ಬೆಳಗಾವಿ : ಜಿಲ್ಲೆಯ ಎರಡೂ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಘಟಾನುಘಟಿ ನಾಯಕರ ಮಕ್ಕಳಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಪ್ರಬಲ ನಾಯಕ, ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಅವರ ಮಗಳು ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಫಿಕ್ಸ್ ಎನ್ನುವಂತೆ ಪಕ್ಷದೊಳಗೆ ಚುನಾವಣಾ ಪ್ರಕ್ರಿಯೆಗಳು ಚುರುಕುಗೊಂಡಿವೆ. ಅಧಿಕೃತವಾಗಿ ಟಿಕೆಟ್ ಘೋಷಣೆಗೂ ಪೂರ್ವದಲ್ಲೇ ಚುನಾವಣಾ ಪ್ರಚಾರ ಕಾರ್ಯಗಳು ಭರದಿಂದ ಆರಂಭವಾಗಿವೆ.
ಇನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಕೈ ಬಿಟ್ಟು ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೇ ಬಿಜೆಪಿ ಟಿಕೆಟ್ ಫೈನಲ್ ಮಾಡಿರುವುದು ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಒಳಬೇಗುದಿ ಸೃಷ್ಟಿಸಿದೆ. ಇತ್ತ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್ ಅವರ ಹೆಸರನ್ನು ವರಿಷ್ಠರು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸ್ಥಳೀಯ ನಾಯಕರ ಪ್ರಬಲ ವಿರೋಧದ ನಡುವೆ ಟಿಕೆಟ್ ಘೋಷಣೆ ಬಾಕಿ ಉಳಿದಿದೆ. ಕೊನೆ ಘಳಿಗೆಯಲ್ಲಿ ಈ ಕ್ಷೇತ್ರಕ್ಕೆ ಯಾರಿಗೆ ಬೇಕಾದರೂ ಬಿಜೆಪಿ ಟಿಕೆಟ್ ಫೈನಲ್ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ನಿರಾಣಿ, ಶೆಟ್ಟರಗೆ ಸ್ಥಳೀಯ ನಾಯಕರ ವಿರೋಧ
ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉಳಿಕೆ ಕ್ಷೇತ್ರವಾಗಿ ಪರಿಗಣಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಮೂಡಿತ್ತು. ಕ್ಷೇತ್ರದ ಟಿಕೆಟ್ ತಮಗೇ ಅಥವಾ ತಮ್ಮ ಮಕ್ಕಳಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಕೋರಲು ದೆಹಲಿಗೆ ಹೋಗಿದ್ದ ಸಂಸದೆ ಮಂಗಳ ಅಂಗಡಿ ಅವರು, ಇಲ್ಲಿ ಟಿಕೆಟ್ ಜಗದೀಶ ಶೆಟ್ಟರ್ ಅವರಿಗೆ ಫೈನಲ್ ಆಗಿದೆ ಎನ್ನುವ ವರಿಷ್ಟರ ಮಾತಿಗೆ ಸಮ್ಮತಿ ಸೂಚಿಸಿ ಬೆಳಗಾವಿಗೆ ವಾಪಸ್ ಆಗಿದ್ದರು. ಈ ವಿಷಯವನ್ನು ಮಾಧ್ಯಮಗಳ ಮೂಲಕ ಸಂಸದೆ ಮಂಗಳಾ ಅಂಗಡಿ ಬಹಿರಂಗಗೊಳಿಸಿದ್ದಾರೆ. ಅಂಗಡಿ ಕುಟುಂಬ ಹೊರತುಪಡಿಸಿ ಇತರರಿಗೆ ಸ್ಥಳೀಯರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಇತರ ಮುಖಂಡರು ಈ ಬೆಳವಣಿಗೆಯ ನಂತರ ಸಭೆಗಳ ಮೇಲೆ ಸಭೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಬೆಳಗಾವಿ ಬಿಜೆಪಿ ಟಿಕೆಟ್ ಶೆಟ್ಟರಗೆ ಕೊಡುವ ವಿಷಯದಲ್ಲಿ ಸ್ಥಳೀಯ ಸಂಘಪರಿವಾರದವರ ವಿರೋಧವೂ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಸಭಾ ಸದಸ್ಯೆ ಈರಣ್ಣ ಕಡಾಡಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಮಹಂತೇಶ ಕವಟಗಿಮಠ, ಅನಿಲ ಬೆನಕೆ, ಬಿಜೆಪಿ ವಕ್ತಾರ ಎಂ.ಬಿ. ಜಿರಲಿ ಸೇರಿದಂತೆ ಇತರ ಸ್ಥಳೀಯ ಮುಖಂಡರು ಶೆಟರ್ ಅವರಿಗೆ ಮಾರ್ಮಿಕವಾಗಿ ಗೋ ಬ್ಯಾಕ್ ಹೇಳುತ್ತಿದ್ದಾರೆ.
ಬೆಳಗಾವಿಗೆ ಜಗದೀಶ ಶೆಟ್ಟರ ಅವರ ಕೊಡುಗೆ ಏನು ಎಂದು ಕೇಳುತ್ತಿರುವ ಸ್ಥಳೀಯ ನಾಯಕರು, ಬೆಳಗಾವಿ ಜಿಲ್ಲೆಗೆ ಬರಬೇಕಿದ್ದ ಹಲವು ಯೋಜನೆಗಳನ್ನು ನಿಲ್ಲಿಸಿ ಹುಬ್ಬಳ್ಳಿ-ಧಾರವಾಡಕ್ಕೆ ಬರುವಂತೆ ಮಾಡಿಕೊಂಡಿದ್ದಾರೆ. ಹೀಗಿದ್ದಾಗ ಬೆಳಗಾವಿಯಿಂದ ಅವರು ಸ್ಪರ್ಧೆ ಮಾಡಿದರೆ ಜನ ಅವರನ್ನು ಬೆಂಬಲಿಸುವ ನಂಬಿಕೆ ಅವರಿಗೆ ಇದೆಯೆ? ಶೆಟ್ಟರ ಒಬ್ಬ ಅವಕಾಶವಾದಿ ರಾಜಕಾರಣಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಈಗ ಯಾವ ಮುಖ ಇಟ್ಟುಕೊಂಡು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ. ಹೇಗೆ ಗೆದ್ದು ಬರುತ್ತಾರೆ? ಅವರು ಬೆಳಗಾವಿಯಿಂದ ಸ್ಪರ್ಧೆ ಮಾಡಿದರೆ ಅವರ ಲಿಂಗಾಯತ ಸಮುದಾಯದವರೇ ಅವರನ್ನು ಬೆಂಬಲಿಸುವುದಿಲ್ಲ ಎಂದು ಅಸಮಾಧಾನಗಳನ್ನು ಹೊರಹಾಕುತ್ತಿದ್ದಾರೆ.
ಶೆಟ್ಟರ ಅಷ್ಟೇ ಅಲ್ಲದೇ ಮುರುಗೇಶ ನಿರಾಣಿ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೂ ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸ್ಥಳೀಯವಾಗಿ ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲವೇ? ಪಕ್ಷದಲ್ಲಿ ಸಾಕಷ್ಟು ದುಡಿದ ನಾಯಕರಿರುವಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದು ಸರಿಯಲ್ಲ ಎನ್ನುವ ಭಿನ್ನಮತಗಳು ಕೇಳಿಬರುತ್ತಿವೆ.
ರಮೇಶ ಜಾರಕಿಹೊಳಿ ಅವರಿಂದಲೂ ವಿರೋಧ
ಸ್ಥಳೀಯ ಶೆಟ್ಟರ ವಿರೋಧಿ ಬಣದಲ್ಲಿ ಗುರುತಿಸಿಕೊಳ್ಳದಿದ್ದರೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶೆಟ್ಟರಗೆ ಟಿಕೆಟ್ ನೀಡುವುದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ರಮೇಶ ಜಾರಕಿಹೊಳಿ ಅವರಿಗೆ ಶೆಟ್ಟರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲದಿದ್ದರೂ, ತಮ್ಮ ಕಡುವೈರಿಯಂತೆ ಬಿಂಬಿಸುವ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಎದುರಿಸಲು ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಬಲಿಷ್ಟ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ಆಯ್ಕೆ ಮಾಡಬೇಕು ಎನ್ನುವುದು ರಮೇಶ ಜಾರಕಿಹೊಳಿ ಅವರ ಅಭಿಮತವಾಗಿದೆ ಎನ್ನುವುದು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.
ಇಷ್ಟೆಲ್ಲ ವಿರೋಧಗಳ ನಡುವೆಯೂ ಇಲ್ಲಿಯವರೆಗೂ ಜಗದೀಶ ಶೆಟ್ಟರ ಅವರ ಹೆಸರೇ ಫೈನಲ್ ಆಗಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂದು ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲೂ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ತಯಾರಿಯಲ್ಲಿ ಬಿಜೆಪಿ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.