ಬೆಂಗಳೂರು, ನ.07 : ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ಅತಿಹೆಚ್ಚು ಎಥೆನಾಲ್ ಬೆರೆಸಿ ಮಾರಾಟ ಮಾಡಲಾಗುತ್ತಿದ್ದು, ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಶೇ.30ಕಕ್ಕಿಂತಲೂ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಹಾಗೂ ತುಮಕೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಷ್ಟ್ರೀಯ ಮಾಪನಾಂಕ ನಿರ್ಣಯ ಸಂಸ್ಥೆ (ಎನ್ಎಬಿಎಲ್) ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಇ-20 ಮಿತಿಗಿಂತ ಹೆಚ್ಚಿನ ಎಥನಾಲ್ ಪ್ರಮಾಣ ಪತ್ತೆಯಾಗಿದೆ ಎಂದು ಹೇಳಿದರು.
ಪರೀಕ್ಷಾ ವರದಿ ಪ್ರಕಾರ, ಒಂದು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಬಂಕ್ನಲ್ಲಿ ಶೇ.30.5 ಎಥನಾಲ್ ಪತ್ತೆಯಾಗಿದೆ. ಮತ್ತೊಂದು ಎಚ್ಪಿಸಿಎಲ್ ಮಾದರಿಯಲ್ಲಿ ಶೇ.27, ಬಿಪಿಸಿಎಲ್ ಸ್ಪೀಡ್ ಪೆಟ್ರೋಲ್ನಲ್ಲಿ ಶೇ.26.5 ಮತ್ತು ನಯಾರಾ ಪೆಟ್ರೋಲ್ನಲ್ಲಿ ಶೇ.26.1 ಎಥನಾಲ್ ಪತ್ತೆಯಾಗಿದೆ. ಇತರೆ ಮಾದರಿಗಳಲ್ಲಿಯೂ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣ ದಾಖಲಾಗಿದೆ ಎಂದು ಸಚಿವರು ಹೇಳಿದರು.
ಕಂಪನಿಗಳ ಲ್ಯಾಬ್ ವರದಿ ಬಗ್ಗೆ ಪ್ರಶ್ನೆ
ಮೊದಲ ಹಂತದಲ್ಲಿ ಪೆಟ್ರೋಲ್ ಮಾದರಿಗಳನ್ನು ಸಂಬಂಧಿತ ತೈಲ ಕಂಪನಿಗಳ ಸ್ವಂತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಎಥನಾಲ್ ಪ್ರಮಾಣವನ್ನು ಪರೀಕ್ಷಿಸುವುದು ಕಡ್ಡಾಯವಾಗಿದ್ದರೂ, ಕೆಲವು ವರದಿಗಳಲ್ಲಿ ಎಥನಾಲ್ನ ನಿಖರ ಪ್ರಮಾಣವನ್ನು ನಮೂದಿಸಿರಲಿಲ್ಲ ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮಾದರಿಗಳನ್ನು ಮತ್ತೊಮ್ಮೆ ನಿಯಮಾನುಸಾರ ಸಂಗ್ರಹಿಸಿ ಎನ್ಎಬಿಎಲ್ ಮಾನ್ಯತೆ ಪಡೆದ ಹಾಗೂ ಪ್ರಮಾಣೀಕೃತ ಪ್ರಯೋಗಾಲಯಗಳಿಗೆ ಕಳುಹಿಸಲಾಯಿತು. ಅಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶಗಳು ಮಿತಿಮೀರಿದ ಎಥನಾಲ್ ಮಿಶ್ರಣದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿದರು.
ಗ್ರಾಹಕರು ಪೆಟ್ರೋಲ್ಗೆ ಹಣ ಪಾವತಿಸಿ ಎಥನಾಲ್ ಪಡೆಯುವ ಪರಿಸ್ಥಿತಿಯನ್ನು ಕರ್ನಾಟಕ ಸರ್ಕಾರ ಸಹಿಸುವುದಿಲ್ಲ. ರಾಜ್ಯದಲ್ಲಿ ಪೆಟ್ರೋಲ್ ಗುಣಮಟ್ಟದ ತಪಾಸಣೆಯನ್ನು ನಿರಂತರವಾಗಿ ನಡೆಸಲಾಗುವುದು” ಎಂದು ಸಚಿವರು ಹೇಳಿದರು.
ವಾಹನ ಸವಾರರಿಗೆ ಹೆಚ್ಚುವರಿ ಹೊರೆ
ಎಥನಾಲ್ ಮಿಶ್ರಣದ ಪ್ರಮಾಣ ಹೆಚ್ಚಾದರೆ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಸಾಮಾನ್ಯ ವಾಹನ ಸವಾರರು ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ. ಎಥನಾಲ್ ಪ್ರಮಾಣ ಹೆಚ್ಚಿರುವ ಇಂಧನದಿಂದ ಕೆಲವು ವಾಹನಗಳ ಫಿಲ್ಟರ್, ಫ್ಯೂಯಲ್ ಪಂಪ್, ಇಂಜೆಕ್ಟರ್, ಪೈಪ್ಗಳು ಹಾಗೂ ಸೀಲ್ಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯ ಬಗ್ಗೆಯೂ ಸಚಿವರು ಕಳವಳ ವ್ಯಕ್ತಪಡಿಸಿದರು.
“ಓಲಾ, ಊಬರ್, ಟ್ಯಾಕ್ಸಿ ಚಾಲಕರು ಮತ್ತು ಸಾಮಾನ್ಯ ವಾಹನ ಸವಾರರಿಗೆ ಇದರಿಂದ ಹೊರೆ ಆಗುವುದಿಲ್ಲವೇ? ಎಥನಾಲ್ ಆಧಾರಿತ ಇಂಧನಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿ, ಜನರಿಗೆ ಅದಕ್ಕೆ ಹೊಂದಿಕೊಳ್ಳಲು ಸಮಯ ನೀಡಬೇಕಲ್ಲವೇ?” ಎಂದು ಅವರು ಪ್ರಶ್ನಿಸಿದರು.
ವಿಮಾ ಕಂಪನಿಗಳ ಹೊಣೆಗಾರಿಕೆ ಸ್ಪಷ್ಟಪಡಿಸಲಿ:
ಅನೇಕ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳು ಇ-20 ಇಂಧನಕ್ಕೆ ಹೊಂದಿಕೊಳ್ಳುವಂತೆ ಮಾತ್ರ ಸಿದ್ಧಗೊಂಡಿವೆ ಎಂದು ತಿಳಿಸಿರುವುದಾಗಿ ಸಚಿವರು ಹೇಳಿದರು. ಹೊಸ ವಾಹನಗಳಲ್ಲಿ ಇ-20 ಇಂಧನದಿಂದ ಸಮಸ್ಯೆ ಎದುರಾದರೆ ವಾರಂಟಿ ಮತ್ತು ವಿಮಾ ಕಂಪನಿಗಳ ಹೊಣೆಗಾರಿಕೆ ಏನು ಎಂಬುದನ್ನೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು. ಪರೀಕ್ಷಾ ಫಲಿತಾಂಶಗಳನ್ನು ನಿಯಮಿತವಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು. ಇಂಧನದ ಅಳತೆ ಮತ್ತು ಗುಣಮಟ್ಟದಲ್ಲಿ ಯಾವುದೇ ಲೋಪ ಕಂಡುಬಂದರೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೇಂದ್ರಕ್ಕೆ ಹಲವು ಬೇಡಿಕೆ
*ಪೆಟ್ರೋಲ್ ಬಂಕ್ಗಳಲ್ಲಿ ಎಥನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು
* ಶೇ.20ರ ಮಿತಿಗಿಂತ ಹೆಚ್ಚಿನ ಎಥನಾಲ್ ಮಿಶ್ರಣ ಪತ್ತೆಯಾದಲ್ಲಿ ಸಂಬಂಧಿಸಿದ ತೈಲ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
* ಕರ್ನಾಟಕಕ್ಕೆ ಪೂರೈಕೆಯಾಗುವ ಇಂಧನದ ಮಿಶ್ರಣ ಪ್ರಮಾಣವನ್ನು ಪಂಪ್ ಮಟ್ಟದಲ್ಲಿಯೇ ದಾಖಲಿಸಿ, ಸಾರ್ವಜನಿಕವಾಗಿ ಲೆಕ್ಕಪರಿಶೋಧನಾ ವರದಿ ಪ್ರಕಟಿಸಬೇಕು.

