ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್
ನಂಗೆ ಬೇರೆ ಏನು ಬರೆಯಕ್ಕೂ ಮನಸ್ಸು ಬರ್ತಿಲ್ಲ. ಮನಸ್ಸೆಲ್ಲಾ ಒಂದೇ ಯೋಚನೆ. ಧರ್ಮ ಇಲ್ಲದೆ ಬದುಕಕ್ಕೆ ಆಗಲ್ವ? ದೇವರನ್ನು ನಂಬೋದು ಧರ್ಮವನ್ನು ಅನುಸರಿಸೋದು ಎರಡು ಬೇರೆ ವಿಷಯ. ಧರ್ಮವನ್ನು ಯಾಕೆ ಅನುಸರಿಸುತ್ತೇವೆ? ಜೀವನವನ್ನು ನೈತಿಕತೆಯಿಂದ ಬದುಕಲು ಅಂತ ಹೇಳಿದ್ರೆ ನಂಗನಿಸುತ್ತೆ ನಮ್ಮ ಮಾನವ ಹಕ್ಕುಗಳ ಯುಡಿಎಚ್‌ಆರ್ ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್ ಗಿಂತ ಉತ್ತಮವಾದ ಧರ್ಮ ಗ್ರಂಥ ಬೇರೆ ಸಿಗಲು ಕಷ್ಟ. ಯಾಕೆಂದರೆ ಅದರಲ್ಲಿ ಯಾವ ಮನುಷ್ಯನನ್ನೂ ತಮ್ಮ ಹುಟ್ಟಿನ ಮೇಲೆ ಕೀಳು, ತಪ್ಪು ಎಂಬುದನ್ನು ಹೇಳುವುದಿಲ್ಲ. ಹಾಗಂತ ಬೇರೆ ಧರ್ಮ ಗ್ರಂಥಗಳು ಹಿಂಸೆ, ಅತ್ಯಾಚಾರಗಳನ್ನು ಹೇಳಿವೆ ಅಂತ ಅಲ್ಲ. ಆದರೆ ಧರ್ಮದ ಹೆಸರಿನಲ್ಲಿ ಐತಿಹಾಸಿಕವಾಗಿ ನಡೆಯುತ್ತಿರುವ ಕೊಲೆ, ಅತ್ಯಾಚಾರ, ದರೋಡೆ, ಹಿಂಸೆ, ಕಿರುಕುಳ, ಇವೆಲ್ಲವಕ್ಕೆ ಒಂದು ನ್ಯಾಯ ಸ್ಥಾನ ಕಲ್ಪಿಸುವ ಮನುಷ್ಯರಿಗೆ ಏನು ಹೇಳುವುದು?
ಭಾರತ ವಿವಿಧತೆಯನ್ನು ಯಾವಾಗೆಲ್ಲಾ ಕ್ಲೇಮ್ ಮಾಡಿದೆಯೋ ಆವಾಗೆಲ್ಲಾ ಯೋಚನೆ ಮಾಡಬೇಕು ಹೇಗೆ ಅದು ಬಹುಸಂಖ್ಯಾತ ತತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಅಂತ. ಎಷ್ಟರಮಟ್ಟಿಗೆ ಎಂದರೆ, ಊಟದಲ್ಲೂ ರಿಸ್ಟ್ರಿಕ್ಷನ್ ತಂದಿದೆ. ಸಸ್ಯಾಹಾರಿಯೋ ಮಾಂಸಾಹಾರಿಯೋ, ತರ್ಕಾರಿನೋ ಏನೇ ಆಗಿರಬಹುದು. ಈಗ ಒಂದು ಧರ್ಮದವರಿಗೆ ಬದನೆಕಾಯಿ ತಿನ್ನುವುದು ಪಾಪ ಅನಿಸಿದರೆ, ಇರುವ ಎಲ್ಲಾ ಪೌರರನ್ನು ಬದನೆಕಾಯಿ ತಿನ್ನಬಾರ್ದು ಎಂದು ಹೇಳಕ್ಕೆ ಆಗುತ್ತಾ?. ದಾದ್ರಿಯಲ್ಲಿ ನಡೆದ ಘಟನೆ ಹಿಂದುಗಳಾಗಿರುವವರಿಗೆ ಒಂದು ಅವಮಾನ ಅಂತಲೇ ಹೇಳಬೇಕು. ಏಕೆಂದರೆ ಒಬ್ಬರ ಮನೆಗೆ ಹೋಗಿ ಅವರ ಊಟವನ್ನು ವಸ್ತುವಾಗಿಟ್ಟುಕೊಂಡು ಅವರನ್ನು ಕೊಲ್ಲುವುದನ್ನು ಹಿಂದೂ ಧರ್ಮ ಹೇಳಿದೆಯ ಅಂತ ಡೌಟ್ ಬರುತ್ತೆ. ಹಾಗೆ ಹೇಳಿದ್ರೆ ನನಗಂತೂ ಅಂತಹ ಒಂದು ಧರ್ಮದಲ್ಲಿ ಇರಲು ಅವಮಾನ. ಹಿಂದುಗಳ ಹೆಸರಲ್ಲಿ ಮಾಡುತ್ತಿರುವ ಈ ಹಿಂದು ಮೂಲಭೂತವಾದದ ವಿರುದ್ಧ ನಾವು ನಿಮ್ಮ ತರಹ ಹಿಂದುಗಳಲ್ಲ, ಅಥವಾ ಹಿಂದುಗಳನ್ನು ನೀವು ಪ್ರತಿನಿಧಿಸುವುದು ಬೇಡ ಎಂದು ಗಟ್ಟಿಯಾಗಿ ಪ್ರತಿಭಟಿಸಬೇಕು.
ಹಾಗೆ ನೋಡಿದರೆ ಮೂಲಭೂತವಾದವನ್ನು ಅನುಸರಿಸುವ ಎಲ್ಲಾ ಧರ್ಮಗಳು, ಪ್ರೀತಿ ಪ್ರೇಮ ಸಂಬಂಧಗಳಿಗೆ ಎದುರು ನಿಲ್ಲುತ್ತಾರೆ; ಅದು ಅಂತರ ಧರ್ಮ ಪ್ರೇಮವಿರಬಹುದು, ಅಂತರ ಜಾತಿ ಪ್ರೇಮವಿರಬಹುದು, ಗಂಡು ಗಂಡಿನ ಮಧ್ಯ ಪ್ರೇಮವಿರಬಹುದು, ಹೆಣ್ಣು ಹೆಣ್ಣಿನ ಮಧ್ಯ ಪ್ರೇಮವಿರಬಹುದು, ಲಿಂಗ ಬದಲಾಯಿಸಿಕೊಂಡವರ ಪ್ರೇಮವಿರಬಹುದು.
ಏಷ್ಟೋ ಸರ್ತಿ ಅನಿಸಿದೆ ಈ ಧರ್ಮ ಹೇಳಿಕೊಡುವುದು ಎನನ್ನು? ಜೀವಿಸುವ ಶೈಲಿ, ಹಂಗಿರಬಾರ್ದು ಹಿಂಗಿರ ಬಾರ್ದು ಇತ್ಯಾದಿ ಇತ್ಯಾದಿ. 2013ರಲ್ಲಿ ಎಕನಾಮಿಕಲಿ ವೀಕರ್ ಸೆಕ್ಷನ್ಸ್ ಕ್ವಾಟ್ರಸ್ ಗಳನ್ನು ಈಜೀಪುರದಲ್ಲಿ ನೆಲಸಮ ಮಾಡಿದಾಗ ಆ ರಾತ್ರಿ ಇಡೀ 11 ಎಕರೆ ಭೂಮಿ ನೆಲಸಮವಾಗಿ ಅಲ್ಲಲ್ಲಿ ಬೆಂಕಿ ಹಾಕಿ ಅಲ್ಲಿಯ 5000 ಜನರು ಆ ರಾತ್ರಿಯನ್ನು ಕಳೆಯಲು ಕುಳಿತಿದ್ದರು. ಆ ದಿವಸ ಎಲ್ಲಾ ಧರ್ಮಗಳ ದೇವರುಗಳಿಗೆ ಅದೆಷ್ಟು ಶಾಪ ಬಿತ್ತೋ ಗೊತ್ತಿಲ್ಲ. ಪ್ರತಿಯೊಬ್ಬರ ಕಣ್ಣಲ್ಲಿ ನೀರು, ಭೀಕರ ಶೂನ್ಯತೆ, ಮುಂದೇನು ಎನ್ನುವ ಭೂತ ಕಣ್ಣಿನ ಮುಂದೆ. ಅಂತಹ ಸಮಯದಲ್ಲಿ ಅವರಿಗೆ ಅವರ ಮನೆಗಳನ್ನು ಹಿಂದಿರುಗಿಸಲು ಯಾವ ಧರ್ಮವೂ ಸಹಾಯಕ್ಕೆ ಬಂದಿರಲಿಲ್ಲ. ಕೊನೆಯ ತನಕ ಎಷ್ಟೋ ಜನ ದೇವರನ್ನು ಧ್ಯಾನಿಸುತ್ತಾ, ಧರ್ಮವನ್ನು ನಂಬುತ್ತಾ, ʼಇಲ್ಲ ಈ ಅಮಾನವೀಯ ಕೃತ್ಯವನ್ನು ಮಾಡಲು ದೇವರು ಬಿಡುವುದಿಲ್ಲʼ ಎಂದು ನಂಬಿ ಕುಳಿತಿದ್ದವರ ಕಣ್ ಮುಂದೆನೇ ಜೆಸಿಬಿ ಒಂದೊಂದೇ ಮನೆಯನ್ನು ನೆಲಸಮ ಮಾಡುತ್ತಾ ಬಂತು. ಆ ಜೆಸಿಬಿಗಳಿಗೆ ಆಜ್ಞೆ ಆಗಿತ್ತೋ ಏನೋ ಯಾರಿಗೂ ಕಾಯಬಾರದು ಎಂದು. ಜನರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿ ಬರುವಷ್ಟರಲ್ಲಿ ಅದು ತನ್ನ ಕಾರ್ಯವನ್ನು ಶುರುಮಾಡಿತ್ತು. ಜನರು ತಮ್ಮ ವಸ್ತುಗಳನ್ನು ಎತ್ತಿಕೊಂಡು ಓಡುತ್ತಿದ್ದರು.
ನಾವು, ರಿಹಾಬ್ ಕೆಲಸಗಾರರು ಅವರಿಗೆ ಸಹಾಯ ಮಾಡುತ್ತಿದ್ದೆವು. ಅಮ್ರೀನ್ ಮತ್ತು ಮುಸ್ಕಾನ್ ಇಬ್ಬರು 7ರ ವಯಸ್ಸಿನ ಮಕ್ಕಳು. ಅವರು ತಮ್ಮ ಬಳಪ, ಸ್ಲೇಟು, ಪೆನ್ಸಿಲ್ಲು ಆಟದ ಸಾಮಾನುಗಳನ್ನು ಎತ್ತುವ ಮುನ್ನವೇ ಆ ಜೆಸಿಬಿ ಎಲ್ಲವನ್ನು ನೆಲಸಮ ಮಾಡಿತು. ಅದನ್ನು ಕಣ್ಣಲ್ಲಿ ಕಂಡ ಅವರಿಬ್ಬರ ಆ ವಿಷಾದದ ಮುಖ ನನಗೆ ಇಂದಿಗೂ ಘೋರ ಕನಸು. ಆ 5,000 ಜನ ಅದೆಷ್ಟು ದೇವರುಗಳನ್ನು ಕರೆದರೋ ಗೊತ್ತಿಲ್ಲ. ಆದರೆ ಅವರೆಲ್ಲರೂ ಬೀದಿಗೆ ಬಂದರು. ಮತ್ತೆ ಜೀವಿಸಲು ಶುರು ಮಾಡಿದರು. ಆ ಕೃತ್ಯವನ್ನು ನಮ್ಮ ಕಾರ್ಪೊರೇಶನ್ನೇ ನಡೆಸಿದ್ದು. ನಮ್ಮ ವ್ಯವಸ್ಥೆಯೇ ಹಿಂಸಾತ್ಮಕವಾಗಿದ್ದಲ್ಲಿ ಅದನ್ನು ತಡೆಯಲು ಹೋರಾಟ ಮತ್ತು ಖಡಾ ಖಂಡಿತವಾಗಿ ಗಟ್ಟಿದನಿಯಿಂದ ಈ ವ್ಯವಸ್ಥೆಯನ್ನು ನಿರಾಕರಿಸುವುದು ಬಹಳ ಮುಖ್ಯ.
ಇರಬಹುದು, ಈ ಕೃತ್ಯ ಜಾತಿ ಧರ್ಮಗಳ ಆಧಾರದಲ್ಲಿ ಆಗದೇ ಇರಬಹುದು. ಆದರೆ ಅದರಲ್ಲಿ ಬಲಿಪಶುಗಳಾಗಿದ್ದು ದಲಿತರು, ದಲಿತ ಕ್ರಿಶ್ಚಿಯನ್ನರು, ಮುಸಲಮಾನರು ಮತ್ತಿತರ ಅಲ್ಪಸಂಖ್ಯಾತರು. ಅಲ್ಲಿ ಯಾವುದೇ ಪ್ರಭಾವಿ ಜಾತಿ ಧರ್ಮ ವರ್ಗದವರಿಗೆ ಏನೂ ಆಗಲಿಲ್ಲ. ಅದರ ಎದುರಿಗೇ ನ್ಯಾಷನಲ್ ಗೇಮ್ಸ್ ವಿಲೇಜ್‌ನ ಕಟ್ಟಡಗಳು ಇದ್ದವು. ಅವರು ಸುರಕ್ಷಿತವಾಗಿ ಅಂದು ರಾತ್ರಿ ಮಲಗಿದ್ದರು.
ಧರ್ಮ, ಜಾತಿ ಮತ್ತು ವರ್ಗದ ಪ್ರಭಾವ ಅಧಿಕಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದರೆ ಈ ಪ್ರಭಾವೀ ಸ್ತರದಲ್ಲಿ ಇಲ್ಲದೇ ಇರುವವರು ಯಾವಾಗಲೂ ಕೆಲಸ ಮಾಡುವುದು ಕಡಿಮೆ ಸಂಬಳ ಸಿಗುವಲ್ಲಿ, ಕಡಿಮೆ ಘನತೆ ಗೌರವ ಇರುವ ಕೆಲಸಗಳಲ್ಲಿ. ಹೇಗೋ ಹೊಡೆದಾಡಿ ಓದಿ ಮುಂದೆ ಬಂದು ಒಳ್ಳೆಯ ನೆಲೆಗೆ ಬಂದರೂ ಈ ಜಾತಿ ವ್ಯವಸ್ಥೆ ಅದನ್ನು ಒಂದಲ್ಲಾ ಒಂದು ರೀತಿಯಲ್ಲಿ ಒಡೆಯುತ್ತದೆ. ಇಲ್ಲಾಂದ್ರೆ ಆ ವಯಸ್ಸಾದ ಮುದುಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅವನನ್ನು ಸುಡುವುದೇ? ಅಂದರೆ ನಾವು ಇನ್ನೂ ಅಮಾನವೀಯ ಜಾತಿ ವ್ಯವಸ್ಥೆಯನ್ನು ಕಣ್ಣು ಮುಚ್ಚಿಕೊಂಡು ಅನುಸರಿಸುತ್ತಿದ್ದೇವೆ ಎಂದಾಯಿತು. ಅಷ್ಟು ಮುಂದೆ ಹೋಗುವುದೆ ಬೇಡ, ನಮ್ಮ ಊಟದಲ್ಲೇ ಜಾತಿಯನ್ನು ತೋರಿಸಿಬಿಡುವಂತಹ ಜನರಿದ್ದಾರೆ. ಬೆಳ್ಳುಳ್ಳಿಯನ್ನು ಉಪಯೋಗಿಸಿದರೆ ಅವರು ಬ್ರಾಹ್ಮಣರಲ್ಲ, ಬೀಫ್ ತಿಂದರೆ ಅವರು ಹಿಂದುಗಳಲ್ಲ. ಎಲ್ಲಾ ಜಾತಿಯ ಎಲ್ಲಾ ಧರ್ಮಗಳ ಕೆಲವರು ಎಲ್ಲವನ್ನೂ ತಿನ್ನುವವರಿರುತ್ತಾರೆ. ಇದರಲ್ಲಿ ಇತಿಹಾಸದ ತಪ್ಪುಗಳೂ ಇವೆ.
ಅಂದರೆ ನಮಗೆ ಶಾಲೆಯಲ್ಲಿ ಪಾಠಮಾಡುವಾಗ ಹೇಳಿಕೊಡುವುದೇ ಹೀಗೆ- ಮುಸಲಮಾನರು ಭಾರತಕ್ಕೆ ಬಂದು ಧಾಳಿ ಮಾಡಿದರು ಎಂದು. ಅದಕ್ಕೂ ಮುಂಚೆ ಭಾರತೀಯರು ಎನಿಸಿಕೊಂಡ ಪ್ರಭಾವೀ ಧರ್ಮದ ಹಿಂದುಗಳು ಜೈನರ ಎಷ್ಟು ದೇವಾಲಯಗಳನ್ನು ಒಡೆದು ಹಾಕಿದ್ದಾರೆ. ಪ್ರಭಾವಿಗಳು ಮಾಡುವ ಅಧಿಕಾರದ ಆವೇಶಗಳಿಗೆ ಸಾಮಾನ್ಯರನ್ನು ಬಲಿಕೊಡುವುದು ಸರಿಯಲ್ಲ. ಸಾಮಾನ್ಯರು ಎಲ್ಲಾ ಸ್ತರಗಳಲ್ಲಿ ಇರುತ್ತಾರೆ. ನಮ್ಮ ಶಾಲಾ ಪಠ್ಯಗಳಲ್ಲಿ ಡಾ| ಅಂಬೇಡ್ಕರ್ ಅವರ ಬಗ್ಗೆ ಉಲ್ಲೇಖ ಬರುತ್ತದೆಯೇ ಹೊರತು ಅವರ ಬರವಣಿಗೆಗಳು, ಅವರ ವಿಚಾರವಾದಗಳು ಬರುವುದಿಲ್ಲ.
ವಿವಿಧತೆಯನ್ನು ಕ್ಲೇಮ್ ಮಾಡುವ ಈ ದೇಶದಲ್ಲಿ ಆದಿವಾಸಿಗಳನ್ನೆಲ್ಲಾ ಹಿಂದುಗಳನ್ನಾಗಿ ಮಾಡಿಬಿಟ್ಟಿದ್ದಾರೆ. ಆದರೆ ಅವರು ಸ್ಪಷ್ಟವಾಗಿ ತಾವು ಹಿಂದುಗಳಲ್ಲ, ಅವರ ದೇವರುಗಳು ಬೇರೆ ಎಂದು ಬಾರಿ ಬಾರಿಗೂ ಹೇಳುತ್ತಿದ್ದಾರೆ. ಆದರೆ ಅವರಿಗೆ ಸವಲತ್ತುಗಳು ಸಿಗಬೇಕೆಂದರೆ ಈ ಧರ್ಮಕ್ಕೇ ಸೇರಬೇಕು.
ಈ ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ. ಮತ್ತೆ ಮತ್ತೆ ನನಗೆ ಖುಸ್ರೋ ನೆನಪಾಗುತ್ತಾನೆ. ಅವನು ಯುದ್ಧ ಸೈನಿಕನಾಗಿದ್ದವನು. ಅದನ್ನೆಲ್ಲಾ ಬಿಟ್ಟು ನಿಜಾಮುದ್ದೀನ್ ಔಲಿಯನ ಪ್ರೇಮದಲ್ಲಿ ಬಿದ್ದನಂತರ ಅವನಿಗೆ ಜೀವನವೇ ಪ್ರೇಮವಾಗಿ ಕಂಡಿತು. ನಮಗೆ ಮನುಷ್ಯರಾಗಲು ಪ್ರೇಮದ ರಾಜಕೀಯ ಅತ್ಯವಶ್ಯಕ.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.