ನಮ್ಮಲ್ಲಿ ತಂದೆ-ತಾಯಿ ಎಂಬ ಸಂಬಂಧವನ್ನು ನೋಡುವುದಕ್ಕೂ ಒಂದು ಚೌಕಟ್ಟಿದೆ. ಅವರನ್ನು ಯಾವಾಗಲೂ ಗಂಭೀರವಾಗಿ, ಗೌರವದಿಂದ, ಮಕ್ಕಳಿಗಾಗಿ ಬದುಕುವ ವ್ಯಕ್ತಿಗಳಾಗಿ ನೋಡಲು ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಅವರೂ ಒಮ್ಮೆ ಪ್ರೀತಿಯಲ್ಲಿ ಬಿದ್ದಿರಬಹುದು, ಒಬ್ಬರನ್ನೊಬ್ಬರು ಇಷ್ಟಪಟ್ಟಿರಬಹುದು, ಪರಸ್ಪರ ತುಂಟಾಟ ಮಾಡಿರಬಹುದು ಅನ್ನೋದನ್ನು ಒಪ್ಪಿಕೊಳ್ಳಲು ಕೆಲವರಿಗೆ ಮುಜುಗರವಾಗುತ್ತದೆ. ಪೋಷಕರಿಗೆ ಪ್ರೀತಿ ಇರಬೇಕು, ಆದರೆ ಆ ಪ್ರೀತಿಯ ಅಭಿವ್ಯಕ್ತಿ ಮಾತ್ರ ನಮ್ಮ ಕಲ್ಪನೆಯ ಮಿತಿಯೊಳಗೇ ಇರಬೇಕು ಎನ್ನುವ ನಿರೀಕ್ಷೆ ಯಾಕೆ? – ರುಕ್ಮಿಣಿ ನಾಗಣ್ಣವರ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ Belonging: A Journey of Love ಆತ್ಮಕಥನದ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲ್ಯದ ನೆನಪೊಂದನ್ನು ಹಂಚಿಕೊಂಡಿದ್ದರು. ಊಟದ ಸಮಯದಲ್ಲಿ ತಂದೆ ರಾಜೀವ್ ಗಾಂಧಿಯವರ ತೊಡೆಯ ಮೇಲೆ ತಾಯಿ ಕುಳಿತಿರುತ್ತಿದ್ದರಂತೆ. ಬಾಲ್ಯದಲ್ಲಿ ಅದನ್ನು ಸಹಜವೆಂದೇ ಭಾವಿಸಿದ್ದ ರಾಹುಲ್, ಸ್ನೇಹಿತರ ಮನೆಗೆ ಹೋದಾಗ ಅವರ ತಂದೆ-ತಾಯಿಯರು ಹಾಗೆ ಕುಳಿತಿರುವುದನ್ನು ಕಾಣದೆ ಆಶ್ಚರ್ಯಪಟ್ಟಿದ್ದರಂತೆ. ತಮ್ಮ ತಂದೆ-ತಾಯಿಯ ನಡುವಿನ ಆತ್ಮೀಯತೆಯನ್ನು ನೆನಪಿಸಿಕೊಳ್ಳುವಾಗ ಅವರು ಈ ಮಾತು ಹೇಳಿದ್ದರು.
ಈ ಮಾತಿಗೆ ರಾಜಕೀಯ ವಲಯದಲ್ಲಿ ಟೀಕೆಗಳು ವ್ಯಕ್ತವಾದವು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸೋನಿಯಾ ಗಾಂಧಿಯವರಿಗೆ ಮುಜುಗರ ಉಂಟುಮಾಡಿದ್ದಾರೆ ಎನ್ನುವ ರೀತಿಯಲ್ಲಿ ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಭಯ, ಕೋಪ ಮತ್ತು ದ್ವೇಷಗಳು ಪ್ರೀತಿಯನ್ನು ಅನುಭವಿಸಲು ಅಡ್ಡಿಯಾಗುತ್ತವೆ ಎಂಬ ಸಂದೇಶ ಹಂಚಿಕೊಂಡರು. ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಶಿವ-ಪಾರ್ವತಿಯರ ಶಿಲ್ಪದ ಚಿತ್ರವನ್ನೂ ಪ್ರಕಟಿಸಿದರು. ಹೀಗೆ ಒಂದು ಕುಟುಂಬದ ಬಾಲ್ಯದ ನೆನಪು ರಾಜಕೀಯ ಚರ್ಚೆಯ ವಿಷಯವಾಯಿತು.
ಇಲ್ಲಿ ಎರಡು ಬೇರೆ ಬೇರೆ ಸಂಗತಿಗಳಿವೆ. ರಾಹುಲ್ ಗಾಂಧಿ ತಮ್ಮ ತಂದೆ-ತಾಯಿಯ ವೈಯಕ್ತಿಕ ನೆನಪನ್ನು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕೇಳಿದವರಿಗೆ ತಮ್ಮದೇ ಆದ ಅಭಿಪ್ರಾಯ ಇರಬಹುದು. ಇಂಥ ವೈಯಕ್ತಿಕ ವಿಚಾರವನ್ನು ಸಾರ್ವಜನಿಕವಾಗಿ ಹೇಳುವುದು ಸರಿಯೇ, ಬೇಡವೇ ಎಂದು ಚರ್ಚಿಸುವುದಕ್ಕೂ ಅವಕಾಶವಿದೆ. ಸಾರ್ವಜನಿಕ ವ್ಯಕ್ತಿಗಳು ತಮ್ಮ ಮಾತುಗಳಿಂದ ಚರ್ಚೆ ಹುಟ್ಟುಹಾಕಿದಾಗ ಪ್ರಶ್ನೆಗಳು ಬರುವುದು ಸಹಜ. ಆದರೆ ಆ ನೆನಪಿನಲ್ಲಿ ವ್ಯಕ್ತವಾಗಿರುವ ದಂಪತಿಗಳ ಆತ್ಮೀಯತೆಯನ್ನೇ ಅಸಭ್ಯವೆಂದು ಹೀಯಾಳಿಸುವುದು ಆತಂಕದ ವಿಚಾರ. ಈ ಎರಡರ ನಡುವಿನ ವ್ಯತ್ಯಾಸವನ್ನು ನಾವು ಮರೆಯಬಾರದು.
ಒಬ್ಬ ಹೆಂಡತಿ ತನ್ನ ಗಂಡನ ತೊಡೆಯ ಮೇಲೆ ಕುಳಿತುಕೊಂಡರೆ ಅದರಲ್ಲಿ ತಪ್ಪೇನಿದೆ? ಕೆಲವರಿಗೆ ಅದು ಪ್ರೀತಿಯ ಅಭಿವ್ಯಕ್ತಿ ಇರಬಹುದು. ಇನ್ನು ಕೆಲವರಿಗೆ ಅದು ತುಂಟತನ, ಕಾಳಜಿ ಅಥವಾ ಸಂಗಾತಿಯ ಜೊತೆಗಿದ್ದಾಗ ಸಿಗುವ ನೆಮ್ಮದಿಯ ಸಂಕೇತವಾಗಿರಬಹುದು. ಎಲ್ಲರೂ ಪ್ರೀತಿಯನ್ನು ಒಂದೇ ರೀತಿಯಲ್ಲಿ ತೋರಿಸಬೇಕಿಲ್ಲ. ಕೆಲವರು ಕೈ ಹಿಡಿದು ನಡೆಯುತ್ತಾರೆ, ಕೆಲವರು ಅಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಏನೂ ಮಾತಾಡದೆ ಒಬ್ಬರಿಗೊಬ್ಬರು ಒರಗಿಕೊಂಡು ಕುಳಿತುಕೊಳ್ಳುತ್ತಾರೆ. ಇಂಥ ಸಣ್ಣ ಸಣ್ಣ ಕ್ಷಣಗಳಲ್ಲಿಯೇ ಸಂಬಂಧದ ಆತ್ಮೀಯತೆ ಉಳಿದಿರುತ್ತದೆ.

ಆದರೆ ನಮ್ಮಲ್ಲಿ ತಂದೆ-ತಾಯಿ ಎಂಬ ಸಂಬಂಧವನ್ನು ನೋಡುವುದಕ್ಕೂ ಒಂದು ಚೌಕಟ್ಟಿದೆ. ಅವರನ್ನು ಯಾವಾಗಲೂ ಗಂಭೀರವಾಗಿ, ಗೌರವದಿಂದ, ಮಕ್ಕಳಿಗಾಗಿ ಬದುಕುವ ವ್ಯಕ್ತಿಗಳಾಗಿ ನೋಡಲು ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಅವರೂ ಒಮ್ಮೆ ಪ್ರೀತಿಯಲ್ಲಿ ಬಿದ್ದಿರಬಹುದು, ಒಬ್ಬರನ್ನೊಬ್ಬರು ಇಷ್ಟಪಟ್ಟಿರಬಹುದು, ಪರಸ್ಪರ ತುಂಟಾಟ ಮಾಡಿರಬಹುದು ಅನ್ನೋದನ್ನು ಒಪ್ಪಿಕೊಳ್ಳಲು ಕೆಲವರಿಗೆ ಮುಜುಗರವಾಗುತ್ತದೆ. ಪೋಷಕರಿಗೆ ಪ್ರೀತಿ ಇರಬೇಕು, ಆದರೆ ಆ ಪ್ರೀತಿಯ ಅಭಿವ್ಯಕ್ತಿ ಮಾತ್ರ ನಮ್ಮ ಕಲ್ಪನೆಯ ಮಿತಿಯೊಳಗೇ ಇರಬೇಕು ಎನ್ನುವ ನಿರೀಕ್ಷೆ ಯಾಕೆ? ತಂದೆ-ತಾಯಿಯರೂ ಪ್ರೀತಿಸುವ, ಪ್ರೀತಿಯನ್ನು ಬಯಸುವ ವ್ಯಕ್ತಿಗಳೇ ಅಲ್ಲವೇ? ಮಕ್ಕಳ ಮುಂದೆ ಅವರು ಪರಸ್ಪರ ಪ್ರೀತಿಯಿಂದ ನಡೆದುಕೊಳ್ಳುವುದರಲ್ಲಿ ತಪ್ಪೇನಿದೆ?
ಇದಕ್ಕೆ ವಯಸ್ಸಿನ ಪ್ರಶ್ನೆಯೂ ಸೇರಿಕೊಳ್ಳುತ್ತದೆ. ಮದುವೆಯಾದ ಹೊಸದರಲ್ಲಿ ಗಂಡ-ಹೆಂಡತಿ ಪರಸ್ಪರ ಪ್ರೀತಿ ತೋರಿಸಿದರೆ ಅದನ್ನು ಸಹಜವಾಗಿ ನೋಡುತ್ತೇವೆ. ಆದರೆ ವರ್ಷಗಳು ಕಳೆದಂತೆ ಅದೇ ಆತ್ಮೀಯತೆಯನ್ನು ಕೆಲವರು ಬೇರೆ ದೃಷ್ಟಿಯಿಂದ ನೋಡುತ್ತಾರೆ. ವಯಸ್ಸಾದ ದಂಪತಿಗಳು ಕೈ ಹಿಡಿದು ನಡೆದರೂ ಅಚ್ಚರಿಪಡುತ್ತಾರೆ. ಪ್ರೀತಿ ಅನ್ನೋದು ಯುವಕ-ಯುವತಿಯರಿಗೆ ಮಾತ್ರ ಸೀಮಿತವಾದ ಭಾವನೆಯಲ್ಲ. ಬದುಕಿನ ಎಷ್ಟೋ ಏಳುಬೀಳುಗಳನ್ನು ಒಟ್ಟಿಗೆ ದಾಟಿದವರ ನಡುವೆಯೂ ಪ್ರೀತಿ, ಆಕರ್ಷಣೆ ಮತ್ತು ಮಮತೆ ಉಳಿದಿರುತ್ತದೆ. ವಯಸ್ಸಾದಂತೆ ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗಬೇಕೆಂಬ ಬಯಕೆಯೂ ಇರಬಹುದು. ಇದರಲ್ಲಿ ಅಚ್ಚರಿಪಡುವಂಥದ್ದೇನಿದೆ?
ಮಹಿಳೆಯ ವಿಚಾರ ಬಂದಾಗ ಈ ಮನಸ್ಥಿತಿಯ ಮತ್ತೊಂದು ಮುಖ ಕಾಣಿಸುತ್ತದೆ. ಮದುವೆಯಾದ ಮೇಲೂ ಮಹಿಳೆಯ ದೇಹ ಮತ್ತು ಭಾವನೆಗಳ ಬಗ್ಗೆ ಬೇರೆಯವರು ತೀರ್ಮಾನಿಸಲು ಮುಂದಾಗುತ್ತಾರೆ. ತನ್ನ ಸಂಗಾತಿಯ ಜೊತೆ ಹೇಗೆ ಇರಬೇಕು, ತನ್ನ ಆತ್ಮೀಯತೆಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದನ್ನು ಆಕೆ ತಾನೇ ನಿರ್ಧರಿಸಿಕೊಳ್ಳುವ ಸ್ವಾತಂತ್ರ್ಯವೂ ಇರಬಾರದೇ? ಪತ್ನಿ ಎಂಬ ಸಂಬಂಧಕ್ಕೆ ಬಂದ ಮೇಲೂ ಮಹಿಳೆಯ ಆಯ್ಕೆ ಮತ್ತು ಒಪ್ಪಿಗೆ ಮುಖ್ಯವೇ ಅಲ್ಲವೇ? ದಾಂಪತ್ಯದಲ್ಲಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಇಚ್ಛೆಗೆ ಬೇರೆ ಅರ್ಥ ಕೊಡುವ ಅಥವಾ ಅದನ್ನು ಕಡೆಗಣಿಸುವ ಹಕ್ಕು ಯಾರಿಗೂ ಇಲ್ಲ.
ಯಾವುದೇ ದೈಹಿಕ ಆತ್ಮೀಯತೆ ಇಬ್ಬರಿಗೂ ಇಷ್ಟವಿದ್ದಾಗ, ಇಬ್ಬರೂ ಆರಾಮವಾಗಿದ್ದಾಗ ಮಾತ್ರ ಅರ್ಥಪೂರ್ಣ. ಗಂಡನಾಗಲಿ, ಹೆಂಡತಿಯಾಗಲಿ, ತಮ್ಮ ಇಚ್ಛೆಯನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರಬಾರದು. ಎಲ್ಲ ದಂಪತಿಗಳೂ ಒಂದೇ ರೀತಿಯಲ್ಲಿ ಪ್ರೀತಿ ತೋರಿಸಬೇಕು ಎನ್ನುವುದಲ್ಲ. ಅವರವರ ಸಂಬಂಧದ ಸ್ವರೂಪ ಅವರವರಿಗೆ ಬಿಟ್ಟದ್ದು. ಆದರೆ ತಮಗೆ ಇಷ್ಟವಿಲ್ಲದ ಅಭಿವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡವರನ್ನು ಹೀಯಾಳಿಸುವುದೂ ಸರಿಯಲ್ಲ. ನಮ್ಮ ಆಯ್ಕೆಯ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ಬೇರೆಯವರ ಆಯ್ಕೆಯನ್ನು ಗೌರವಿಸುವುದೂ ಅಷ್ಟೇ ಮುಖ್ಯ.
ನಮ್ಮ ಸಾಹಿತ್ಯ, ಶಿಲ್ಪಕಲೆ ಮತ್ತು ಜನಪದದಲ್ಲಿಯೂ ಪ್ರೀತಿಯ ಹಲವು ರೂಪಗಳು ಕಾಣಿಸುತ್ತವೆ. ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಶಿಲ್ಪಗಳಲ್ಲಿಯೂ ಮಾನವ ಭಾವನೆಗಳ ವೈವಿಧ್ಯವನ್ನು ಕಾಣಬಹುದು. ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲೇ ಪ್ರೀತಿ ಮತ್ತು ಆತ್ಮೀಯತೆಯ ಹಲವು ಅಭಿವ್ಯಕ್ತಿಗಳಿಗೆ ಜಾಗವಿದೆ. ಹೀಗಿರುವಾಗ ಪ್ರೀತಿಯ ಅಭಿವ್ಯಕ್ತಿಗೆ ಒಂದೇ ರೂಪವಿದೆ, ಅದೂ ನಮ್ಮ ಕಲ್ಪನೆಯಂತೆಯೇ ಇರಬೇಕು ಎಂದು ನಿರೀಕ್ಷಿಸುವುದು ಹೇಗೆ?
ರಾಜಕೀಯದ ವಿಚಾರಕ್ಕೆ ಬಂದರೆ, ನಾಯಕರ ಮಾತು ಮತ್ತು ನಿಲುವುಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಭಾಗ. ರಾಹುಲ್ ಗಾಂಧಿಯವರ ಮಾತಿನ ಸಂದರ್ಭ, ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡ ರೀತಿ ಅಥವಾ ಅದರ ರಾಜಕೀಯ ಅರ್ಥದ ಬಗ್ಗೆ ಚರ್ಚಿಸಬಹುದು. ಆದರೆ ರಾಜಕೀಯ ವಿರೋಧದ ಕಾರಣಕ್ಕೆ ಅವರ ತಂದೆ-ತಾಯಿಯ ನಡುವಿನ ಸಂಬಂಧವನ್ನೇ ವ್ಯಂಗ್ಯಕ್ಕೆ ಬಳಸುವುದು ಆರೋಗ್ಯಕರ ಚರ್ಚೆಯಲ್ಲ. ಭಿನ್ನಾಭಿಪ್ರಾಯಕ್ಕೆ ಜಾಗ ಇರಲಿ. ಆದರೆ ಟೀಕೆ ವ್ಯಕ್ತಿಯ ಗೌರವವನ್ನೂ, ಮತ್ತೊಬ್ಬರ ಖಾಸಗಿ ಸಂಬಂಧವನ್ನೂ ತುಳಿಯುವಂತಾಗಬಾರದು.

ಯುವಜನರೊಂದಿಗೆ ಕೆಲಸ ಮಾಡುವಾಗ ಪ್ರೀತಿಯ ಬಗ್ಗೆ ಅವರಲ್ಲಿರುವ ಹಿಂಜರಿಕೆಯನ್ನು ಆಗಾಗ ಗಮನಿಸುತ್ತೇನೆ. ಪ್ರೀತಿಯನ್ನು ವ್ಯಕ್ತಪಡಿಸಿದರೆ ತಪ್ಪಾಗುತ್ತದೆಯೇ, ಬೇರೆಯವರು ಏನೆಂದುಕೊಳ್ಳುತ್ತಾರೆ ಎಂಬ ಗೊಂದಲ ಕೆಲವರಲ್ಲಿರುತ್ತದೆ. ಪ್ರೀತಿಸುವುದಕ್ಕಿಂತ ಅದನ್ನು ವ್ಯಕ್ತಪಡಿಸುವುದೇ ಕೆಲವರಿಗೆ ಕಷ್ಟವಾಗಿರುತ್ತದೆ. ಪ್ರೀತಿ ಎಂದರೆ ಹೀಗೆಯೇ ಇರಬೇಕು, ಹೀಗೆ ವ್ಯಕ್ತಪಡಿಸಬಾರದು ಎಂಬ ಸಾಮಾಜಿಕ ನಿರೀಕ್ಷೆಗಳು ಅವರ ಮನಸ್ಸಿನ ಮೇಲೂ ಪ್ರಭಾವ ಬೀರುತ್ತವೆ. ಪ್ರೀತಿಯನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಯಬೇಕಾದರೆ, ಮೊದಲು ಅದರ ಬಗ್ಗೆ ಇರುವ ಮುಜುಗರ ಮತ್ತು ಅನಗತ್ಯ ತೀರ್ಪುಗಳನ್ನು ಬದಿಗಿಡಬೇಕಿದೆ.
ನನಗೆ ಮುಖ್ಯವಾಗಿ ಅನಿಸುವುದು ಇಷ್ಟೇ. ಒಂದು ಕುಟುಂಬದ ವೈಯಕ್ತಿಕ ನೆನಪನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೇ ಬೇಡವೇ ಎನ್ನುವ ಚರ್ಚೆ ಒಂದು ಕಡೆಯಾದರೆ, ಆ ನೆನಪಿನಲ್ಲಿರುವ ಪ್ರೀತಿಯನ್ನು ಅಸಭ್ಯವೆಂದು ನೋಡುವುದು ಇನ್ನೊಂದು ಕಡೆಯ ವಿಚಾರ. ಈ ಎರಡನ್ನೂ ಬೆರೆಸಬಾರದು. ಪ್ರೀತಿಯನ್ನು ಎಲ್ಲರೂ ಒಂದೇ ರೀತಿಯಲ್ಲಿ ವ್ಯಕ್ತಪಡಿಸಬೇಕಿಲ್ಲ. ಕೆಲವರಿಗೆ ಅದು ಮಾತು, ಕೆಲವರಿಗೆ ಸ್ಪರ್ಶ, ಇನ್ನು ಕೆಲವರಿಗೆ ಮೌನದಲ್ಲಿಯೇ ಸಿಗುವ ನೆಮ್ಮದಿ. ನಮಗೆ ಆ ಅಭಿವ್ಯಕ್ತಿ ಪರಿಚಯವಿಲ್ಲದಿರಬಹುದು, ಇಷ್ಟವಾಗದಿರಬಹುದು. ಆದರೆ ಅದನ್ನು ಕಂಡು ಅಸಹ್ಯಪಡುವ ಅಥವಾ ಹೀಯಾಳಿಸುವ ಅಗತ್ಯವೇನಿದೆ?
ನಮ್ಮ ಬದುಕಿನಲ್ಲಿ ಪ್ರೀತಿಯನ್ನು ಬಯಸುವ ನಾವು, ಮತ್ತೊಬ್ಬರ ಬದುಕಿನಲ್ಲಿರುವ ಪ್ರೀತಿಯನ್ನು ಕಂಡಾಗಲೂ ಅದೇ ಸಹಜತೆಯಿಂದ ಸ್ವೀಕರಿಸಲು ಯಾಕೆ ಸಾಧ್ಯವಾಗಬಾರದು? ಪ್ರೀತಿ ಒಂದೇ ರೂಪದಲ್ಲಿ ಇರಬೇಕೆಂಬ ನಿರೀಕ್ಷೆಯನ್ನು ಬಿಟ್ಟು, ಅದರ ಬೇರೆ ಬೇರೆ ಅಭಿವ್ಯಕ್ತಿಗಳಿಗೂ ಮನಸ್ಸಿನಲ್ಲಿ ಸ್ವಲ್ಪ ಜಾಗ ಕೊಡೋಣ.
ರುಕ್ಮಿಣಿ ನಾಗಣ್ಣವರ
ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿಯವರು. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಪ್ರೀತಿ ಸಹಜ, ಅಭಿವ್ಯಕ್ತಿ ಅಸಹಜವೇ?


