Sunday, July 14, 2024

ಕೈಯಲ್ಲಿ ಬಿಲ್ಲು-ಬಾಣ ಹಿಡಿದ ಲವರ್ ಬಾಯ್ ಡಾರ್ಲಿಂಗ್ ಕೃಷ್ಣ

Most read

ನಟ ಡಾರ್ಲಿಂಗ್ ಕೃಷ್ಣ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ಲವರ್ ಬಾಯ್ ಆಗಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ.

ಚಿತ್ರದ ಹೆಸರು ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ-ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ.

ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.

ಈ ಹಿಂದೆ ಸಂಚಾರಿ ವಿಜಯ್ ನಟನೆಯ ಕೃಷ್ಣ ತುಳಸಿ ನಿರ್ದೇಶಿಸಿ ಯಶಸ್ಸು ಕಂಡಿರುವ ಸುಕೇಶ್ ಡಿ ಕೆ ಅವರ ಜೊತೆಗಿನ ಚಿತ್ರವಿದು. ಈ ಚಿತ್ರಕ್ಕಾಗಿ ಕಳೆದ ಒಂದುವರೆ ವರ್ಷದಿಂದ ದೇಹ ದಂಡಿಸುತ್ತ, ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವ ಡಾರ್ಲಿಂಗ್ ಕೃಷ್ಣ, ಬೇರೆ ಯಾವುದೇ ಚಿತ್ರದ ಕತೆ ಕೇಳದೆ ಈ ಚಿತ್ರಕ್ಕಾಗಿಯೇ ತಯಾರಿಯಲ್ಲಿದ್ದಾರೆ.

ಇತಿಹಾಸದ ನೆರಳಿನಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಇತ್ತೀಚೆಗಷ್ಟೆ ಮುಹೂರ್ತ ಆಗಿದೆ. ಮೈಸೂರಿನ ಲಲಿತ್ ಮಹಲ್ ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ. ಜತೆಗೆ ಚಿತ್ರೀಕರಣಕ್ಕೆ ಚಾಲನೆಯೂ ನೀಡಲಾಗಿದೆ.

ಮೊದಲ ದಿನದ ಶೂಟಿಂಗ್ ನಲ್ಲಿ 200ಕ್ಕೂ ಹೆಚ್ಚು ಅಮೆರಿಕಾ ಹಾಗೂ ರಷ್ಯನ್ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ದೃಶ್ಯಗಳನ್ನು ನಿರ್ದೇಶಕ ಸುಕೇಶ್ ಡಿ ಕೆ ಹಾಗೂ ನೃತ್ಯ ನಿರ್ದೇಶಕ ಧನು ಅವರ ಸಾರಥ್ಯದಲ್ಲಿ ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಹಲಗಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ 80 ಕೋಟಿ ವೆಚ್ಚದ ಈ ಚಿತ್ರದ ಮೊದಲ ದಿನದ ಚಿತ್ರೀಕರಣವೇ 5 ಕ್ಯಾಮೆರಾ ಹಾಗೂ ಮೂರು ಸಿನಿಮಾ ಯೂನಿಟ್ ಗಳ ಮೂಲಕ ಚಿತ್ರೀಕರಣ ಶುರುವಾಗಿದೆ.

ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೆ ತೆರೆಕಂಡು ಸೂಪರ್ ಹಿಟ್ ಆದ ಹನುಮಾನ್, ಕಲ್ಕಿ, ನಾ ಸಾಮಿರಂಗ, ಮಂಗಳವಾರಂ ಮುಂತಾದ ಚಿತ್ರಗಳಿಗೆ ಕ್ಯಾಮೆರಾ ಹಿಡಿದು ಯಶಸ್ವಿ ಛಾಯಾಗ್ರಾಹ ಎನಿಸಿಕೊಂಡಿರುವ ದಶರಥಿ ಶಿವೇಂದ್ರ ಹಾಗೂ ಅತ್ಯುತ್ತಮ ಛಾಯಾಗ್ರಾಹಕ ವಿಭಾಗದಲ್ಲಿ ನಂದಿ ಪ್ರಶಸ್ತಿ ಪುರಸ್ಕೃತ ಸಾಯಿ ಶ್ರೀರಾಮ್ ಅವರು ಹಲಗಲಿ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.

ಇನ್ನೂ ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ಹಲಗಲಿ ವೀರರು ಚಿತ್ರಕ್ಕೆ ಸಾಹಸ ಸಂಯೋಜಕರು.

ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕುತ್ತಿದ್ದು, ತಿಪಟೂರಿನಲ್ಲಿ ಹಲಗಲಿ ಊರಿನ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವುದು ವಿಶೇಷ.

ಚಿತ್ರದಲ್ಲಿ ಹೆಸರಾಂತ ಬಹು ಭಾಷೆಯ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.

More articles

Latest article