ಬೆಂಗಳೂರು, ನ. 07: ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ನೀಡುವಂತಹ ಗೃಹಲಕ್ಷ್ಮೀ ಯೋಜನೆಗೆ ಇದುವರೆಗೆ 86,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ‘ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜೊತೆ ಸಂವಾದ’ ಕಾರ್ಯಕ್ರಮ ಹಾಗೂ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಮಡಿಲಿಗೆ ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು 2000 ರೂಪಾಯಿಗಳನ್ನಿಟ್ಟು ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುವ ಶಕ್ತಿ ಕೊಡಮ್ಮ ಎಂದು ಪ್ರಾರ್ಥಿಸಿದ್ದೆವು. ಜನರು ನಮಗೆ 136 ಸೀಟುಗಳೊಂದಿಗೆ ಆಶೀರ್ವಾದ ಮಾಡಿದರು ಎಂದು ತಿಳಿಸಿದರು.
ಈ ಯೋಜನೆ 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಸೌಲಭ್ಯ ತಲುಪುತ್ತಿದೆ. ಗೃಹಜ್ಯೋತಿ ಯೋಜನೆಯನ್ನು ಬೆಳಗಾವಿಯಲ್ಲಿ, ನಂತರ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಯುವನಿಧಿ ಯೋಜನೆ, ಪ್ರಿಯಾಂಕಾ ಗಾಂಧಿಯವರು ಭೇಟಿ ನೀಡಿದಾಗ ಗೃಹಲಕ್ಷ್ಮಿ ಹೀಗೆ ಎಲ್ಲ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ನೀಡಿದ್ದೆವು ಎಂದರು.
ನಮ್ಮ ರಾಜ್ಯದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿಯವರು ವೃದ್ಧಾಪ್ಯ ವೇತನ ಯೋಜನೆ ಜಾರಿಗೆ ತಂದರು. ಅದನ್ನು ನಿಲ್ಲಿಸಲು ಸಾಧ್ಯವಾಯಿತೇ? ಬೇರೆ ರಾಜ್ಯಗಳನ್ನು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಯಾರೂ ಜಾರಿಗೆ ತಂದಿಲ್ಲ ಎಂದು ತಿಳಿಸಿದರು.
ದುರುಪಯೋಗದ ಬಗ್ಗೆ ಎಚ್ಚರವಿರಲಿ:
ಇತ್ತೀಚೆಗೆ ಗೃಹಜ್ಯೋತಿ ಯೋಜನೆಯ ಕುರಿತು ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಹಳ ಜನ ಯೋಜನೆಯ ಸೌಲಭ್ಯ ಬೇಡ ಎಂದರೆ, ಮತ್ತೆ ಕೆಲವರು ದಾಖಲೆ ನೀಡಲು ಹಿಂಜರಿದರು. ಗೃಹಲಕ್ಷ್ಮಿ ಯೋಜನೆಯಲ್ಲೂ ದುರುಪಯೋಗ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಮೃತರ ಖಾತೆಗೆ ಹಣ ಹೋಗುತ್ತಿರುವುದು ಗಮನಕ್ಕೆ ಬಂದಿವೆ. ಗೃಹಲಕ್ಷ್ಮಿ ಮೊತ್ತ ಸಾಲಕ್ಕೆ ವಜಾ ಆಗುತ್ತಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಫಾರಂ ಸಿದ್ಧಪಡಿಸಲಾಗಿದೆ. ಮಹಿಳೆಯರು ತಮ್ಮದೇ ದೂರವಾಣಿ ಸಂಖ್ಯೆ ನಮೂದಿಸಬೇಕು. ದುರುಪಯೋಗದ ಬಗ್ಗೆ ಎಚ್ಚರದಿಂದಿರಬೆಕು ಎಂದು ಸಲಹೆ ನೀಡಿದರು.
ಶೀಘ್ರದಲ್ಲೇ ಮಹಿಳಾ ಸಚಿವೆ
ಮುಂದಿನ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ದೀಪಾವಳಿ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ 36 ತಿಂಗಳು, ಅಂದರೆ ಮೂರು ವರ್ಷ ಪೂರ್ಣಗೊಂಡಿದೆ. ನಿನ್ನೆ (ಗುರುವಾರ) ಒಂದೇ ದಿನ ಸುಮಾರು 7 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ. ಫಲಾನುಭವಿಗಳಿಗೆ ಇನ್ನೂ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ವಿಚಾರಿಸಿದ್ದೇನೆ. ಶಕ್ತಿ ಯೋಜನೆಯಿಂದ ಆಗಿರುವ ಅನುಕೂಲಗಳ ಬಗ್ಗೆಯೂ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಉಳಿದವರೊಂದಿಗೂ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಯೋಜನೆಯ ಸಾರ್ಥಕ ಹಂಚಿಕೊಂಡ ಮಹಿಳೆಯರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸರ್ಕಾರ ನೀಡುವ 2000 ರೂ. ಹಣದಿಂದ ಏನೆಲ್ಲಾ ಪ್ರಯೋಜನ ಆಗಿದೆ ಎಂಬ ಮಾಹಿತಿ ಹಂಚಿಕೊಂಡರು.
‘ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ,’ ಎಂದು ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭೆ ಭಾವುಕವಾಯಿತು.
ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷಿಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು ಎಂದು ಚನ್ನರಾಯಪಟ್ಟಣದ ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನ ಮಾಡಿತು.
ಗೃಹಲಕ್ಷ್ಮೀ ನಿಲ್ಲಿಸಲ್ಲ:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹಿರಿಯ ಮಹಿಳೆಯೊಬ್ಬರು, ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ” ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಈ ಯೋಜನೆ ನಿಲ್ಲಿಸುವುದಿಲ್ಲ’ ಎಂದು ಎಂದು ಭರವಸೆ ನೀಡಿದರು.

