ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿನ ಬಿಕ್ಕಟ್ಟು ತೀವ್ಗೊಂಡಿದೆ. ಇತ್ತ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಆದೇಶ ನೀಡಿದ್ದಾರೆ.
ಹೌದು, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿನ ಬಿಕ್ಕಟ್ಟು ತೀವ್ಗೊಂಡಿದ್ದು, ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಶಾಸಕರನ್ನು ಕಡೆಗಣಿಸಿದ್ದಾರೆ; ತಮ್ಮ ತಂದೆ ಮತ್ತು ಗುಡ್ಡಗಾಡು ರಾಜ್ಯದ ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ವೀರಭದ್ರ ಸಿಂಗ್ ಅವರನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ನಡುವೆ ಇಂದು ಈ ಬೆಳವಣಿಗೆ ನಡೆದಿದೆ. ಇದು ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಇದಾದ ಬೆನ್ನಲ್ಲೆ ಕಾಂಗ್ರೆಸ್ ಬಹುಮತಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ಹಾಗೂ ವಿಧಾನಸಭೆಯಲ್ಲಿ ಹಲವು ತಿಕ್ಕಾಟ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್, ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತ್ತು ಮಾಡಿದ್ದಾರೆ.
ಸದನದಲ್ಲಿ ದುರ್ವತ್ರನೆ ಮತ್ತು ಘೋಷಣೆ ಕೂಗಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.
‘ವಿಧಾನಸಭೆಯಲ್ಲಿ ಬಜೆಟ್ ಅನ್ನು ಅಂಗೀಕರಿಸಲು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಬಹುದು ಎಂದು ನಾವು ಆತಂಕಗೊಂಡಿದ್ದೇವೆ’ ಎಂದು ಠಾಕೂರ್ ಬೆಳಿಗ್ಗೆ ಸುದ್ದಿಗಾರರಿಗೆ ತಿಳಿಸಿದ್ದರು.
ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ರಾಜ್ಯಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಹಾಗಾಗಿ, ಮುಖ್ಯಮಂತ್ರಿ ಸುಲ್ವಿಂದರ್ ಸಿಂಗ್ ಸುಖು ರಾಜೀನಾಮೆಗೆ ಒತ್ತಾಯಿಸಿದ್ದರು.
ಹಿಮಾಚಲ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತ್ತು. ಪಕ್ಷದ ಅತೃಪ್ತ ಶಾಸಕರು ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದರು. ಇಲ್ಲಿ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಫ್ಟಿ ಮತ್ತು ಬಿಜೆಪಿಯ ಹರ್ಷ ಮಹಾಜನ್ ನಡುವೆ ಪೈಪೋಟಿ ಇತ್ತು. ಇಬ್ಬರೂ 34-34ರಲ್ಲಿ ಸಮಬಲ ಸಾಧಿಸಿದರು. ಚೀಟಿ ಎತ್ತಿದಾಗ ಅದೃಷ್ಟ ಮಹಾಜನ್‌ಗೆ ಒಲಿದಿತ್ತು.