಂಟೆ ಒಳಗೆ ಮುಕ್ತಾಯವಾಗಲಿದೆ.