ನಾನು ಕಾರ್ಕಳದ ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸೀನಿಯರ್ ಆಗಿದ್ದ ಪಿ ಆರ್ ರವಿಶಂಕರ್ (ಪೆಲತ್ತೂರು ರವಿಶಂಕರ್) ಬಗ್ಗೆ ಈ ಹಿಂದೆ ಹೇಳಿದ್ದೆ. ನನಗಿಂತ ಮೊದಲು ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿದ್ದ ಆತ, ಪದವಿ ಮುಗಿದ ಬಳಿಕ ಮಂಗಳೂರಿಗೆ ಹೋಗಿ, ಅಲ್ಲಿನ ʼಅಭಿವ್ಯಕ್ತʼ ನಾಟಕ ತಂಡ ಸೇರಿಕೊಂಡ. ಒಬ್ಬ ಒಳ್ಳೆಯ ಚಿತ್ರ ಕಲಾವಿದನೂ ಆಗಿದ್ದುದರಿಂದ ʼಅಭಿವ್ಯಕ್ತʼಕ್ಕೆ ಆತ ದೊಡ್ಡದೊಂದು ಆಸ್ತಿಯಾಗಿದ್ದ.
ಮಂಗಳೂರಿನಿಂದ ಆಗಾಗ ಕಾರ್ಕಳಕ್ಕೆ ಬರುತ್ತಿದ್ದ ರವಿಶಂಕರ್ ಅಲ್ಲಿನ ನಾಟಕ ಚಟುವಟಿಕೆಗಳ ಬಗ್ಗೆ ಸ್ವಾರಸ್ಯಕರವಾಗಿ ಹೇಳುತ್ತಾ ನಮ್ಮಲ್ಲಿ ಕುತೂಹಲ ಕೆರಳಿಸುತ್ತಿದ್ದ. 1983 ರಲ್ಲಿ ಒಮ್ಮೆ ಚಂದ್ರು ಅವರ ಅಭಿನಯದ ʼಮುಖ್ಯಮಂತ್ರಿʼ ನಾಟಕ ಮಂಗಳೂರಿನಲ್ಲಿ ಪ್ರದರ್ಶನವಾಗಿತ್ತು; ಕದ್ರಿಯ ಒಂದು ಹಾಲ್ ನಲ್ಲಿ ಇರಬೇಕು. ಆಗ ನಾನು ಗೆಳೆಯ ಮುಶ್ತಾಕ್ ನೊಂದಿಗೆ ಕಾರ್ಕಳದಿಂದ ಹೋಗಿ ಅದನ್ನು ನೋಡಿ ಬಂದಿದ್ದೆ.
ಅದು 1980ರ ದಶಕ ಎಂದ ಮೇಲೆ ಹೇಳಬೇಕೇ, ಆಧುನಿಕ ನಾಟಕಗಳ ಸುವರ್ಣಯುಗ. ಕರ್ನಾಟಕ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ರಂಗಚಳುವಳಿ ನಡೆಯುತ್ತಿತ್ತು. ಎಡಪಂಥೀಯ ಒಲವುಳ್ಳ ʼಸಮುದಾಯʼ ತಂಡವು ನಾಟಕವನ್ನು ಜನಜಾಗೃತಿಯ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯಾದ್ಯಂತ ಕೆಲಸ ಮಾಡುತ್ತಿತ್ತು. ಈ ಕೆಲಸಕ್ಕೆ ಅದು ʼಬೀದಿನಾಟಕʼ ವನ್ನು ಹೆಚ್ಚಾಗಿ ಬಳಸಿಕೊಂಡಿತ್ತು. ನಾಟಕಗಳಲ್ಲಿ ಸಂಪ್ರದಾಯವಾದಿಗಳ ಕಣ್ಣು ಕೆಂಪಗಾಗಿಸುವ ಕ್ರಾಂತಿಕಾರಕ ಪ್ರಯೋಗಗಳನ್ನೂ ಅದು ಮಾಡುತ್ತಿತ್ತು. ಪ್ರಸನ್ನರಂತಹ ಪ್ರತಿಭಾವಂತ ರಂಗಕರ್ಮಿಗಳು ಅದರ ಬೆನ್ನೆಲುಬಾಗಿದ್ದರು. ʼಸಮುದಾಯʼದಿಂದಾಗಿ ಅಸಂಖ್ಯ ರಂಗಪ್ರತಿಭೆಗಳು ಉದಯಿಸಿ ಬಹುದೀರ್ಘ ಕಾಲ ರಂಗಚಳುವಳಿಯನ್ನು ನಾಡಿನಾದ್ಯಂತ ಮುನ್ನಡೆಸಿದವು.
ರಾಜಧಾನಿ ಬೆಂಗಳೂರಿನಲ್ಲಿಯಂತೂ ಅನೇಕ ನಾಟಕ ತಂಡಗಳು ಕೆಲಸ ಮಾಡುತ್ತಿದ್ದವು. ನ್ಯಾಷನಲ್ ಕಾಲೇಜುಗಳಂತಹ ಕಾಲೇಜುಗಳಲ್ಲೂ ನಾಟಕ ಚಟುವಟಿಕೆ ನಿತ್ಯ ನಿರಂತರವಾಗಿತ್ತು. ಅದರಲ್ಲಿ ರಾಷ್ಟ್ರ ಮಟ್ಟದ ಅನೇಕ ಪ್ರತಿಭಾವಂತರು ಭಾಗವಹಿಸುತ್ತಿದ್ದರು. ರಾಜಧಾನಿಯಲ್ಲಿ ಬಿ ಇ ಎಲ್, ಬಿ ಇ ಎಂ ಎಲ್, ಐಟಿಐ, ಎಚ್ ಎಂ ಟಿ, ಹೀಗೆ ಅನೇಕ ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಗಳಿದ್ದು ಆ ಪ್ರತಿಯೊಂದರಲ್ಲಿಯೂ ಒಂದೊಂದು ನಾಟಕ ತಂಡಗಳಿದ್ದವು. ಅವು ನಾಡಿನಾದ್ಯಂತ ಹೊಸ ಅಲೆಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಈ ನಾಟಕ ತಂಡಗಳಿಂದಾಗಿ ಬಿ ವಿ ವೈಕುಂಠರಾಜು (ನಾಟಕಕಾರ), ಟಿ ಎನ್ ಸೀತಾರಾಂ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಮೊದಲಾದ ಅನೇಕರು ಮುನ್ನೆಲೆಗೆ ಬಂದು, ಇವರಲ್ಲಿ ಕೆಲವರು ಮುಂದೆ ಸಿನಿಮಾ ರಂಗದಲ್ಲಿಯೂ ದೊಡ್ಡ ಹೆಸರು ಮಾಡಿದರು.
ಕೆ ವಿ ಸುಬ್ಬಣ್ಣ ನೇತೃತ್ವದ ಹೆಗ್ಗೋಡಿನ ʼನೀನಾಸಂʼ (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ರಂಗಕಲಾ ಸಂಘವು ವಾರ್ಷಿಕ ʼಸಂಸ್ಕೃತಿ ಶಿಬಿರʼ ನಡೆಸುತ್ತಿದ್ದುದು ಮಾತ್ರವಲ್ಲ, ರಂಗಶಾಲೆಯನ್ನೂ ನಡೆಸುತ್ತಿತ್ತು. ಹತ್ತು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸಿ, ಕಲಾವಿದರನ್ನು ರೂಪಿಸಿ, ಸಂಸ್ಕೃತಿ ಶಿಬಿರದ ಸಮಯದಲ್ಲಿ ಅದು ಮೊದಲ ಪ್ರದರ್ಶನ ನೀಡುತ್ತಿತ್ತು. ಈ ಮೊದಲ ಪ್ರದರ್ಶನದ ಬಳಿಕ ʼತಿರುಗಾಟʼದ ಹೆಸರಿನಲ್ಲಿ ಅದು ನಾಡಿನಾದ್ಯಂತ ವರ್ಷಕ್ಕೆ ಸುಮಾರು ನಾಲ್ಕು ನಾಟಕಗಳಂತೆ ಪ್ರದರ್ಶನ ನೀಡುತ್ತಿತ್ತು. ʼನೀನಾಸಂʼ ನಾಟಕವನ್ನು ಹೆಚ್ಚಾಗಿ ರಂಜನೆಯ ಮೂಲಕ ಸಂದೇಶ ರವಾನೆಗೆ ಬಳಸಿಕೊಳ್ಳುತ್ತಿತ್ತು. ಇದಕ್ಕಾಗಿ ಶೇಕ್ಸ್ಪೀಯರ್ ನಂತಹ ಇಂಗ್ಲಿಷ್ ನಾಟಕಕಾರನ ಸಹಿತ, ವಿದೇಶೀ ನಾಟಕಕಾರರ ನಾಟಕಗಳು, ಅಲ್ಲದೆ ಸಂಸ್ಕೃತದ ಪ್ರಸಿದ್ಧ ನಾಟಕಗಳನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳುತ್ತಿತ್ತು. ಹಾಡು, ಸಂಗೀತ, ನೃತ್ಯ, ವಿಶಿಷ್ಟ ಭಾವಭಂಗಿಗಳು ಮತ್ತು ಅಭಿನಯ ಶೈಲಿ ಇತ್ಯಾದಿಗಳಿಂದ ಕೂಡಿ ಪರಿಪೂರ್ಣ ರಂಗಭೂಮಿಯ ಅನುಭವ ನೀಡುವ ʼತಿರುಗಾಟʼದ ನಾಟಕಗಳನ್ನು ನೋಡಲು ಜನ ಕಾತರದಿಂದ ಕಾಯುತ್ತಿದ್ದರು. ʼನೀನಾಸಂʼ ಕಾರಣವಾಗಿ ಅಸಂಖ್ಯ ಪ್ರತಿಭಾವಂತ ನಟರು, ನಟಿಯರು, ನಿರ್ದೇಶಕರು, ಹಿನ್ನೆಲೆ ಕಲಾವಿದರು ಕನ್ನಡ ರಂಗಭೂಮಿಗೆ ದಕ್ಕಿದರು. ನಾಟಕ ನಿರ್ದೇಶಕರಾದರು, ನಾಟಕ ತಂಡಗಳನ್ನೂ ಕಟ್ಟಿ ಬೆಳೆಸಿದರು.
ಇದೇ ಕಾಲದಲ್ಲಿ ಸಣ್ಣ ಪುಟ್ಟ ಊರಿನಲ್ಲಿಯೂ ಉತ್ಸಾಹಿಗಳು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು, ರಂಗತಂಡ ಕಟ್ಟಿಕೊಂಡು, ಅವರೂ ರಂಗಚಳುವಳಿಯನ್ನು ತಮ್ಮದೇ ಆದ ರೀತಿಯಲ್ಲಿ ಮುನ್ನಡೆಸಿದರು. ಜನರಲ್ಲಿ ಹೊಸ ಅಲೆಯ ನಾಟಕಗಳ ಬಗ್ಗೆ ಹೊಸ ಉತ್ಸಾಹ ಮೂಡುವಂತೆ ಮಾಡಿದರು.
ಇಂದಿನಂತೆ ಕೋಮುವಾದಿಗಳ ಉಪಟಳ ಕಡಿಮೆ ಇದ್ದು, ಕಲಾವಿದರಿಗೆ ಒಂದು ರೀತಿಯ ಮುಕ್ತ ಕಲಾ ಸ್ವಾತಂತ್ರ್ಯ ಇದ್ದ ಕಾಲ ಅದು. ಹಾಗಾಗಿ ಧಾರ್ಮಿಕ ಡಂಭಾಚಾರವನ್ನು ಗೇಲಿಮಾಡುವ, ಸರಕಾರದ ಭ್ರಷ್ಟಾಚಾರವನ್ನು ಉಗ್ರವಾಗಿ ಟೀಕಿಸುವ, ಅಲ್ಲದೆ ರಾಜಕಾರಣದ ಕುಟಿಲ ಕಾರಸ್ಥಾನಗಳನ್ನು ವಸ್ತುವಾಗಿರಿಸಿ ಕೊಂಡ ನಾಟಕಗಳೂ ಮುಕ್ತವಾಗಿ ಪ್ರದರ್ಶನಗೊಳ್ಳುತ್ತಿದ್ದವು. ಸಮಕಾಲೀನ ರಾಜಕೀಯ ಕುತಂತ್ರಗಳನ್ನೇ ವಸ್ತುವಾಗಿರಿಸಿಕೊಂಡ ʼಮುಖ್ಯಮಂತ್ರಿʼ ನಾಟಕ ಆ ಕಾಲದ ಒಂದು ಪ್ರಸಿದ್ಧ ನಾಟಕ. ನಾಡಿನಾದ್ಯಂತ ಯಾವ ಅಡ್ಡಿಯೂ ಇಲ್ಲದೆ ಅಸಂಖ್ಯ ಪ್ರದರ್ಶನಗಳನ್ನು ಕಂಡ ಇದರ ಮುಖ್ಯ ನಟ ಎಚ್ ಎನ್ ಚಂದ್ರಶೇಖರ್ ಇದೇ ನಾಟಕದ ಕಾರಣವಾಗಿ ʼಮುಖ್ಯಮಂತ್ರಿ ಚಂದ್ರುʼ ಎಂದೇ ಚಿರಪರಿಚಿತರಾದರು.
ಕರಾವಳಿಯಲ್ಲೂ…

ನಾಡಿನಾದ್ಯಂತ ರಂಗಚಳುವಳಿ ನಡೆಯುತ್ತಿದ್ದ ಕಾಲ ಎಂದ ಮೇಲೆ ಕರಾವಳಿಯಲ್ಲೂ ಅದರ ಪ್ರಭಾವ ಇದ್ದೇ ಇರಬೇಕಲ್ಲ? ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಪುತ್ತೂರು, ಸುಳ್ಯ, ಕಾಸರಗೋಡು ಹೀಗೆ ಉತ್ತರದ ಕುಂದಾಪುರದಿಂದ ದಕ್ಷಿಣದ ಸುಳ್ಯದ ತನಕವೂ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲೂ ನಾಟಕ ತಂಡಗಳಿದ್ದವು. ಕುಂದಾಪುರದಲ್ಲಿ ಕಮ್ಯುನಿಸ್ಟ್ ಒಲವುಳ್ಳವರು ʼಸಮುದಾಯʼ ತಂಡವನ್ನು ಗಟ್ಟಿಗೊಳಿಸಿದ್ದರು. ಉಡುಪಿಯಲ್ಲಿ ಉದ್ಯಾವರ ಮಾಧವಾಚಾರ್ಯ, ಗುರುರಾಜ ಮಾರ್ಪಳ್ಳಿ, ಮುರಾರಿ ಬಲ್ಲಾಳ, ಆನಂದ ಗಾಣಿಗ, ವಿನಯಾ ಭಟ್, ವೀಣಾ ಬನ್ನಂಜೆ, ಸುಜಾತಾ ಯಾದವಾಡ ಮೊದಲಾದವರು ʼರಂಗಭೂಮಿ ಉಡುಪಿʼ, ʼರಥಬೀದಿ ಗೆಳೆಯರುʼ ತಂಡಗಳಲ್ಲಿ ಕೆಲಸ ಮಾಡುತ್ತಿದ್ದರು. ಉಡುಪಿ, ಕುಂದಾಪುರಗಳಲ್ಲಿ ವಸಂತ ಬನ್ನಾಡಿ, ಜಯಪ್ರಕಾಶ ಮಾವಿನಕುಳಿ ಮೊದಲಾದವರು ಸಕ್ರಿಯರಾಗಿದ್ದರು. ಸುರತ್ಕಲ್ ನಲ್ಲಿ ʼಕಾಳಜಿʼ ಎಂಬ ನಾಟಕ ತಂಡವಿತ್ತು. ಮಂಗಳೂರಿನ ಎಂಸಿಎಫ್ ನಲ್ಲಿ ʼಸ್ಪಂದನʼ, ವಿತ್ತು. ನಗರದಲ್ಲಿ ʼಅಭಿವ್ಯಕ್ತʼ, ʼಸಮುದಾಯʼ, ʼಭೂಮಿಕಾʼ ತಂಡಗಳಿದ್ದವು. ಕಾಸರಗೋಡಿನಲ್ಲಿ ʼಯವನಿಕಾʼ, ʼಗಡಿನಾಡ ಕಲಾವಿದರುʼ ತಂಡಗಳಿದ್ದು ಚಿನ್ನಾ ಕಾಸರಗೋಡುರಂಥವರು ಇದರಲ್ಲಿ ಸಕ್ರಿಯರಾಗಿದ್ದರು. ಸುಳ್ಯದ ʼಅಭಿನಯʼ ತಂಡದಲ್ಲಿ ಪುರುಷೋತ್ತಮ ಬಿಳಿಮಲೆ, ಪ್ರಭಾಕರ ಶಿಶಿಲ, ಎಚ್ ಎಂ ಕುಮಾರಸ್ವಾಮಿ, ಸುಬ್ರಾಯ ಚೊಕ್ಕಾಡಿ ಮೊದಲಾದ ಅತಿರಥ ಮಹಾರಥರಿದ್ದರು. ವಿಟ್ಲದಲ್ಲಿ ಮೋಹನ ಸೋನ, ಪುತ್ತೂರಿನಲ್ಲಿ ಐ ಕೆ ಬೊಳುವಾರು ವಿಶಿಷ್ಟ ರಂಗಪ್ರಯೋಗಗಳನ್ನು ಮಾಡುತ್ತಿದ್ದರು. ಮಂಗಳೂರಿನಲ್ಲಿ ಶ್ರೀಧರ್, ಮೈಮ್ ರಮೇಶ್, ಎಂ ಸಿ ರಾಮು, ಮೋಹನ ಚಂದ್ರ, ಉಮಾಶಂಕರ ಪೆರಿಯೋಡಿ, ಜಗದೀಶ ಅಮ್ಮುಂಜೆ, ಗೀತಾ ಸುರತ್ಕಲ್ ಮೊದಲಾದವರು ಕ್ರಿಯಾಶೀಲರಾಗಿದ್ದರು.
ಈಗಾಗಲೇ ಹೇಳಿದ ಹಾಗೆ, ಆ ದಿನಗಳಲ್ಲಿ ಮಂಗಳೂರಿನಲ್ಲಿ ನಾಟಕ ಚಟುವಟಿಕೆಗಳಲ್ಲಿ ನಿರತವಾಗಿದ್ದ ಮೂರು ತಂಡಗಳೆಂದರೆ ʼಸಮುದಾಯʼ, ʼಅಭಿವ್ಯಕ್ತʼ ಮತ್ತು ʼಭೂಮಿಕಾʼ. ʼಸಮುದಾಯʼದಲ್ಲಿ ರಾಜೇಂದ್ರ ಉಡುಪ, ವಾಸುದೇವ ಉಚ್ಚಿಲ, ಮೋಹನ ಚಂದ್ರ ಮತ್ತು ಎಡಪಂಥೀಯ ಒಲವುಳ್ಳ ಅನೇಕರು ಕೆಲಸ ಮಾಡುತ್ತಿದ್ದರು. ʼಅಭಿವ್ಯಕ್ತʼದಲ್ಲಿ ಕೆ ಶ್ರೀಧರ್, ಲೂಸಿ, ರಾಜಶೇಖರ್, ಪಿ ಆರ್ ರವಿಶಂಕರ್, ಮೈಮ್ ರಮೇಶ್, ರಾಮು ಹೀಗೆ ಅನೇಕ ರಂಗಕರ್ಮಿಗಳ ಜತೆಗೆ ಅವರಿಗೆ ಬೆಂಗಳೂರಿನ ತಂಡಗಳ, ಕಲಾವಿದರ ಆಶೀರ್ವಾದವೂ ಇತ್ತು. ಸಂಘಪರಿವಾರದತ್ತ ಕೊಂಚ ಒಲವು ಹೊಂದಿದ್ದ ʼಭೂಮಿಕಾʼದಲ್ಲಿ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ನಾರಾಯಣ ಶರ್ಮಾ, ನಾ ದಾ ಶೆಟ್ಟಿ, ಬ್ಯಾಂಕ್ ಉದ್ಯೋಗಿ ಚುಟುಕು ಕವಿ ಡುಂಡಿರಾಜ, ತಾರಾನಾಥ ಜೋಷಿ, ಲಕ್ಷ್ಮಣಕುಮಾರ ಮಲ್ಲೂರು ಮೊದಲಾದವರಿದ್ದರು. ಸಮುದಾಯದ ʼಬಕʼ ನಾಟಕದಲ್ಲಿ (ಪ್ರಸನ್ನ ನಿರ್ದೇಶನ) ವಾಲ್ಮೀಕಿ ಸಿಗರೇಟು ಎಳೆಯುವ ದೃಶ್ಯ ಇತ್ತು ಎಂಬ ಕಾರಣಕ್ಕೆ ಅಸಮಾಧಾನಗೊಂಡ ಕೆಲವರು ಮುಂದೆ ʼಭೂಮಿಕಾʼ ಕಟ್ಟಿಕೊಂಡರು ಎಂದು ಪತ್ರಕರ್ತ ಮಂಜುನಾಥ ಭಟ್ಟರು ಒಂದೆಡೆ ಬರೆದಿದ್ದರು.
ಉದ್ಯೋಗದ ಕಾರಣ ಮಂಗಳೂರಿಗೆ ಬಂದ ನನಗೆ ಆರಂಭದ ದಿನಗಳಲ್ಲಿ ಜನರಲ್ ಶಿಫ್ಟ್ ಇತ್ತು. ಸಂಜೆ ಐದರ ಬಳಿಕ ವಿರಾಮ. ಆ ಹೊತ್ತಿನಲ್ಲಿ ಒಮ್ಮೊಮ್ಮೆ ನಾನು ವೆಲೆನ್ಶಿಯಾದಲ್ಲಿದ್ದ ʼಅಭಿವ್ಯಕ್ತʼ ಕಚೇರಿಗೆ ಹೋಗುತ್ತಿದ್ದೆ. ಅಲ್ಲಿ ಅದರ ಮುಖ್ಯಸ್ಥರಾದ ಶ್ರೀಧರ್ ಮತ್ತು ಲೂಸಿಯವರ ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಎಂ ಸಿ ರಾಮು ಪರಿಚಯವೂ ಆಯಿತು. ʼಅಭಿವ್ಯಕ್ತʼ ಆಗ ಆಗೊಮ್ಮೆ ಈಗೊಮ್ಮೆ ನಾಟಕ ಪ್ರದರ್ಶನ ಮಾಡುತ್ತಿತ್ತು. ಇದಕ್ಕೆ ಲೈಟಿಂಗ್ ಇತ್ಯಾದಿಗಳಿಗೆ ಬೆಂಗಳೂರಿನ ತಂತ್ರಜ್ಞರು ಬರುತ್ತಿದ್ದರು. ʼಅಭಿವ್ಯಕ್ತʼ ಇನ್ನೂ ಮುಖ್ಯವಾಗಿ ಮಾಡುತ್ತಿದ್ದ ಕೆಲಸವೆಂದರೆ ಹೊರಗಿನ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ತಂಡಗಳನ್ನು ಕರೆಸಿ ಈಗಾಗಲೇ ಯಶಸ್ವಿ ಎನಿಸಿಕೊಂಡಿರುವ ನಾಟಕಗಳ ಪ್ರದರ್ಶನ ಏರ್ಪಡಿಸುತ್ತಿದ್ದುದು. ಸಾಮಾನ್ಯವಾಗಿ ಆ ಯಾವ ನಾಟಕಗಳನ್ನೂ ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ʼಅಭಿವ್ಯಕ್ತʼ ದ ಕಲಾವಿದರ ಒಡನಾಟ, ನಾಟಕಗಳ ವೀಕ್ಷಣೆ ಹೀಗೆ ನನ್ನಲ್ಲಿ ನಿಧಾನವಾಗಿ ರಂಗಾಸಕ್ತಿ ಬೆಳೆಯತೊಡಗಿತು.
ರಂಗತರಬೇತಿ ಶಿಬಿರ
ಇಂತಹದೇ ದಿನಗಳಲ್ಲಿ ಅಂದರೆ, ಸುಮಾರಾಗಿ 1983 ರ ಕೊನೆಯ ದಿನಗಳಲ್ಲಿ ಮಂಗಳೂರಿನಲ್ಲಿ ರಂಗತರಬೇತಿ ಶಿಬಿರವೊಂದು ನಡೆಯುವ ಬಗ್ಗೆ ಗೆಳೆಯ ಎಂ ಸಿ ರಾಮು ಮತ್ತಿತರರು ಹೇಳಿದರು. “ನಿನಗೆ ಆಸಕ್ತಿಯೂ ಇದೆ, ಸಮಯವೂ ಇದೆ, ನೀನೇಕೆ ಅದರಲ್ಲಿ ಸೇರಿಕೊಳ್ಳಬಾರದು?” ಎಂದು ನನ್ನನ್ನು ಹುರಿದುಂಬಿಸಲಾರಂಭಿಸಿದರು.
ಸರಿ, ಶಿಬಿರದಲ್ಲಿ ಭಾಗವಹಿಸಲು ನಿರ್ಧರಿಸಿದೆ. ಮಂಗಳೂರಿನ ಸರಕಾರಿ ಕಾಲೇಜಿನ ಒಂದು ಕೊಠಡಿಯಲ್ಲಿ ತರಬೇತಿ ಶುರುವಾಯಿತು. ಮೋಹನ ಚಂದ್ರ, ಉಮಾಶಂಕರ ಪೆರಿಯೋಡಿ, ಸುಧಾನಂದ ಮೊದಲಾದವರು ನಮ್ಮ ತರಬೇತುದಾರರಾಗಿದ್ದರು. ಅವರಲ್ಲಿ ಹೆಚ್ಚಿನವರು ಹೆಗ್ಗೋಡಿನ ನೀನಾಸಂ ಅಥವಾ ಸಮುದಾಯ ಇತ್ಯಾದಿಗಳ ರಂಗ ತರಬೇತಿಗಳಿಗೆ ತೆರೆದುಕೊಂಡವರಾಗಿದ್ದುದರಿಂದ ಆ ರಂಗದಲ್ಲಿ ವಿಶೇಷ ಅನುಭವಿಗಳಾಗಿದ್ದರು. ರಂಗತರಬೇತಿ ಎಂದರೆ ಏನೆಂದೇ ಅರಿಯದ ನಮಗೆ ಅಲ್ಲಿ ಹೊಸ ಅನುಭವ ದೊರೆಯ ತೊಡಗಿತು. ಅಲ್ಲಿ ನಾಟಕದ ತರಬೇತಿ ಇರಲಿಲ್ಲ. ಆದರೆ ನಾಟಕದಲ್ಲಿ ಅಭಿನಯಿಸಬೇಕಿದ್ದರೆ ಕಲಾವಿದರಲ್ಲಿರಬೇಕಾದ ಕೌಶಲಗಳ ಬಗ್ಗೆ ತರಬೇತಿ ಇರುತ್ತಿತ್ತು. ʼಟ್ರಸ್ಟ್ ಗೇಮ್ʼ ನಲ್ಲಿ ಸಹಭಾಗಿಯೊಬ್ಬ ಮೇಜಿನ ಮೇಲಿನಿಂದ ಬೀಳುವಾಗ ಕೆಳಗಿದ್ದವರು ಆತನನ್ನು ಹಿಡಿದುಕೊಳ್ಳಬೇಕು. ಅವರು ಹಿಡಿದುಕೊಳ್ಳುತ್ತಾರೆ ಎಂಬ ʼಟ್ರಸ್ಟ್ʼ (ವಿಶ್ವಾಸ) ಬೀಳುವವನಿಗಿರಬೇಕು, ಆತನನ್ನು ನೆಲಕ್ಕೆ ಬೀಳದಂತೆ ಹಿಡಿದುಕೊಳ್ಳುತ್ತೇವೆ ಎನ್ನುವ ಎಚ್ಚರ ಹಿಡಿದುಕೊಳ್ಳುವವರಿಗೂ ಇರಬೇಕು. ಅದೇ ರೀತಿಯಲ್ಲಿ ನಾಟಕದ ಸಂಭಾಷಣೆಗಳಲ್ಲಿ ಬಳಸುವ ವಾಯ್ಸ್ ಮಾಡ್ಯುಲೇಶನ್, ಇಂಟೋನೇಶನ್ ಗಳ ಬಗ್ಗೆಯೂ ತರಬೇತಿಗಳನ್ನು ನೀಡಲಾಗುತ್ತಿತ್ತು. ನಾಟಕ ರಂಗ ಪ್ರವೇಶಿಸುವವರಿಗೆ ಇಂತಹ ಪ್ರಾಥಮಿಕ ತರಬೇತಿ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ರಂಗಕಲೆಯಲ್ಲಿ ಹೆಚ್ಚು ಪರಿಪಕ್ವಗೊಳಿಸಿ ನಮ್ಮನ್ನು ಪರಿಪೂರ್ಣಗೊಳಿಸುತ್ತದೆ.
ಈ ತರಬೇತಿ ಸುಮಾರು ಒಂದು ತಿಂಗಳು ನಡೆದಿರಬಹುದು. ಇದೇ ಸಂದರ್ಭದಲ್ಲಿ ನಾವೇ ಒಂದು ವಸ್ತುವನ್ನು ಆರಿಸಿಕೊಂಡು ಒಂದು ನಾಟಕವನ್ನು ಅಭಿನಯಿಸುವ ಪರೀಕ್ಷೆಯನ್ನು ನಮಗೆ ನೀಡಿದರು. ನಮ್ಮೊಂದಿಗೆ ಪ್ರತಿಭಾವಂತ ಬಿ ಸೀತಾರಾಮ ಭಟ್ ಕೂಡಾ ಇದ್ದ. ಈತ ಬ್ಯಾಂಕ್ ಉದ್ಯೋಗಿಯಾಗಿದ್ದವ. ಇಂಗ್ಲಿಷ್ ಭಾಷೆಯ ಮೇಲೆ ಅತನಿಗೆ ಅಸಾಧಾರಣ ಹಿಡಿತವಿತ್ತು. ಆತ ನಾಟಕಕ್ಕೆ ಒಂದು ವಸ್ತುವನ್ನು ಪ್ರಸ್ತಾಪಿಸಿದ. ಅದರ ಪ್ರಕಾರ ಯುವಕನೊಬ್ಬ ಹಳ್ಳಿಗೆ ಬರುತ್ತಾನೆ. ಅಲ್ಲಿ ಕಲಬೆರಕೆಯ ಮೂಲಕ ಜನರನ್ನು ವಂಚಿಸುವ ಒಂದು ಜಾಲವನ್ನು ಪತ್ತೆ ಹಚ್ಚಿ ಆ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ಕೆಲಸ ಮಾಡುತ್ತಾನೆ. ಇದರಿಂದ ಕಲಬೆರಕೆ ಜಾಲದ ದುಷ್ಟಕೂಟ ಸಿಟ್ಟುಗೊಳ್ಳುತ್ತದೆ. ತಮ್ಮ ವ್ಯವಹಾರಕ್ಕೆ ಅಡ್ಡಿಯಾದ ಈ ಯುವಕನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸುತ್ತಾರೆ. ಒಂದು ದಿನ ಆ ಯುವಕನ ಶವ ಊರಿನ ಸರೋವರದಲ್ಲಿ ತೇಲುತ್ತಿರುತ್ತದೆ.
ನಾಟಕ ನಿರ್ದೇಶನ, ನಾಟಕಾಭಿನಯದ ಮಟ್ಟಿಗೆ ಎಲಿಮೆಂಟರಿ ಸ್ಕೂಲಿನವರಾದ ನಮಗೆ ಯಾವ ಅನುಭವವೂ ಇರಲಿಲ್ಲ. ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ಸ್ಟೇಜಿನ ಮೇಲೆ ಬರುವುದು ಬದಿಯಲ್ಲಿ ನಿಂತ ನಟರೊಂದಿಗೆ ಸಂವಾದ ನಡೆಸುವುದು, ಕೊನೆಗೊಂದು ದಿನ ಸ್ಟೇಜ್ ನ ಮೇಲೆ ಯುವಕನ ಶವ ಇರುವುದು ಹೀಗೆ ನಾಟಕ ಲೀನಿಯರ್ ರೂಪದಲ್ಲಿತ್ತು.
ನಮ್ಮ ನಾಟಕ ನೋಡಲು ಒಂದು ದಿನ ನಮ್ಮ ತರಬೇತುದಾರ ಉಮಾಶಂಕರ ಪೆರಿಯೋಡಿ ಬಂದರು. ಅವರು ನಮ್ಮ ನಾಟಕಕ್ಕೆ ಪೂರ್ತಿಯಾಗಿ ಹೊಸ ರೂಪವೊಂದನ್ನು ನೀಡಿದರು. ಅದರ ಪ್ರಕಾರ ಕಲಾವಿದರೆಲ್ಲರೂ ಸದಾ ಕಾಲ ಸ್ಟೇಜ್ ನ ಮೇಲೆಯೇ ಇರುತ್ತಾರೆ. ಕೊನೆಯಲ್ಲಿ ಸರೋವರದ ದೃಶ್ಯವಂತೂ ಅದ್ಭುತ. ಕಲಾವಿದರೆಲ್ಲರೂ ವೃತ್ತಾಕಾರದಲ್ಲಿ ಕುಳಿತು ಕೈಗಳನ್ನು ಜೋಡಿಸಿ ಬಾಗಿಸಿ ಹಿಡಿದುಕೊಳ್ಳುತ್ತಾರೆ. ಅವರೆಲ್ಲರ ಕೈಗಳ ಮೇಲೆ ಯುವಕನ ಶವ ಇರುತ್ತದೆ. ಅವರು ಕೈಗಳನ್ನು ಮೇಲೆ ಕೆಳಗೆ ಮಾಡುತ್ತಿದ್ದಂತೆ ಸರೋವರ ಅಲೆಗಳಲ್ಲಿ ಶವ ತೇಲುವ ಅನುಭವ ಸಿಗುತ್ತದೆ. ಎಂತಹ ಅದ್ಭುತ ಪರಿಕಲ್ಪನೆ! ಹೀಗೂ ಪರಿಕಲ್ಪಿಸಿಕೊಳ್ಳಬಹುದೇ? ಉಮಾಶಂಕರನ ಪ್ರತಿಭೆಗೆ ತಲೆದೂಗಿದೆವು.
ನಾಟಕ ತರಬೇತಿ ಶಿಬಿರದ ಸಮಾರೋಪ ನಗರದ ವೆಲೆನ್ಶಿಯಾದಲ್ಲಿರುವ ರೋಶನಿ ನಿಲಯದಲ್ಲಿ ಏರ್ಪಾಡಾಗಿತ್ತು. ಆಗ ಉಮಾಶಂಕರ ಅಲ್ಲಿ ಉಪನ್ಯಾಸಕನಾಗಿದ್ದನೆಂದು ನೆನಪು. ಮುಂದೆ ಪ್ರಸಿದ್ದ ಕಲಾವಿದೆಯೂ, ತರಬೇತಿಗಳ ಸಂಪನ್ಮೂಲ ವ್ಯಕ್ತಿಯೂ ಅಗಿ ರೂಪುಗೊಂಡ ವಾಣಿ ಪೆರಿಯೋಡಿ ಆಗ ಅದೇ ಕಾಲೇಜಿನಲ್ಲಿ ಓದುತ್ತಿದ್ದರು. ಶಿಬಿರ ಸಮಾರೋಪ ಕಾರ್ಯಕ್ರಮದ ಬಳಿಕ ನಮ್ಮ ನಾಟಕ ಪ್ರದರ್ಶನವಿತ್ತು. ನೋಡಿದವರು ನಮ್ಮನ್ನು ಬಾಯಿತುಂಬ ಹೊಗಳಿದರು.
ಈ ತರಬೇತಿ ಶಿಬಿರದಿಂದಾಗಿ ನಾನು ಅನೇಕ ಸಂಗತಿಗಳನ್ನು ಕಲಿತೆ. ದೊಡ್ಡ ನಟನಾಗಿಯೇನೂ ರೂಪುಗೊಳ್ಳಲಿಲ್ಲ, ಆದರೆ ಸಂಭಾಷಣೆಯ ಸಮಯದಲ್ಲಿ ಧ್ವನಿಯ ಏರಿಳಿತ ಇತ್ಯಾದಿಗಳ ಬಗ್ಗೆ ಅನೇಕ ವಿಚಾರಗಳನ್ನು ಕಲಿತೆ. ಇದು ಮುಂದೆ ಆಕಾಶವಾಣಿಯ ನಾಟಕಗಳಲ್ಲಿಯೂ ನನಗೆ ಉಪಯೋಗಕ್ಕೆ ಬಂತು.
ಎಂ ಸಿ ಎಫ್ ನಲ್ಲಿ ಟಿಪ್ಪು ಸುಲ್ತಾನ್

ಮಂಗಳೂರಿಗೆ ಬಂದ ಮೇಲೆ ತರಬೇತಿ ಶಿಬಿರದಲ್ಲಿ ಪುಟ್ಟ ನಾಟಕವೊಂದರಲ್ಲಿ ಅಭಿನಯಿಸಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ನಾಟಕದಲ್ಲಿ ಇನ್ನೂ ಭಾಗವಹಿಸಿರಲಿಲ್ಲ. (ಕಂಪೆನಿಯಲ್ಲಿ ನನ್ನನ್ನು ಜನರಲ್ ಶಿಫ್ಟ್ ನಿಂದ ಶಿಫ್ಟ್ ಗೆ ಹಾಕಿದ್ದರು. ಹಾಗಾಗಿ ತಿಂಗಳಲ್ಲಿ ಒಂದು ವಾರ ಸಂಜೆಯ ಹೊತ್ತು ಬಿಡುವು ಇರುತ್ತಿರಲಿಲ್ಲ ಕೂಡಾ. ರಂಗ ಚಟುವಟಿಕೆಗಳ ಮಟ್ಟಿಗೆ ಕಷ್ಟದ ದಿನಗಳು ಆರಂಭವಾದವು). ಇಂತಹ ಸಂದರ್ಭದಲ್ಲಿಯೇ ಎಂ ಸಿ ಎಫ್ ನಲ್ಲಿ ವಿಭಾಗಗಳ ನಡುವೆ ನಾಟಕ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಿದರು. ನಾನು ಆಗ ಯುಟಿಲಿಟೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಅದಾಗಲೇ ನಾಟಕ ಚಟುವಟಿಕೆಗಳಲ್ಲಿ ಅನುಭವಿಯೂ, ಆಕಾಶವಾಣಿ ಕಲಾವಿದನೂ ಆಗಿದ್ದ ಸುರೇಂದ್ರ ಶೇಠ್ ಇದ್ದ. ಈಗಾಗಲೇ ರಂಗಭೂಮಿಯೊಂದಿಗೆ ನಂಟು ಹೊಂದಿದ್ದ ಸಾಧು ಪೂಜಾರಿ ಕೂಡಾ ಇದ್ದ.
ಯುಟಿಲಿಟೀಸ್ ವಿಭಾಗದ ವತಿಯಿಂದ ʼಮೈಸೂರು ಹುಲಿʼ ನಾಟಕ ಅಭಿನಯಿಸುವುದು ಎಂದು ನಿರ್ಧಾರವಾಯಿತು. ನಾನು ಟಿಪ್ಪೂ ಸುಲ್ತಾನ್. ಕುಂಜತ್ತ ಬೈಲಿನಲ್ಲಿರುವ ಕಂಪೆನಿ ಕ್ವಾರ್ಟರ್ಸ್ ನಲ್ಲಿ ನಮ್ಮ ರಿಹರ್ಸಲ್ ಶುರುವಾಯಿತು. ಮಾಜಿ ಸೈನಿಕ ಕೊಡಗಿನ ಸೋಮಣ್ಣ ಎಂ ಸಿ ಎಫ್ ನ ಫೈರ್ ಅಂಡ್ ಸೇಫ್ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಗಳು ನಮ್ಮ ನಾಟಕದ ನಾಯಕಿ. ನಾಟಕದಲ್ಲಿ ಕುದುರೆಯ ಖುರಪುಟದ ಸದ್ದು ಬರುವ ದೃಶ್ಯವಿತ್ತು. ಸುರೇಂದ್ರ ಶೇಠ್ ಅದನ್ನು ಮಂಗಳೂರು ಆಕಾಶವಾಣಿಯಿಂದ ಕ್ಯಾಸೆಟ್ ನಲ್ಲಿ ಹಾಕಿಕೊಂಡು ಬಂದ. ಎಪ್ರಿಲ್ ತಿಂಗಳ 28, 1984 ರಂದು ನಮ್ಮ ನಾಟಕ ಪ್ರದರ್ಶನ ಆಗಿಯೇ ಬಿಟ್ಟಿತು. ಬಹುಮಾನ ನಮಗೆ ಸಿಗಲಿಲ್ಲ ಎನ್ನುವುದು ಬೇರೆ ಮಾತು. ಅದರೆ ನಾಟಕಾಭಿನಯದ ಹೊಸದೊಂದು ಅನುಭವ ಸಿಕ್ಕಿತು.
ಆಗ ಟಿಪ್ಪೂ ದೇಶದ್ರೋಹಿಯಾಗಿರಲಿಲ್ಲ. ಅಪ್ಪಟ ದೇಶಪ್ರೇಮಿಯಾಗಿದ್ದ. ಮೈಸೂರು ರಾಜ್ಯದ ಹೆಮ್ಮೆಯಾಗಿದ್ದ. ಟಿಪ್ಪೂ ನಾಟಕ ಆಗ ಜನಪ್ರಿಯವಾಗಿತ್ತು. ಕಂಪೆನಿ ನಾಟಕಗಳು ಅದನ್ನು ವ್ಯಾಪಕವಾಗಿ ಪ್ರದರ್ಶಿಸುತ್ತಿದ್ದವು. ಟಿಪ್ಪೂ ಬಗ್ಗೆ ಗಿರೀಶ್ ಕಾರ್ನಾಡರ ʼಟಿಪ್ಪು ಸುಲ್ತಾನ್ ಕಂಡ ಕನಸುʼ ಎಂಬ ಒಂದು ನಾಟಕ ಕೂಡಾ ಬಂತು. ಹಿಂದಿಯಲ್ಲಿ ಸಂಜಯ್ ಖಾನ್ ಅವರ ʼದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ʼ ಎಂಬ ಬಹುದೊಡ್ಡದೊಂದು ಧಾರಾವಾಹಿಯೂ ಬಂದು ಜನಪ್ರಿಯವಾಯಿತು. ಅದೆಲ್ಲ ಹಿಂದಿನ ಕತೆ. ಈಗ ನಾವು ಟಿಪ್ಪೂ ಸುಲ್ತಾನ್ ನಾಟಕ ಅಭಿನಯಿಸ ಹೊರಟರೆ ಮತಾಂಧರು ಬಿಡಿ, ನಮ್ಮ ಸುತ್ತಲೇ ಇರುವವರು ಆಕ್ಷೇಪಿಸಿಯಾರು, ಆ ಮಟ್ಟಿಗೆ ಜನರ ತಲೆತೊಳೆಯಲಾಗಿದೆ. ಇತಿಹಾಸದ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಆತ ಮುಸ್ಲಿಮ್ ಆಗಿದ್ದರೆ ಆತ ದೇಶದ್ರೋಹಿ ಎಂದು ನಿರ್ಧರಿಸಿಯಾಗಿದೆ!
ಮ್ಯಾಕ್ಸಿಂ ಗಾರ್ಕಿಯ ʼತಾಯಿʼ

ಇದೇ ದಿನಗಳಲ್ಲಿ ಒಂದು ದಿನ, ಗೆಳೆಯ ಮೋಹನ ಚಂದ್ರ ಮತ್ತಿತರರು ನಮ್ಮನ್ನು ಮೀಟಿಂಗ್ ಒಂದಕ್ಕೆ ಕರೆದರು. ನಗರದ ಮೋಹಿನಿ ವಿಲಾಸ ಕಟ್ಟಡದ ಬಳಿಯ ತಾರಸಿಯ ಮೇಲೆ ಮೀಟಿಂಗ್ ನಡೆಯಿತು. ರಾಜೇಂದ್ರ ಉಡುಪ, ವಾಸುದೇವ ಉಚ್ಚಿಲ ಮೊದಲಾದವರೂ ಅಲ್ಲಿ ಸೇರಿದ್ದರು. ಬರ್ಟೋಲ್ ಬ್ರೆಕ್ಟ್ ನಾಟಕ ರೂಪ ನೀಡಿದ, ರಶ್ಯಾದ ಮ್ಯಾಕ್ಸಿಂ ಗಾರ್ಕಿಯ ʼಮದರ್ʼ ಕಾದಂಬರಿಯನ್ನು ʼತಾಯಿʼ ಎಂದು ಕನ್ನಡದಲ್ಲಿ ಆಡುವ ಬಗ್ಗೆ ಅಲ್ಲಿ ಮಾತುಕತೆ ನಡೆಯಿತು. ಕ್ರಮೇಣ ಆ ಬಗ್ಗೆ ಹೆಚ್ಚು ಸಭೆಗಳು ನಡೆದು ʼತಾಯಿʼ ನಾಟಕ ಆಡುವುದು ಗ್ಯಾರಂಟಿಯೂ ಆಯಿತು. ನಾಟಕ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡುದು ಮೋಹನ ಚಂದ್ರ (ಮೋಚ). ಗಾರ್ಕಿಯ ಕತೆ, ಬರ್ಟೋಲ್ ಬ್ರೆಕ್ಟ್ ನ ನಾಟಕ, ಪ್ರತಿಭಾವಂತ ಮೋಹನ ಚಂದ್ರನ ನಿರ್ದೇಶನದ ಕಾರಣ ಈ ನಾಟಕ ಕರಾವಳಿಯ ನಾಟಕಾಸಕ್ತರಲ್ಲಿ ವಿಶೇಷ ಕುತೂಹಲವನ್ನು ಮೂಡಿಸಿತ್ತು.
ಶಾಂತಿನಿಲಯ ಚರ್ಚ್ ಹತ್ತಿರದ ರೂಸ್ಟರ್ ಗೆ ತಾಗಿಕೊಂಡಂತಿದ್ದ ಕಟ್ಟಡದಲ್ಲಿ ನಮ್ಮ ನಾಟಕ ತಾಲೀಮು ಆರಂಭವಾಯಿತು. ʼತಾಯಿʼ ಬೃಹತ್ ತಾರಾಗಣದ ನಾಟಕವಾಗಿತ್ತು. ಇಂದುಮತಿ ರಾಮಮೂರ್ತಿ ಪ್ರಧಾನ ಪಾತ್ರದಲ್ಲಿದ್ದರು. ಉಳಿದಂತೆ ಚಂದ್ರಹಾಸ ಉಳ್ಳಾಲ, ಶ್ರೀನಿವಾಸ ಕಾರ್ಕಳ, ಸೀತಾರಾಮ ಭಟ್, ಹಿಮಕರ, ಸುರೇಶ್ ತಾಳಿತ್ತಬೆಟ್ಟು, ಆಶಾ ಕೆ ಸನಿಲ್, ಗಿರೀಶ್ ಎ, ಉಮಾಶಂಕರ ಪೆರಿಯೋಡಿ, ಮೈಕೆಲ್ ಡಿಸೋಜಾ, ಶ್ರೀನಿವಾಸ ಕುಪ್ಪಿಲ, ಸುಂದರ್, ಶಕುಂತಲಾ ಉಚ್ಚಿಲ್, ನರೇಂದ್ರ ನಾಯಕ್ (ಪ್ರಸಿದ್ಧ ವಿಚಾರವಾದಿ), ಸುಧಾನಂದ, ಮೋಹನದಾಸ್ ಎಂ ಎನ್, ಪ್ರಕಾಶ ನಾಯಕ್, ಸಾಧು ಪೂಜಾರಿ, ಜನಾರ್ದನ ಗೌಡ, ಮಾ. ಕಿರಣ್, ಮಾ. ರಾಜು, ಆರಿನ್ ಲೋಬೋ, ಸುರೇಶ್, ಜಗದೀಶ್ ಕೆ ಎಂ, ಜಗದೀಶ್ ಅಮ್ಮುಂಜೆ ಹೀಗೆ ಅನೇಕರು ನಟವರ್ಗದಲ್ಲಿದ್ದರು. ನಾಟಕಕ್ಕೆ ಸಂಗೀತ ನೀಡಿದವರು ʼಡೀಡ್ಸ್ʼ ನ ಡೆಸ್ಮಂಡ್ ಡಿ ಆಬ್ರಿಯೋ. ಹಿನ್ನೆಲೆಯಲ್ಲಿ ದುಡಿದ ಇತರರೆಂದರೆ ಸುದೇಶ ಮಹಾನ, ಮೋಹನ ಸೋನಾ, ಶಾಂ ಪ್ರಕಾಶ್, ಕಿರಣ್ ಭಟ್, ರವಿರಾಜ್, ಶಶಾಂಕ ನರೇಂದ್ರ ಪ್ರಸಾದ್, ವಾಸುದೇವ ಉಚ್ಚಿಲ್, ರಾಜೇಂದ್ರ ಉಡುಪ, ಡಾ ಶಿರಿ, ರಾಜೇಶ್, ಜಗದೀಶ್ ಯು, ಸುನಿಲ್ ನಾಟೇಕರ್, ಕೇಶವ ಉಚ್ಚಿಲ್, ಮರ್ಲಿನ್, ಮಾರ್ಗರೇಟ್, ವಿಶ್ವನಾಥ ಅಂಚನ್, ರಮಾ ನಾಗೇಂದ್ರನ್, ವಾಣಿ, ರಾಜು, ಕಿರಣ್, ರಾಜೇಶ್, ಲತಾ, ಜೂಡಿ ಮೊದಲಾದವರು. ನಾಟಕದ ಕಲಾ ಕೆಲಸಗಳನ್ನು ಸುದೇಶ್ ಮಹಾನ್ ಮಾಡಿದ್ದ. ಆತ ರೂಪಿಸಿದ ಬೃಹದಾಕಾರದ ಹೋರ್ಡಿಂಗ್, ಬ್ರೋಶರ್ ಎಲ್ಲವೂ ಆಕರ್ಷಕವೂ ಕಲಾತ್ಮಕವೂ ಆಗಿದ್ದವು.
ವೇಷಭೂಷಣಗಳು ಬೆಂಗಳೂರಿನಿಂದ ಬಂದಿದ್ದವು. ಥೇಟ್ ರಶ್ಯಾದ ಕೋಟುಗಳೇ ಅಲ್ಲಿದ್ದವು. 1984 ರ ಮೇ 1 ರಂದು ʼತಾಯಿʼ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ಕಂಡಿತು. ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ನಾಟಕ ಭಾರೀ ಪ್ರಶಂಸೆಗೆ ಒಳಗಾಯಿತು. ಸಮರ್ಥ ನಿರ್ದೇಶನದ ʼತಾಯಿʼ ಎಂದು ರಂಗ ವಿಮರ್ಶಕ ಪುರುಷೋತ್ತಮ ಬಿಳಿಮಲೆ ಉದಯವಾಣಿಯಲ್ಲಿ ಹೊಗಳಿದ್ದರು. ಅದೊಂದು ಅನನ್ಯ ನಾಟಕ ಪ್ರದರ್ಶನವಾಗಿದ್ದು, ಅನೇಕ ಪ್ರದರ್ಶನಗಳ ಕನಸನ್ನು ಕಾಣಲಾಗಿತ್ತು. ಆ ನಾಟಕದಲ್ಲಿ ನಾನು ಆಂಟೆನ್ ಆಗಿ ಅಭಿನಯಿಸಿದ್ದೆ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- https://kannadaplanet.com/its-a-big-story-autobiography-series-33/ ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ -33 | ಸುಳ್ಯದ ವಳಲಂಬೆಯಲ್ಲಿ ಹೊಸಮನೆ


