ಇಪ್ಪತ್ತೈದು ಕನ್ನಡಿಗಳಲ್ಲಿ ಒಬ್ಬ ಬಸವಣ್ಣ

ಬಸವಣ್ಣನವರನ್ನು ಹೊಗಳಿಕೆಯಲ್ಲೋ, ತೆಗಳಿಕೆಯಲ್ಲೋ ಕಟ್ಟಿಹಾಕುವುದು ಸಾಧ್ಯವೇ? ನಾಲ್ಕು ದಶಕಗಳ ಹಿಂದೆ ಪ್ರಭುಶಂಕರರು ಬರೆದ ‘ಬೆರಗು’ ಕಾದಂಬರಿ ಇಪ್ಪತ್ತೈದು ಸಮಕಾಲೀನರ ದೃಷ್ಟಿಯ ಮೂಲಕ ಬಸವಣ್ಣನವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಇಂದಿನ ವಿವಾದಗಳ ನಡುವೆ ಈ ಕೃತಿಯ ತಾತ್ವಿಕ ನೆಲೆ ಏನು? ಡಾ. ರವಿ ಎಂ. ಸಿದ್ಲಿಪುರ ಅವರ ವಿಶ್ಲೇಷಣೆ ಇಲ್ಲಿದೆ.

ಯಾರು ಸ್ಥಾವರವನ್ನು ವಿರೋಧಿಸಿದ್ದರೋ ಅವರದೇ ಹೆಸರಿನ ಜೊತೆಗೆ, ಅವರನ್ನೂ ಜಡತ್ವಕ್ಕೆ ದೂಡುವಂತಹ ರೂಪಕದ ಪುಸ್ತಕ ದೊಡ್ಡ ಗದ್ದಲ ಎಬ್ಬಿಸಿದೆ. ಮುಟ್ಟುಗೋಲು, ಪ್ರತಿಭಟನೆ, ಕ್ಷಮೆ, ನ್ಯಾಯಾಲಯ—ಎಲ್ಲವೂ ಸುದ್ದಿಯಲ್ಲಿದೆ. ನಾನು ಆ ಕೃತಿಯನ್ನು ಓದಿಲ್ಲ, ಅದರ ಸರಿ-ತಪ್ಪುಗಳ ತೀರ್ಪುಗಾರನೂ ಅಲ್ಲ. ಆದರೆ ಈ ಕೋಲಾಹಲದ ನಡುವೆ ಒಂದು ಮೌನ ಪ್ರಶ್ನೆಯನ್ನು ಕೇಳಿಕೊಳ್ಳುವೆ. ಬಸವಣ್ಣನ ಬಗ್ಗೆ ಬರೆಯುವುದು ಹೇಗೆ? ಹೊಗಳಿಕೆಯಿಂದಲೋ, ತೆಗಳಿಕೆಯಿಂದಲೋ, ಇತಿಹಾಸದ ಹೆಸರಿನ ತೀರ್ಪಿನಿಂದಲೋ? ಈ ಪ್ರಶ್ನೆಗೆ ನಾಲ್ಕು ದಶಕಗಳ ಹಿಂದೆಯೇ ಪ್ರಭುಶಂಕರರ ‘ಬೆರಗು’ ಬೇರೊಂದು ಉತ್ತರ ಕೊಟ್ಟಿತ್ತು.

ಈ ಕೃತಿಯ ಹುಟ್ಟೇ ಕುತೂಹಲಕರ. ಏಸುಕ್ರಿಸ್ತನ ಸಮಕಾಲೀನರು ಅವನ ಬಗ್ಗೆ ಹೇಳಿದ್ದಾರೇನೋ ಎಂಬಂತೆ ಬರೆದ ಖಲೀಲ್ ಗಿಬ್ರಾನ್‌ನ ಪುಸ್ತಕ ಅವರಿಗೆ ಸ್ಫೂರ್ತಿ ಕೊಟ್ಟಿತು. ಬಸವಣ್ಣನ ಬಗ್ಗೆ ಅಂಥದೊಂದು ಪುಸ್ತಕ ಬರೆಯಬೇಕೆಂಬ ಆಸೆ ಅನೇಕ ವರ್ಷ ಅವರ ಮನದಲ್ಲಿತ್ತು. ಹಾಗೆ ಹುಟ್ಟಿದ ‘ಬೆರಗು’ ಬಸವಣ್ಣನ ಬಗ್ಗೆ ಒಂದೇ ಒಂದು ವಿವರಣೆ ಕೊಡುವುದಿಲ್ಲ. ಬದಲಾಗಿ ಇಪ್ಪತ್ತೈದು ಮಂದಿ ಸಮಕಾಲೀನರು ಒಬ್ಬೊಬ್ಬರಾಗಿ ತಮ್ಮ ಮಾತಿನಲ್ಲಿ ತಮ್ಮ ಬಸವಣ್ಣನನ್ನು ನಿರೂಪಿಸುತ್ತಾರೆ. ತಂದೆ ಮಾದಿರಾಜ, ತಾಯಿ ಮಾದಾಂಬೆ, ಮನೆಯೊಳಗಿನ ನೀಲಲೋಚನೆ, ದೊರೆ ಬಿಜ್ಜಳ, ಮಂತ್ರಿ ಮಧುವರಸ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಕೊನೆಯಲ್ಲಿ ಅಲ್ಲಮಪ್ರಭು. ಇಲ್ಲಿ ಬಸವಣ್ಣ ಎಲ್ಲೂ ಭಾಷಣ ಮಾಡುವುದಿಲ್ಲ. ಇತರರ ಮಾತಿನ ಕನ್ನಡಿಯಲ್ಲಿ ಮಾತ್ರ ಅವರ ಮುಖ ಮೂಡುತ್ತದೆ.

ಈ ಕನ್ನಡಿಗಳು ಎಲ್ಲವೂ ಮೆಚ್ಚುಗೆಯ ಕನ್ನಡಿಗಳಲ್ಲ ಎಂಬುದೇ ಕೃತಿಯ ಧೈರ್ಯ. ಮೊದಲ ಮಾತೇ ತಂದೆಯದು ಮತ್ತು ಅದು ನೋವಿನದು. ಕುಲಕ್ಕೆ ಕೆಟ್ಟ ಹೆಸರು ತಂದ ಮಗ, ಜನಿವಾರ ಕಿತ್ತೆಸೆದವನು ಎಂದು ವೃದ್ಧ ಬ್ರಾಹ್ಮಣ ಗೋಳಾಡುತ್ತಾನೆ. ಆದರೆ ಅದೇ ಬಾಯಿ ಮಗುವಿನ ಬಾಲ್ಯವನ್ನು ವರ್ಣಿಸುವಾಗ ಮೃದುವಾಗುತ್ತದೆ. ಹೆಜ್ಜೆ ಹಾಕಿದರೆ ಗಾಳಿ ಬೀಸಿದಂತೆ, ಮಾತಾಡಿದರೆ ಬೆಳಕು ಹರಿದಂತೆ ಎನ್ನುವ ಮಗುವಿನ ಚಿತ್ರ ಬರುತ್ತದೆ. ಮನೆಯೊಡತಿ ನೀಲಲೋಚನೆಯ ಮಾತಿನಲ್ಲಿ ದೂರು ಇದೆ. ಜಾತಿ ಹೋಗಬೇಕೆನ್ನುವವರು ಶಿವಭಕ್ತರೆಂಬ ಇನ್ನೊಂದು ಜಾತಿಯನ್ನು ಕಟ್ಟಿದ್ದಾರಲ್ಲ ಎನ್ನುವ ತಿವಿತವೂ ಇದೆ. ಬದನೆಕಾಯಿಯನ್ನೇ ಲಿಂಗವೆಂದು ಕಟ್ಟಿಕೊಂಡು ಬಂದ ವಂಚಕರಿಗೂ ಭಕ್ತಿಯಿಂದ ಅಡ್ಡ ಬಿದ್ದ ಮುಗ್ಧತೆಯನ್ನು ಅವಳು ಹೆಮ್ಮೆಯಿಂದಲ್ಲ, ಕಳವಳದಿಂದ ಹೇಳುತ್ತಾಳೆ. ಇವೆಲ್ಲ ಟೀಕೆಗಳ ನಡುವೆಯೂ ಕೃತಿ ಬಸವಣ್ಣನನ್ನು ಕುಗ್ಗಿಸುವುದಿಲ್ಲ. ಟೀಕೆಯನ್ನು ಅವರ ಸುತ್ತಲಿನವರ ಬಾಯಿಂದಲೇ ಹೇಳಿಸಿ, ಅದರ ಹಿಂದಿರುವ ಪ್ರೀತಿ, ಭಯ, ಅಸೂಯೆಗಳನ್ನೂ ಒಟ್ಟಿಗೆ ತೋರಿಸುತ್ತದೆ.

ಬಿಜ್ಜಳನ ಕನ್ನಡಿ ಈ ಕಲೆಯ ತುತ್ತತುದಿ. ಅವನು ಬಸವಣ್ಣನ ಮೇಲೆ ಭಂಡಾರದ ಕಳ್ಳತನದ ಆರೋಪ ಹೊರಿಸಿದವನೇ ಅಲ್ಲ; ಆ ಆರೋಪವನ್ನು ಕಂಡು ಸಂಕಟಪಟ್ಟವನು. ಮೊದಲ ನೋಟದಲ್ಲೇ ಈ ಹುಡುಗ ತನ್ನ ರಾಜತ್ವವನ್ನೇ ಕೊಂದುಬಿಟ್ಟ ಎನ್ನುತ್ತಾನೆ. ದೂರು ಹೇಳುವವರ ಬಾಯಲ್ಲಿರುವುದು ವಿಷದ ಹಲ್ಲು, ಹೊರಳುವ ನಾಲಗೆ ಎಂದು ತೆಗಳುತ್ತಾನೆ. ಸಾಕ್ಷಾತ್ ಶಿವನೇ ಬಂದು ಬಸವ ಕದಿಯುತ್ತಾನೆ ಎಂದರೂ ನಂಬುವುದಿಲ್ಲ ಎನ್ನುತ್ತಾನೆ. ಏಕೆಂದರೆ ಬಸವಣ್ಣನದು ಕದಿಯುವ ಕೈ ಅಲ್ಲ, ಬೇಡುವ ಕೈಯೂ ಅಲ್ಲ, ಸದಾ ಕೊಡುವ ಕೈ. ಆರೋಪ ಮತ್ತು ಆರೋಪಕ್ಕೆ ಉತ್ತರ, ಎರಡೂ ಒಂದೇ ಸ್ವರದೊಳಗೆ ಸಿಗುತ್ತವೆ. ಕಲೆ ಮಾಡಬಲ್ಲ ನ್ಯಾಯ ಇದೇ ಇರಬೇಕು. ಅದು ಎದುರಾಳಿಯ ಬಾಯಿ ಮುಚ್ಚಿಸುವುದಿಲ್ಲ; ಅವನ ಮಾತನ್ನೇ ಕೊನೆಯವರೆಗೆ ಹೇಳಿಸಿ ಓದುಗನ ಮುಂದಿಡುತ್ತದೆ.

ಮಧುವರಸನ ಧ್ವನಿಯಲ್ಲಿ ಕಲ್ಯಾಣದ ಕ್ರಾಂತಿಯ ಕರಾಳ ಘಟ್ಟ ತೆರೆದುಕೊಳ್ಳುತ್ತದೆ. ಹರಳಯ್ಯನನ್ನು ಅರಮನೆಯ ಬಾಗಿಲಲ್ಲಿ ನಿಲ್ಲಿಸಲಾಗಿದೆ. ಕೈಮುಗಿಯಲು ಒತ್ತಾಯಿಸಿದಾಗ ಅವನು ಬೀದಿಯ ನಾಯಿಗೂ ಅದರ ಮರಿಗೂ ನಮಸ್ಕಾರ ಮಾಡುತ್ತಾನೆ. ಇದಕ್ಕಿಂತ ಹರಿತವಾದ ಪ್ರತಿರೋಧ ಕಲ್ಪಿಸಲೂ ಕಷ್ಟ. ಅದನ್ನು ಬಸವಣ್ಣನ ಭಾಷಣದಲ್ಲಲ್ಲ, ಮಂತ್ರಿಯೊಬ್ಬನ ನೆನಪಿನಲ್ಲಿ, ಚಿಕ್ಕ ದೃಶ್ಯವಾಗಿ ಹೇಳಿಸಿರುವುದೇ ಲೇಖಕರ ಜಾಣ್ಮೆ.

ಪ್ರಭುಶಂಕರರು ಮುನ್ನುಡಿಯಲ್ಲಿಯೇ ತಮ್ಮ ಕೃತಿಯ ಸ್ವರೂಪವನ್ನು ಸ್ಪಷ್ಟಪಡಿಸುತ್ತಾರೆ. ಇತಿಹಾಸ ಕೊಡುವ ಎಳೆಗಳು ಕಡಿಮೆ, ಅದಕ್ಕೆ ಕಲ್ಪನೆಯ ಹಾಸು-ಹೊಕ್ಕನ್ನು ಸೇರಿಸಲಾಗಿದೆ, ವಚನಗಳ ಆಧಾರದಿಂದ ಕೆಲವು ಘಟನೆಗಳನ್ನು ಕಟ್ಟಲಾಗಿದೆ, ಆದ್ದರಿಂದ ಇದು ಸೃಜನಶೀಲ ಕೃತಿ ಎಂದು ಹೇಳುತ್ತಾರೆ. ಈ ಪ್ರಾಮಾಣಿಕತೆ ಒಂದು ಪಾಠ. ಕಲ್ಪನೆ ತನ್ನನ್ನು ಕಲ್ಪನೆಯೆಂದು ಹೇಳಿಕೊಂಡಾಗ ಓದುಗನಿಗೂ ಅದನ್ನು ಆ ರೀತಿಯಲ್ಲೇ ಓದುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ದೊರೆಯುತ್ತವೆ. ಇನ್ನೊಂದು ಮಾತೂ ಅವರದು, ಅದು ಇಂದಿಗೂ ಚುಚ್ಚುತ್ತದೆ. ಈ ದೇಶದಲ್ಲಿ ಶತಮಾನಗಳು ಕಳೆದರೂ ಆಗದೇ ಉಳಿದ, ಆದರೆ ಆಗಲೇಬೇಕಿದ್ದ ಕಾರ್ಯದ ಪ್ರಯತ್ನದಲ್ಲಿ ಬಸವಣ್ಣ ಸೋತರು, ಆದರೆ ಆ ಸೋಲಿನಲ್ಲಿ ಮಾನವತೆ ಎಂದಾದರೂ ಗೆಲ್ಲಬೇಕಾದ ವಿಜಯದ ಬೀಜ ಅಡಗಿದೆ. ಬಸವಣ್ಣನನ್ನು ಸೋತವನೆಂದು ಕರೆಯುವುದೂ ಇಲ್ಲಿ ಅವಮಾನವಲ್ಲ, ಗೌರವದ ಒಂದು ರೂಪ.

ಡಾ. ಪ್ರಭುಶಂಕರ್

‘ಬೆರ(ಗು)ಗಿ’ನ ಕೊನೆಯ ಧ್ವನಿ ಅಲ್ಲಮಪ್ರಭುವಿನದು; ಪುಸ್ತಕದ ಹೆಸರಿನ ಗುಟ್ಟು ಬಿಚ್ಚಿಕೊಳ್ಳುವುದೂ ಅಲ್ಲಿಯೇ. “ಅಗೋ ನೋಡಿ, ಅಲ್ಲಿ ಕಾಣುತ್ತಿರುವ ದೃಶ್ಯವನ್ನು ಸರಿಯಾಗಿ ವ್ಯಾಖ್ಯಾನಿಸಿ ಬದುಕಿಕೊಳ್ಳಿ, ಸಾಧ್ಯವಾದರೆ” ಎಂದು ಎಚ್ಚರಿಸುತ್ತಾ, ಅವನು ಬಸವಣ್ಣ ಮತ್ತು ಒಂದು ಮದ್ದಾನೆಯ ದೃಶ್ಯವನ್ನು ನಮ್ಮ ಮುಂದಿಡುತ್ತಾನೆ. ಬಸವಣ್ಣ ಆನೆಗೆ ಸ್ನಾನ ಮಾಡಿಸುತ್ತಾರೆ, ಅಲಂಕರಿಸುತ್ತಾರೆ, ಅಮೃತವನ್ನೇ ಉಣಿಸಲು ಹೊರಡುತ್ತಾರೆ. ಆದರೆ ಆನೆಗೆ ಬೇಕಾದದ್ದು ಮಣ್ಣು, ಅಕ್ಕಿ, ತೆಂಗಿನಕಾಯಿ. ಅದು ಸರಪಳಿ ಕಿತ್ತು ಸೊಂಡಿಲು ಬೀಸುತ್ತದೆ; ಬಸವಣ್ಣನನ್ನು ಆಕಾಶಕ್ಕೆ ಎಸೆಯುತ್ತದೆ. ಅವರು ಕೆಳಗೆ ಬೀಳುವುದೇ ಇಲ್ಲ. ಆ ಮದ್ದಾನೆ ಇಡೀ ಕಲ್ಯಾಣ, ಬಿಜ್ಜಳ, ರಾಜತ್ವ, ವೈದಿಕ ಮತ—ಜೊತೆಗೆ ನಾವು, ನೀವು, ಎಲ್ಲ ಜನರೂ ಹೌದು ಎನ್ನುವ ಅರಿವಿನೊಂದಿಗೆ ಅಲ್ಲಮ ಗುಹೇಶ್ವರನ ಮುಂದೆ ಬೆರಗಾಗಿ ನಿಲ್ಲುತ್ತಾನೆ. ಎಲ್ಲರನ್ನೂ ಪ್ರೀತಿಸಿದವನನ್ನೇ ಆನೆ ಎತ್ತಿ ಎಸೆಯುವುದು ಕಲ್ಯಾಣದ ದುರಂತದ ಅತ್ಯಂತ ತೀಕ್ಷ್ಣವಾದ ರೂಪಕ. ಇಲ್ಲಿ ಆನೆಯನ್ನು ಯಾರೂ ಖಂಡಿಸುವುದಿಲ್ಲ, ಯಾರೂ ಅದರ ಪರವಾಗಿ ಭಾಷಣವನ್ನೂ ಮಾಡುವುದಿಲ್ಲ. ಬೆರಗು ಮಾತ್ರ ಉಳಿಯುತ್ತದೆ.

ಬಹುಶಃ ಇಂದಿನ ವಿವಾದಕ್ಕೆ ‘ಬೆರಗು’ ಕೊಡುವ ಸಲಹೆ ಇದುವೆ ಅನ್ನಿಸುತ್ತದೆ. ಬಸವಣ್ಣನ ಬಗ್ಗೆ ಹೇಳುವ ಪ್ರತಿ ಮಾತಿಗೂ ಒಂದು ಮುಖ ಇದೆ; ಅವರನ್ನು ಪ್ರೀತಿಸುವವರೂ ಅವರನ್ನು ಕೇಳದೆ ಅವರ ಹೆಸರಲ್ಲಿ ಮಾತನಾಡಿದ್ದಾರೆ, ದ್ವೇಷಿಸುವವರೂ ಹಾಗೆಯೇ. ಈ ಇಪ್ಪತ್ತೈದು ನೋಟಗಳು ಕಟ್ಟಿಕೊಟ್ಟರೂ ಬಸವಣ್ಣ ಪೂರ್ತಿ ಸಿಕ್ಕುವುದಿಲ್ಲ. ಏಕೆಂದರೆ, ಬಸವಣ್ಣ ಯಾರೊಬ್ಬರ ಕೈಗೂ ಸಿಗುವ ಸಿದ್ಧಮೂರ್ತಿಯಲ್ಲ; ನೋಡುವ ಕಣ್ಣಿಗೆ ತಕ್ಕಂತೆ ಕಾಣುವ ‘ಬೆರಗು’.

ಡಾ. ರವಿ ಸಿದ್ಲಿಪುರ

ಸಹಾಯಕ ಪ್ರಾಧ್ಯಾಪಕರು

ಇದನ್ನೂ ಓದಿ- ಸ್ಮರಣೆ |ಕನಕದಾಸರ ತಾತ್ತ್ವಿಕ ಚಿಂತನೆ: ತಲ್ಲಣಿಸದಿರು ಮನವೇ!

More articles

Latest article

Most read