Sunday, September 8, 2024

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸಂತ್ರಸ್ತರಿಗೆ ಭೂಮಿ ಮಂಜೂರು, ಶೀ‌ಘ್ರ ಅಂತಿಮ ವರದಿ ಸಲ್ಲಿಕೆ! – ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ

Most read

ಬೆಳಗಾವಿಯಲ್ಲಿ (Belagavi) ಮಹಿಳೆಯ ಬೆತ್ತಲೆಗೊಳಿಸಿ ಹಲ್ಲೆ (Women Assault) ನಡೆಸಿದ ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ ಮತ್ತು ಬಹುತೇಕ ಭಾಗ ಪೂರ್ಣಗೊಂಡಿದೆ ಜನವರಿ ಅಂತ್ಯದಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ (Karnataka High Court) ರಾಜ್ಯ ಸರ್ಕಾರ ಬುಧವಾರ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ (Chief Justice PB Varale) ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ (Justice Krishna Dixit) ಅವರ ಪೀಠವು ಹೆಚ್ಚುವರಿ ಅಡ್ವೊಕೇಟ್ ಜನರಲ್ (Additional Advocate General) ಸಲ್ಲಿಸಿದ ಮೆಮೊವನ್ನು ದಾಖಲಿಸಿಕೊಂಡಿತು, ಮೆಮೊ ಪ್ರಕಾರ, ಆರೋಪಿಗಳನ್ನು ಬಂಧಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.  ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣದ ಬಹುತೇಕ ತನಿಖೆ ಪೂರ್ಣಗೊಂಡಿದ್ದು, ಜನವರಿ ಅಂತ್ಯದಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ  ಎಂದು ಸೂಚಿಸಿದೆ.

ಸರ್ಕಾರದಿಂದ ನೀಡಿರುವ ಪರಿಹಾರ ಮೊತ್ತವನ್ನು ಸಂಪೂರ್ಣವಾಗಿ ಸಂತ್ರಸ್ತೆಗೆ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಈಗಾಗಲೇ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಸಂತ್ರಸ್ತೆ ಆ ಜಮೀನಿಗೆ ಬದಲಾಗಿ ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಗ್ರಾಮಕ್ಕೆ ಸಮೀಪವಿರುವಂತೆ ಪರ್ಯಾಯ ಭೂಮಿಯನ್ನು ಮಂಜೂರು ಮಾಡುವ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿತ್ತು. ಆಕೆಯ ಪುತ್ರ ಯುವತಿಯೊಬ್ಬಳನ್ನು ಪ್ರೇಮಿಸಿ, ಆಕೆಯ ಜೊತೆಗೆ ಪರಾರಿಯಾದ ಕಾರಣ ನೀಡಿ ಹಲ್ಲೆ ಮಾಡಲಾಗಿತ್ತು. ಈ ಘಟನೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ದೇಶಾದ್ಯಂತ ಖಂಡನೆಗೆ ಒಳಗಾಗಿತ್ತು.

ಈ ಪ್ರಕರಣ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿರುವ ಹೈಕೋರ್ಟ್ (High Court), ಮಹಾಭಾರತದಲ್ಲಿ ವಸ್ತ್ರಾಪಹರಣದ ವೇಳೆ ದ್ರೌಪದಿಯ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ ಧಾವಿಸಿದಂತೆ, ಈಗಿನ ಕಾಲದಲ್ಲಿ ಯಾರು ಕೂಡ ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿತ್ತು. ಸಂತ್ರಸ್ತೆಗೆ ಭೂಮಿ, ಪರಿಹಾರ ಧನ ಇನ್ನಿತರೆ ಸೌಲಭ್ಯಗಳನ್ನು ನೀಡಬೇಕು ಎಂದು ತಾಕೀತು ನೀಡಿ. ಪೂರ್ಣ ತನಿಖಾ ವರದಿ ಸಲ್ಲಿಸುವಂತೆ ಆದೇಶಿತ್ತು. ಈಗ ಆ ಮೆಮೊ ಕೋರ್ಟಿಗೆ ತಲುಪಿದೆ.

ಪ್ರೀತಿಸಿದ ಯುವತಿ ಜೊತೆ ಯುವಕ ಓಡಿ ಹೋದ ಕಾರಣಕ್ಕೆ ಆತನ ತಾಯಿಯನ್ನ ಬೆತ್ತಲೆಗೊಳಿಸಿ ಥಳಿಸಿ ಮೃಗೀಯ ವರ್ತನೆ ತೋರಿದ ಘಟನೆ ಇಡೀ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. 

More articles

Latest article