ಕನಕದಾಸ ಜಯಂತಿ ವಿಶೇಷ
ಇಂದಿನ ಮನುಷ್ಯನಿಗೆ ಬೇಕಾಗಿರುವುದು ಕೇವಲ ಭೌತಿಕ ಸಂಪತ್ತು ಮತ್ತು ಸೌಲಭ್ಯಗಳಲ್ಲ; ಅವುಗಳೊಂದಿಗೆ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ, ಸಹನೆ, ಮಾನವೀಯತೆ ಮತ್ತು ಪ್ರಕೃತಿಪ್ರಜ್ಞೆಯೂ ಅಗತ್ಯವಾಗಿದೆ. ಕನಕದಾಸರ ಈ ಕೀರ್ತನೆಯು ಅಂತಹ ಮೌಲ್ಯಗಳನ್ನು ನೆನಪಿಸುವ ಮೂಲಕ ಕಾಲಾತೀತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ‘ತಲ್ಲಣಿಸದಿರು’ ಎಂಬುದು ಕೇವಲ ಮನಸ್ಸಿಗೆ ಹೇಳುವ ಸಮಾಧಾನದ ಮಾತಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಬದುಕಿನ ಸವಾಲುಗಳನ್ನು ಎದುರಿಸುವ ಮತ್ತು ಸಕಲ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಸಮಗ್ರ ಜೀವನ ಸಂದೇಶವಾಗಿದೆ – ಡಾ.ಕೃಷ್ಣಮೂರ್ತಿ.ಆರ್ ಉಡೇವಾ, ಸಹಾಯಕ ಪ್ರಾಧ್ಯಾಪಕರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಸಸಾಹಿತ್ಯವು ಬಹುಮುಖ್ಯವಾದ ಸಾಂಸ್ಕೃತಿಕ, ಧಾರ್ಮಿಕ ಮತ್ತು ವೈಚಾರಿಕ ಘಟ್ಟವಾಗಿದೆ. ಭಕ್ತಿಯನ್ನು ಕೇವಲ ದೇವರ ಆರಾಧನೆಯ ನೆಲೆಯಲ್ಲಿ ನೋಡದೆ, ಅದನ್ನು ಬದುಕಿನ ಅನುಭವ, ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯನ್ನಾಗಿ ರೂಪಿಸಿದ ಕೀರ್ತಿ ಹರಿದಾಸ ಪರಂಪರೆಗೆ ಸಲ್ಲುತ್ತದೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದ ಹಲವು ಪ್ರಶ್ನೆಗಳನ್ನು ಶೋಧಿಸುವ, ಮನುಷ್ಯನ ಬದುಕಿನ ಸಂಕೀರ್ಣತೆಗಳಿಗೆ ಉತ್ತರ ಕಂಡುಕೊಳ್ಳುವ ಹಾಗೂ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಯತ್ನವನ್ನು ಹರಿದಾಸರು ನಿರಂತರವಾಗಿ ಮಾಡಿದ್ದಾರೆ. ಹೀಗಾಗಿ ಕನಕದಾಸ ಜಯಂತಿ ಸಂದರ್ಭದಲ್ಲಿ ಅರಿಯಬೇಕಾದ ಆಲೋಚನೆ ಬಹಮುಖ್ಯವಾದುದು. ಈ ನೆಲೆಯಲ್ಲಿ ದಾಸಸಾಹಿತ್ಯವು ಕೇವಲ ಭಕ್ತಿಸಾಹಿತ್ಯವಾಗಿ ಉಳಿಯದೆ, ಜನಸಾಮಾನ್ಯರ ಬದುಕಿನೊಂದಿಗೆ ಸಂವಾದ ನಡೆಸುವ ಜನಪರ ಸಾಹಿತ್ಯವಾಗಿ ರೂಪುಗೊಂಡಿದೆ.
ಹಾಡು, ಕೀರ್ತನೆ, ಸುಳಾದಿ, ಉಗಾಭೋಗ ಮೊದಲಾದ ಸಾಹಿತ್ಯ ಪ್ರಕಾರಗಳ ಮೂಲಕ ಹರಿದಾಸರು ತಮ್ಮ ಅನುಭವ, ಅನುಭಾವ ಮತ್ತು ತಾತ್ವಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ. ದೇವರ ಅಸ್ತಿತ್ವದ ಕುರಿತು ಚಿಂತಿಸುವುದರ ಜೊತೆಗೆ ಮನುಷ್ಯನ ಅಸ್ತಿತ್ವ, ಪ್ರಕೃತಿಯ ವೈಶಿಷ್ಟ್ಯ, ಜೀವಜಗತ್ತಿನ ಪರಸ್ಪರ ಸಂಬಂಧ, ಸುಖ-ದುಃಖಗಳ ಸ್ವರೂಪ ಹಾಗೂ ಬದುಕಿನ ಅನಿಶ್ಚಿತತೆಗಳನ್ನು ತಮ್ಮ ಸಾಹಿತ್ಯದ ವಸ್ತುವನ್ನಾಗಿಸಿಕೊಂಡಿದ್ದಾರೆ. ಸಮಾಜದಲ್ಲಿ ತಾವು ಕಂಡ ಅಸಮಾನತೆ, ಅಜ್ಞಾನ, ಅಹಂಕಾರ, ಮೌಢ್ಯ ಮತ್ತು ಮಾನವೀಯ ಸಂಬಂಧಗಳ ಬಿಕ್ಕಟ್ಟುಗಳಿಗೆ ಕೀರ್ತನೆಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಕಾರಣದಿಂದಲೇ ದಾಸರ ಕೀರ್ತನೆಗಳು ಒಂದು ಕಾಲಘಟ್ಟದ ಧಾರ್ಮಿಕ ಅಭಿವ್ಯಕ್ತಿಗಳಾಗಿ ಉಳಿಯದೆ, ಸಾರ್ವಕಾಲಿಕ ಬದುಕಿನ ಅನುಭವಗಳಾಗಿ ಮಹತ್ವ ಪಡೆದಿವೆ.
ಪುರಂದರದಾಸರು, ಕನಕದಾಸರು, ವಿಜಯದಾಸರು, ವಾದಿರಾಜರು ಸೇರಿದಂತೆ ಅನೇಕ ದಾಸರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ, ನೀತಿ, ವೈರಾಗ್ಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಜನಸಾಮಾನ್ಯರ ಬದುಕಿನ ಭಾಗವಾಗಿಸಿದ್ದಾರೆ. ಈ ಪರಂಪರೆಯಲ್ಲಿ ಕನಕದಾಸರು ತಮ್ಮ ವಿಶಿಷ್ಟವಾದ ತಾತ್ವಿಕ ದೃಷ್ಟಿಕೋನ, ಸಾಮಾಜಿಕ ಕಾಳಜಿ ಮತ್ತು ಮಾನವೀಯ ಚಿಂತನೆಗಳಿಂದ ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕನಕದಾಸರು ಹಾವೇರಿ ಜಿಲ್ಲೆಯ ಬಾಡದಲ್ಲಿ ಜನಿಸಿದವರು. ಲೌಕಿಕ ಬದುಕಿನ ಅನುಭವ, ಆಡಳಿತಾತ್ಮಕ ಜವಾಬ್ದಾರಿ ಮತ್ತು ಸಾಮಾಜಿಕ ಸಂಘರ್ಷಗಳ ಮೂಲಕ ಬದುಕನ್ನು ಅರಿತುಕೊಂಡ ಅವರು, ಅನಂತರ ಭಕ್ತಿಮಾರ್ಗದ ಮೂಲಕ ತಮ್ಮ ಅನುಭವಗಳಿಗೆ ತಾತ್ವಿಕ ರೂಪ ನೀಡಿದರು. ಅವರ ಸಾಹಿತ್ಯದಲ್ಲಿ ‘ಆದಿಕೇಶವ’ ಎಂಬ ಅಂಕಿತವು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಕನಕದಾಸರ ಕೀರ್ತನೆಗಳನ್ನು ಗಮನಿಸಿದಾಗ, ಅವುಗಳಲ್ಲಿ ಕೇವಲ ದೇವರ ಸ್ತುತಿಯಷ್ಟೇ ಅಲ್ಲದೆ, ಮನುಷ್ಯನ ಬದುಕಿನ ಒಳಸುಳಿಗಳು, ಸಮಾಜದ ಅಂಕುಡೊಂಕುಗಳು ಮತ್ತು ಜೀವನದ ಅನೇಕ ಜಿಜ್ಞಾಸೆಗಳಿಗೆ ಉತ್ತರ ಹುಡುಕುವ ಪ್ರಯತ್ನವೂ ಕಂಡುಬರುತ್ತದೆ.

ಕನಕದಾಸರ ವೈಚಾರಿಕತೆಯ ಪ್ರಮುಖ ಲಕ್ಷಣವೆಂದರೆ ಲೌಕಿಕ ಬದುಕಿನ ಸರಳ ಸಂಗತಿಗಳ ಮೂಲಕ ಪಾರಮಾರ್ಥಿಕ ಸತ್ಯವನ್ನು ಮನದಟ್ಟು ಮಾಡಿಸುವುದು. ಪ್ರಕೃತಿ, ಪ್ರಾಣಿ, ಪಕ್ಷಿ, ಮರ, ಗಿಡ, ಹಸಿವು, ಆಹಾರ ಮೊದಲಾದ ಸಾಮಾನ್ಯ ಸಂಗತಿಗಳನ್ನೇ ತಮ್ಮ ತಾತ್ವಿಕ ಚಿಂತನೆಯ ಅಭಿವ್ಯಕ್ತಿಗೆ ಸಾಧನಗಳನ್ನಾಗಿ ಬಳಸಿಕೊಳ್ಳುತ್ತಾರೆ. ಈ ನೆಲೆಯಲ್ಲಿ ಅವರ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಕೀರ್ತನೆಯು ಬದುಕಿನ ಬಗೆಗಿನ ಆಶಾವಾದ, ಆತ್ಮವಿಶ್ವಾಸ ಮತ್ತು ಭರವಸೆಯನ್ನು ಸಾರುವ ಮಹತ್ವದ ರಚನೆಯಾಗಿದೆ.
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ
ಈ ಕೀರ್ತನೆಯ ಮೊದಲ ಸಾಲುಗಳಲ್ಲಿಯೇ ಕನಕದಾಸರು ಮನುಷ್ಯನ ಮನಸ್ಸಿನೊಂದಿಗೆ ನೇರವಾಗಿ ಸಂವಾದ ನಡೆಸುತ್ತಾರೆ. ಮನುಷ್ಯನ ಬದುಕಿನಲ್ಲಿ ತಲ್ಲಣ, ಆತಂಕ, ಭಯ, ನಿರಾಸೆ ಮತ್ತು ಅನಿಶ್ಚಿತತೆಗಳು ಸಹಜವಾದವು. ಬದುಕು ಯಾವಾಗಲೂ ನಾವು ನಿರೀಕ್ಷಿಸಿದ ರೀತಿಯಲ್ಲಿ ಸಾಗುವುದಿಲ್ಲ. ಕೆಲವೊಮ್ಮೆ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಸಾಮಾಜಿಕ ಒತ್ತಡ, ವೈಯಕ್ತಿಕ ಸೋಲು ಮತ್ತು ಭವಿಷ್ಯದ ಅನಿಶ್ಚಿತತೆಗಳು ಮನುಷ್ಯನ ಮನಸ್ಸನ್ನು ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಮನುಷ್ಯ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ.
ಇದನ್ನು ಅರಿತ ಕನಕದಾಸರು ಮೊದಲು ಮನಸ್ಸಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ‘ತಲ್ಲಣಿಸದಿರು’ ಎನ್ನುವ ಮಾತು ಕೇವಲ ಸಮಾಧಾನದ ನುಡಿಯಲ್ಲ; ಅದು ಬದುಕನ್ನು ಎದುರಿಸುವ ಮಾನಸಿಕ ಸಿದ್ಧತೆಯಾಗಿದೆ. ‘ತಾಳು ಮನವೇ’ ಎನ್ನುವಲ್ಲಿ ಸಹನೆ, ತಾಳ್ಮೆ ಮತ್ತು ಆತ್ಮಸ್ಥೈರ್ಯದ ಮಹತ್ವವನ್ನು ಪ್ರತಿಪಾದಿಸುತ್ತಾರೆ. ಪ್ರತಿಯೊಂದು ಸಮಸ್ಯೆಗೂ ತಕ್ಷಣವೇ ಪರಿಹಾರ ದೊರೆಯಬೇಕೆಂಬ ನಿರೀಕ್ಷೆ ಸರಿಯಲ್ಲ. ಕೆಲವು ಸಮಸ್ಯೆಗಳಿಗೆ ಕಾಲವೇ ಉತ್ತರ ನೀಡುತ್ತದೆ. ಆದ್ದರಿಂದ ಸಂಕಷ್ಟದ ಸಮಯದಲ್ಲಿ ವಿವೇಚನೆಯನ್ನು ಕಳೆದುಕೊಳ್ಳದೆ, ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಮುನ್ನಡೆಯಬೇಕೆಂಬ ಜೀವನದರ್ಶನ ಇಲ್ಲಿ ವ್ಯಕ್ತವಾಗುತ್ತದೆ.
‘ಎಲ್ಲರನು ಸಲಹುವನು’ ಎಂಬ ಸಾಲಿನಲ್ಲಿ ಸಕಲ ಜೀವಿಗಳ ಬಗೆಗಿನ ಕಾಳಜಿ ಮತ್ತು ದೈವಿಕ ಶಕ್ತಿಯ ಮೇಲಿನ ಅಚಲ ವಿಶ್ವಾಸವನ್ನು ಕಾಣಬಹುದು. ಇಲ್ಲಿ ದೇವರು ಎನ್ನುವುದು ಕೇವಲ ಆರಾಧನೆಯ ವಸ್ತುವಲ್ಲ; ಸೃಷ್ಟಿಯ ಸಕಲ ಜೀವಿಗಳನ್ನು ಪೊರೆಯುವ ಮಹಾಶಕ್ತಿಯ ಸಂಕೇತವಾಗಿದೆ. ಈ ನಂಬಿಕೆಯು ಮನುಷ್ಯನಿಗೆ ಬದುಕಿನ ಬಗ್ಗೆ ಭರವಸೆ ನೀಡುತ್ತದೆ. ಆದರೆ ಈ ಭರವಸೆಯನ್ನು ಕೇವಲ ವಿಧಿವಾದವಾಗಿ ಅರ್ಥೈಸಬಾರದು. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳಿಂದ ಪಲಾಯನ ಮಾಡದೆ, ಧೈರ್ಯದಿಂದ ಎದುರಿಸುವ ಮಾನಸಿಕ ಶಕ್ತಿಯನ್ನು ಈ ಕೀರ್ತನೆ ಬೆಳೆಸುತ್ತದೆ.
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಟಿಯಾಗಿ ಸಲಹುವನು ಇದಕೆ ಸಂಶಯವಿಲ್ಲ.
ಈ ಚರಣದಲ್ಲಿ ಕನಕದಾಸರು ಪ್ರಕೃತಿಯ ಮೂಲಕ ಸೃಷ್ಟಿಯ ರಹಸ್ಯವನ್ನು ತೆರೆದಿಡುತ್ತಾರೆ. ಬೆಟ್ಟದ ತುದಿಯಲ್ಲಿ ಯಾರೂ ನೆಟ್ಟು ಬೆಳೆಸದೆ ಸ್ವಾಭಾವಿಕವಾಗಿ ಹುಟ್ಟುವ ಮರಗಳಿಗೆ ನೀರುಣಿಸುವವರು ಯಾರು? ಅವುಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶ, ಮಳೆ, ಗಾಳಿ ಮತ್ತು ಬೆಳಕನ್ನು ಒದಗಿಸುವವರು ಯಾರು? ಎಂಬ ಪ್ರಶ್ನೆಗಳ ಮೂಲಕ ಸೃಷ್ಟಿಯ ಹಿಂದಿರುವ ಅಗೋಚರ ಶಕ್ತಿಯ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ.
ಇಲ್ಲಿ ಮರವು ಕೇವಲ ಒಂದು ಸಸ್ಯವಲ್ಲ; ಅದು ಪ್ರಕೃತಿಯ ಸ್ವಾವಲಂಬನೆ ಮತ್ತು ಜೀವಪೋಷಣೆಯ ಸಂಕೇತವಾಗಿದೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಅನೇಕ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಾನೆ. ಆದರೆ ಪ್ರಕೃತಿಯಲ್ಲಿರುವ ಅಸಂಖ್ಯಾತ ಜೀವಿಗಳ ಬದುಕಿಗೆ ಅಗತ್ಯವಾದ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಕೃತಿಯ ಪಾತ್ರ ಅಪಾರವಾಗಿದೆ. ಮಳೆ, ಮಣ್ಣು, ಗಾಳಿ, ಸೂರ್ಯನ ಬೆಳಕು ಮತ್ತು ನೀರು ಇವುಗಳ ಪರಸ್ಪರ ಸಹಕಾರದಿಂದ ಜೀವಜಗತ್ತು ಅಸ್ತಿತ್ವದಲ್ಲಿದೆ. ಈ ಪರಸ್ಪರ ಅವಲಂಬನೆಯಲ್ಲಿಯೇ ಪ್ರಕೃತಿಯ ಮಹತ್ವ ಅಡಗಿದೆ.
ಇಂದಿನ ಸಂದರ್ಭದಲ್ಲಿ ಈ ಚರಣವನ್ನು ಪರಿಸರ ಪ್ರಜ್ಞೆಯ ನೆಲೆಯಲ್ಲಿಯೂ ಅರ್ಥೈಸಿಕೊಳ್ಳಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸುವ, ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಪರಿಸರದ ಸಮತೋಲನವನ್ನು ಹಾಳುಮಾಡುವ ಮನುಷ್ಯ ಪ್ರಕೃತಿಯೊಂದಿಗೆ ತನ್ನ ಸಂಬಂಧವನ್ನು ಮರುಪರಿಶೀಲಿಸಬೇಕಾಗಿದೆ. ಪ್ರಕೃತಿ ಮನುಷ್ಯನಿಗಾಗಿ ಮಾತ್ರ ಅಸ್ತಿತ್ವದಲ್ಲಿಲ್ಲ; ಅದು ಸಕಲ ಜೀವಿಗಳ ಬದುಕಿನ ಆಧಾರವಾಗಿದೆ. ಹೀಗಾಗಿ ಪ್ರಕೃತಿಯನ್ನು ಗೌರವಿಸುವುದು, ಅದರ ಅಸ್ತಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಕನಕದಾಸರ ಈ ಚರಣವು ಪ್ರಕೃತಿಯ ಜೀವಪೋಷಕ ಶಕ್ತಿಯ ಕುರಿತು ಚಿಂತಿಸುವಂತೆ ಮಾಡುತ್ತದೆ.
ಅಡವಿಯೊಳಗೆ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೋ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನು ಇದಕ್ಕೆ ಸಂಶಯವಿಲ್ಲ.
ಈ ಚರಣದಲ್ಲಿ ಕನಕದಾಸರು ಸಕಲ ಜೀವಿಗಳ ಆಹಾರದ ಹಕ್ಕು ಮತ್ತು ಬದುಕಿನ ಸಹಜ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತಾರೆ. ಕಾಡಿನಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳು ತಮ್ಮ ಆಹಾರವನ್ನು ಪಡೆದುಕೊಳ್ಳುವ ಬಗೆ ಹೇಗೆ? ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು? ಎಂಬ ಪ್ರಶ್ನೆಯ ಮೂಲಕ ಸೃಷ್ಟಿಯಲ್ಲಿರುವ ಜೀವಪೋಷಕ ವ್ಯವಸ್ಥೆಯನ್ನು ವಿವರಿಸುತ್ತಾರೆ.
ಮನುಷ್ಯ ತನ್ನ ಆಹಾರಕ್ಕಾಗಿ ಕೃಷಿ, ಕಾಯಕ ಮತ್ತು ವಿವಿಧ ಉದ್ಯೋಗಗಳನ್ನು ಅವಲಂಬಿಸುತ್ತಾನೆ. ಆದರೆ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಮಾನವನಂತೆ ಆಹಾರ ಸಂಗ್ರಹಿಸುವ ವ್ಯವಸ್ಥೆಗಳಿಲ್ಲ. ಪ್ರಕೃತಿಯೇ ಅವುಗಳಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸುತ್ತದೆ. ಪ್ರತಿ ಜೀವಿಯ ಬದುಕಿಗೂ ತನ್ನದೇ ಆದ ಪರಿಸರ ಮತ್ತು ಆಹಾರ ಸರಪಳಿ ಇದೆ. ಈ ವ್ಯವಸ್ಥೆಯು ಜೀವಜಗತ್ತಿನ ಪರಸ್ಪರ ಅವಲಂಬನೆಯನ್ನು ಸೂಚಿಸುತ್ತದೆ.
ಇಲ್ಲಿ ಕನಕದಾಸರು ಸ್ವಾಮಿಯನ್ನು ತಾಯಿಯಂತೆ ಸಕಲ ಜೀವಿಗಳನ್ನು ಸಲಹುವ ಶಕ್ತಿಯಾಗಿ ಚಿತ್ರಿಸುತ್ತಾರೆ. ತಾಯಿಯು ತನ್ನ ಮಕ್ಕಳನ್ನು ಹೇಗೆ ಕಾಳಜಿಯಿಂದ ಪೋಷಿಸುತ್ತಾಳೋ ಹಾಗೆಯೇ ಸೃಷ್ಟಿಯಲ್ಲಿರುವ ಜೀವಿಗಳನ್ನು ಪೊರೆಯುವ ಶಕ್ತಿ ಇದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಈ ರೂಪಕವು ಮಾತೃತ್ವದ ಕಾಳಜಿ, ರಕ್ಷಣೆ ಮತ್ತು ನಿಸ್ವಾರ್ಥ ಪ್ರೀತಿಯ ಮೌಲ್ಯವನ್ನು ನೆನಪಿಸುತ್ತದೆ.
ಇದನ್ನು ಮತ್ತಷ್ಟು ವಿಶಾಲವಾದ ಸಾಮಾಜಿಕ ನೆಲೆಯಲ್ಲಿ ನೋಡಿದಾಗ, ಆಹಾರವು ಪ್ರತಿಯೊಂದು ಜೀವಿಯ ಮೂಲಭೂತ ಅಗತ್ಯ ಎಂಬ ಸತ್ಯ ಗೋಚರಿಸುತ್ತದೆ. ಮನುಷ್ಯನಾಗಲಿ, ಪ್ರಾಣಿಯಾಗಲಿ, ಪಕ್ಷಿಯಾಗಲಿ ಹಸಿವಿನ ಅನುಭವ ಎಲ್ಲರಿಗೂ ಸಾಮಾನ್ಯ. ಹೀಗಾಗಿ ಹಸಿವಿನ ಮುಂದೆ ಯಾವುದೇ ಭೇದಭಾವಕ್ಕೆ ಅವಕಾಶವಿಲ್ಲ. ಜೀವಜಗತ್ತಿನ ಈ ಸಾಮಾನ್ಯ ಅಗತ್ಯವನ್ನು ಗುರುತಿಸುವುದೇ ಮಾನವೀಯತೆಯ ಮೊದಲ ಹೆಜ್ಜೆಯಾಗಿದೆ. ಕನಕದಾಸರ ಚಿಂತನೆ ಇಂತಹ ಜೀವಪರ ಮನೋಧರ್ಮವನ್ನು ಬೆಳೆಸುತ್ತದೆ.
ನವಿಲಿಗೆ ಚಿತ್ರ ಬರೆದವರು ಯಾರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಳಿಗೆ ಹಸುರು ಬರೆದವರು ಯಾರು
ಅವನೇ ಸಲಹುವನು ಇದಕೆ ಸಂಶಯವಿಲ್ಲ.
ಪ್ರಕೃತಿಯ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಈ ಚರಣದಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಡಲಾಗಿದೆ. ನವಿಲಿನ ರೆಕ್ಕೆಗಳಲ್ಲಿರುವ ವರ್ಣವೈವಿಧ್ಯ, ಪವಳದ ಕೆಂಪು ಬಣ್ಣ, ಗಿಳಿಯ ಹಸಿರು ವರ್ಣ ಇವೆಲ್ಲವೂ ಸೃಷ್ಟಿಯ ಅದ್ಭುತಗಳಾಗಿವೆ. ಈ ಬಣ್ಣಗಳನ್ನು ರೂಪಿಸಿದವರು ಯಾರು? ಎಂಬ ಪ್ರಶ್ನೆಯ ಮೂಲಕ ಕನಕದಾಸರು ಸೃಷ್ಟಿಯ ವೈಚಿತ್ರ್ಯವನ್ನು ಅನಾವರಣಗೊಳಿಸುತ್ತಾರೆ.
ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಬಣ್ಣ, ರೂಪ, ಆಕಾರ ಮತ್ತು ಗುಣಧರ್ಮಗಳಿವೆ. ಈ ವೈವಿಧ್ಯತೆಯೇ ಪ್ರಕೃತಿಯ ಸೌಂದರ್ಯಕ್ಕೆ ಕಾರಣವಾಗಿದೆ. ಒಂದೇ ರೀತಿಯ ಮರಗಳು, ಒಂದೇ ಬಣ್ಣದ ಹೂವುಗಳು, ಒಂದೇ ಸ್ವರೂಪದ ಪ್ರಾಣಿಗಳು ಮಾತ್ರ ಇದ್ದಿದ್ದರೆ ಈ ಜಗತ್ತಿನ ಸೌಂದರ್ಯ ಇಷ್ಟೊಂದು ಆಕರ್ಷಕವಾಗಿರುತ್ತಿರಲಿಲ್ಲ. ಭಿನ್ನತೆಯಲ್ಲಿಯೇ ಸೌಂದರ್ಯವಿದೆ ಎಂಬ ಸತ್ಯವನ್ನು ಈ ಚರಣವು ಮನದಟ್ಟು ಮಾಡುತ್ತದೆ.
ಇಲ್ಲಿನ ಪ್ರಕೃತಿ ವೈವಿಧ್ಯತೆಯ ಪರಿಕಲ್ಪನೆಯನ್ನು ಸಾಮಾಜಿಕ ಬದುಕಿಗೂ ಅನ್ವಯಿಸಬಹುದು. ಮನುಷ್ಯರಲ್ಲಿಯೂ ಭಾಷೆ, ಸಂಸ್ಕೃತಿ, ವೃತ್ತಿ, ಆಲೋಚನೆ, ಜೀವನಶೈಲಿ ಮತ್ತು ವ್ಯಕ್ತಿತ್ವದ ಭಿನ್ನತೆಗಳಿವೆ. ಈ ಭಿನ್ನತೆಗಳನ್ನು ಸಂಘರ್ಷದ ಕಾರಣವನ್ನಾಗಿ ನೋಡುವ ಬದಲು ಪರಸ್ಪರ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯು ವೈವಿಧ್ಯತೆಯನ್ನು ತನ್ನ ಸಹಜ ಗುಣವನ್ನಾಗಿ ಸ್ವೀಕರಿಸಿದಂತೆ ಸಮಾಜವೂ ಭಿನ್ನತೆಯನ್ನು ಗೌರವಿಸಬೇಕು. ಹೀಗಾಗಿ ಈ ಚರಣವು ಪ್ರಕೃತಿಯ ಸೌಂದರ್ಯದ ಜೊತೆಗೆ ಸಾಮಾಜಿಕ ಸಾಮರಸ್ಯದ ಸಂದೇಶವನ್ನೂ ಒಳಗೊಂಡಿದೆ.
ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗಾಹಾರವನ್ನು ತಂದಿತ್ತವರು ಯಾರೋ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.
ಈ ಚರಣದಲ್ಲಿ ಕನಕದಾಸರು ಅತ್ಯಂತ ಸಣ್ಣ ಜೀವಿಯ ಬದುಕಿನ ಮೂಲಕ ಸೃಷ್ಟಿಯ ವಿಶಾಲತೆಯನ್ನು ವಿವರಿಸುತ್ತಾರೆ. ಕಲ್ಲುಬಂಡೆಗಳ ನಡುವೆ, ನೀರಿನ ಆಸರೆಯಲ್ಲಿ ಬದುಕುವ ಕಪ್ಪೆಯಂತಹ ಜೀವಿಗಳಿಗೂ ಆಹಾರ ದೊರೆಯುವ ವ್ಯವಸ್ಥೆ ಇದೆ. ಅವುಗಳ ಬದುಕಿನ ಅಗತ್ಯಗಳನ್ನು ಪೂರೈಸುವವರು ಯಾರು? ಎಂಬ ಪ್ರಶ್ನೆಯು ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ಥಾನ ಮತ್ತು ಮಹತ್ವವಿದೆ ಎಂಬುದನ್ನು ತಿಳಿಸುತ್ತದೆ.
ಸಾಮಾನ್ಯವಾಗಿ ಮನುಷ್ಯ ತನ್ನ ಸುತ್ತಲಿನ ದೊಡ್ಡ ಸಂಗತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾನೆ. ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಸಣ್ಣದು, ದೊಡ್ಡದು ಎಂಬ ಭೇದವಿಲ್ಲ. ಪ್ರತಿಯೊಂದು ಜೀವಿಯೂ ಪರಿಸರದ ಸಮತೋಲನದಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಕಪ್ಪೆ, ಕೀಟ, ಪಕ್ಷಿ, ಪ್ರಾಣಿ ಹೀಗೆ ಪ್ರತಿಯೊಂದು ಜೀವಿಯೂ ಆಹಾರ ಸರಪಳಿಯ ಒಂದು ಭಾಗವಾಗಿದೆ. ಒಂದು ಜೀವಿಯ ಅಸ್ತಿತ್ವ ಮತ್ತೊಂದು ಜೀವಿಯ ಬದುಕಿನೊಂದಿಗೆ ಸಂಬಂಧ ಹೊಂದಿದೆ. ಈ ಪರಸ್ಪರ ಸಂಬಂಧವನ್ನು ಅರಿಯುವುದರಿಂದ ಜೀವವೈವಿಧ್ಯದ ಮಹತ್ವ ತಿಳಿಯುತ್ತದೆ.
‘ಎಲ್ಲರನು ಸಲಹುವನು’ ಎಂಬ ಮಾತಿನ ಮೂಲಕ ಕನಕದಾಸರು ಜೀವಜಗತ್ತಿನ ಸಾರ್ವತ್ರಿಕ ರಕ್ಷಣೆಯ ಆಶಯವನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿ ಎಲ್ಲರೂ ಎನ್ನುವ ಪದಕ್ಕೆ ಯಾವುದೇ ಮಿತಿಯಿಲ್ಲ. ಮನುಷ್ಯ ಮಾತ್ರವಲ್ಲದೆ ಸಕಲ ಚರಾಚರ ಜೀವಿಗಳೂ ಈ ಸೃಷ್ಟಿಯ ಭಾಗವಾಗಿವೆ. ಹೀಗಾಗಿ ಜೀವಿಗಳ ನಡುವೆ ಮೇಲು-ಕೀಳು ಎಂಬ ಭಾವನೆಗಿಂತ ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮನೋಭಾವ ಮುಖ್ಯವಾಗುತ್ತದೆ.
ಕನಕದಾಸರ ಕೀರ್ತನೆಯಲ್ಲಿ ಭರವಸೆಯ ತಾತ್ವಿಕತೆ

‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಕೀರ್ತನೆಯನ್ನು ಸಮಗ್ರವಾಗಿ ಅವಲೋಕಿಸಿದಾಗ, ಕನಕದಾಸರು ಬದುಕಿನ ಬಗೆಗೆ ಒಂದು ವಿಶಿಷ್ಟವಾದ ಆಶಾವಾದಿ ತಾತ್ವಿಕತೆಯನ್ನು ಪ್ರತಿಪಾದಿಸಿರುವುದು ಸ್ಪಷ್ಟವಾಗುತ್ತದೆ. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಮನುಷ್ಯನನ್ನು ಕುಗ್ಗಿಸಬಹುದು. ಆದರೆ ಅವುಗಳನ್ನು ಎದುರಿಸುವ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಮನುಷ್ಯನ ಮನಸ್ಸು ದುರ್ಬಲಗೊಂಡಾಗ ಅವನಿಗೆ ಧೈರ್ಯ ತುಂಬುವ, ಬದುಕಿನ ಬಗ್ಗೆ ಭರವಸೆ ಮೂಡಿಸುವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಪ್ರಯತ್ನವನ್ನು ಈ ಕೀರ್ತನೆ ಮಾಡುತ್ತದೆ.
ಇಲ್ಲಿ ಕನಕದಾಸರ ಭಕ್ತಿ ಅಂಧಶ್ರದ್ಧೆಯ ರೂಪವನ್ನು ಪಡೆದುಕೊಳ್ಳುವುದಿಲ್ಲ. ಬದಲಾಗಿ ಸೃಷ್ಟಿಯಲ್ಲಿರುವ ವ್ಯವಸ್ಥೆಯನ್ನು ಗಮನಿಸುವ, ಅದರ ಹಿಂದಿನ ಶಕ್ತಿಯನ್ನು ಅರಿಯುವ ಮತ್ತು ಬದುಕಿನ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಬೆಳೆಸುವ ಮಾರ್ಗವಾಗಿ ಕಾಣಿಸಿಕೊಳ್ಳುತ್ತದೆ. ಮರ, ಗಿಡ, ಪ್ರಾಣಿ, ಪಕ್ಷಿ ಮತ್ತು ಸಣ್ಣ ಜೀವಿಗಳ ಬದುಕನ್ನು ಉದಾಹರಣೆಯಾಗಿ ನೀಡುವ ಮೂಲಕ ಮನುಷ್ಯನ ಚಿಂತನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾರೆ.
ಕನಕದಾಸರ ಕೀರ್ತನೆಯ ಮತ್ತೊಂದು ಪ್ರಮುಖ ಆಯಾಮವೆಂದರೆ ಮಾನವಕೇಂದ್ರಿತ ದೃಷ್ಟಿಕೋನದಿಂದ ಜೀವಕೇಂದ್ರಿತ ದೃಷ್ಟಿಕೋನದ ಕಡೆಗೆ ನಮ್ಮನ್ನು ಕರೆದೊಯ್ಯುವುದು. ಮನುಷ್ಯನೇ ಈ ಸೃಷ್ಟಿಯ ಕೇಂದ್ರ ಎಂಬ ಅಹಂಕಾರವನ್ನು ಬದಿಗಿಟ್ಟು, ತಾನು ಕೂಡ ಜೀವಜಗತ್ತಿನ ಒಂದು ಭಾಗ ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊರಬೇಕು. ಸಕಲ ಜೀವಿಗಳ ಬದುಕಿನ ಹಕ್ಕನ್ನು ಗೌರವಿಸಬೇಕು. ಇಂತಹ ವಿಶಾಲವಾದ ಚಿಂತನೆಗಳು ಈ ಕೀರ್ತನೆಯ ಅಂತರಾರ್ಥದಲ್ಲಿ ಅಡಕವಾಗಿವೆ.
ಸಮಕಾಲೀನ ಬದುಕಿಗೆ ಕೀರ್ತನೆಯ ಪ್ರಸ್ತುತತೆ
ಇಂದಿನ ಆಧುನಿಕ ಸಮಾಜವು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಮನುಷ್ಯನ ಬದುಕು ಅನೇಕ ಸೌಲಭ್ಯಗಳಿಂದ ಕೂಡಿದ್ದರೂ ಮಾನಸಿಕ ನೆಮ್ಮದಿ ಮತ್ತು ಆತ್ಮತೃಪ್ತಿಯ ಕೊರತೆ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಸ್ಪರ್ಧಾತ್ಮಕ ಜೀವನ, ಉದ್ಯೋಗದ ಅನಿಶ್ಚಿತತೆ, ಆರ್ಥಿಕ ಒತ್ತಡ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಸಂಬಂಧಗಳಲ್ಲಿನ ಬಿರುಕು ಮತ್ತು ಭವಿಷ್ಯದ ಆತಂಕಗಳು ಮನುಷ್ಯನ ಮನಸ್ಸನ್ನು ನಿರಂತರವಾಗಿ ಕಾಡುತ್ತಿವೆ.
ಇಂತಹ ಸಂದರ್ಭದಲ್ಲಿ ಕನಕದಾಸರ ‘ತಲ್ಲಣಿಸದಿರು’ ಎಂಬ ಮಾತು ಅತ್ಯಂತ ಪ್ರಸ್ತುತವಾಗುತ್ತದೆ. ಸೋಲು ಬಂದಾಗ ಕುಗ್ಗದೆ, ಸಂಕಷ್ಟ ಎದುರಾದಾಗ ಧೈರ್ಯ ಕಳೆದುಕೊಳ್ಳದೆ, ಸಮಸ್ಯೆಗಳನ್ನು ವಿವೇಚನೆಯಿಂದ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡು, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ತಾಳ್ಮೆ ಮತ್ತು ಆತ್ಮವಿಶ್ವಾಸವು ಮನುಷ್ಯನ ಬದುಕಿಗೆ ಅಗತ್ಯವಾದ ಗುಣಗಳಾಗಿವೆ.
ಅದೇ ರೀತಿ, ಇಂದಿನ ಪರಿಸರ ಬಿಕ್ಕಟ್ಟುಗಳ ಸಂದರ್ಭದಲ್ಲಿ ಈ ಕೀರ್ತನೆಯ ಪ್ರಕೃತಿ ಸಂಬಂಧಿ ಚಿಂತನೆಗಳು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ಅರಣ್ಯನಾಶ, ಜಲಮಾಲಿನ್ಯ, ವಾಯುಮಾಲಿನ್ಯ, ಜೀವವೈವಿಧ್ಯದ ನಾಶ ಮತ್ತು ಹವಾಮಾನ ಬದಲಾವಣೆಗಳು ಮಾನವಕುಲದ ಮುಂದಿರುವ ಗಂಭೀರ ಸವಾಲುಗಳಾಗಿವೆ. ಪ್ರಕೃತಿಯು ಸಕಲ ಜೀವಿಗಳನ್ನು ಪೋಷಿಸುತ್ತದೆ ಎಂಬ ಅರಿವು ಮನುಷ್ಯನಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸಬೇಕು. ಪ್ರಕೃತಿಯಿಂದ ಪಡೆಯುವುದಷ್ಟೇ ಅಲ್ಲದೆ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ನೈತಿಕ ಹೊಣೆಗಾರಿಕೆಯೂ ನಮ್ಮ ಮೇಲಿದೆ.
ಇದಲ್ಲದೆ, ಕನಕದಾಸರ ಚಿಂತನೆಯಲ್ಲಿರುವ ಸಮಾನತೆಯ ಆಶಯವೂ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಮನುಷ್ಯರ ನಡುವೆ ಜಾತಿ, ಧರ್ಮ, ವರ್ಗ, ಭಾಷೆ ಮತ್ತು ಆರ್ಥಿಕ ಸ್ಥಿತಿಗಳ ಆಧಾರದ ಮೇಲೆ ಭೇದಭಾವಗಳು ನಿರ್ಮಾಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಕಲ ಜೀವಿಗಳನ್ನು ಒಂದೇ ಸೃಷ್ಟಿಯ ಭಾಗವಾಗಿ ನೋಡುವ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಲಹುವ ಶಕ್ತಿ ಒಂದೇ ಎಂಬ ಭಕ್ತಿಯ ಆಶಯವು ಮನುಷ್ಯರ ನಡುವೆ ಸಮಾನತೆ, ಸಹಬಾಳ್ವೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬೆಳೆಸಲು ನೆರವಾಗುತ್ತದೆ.
ಬಹುಮುಖ್ಯವಾಗಿ, ಕನಕದಾಸರ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಕೀರ್ತನೆಯು ಕೇವಲ ಭಕ್ತಿಯ ಅಭಿವ್ಯಕ್ತಿಯಲ್ಲ; ಅದು ಮನುಷ್ಯನ ಬದುಕಿಗೆ ಧೈರ್ಯ ತುಂಬುವ, ಪ್ರಕೃತಿಯ ಮಹತ್ವವನ್ನು ತಿಳಿಸುವ ಮತ್ತು ಸಕಲ ಜೀವಿಗಳ ಅಸ್ತಿತ್ವವನ್ನು ಗೌರವಿಸುವ ವಿಶಾಲವಾದ ಜೀವನದರ್ಶನವಾಗಿದೆ. ಬದುಕಿನ ಅನಿಶ್ಚಿತತೆಗಳ ನಡುವೆ ಮನುಷ್ಯ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಸಮಸ್ಯೆಗಳನ್ನು ಎದುರಿಸುವ ತಾಳ್ಮೆ, ಪ್ರಕೃತಿಯೊಂದಿಗೆ ಸಹಬಾಳ್ವೆ, ಜೀವಿಗಳ ಬಗ್ಗೆ ಕಾಳಜಿ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಕೀರ್ತನೆ ನೀಡುತ್ತದೆ.
ಕನಕದಾಸರು ಸರಳವಾದ ಪ್ರಕೃತಿಯ ಚಿತ್ರಣಗಳ ಮೂಲಕ ಸಂಕೀರ್ಣವಾದ ತಾತ್ವಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ. ಬೆಟ್ಟದ ಮೇಲಿನ ಮರದಿಂದ ಹಿಡಿದು ಅರಣ್ಯದ ಪ್ರಾಣಿ-ಪಕ್ಷಿಗಳವರೆಗೆ, ನವಿಲಿನ ವರ್ಣವೈವಿಧ್ಯದಿಂದ ಹಿಡಿದು ಕಲ್ಲಿನಡಿಯ ಕಪ್ಪೆಯವರೆಗೆ ಸೃಷ್ಟಿಯ ಪ್ರತಿಯೊಂದು ಸಂಗತಿಯನ್ನೂ ತಮ್ಮ ಚಿಂತನೆಯ ಭಾಗವನ್ನಾಗಿಸಿಕೊಂಡಿದ್ದಾರೆ. ಈ ಮೂಲಕ ಸೃಷ್ಟಿಯಲ್ಲಿರುವ ಜೀವಪರ ಕಾಳಜಿ, ಪರಸ್ಪರ ಅವಲಂಬನೆ ಮತ್ತು ನಿಸರ್ಗದ ಅದ್ಭುತ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
ಇಂದಿನ ಮನುಷ್ಯನಿಗೆ ಬೇಕಾಗಿರುವುದು ಕೇವಲ ಭೌತಿಕ ಸಂಪತ್ತು ಮತ್ತು ಸೌಲಭ್ಯಗಳಲ್ಲ; ಅವುಗಳೊಂದಿಗೆ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ, ಸಹನೆ, ಮಾನವೀಯತೆ ಮತ್ತು ಪ್ರಕೃತಿಪ್ರಜ್ಞೆಯೂ ಅಗತ್ಯವಾಗಿದೆ. ಕನಕದಾಸರ ಈ ಕೀರ್ತನೆಯು ಅಂತಹ ಮೌಲ್ಯಗಳನ್ನು ನೆನಪಿಸುವ ಮೂಲಕ ಕಾಲಾತೀತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ‘ತಲ್ಲಣಿಸದಿರು’ ಎಂಬುದು ಕೇವಲ ಮನಸ್ಸಿಗೆ ಹೇಳುವ ಸಮಾಧಾನದ ಮಾತಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಬದುಕಿನ ಸವಾಲುಗಳನ್ನು ಎದುರಿಸುವ ಮತ್ತು ಸಕಲ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಸಮಗ್ರ ಜೀವನ ಸಂದೇಶವಾಗಿದೆ.
ಡಾ.ಕೃಷ್ಣಮೂರ್ತಿ.ಆರ್ ಉಡೇವಾ
ಸಹಾಯಕ ಪ್ರಾಧ್ಯಾಪಕರು
ಸಿ.ಜಿ ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಅಕ್ಕಿ ಆಲೂರು.
ಮೊಬೈಲ್ : 9611184944
ಇದನ್ನೂ ಓದಿ – ಸಾಂಸ್ಕೃತಿಕ ಸರ್ವಾಧಿಕಾರ; ಸನಾತನಿಗಳ ಸಂತತ ದಾಳಿ–


