ನವದೆಹಲಿ, ನ.9: ದೀಪಾವಳಿ ಸಂಭ್ರಮ ಮುಗಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತಷ್ಟು ಉಲ್ಬಣಗೊಂಡಿದ್ದು, ಪರಿಸರ ತಜ್ಞರು ಇದನ್ನು ‘ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಕರೆದಿದ್ದಾರೆ. ಪಟಾಕಿಗಳ ಹೊಗೆಯಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮುಂದಿನ ಕೆಲವು ದಿನಗಳವರೆಗೂ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲೇ ಉಳಿಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿಯ ಜನರು ದಟ್ಟ ಹೊಗೆ ಮತ್ತು ಮಂಜಿನ ವಾತಾವರಣದ ನಡುವೆ ಎಚ್ಚರಗೊಂಡಿದ್ದಾರೆ. ನಗರದ ಹಲವು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದ್ದು, ಗಾಳಿಯ ಗುಣಮಟ್ಟ ‘ತೀವ್ರ ಕಳಪೆ’ ಅಥವಾ ‘ಅತ್ಯಂತ ಅಪಾಯಕಾರಿ’ ಹಂತಕ್ಕೆ ತಲುಪಿದೆ. ಬೆಳಗಿನ ಸಮಯದಲ್ಲಿ ಗೋಚರತೆಯೂ ಕುಸಿದಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ವರ್ಗೀಕರಣದ ಪ್ರಕಾರ, 0ರಿಂದ 50ರವರೆಗಿನ ಎಕ್ಯೂಐ ಉತ್ತಮ, 51ರಿಂದ 100 ತೃಪ್ತಿಕರ, 101ರಿಂದ 200 ಮಧ್ಯಮ, 201ರಿಂದ 300 ಕಳಪೆ, 301ರಿಂದ 400 ಅತ್ಯಂತ ಕಳಪೆ ಹಾಗೂ 401ರಿಂದ 500 ತೀವ್ರ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಪರಿಸರ ಹೋರಾಟಗಾರ್ತಿ ಭವ್ರೀನ್ ಕಂಧಾರಿ, ದೀಪಾವಳಿಗೂ ಮುನ್ನವೇ ದೆಹಲಿಯ ಗಾಳಿಯ ಗುಣಮಟ್ಟ ವಿಷಪೂರಿತ ಮಟ್ಟದಲ್ಲಿತ್ತು. ಇದೀಗ ಪಟಾಕಿಗಳ ಸಿಡಿತದಿಂದ ವಾತಾವರಣದಲ್ಲಿ ಸೂಕ್ಷ್ಮ ಮಾಲಿನ್ಯ ಕಣಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ದೆಹಲಿಯ ವಾಯುಮಾಲಿನ್ಯ ಮತ್ತೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಪರಿಣಮಿಸಿದೆ. ದೀಪಾವಳಿ ಆಚರಣೆ ಮುಗಿದಿದ್ದರೂ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲೇ ಉಳಿದಿವೆ. ಉಸಿರಾಟದ ಸಮಸ್ಯೆ ಹಾಗೂ ಇತರ ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವವರಿಗೆ ಇದು ದೊಡ್ಡ ಸವಾಲಾಗಿದೆ” ಎಂದು ಅವರು ಹೇಳಿದ್ದಾರೆ.
ಅಧಿಕೃತ ವಾಯು ಗುಣಮಟ್ಟ ಸೂಚ್ಯಂಕದ ಮಿತಿಗಳ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ಎಕ್ಯೂಐ ಮಾಪನದ ಗರಿಷ್ಠ ಮಿತಿ 500 ಆಗಿದ್ದು, 400ಕ್ಕಿಂತ ಹೆಚ್ಚಿನ ಪ್ರಮಾಣವನ್ನು ‘ತೀವ್ರ’ ಎಂದು ವರ್ಗೀಕರಿಸಲಾಗುತ್ತದೆ. ಆದರೆ, 500ಕ್ಕಿಂತ ಹೆಚ್ಚಿನ ಮಾಲಿನ್ಯ ಪ್ರಮಾಣವನ್ನು ಈ ಅಧಿಕೃತ ಸೂಚ್ಯಂಕದಲ್ಲಿ ಪ್ರತ್ಯೇಕವಾಗಿ ಅಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
“ಅಧಿಕೃತ ಎಕ್ಯೂಐ ಪ್ರಮಾಣ 500ರವರೆಗೆ ಮಾತ್ರ ಇದೆ. 400ಕ್ಕಿಂತ ಹೆಚ್ಚಿನ ಮಟ್ಟವನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಹಂಚಿಕೊಳ್ಳುತ್ತಿರುವ ಅಂಕಿಅಂಶಗಳು ಆತಂಕಕಾರಿಯಾಗಿವೆ. ಭಾನುವಾರ ಬೆಳಗ್ಗೆ ಸುಮಾರು 300ರಷ್ಟಿದ್ದ ಪಿಎಂ 2.5 ಪ್ರಮಾಣ ರಾತ್ರಿ ವೇಳೆಗೆ 1,000ರ ಸಮೀಪಕ್ಕೆ ಏರಿತ್ತು” ಎಂದು ಕಂಧಾರಿ ಹೇಳಿದ್ದಾರೆ.
ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರವಾಗಿತ್ತು. ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ಹೊರಬಂದ ಹೆಚ್ಚುವರಿ ಹೊಗೆ ಮತ್ತು ಮಾಲಿನ್ಯಕಾರಕ ಕಣಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ ಎಂದು ಅವರು ಎಚ್ಚರಿಸಿದ್ದಾರೆ.

