ಬಹುಜನ (ದಲಿತ, ಹಿಂದುಳಿದ, ಮುಸ್ಲಿಂ ಮತ್ತು ಕ್ರೈಸ್ತ) ಸಮುದಾಯಗಳ ಅಸ್ತಿತ್ವ, ಸಮಾನತೆ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷ ಪ್ರಸ್ತುತ ಸೂಕ್ತ ರಾಜಕೀಯ ವೇದಿಕೆಯಾಗಬಲ್ಲದು ಎಂದು ಸುನಿಲ್ ಕುಮಾರ್ ಎಸ್ ಈ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದಲಿತರು, ಹಿಂದುಳಿದವರು, ಮುಸ್ಲಿಮರು ಮತ್ತು ಕ್ರೈಸ್ತ ಸಮುದಾಯಗಳ ಸಾಮಾಜಿಕ ಅಸ್ತಿತ್ವ, ಸಮಾನತೆ ಮತ್ತು ಸ್ವಾಭಿಮಾನಕ್ಕೆ ಸವಾಲಾಗಿರುವುದು ಹಿಂದುತ್ವದ ಹೆಸರಿನಲ್ಲಿ ಪೋಷಿಸಲ್ಪಡುತ್ತಿರುವ ಮನುವಾದಿ ಸಿದ್ಧಾಂತ ಎಂಬುದು ನನ್ನ ಅಭಿಪ್ರಾಯ. ಈ ಸಿದ್ಧಾಂತವನ್ನು ರಾಜಕೀಯವಾಗಿ ಪ್ರತಿನಿಧಿಸುತ್ತಿರುವ ಪ್ರಮುಖ ಶಕ್ತಿಗಳು ಬಿಜೆಪಿ ಮತ್ತು RSS. ಹೀಗಿರುವಾಗ ಈ ಸಮುದಾಯಗಳು ತಮ್ಮ ಅಸ್ತಿತ್ವ, ಹಕ್ಕುಗಳು ಮತ್ತು ಸಂವಿಧಾನಬದ್ಧ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಮನುವಾದಿ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಆದರೆ ಈ ಸಮುದಾಯಗಳಲ್ಲಿರುವ ಕೆಲವು ಶ್ರೀಮಂತರು, ವಿದ್ಯಾವಂತರು ಮತ್ತು ಅಧಿಕಾರಸ್ಥರು ತಮ್ಮ ವೈಯಕ್ತಿಕ ಸ್ವಾರ್ಥ, ವ್ಯಾಪಾರ, ಉದ್ಯೋಗ ಹಾಗೂ ಸಾಮಾಜಿಕ ಸ್ಥಾನಮಾನಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿದರೆ, ತಮ್ಮದೇ ಸಮುದಾಯದ ಬಡವರು ಮತ್ತು ಅವಕಾಶವಂಚಿತ ಜನರ ಹಿತಾಸಕ್ತಿಗೆ ದ್ರೋಹ ಬಗೆದಂತಾಗುವುದಿಲ್ಲವೇ? ಹೊರಗಿನ ಶತ್ರುವಿಗಿಂತ ಒಳಗಿನ ಮಿತ್ರನಂತೆ ಕಾಣಿಸಿಕೊಂಡು ಸಮುದಾಯದ ಹಿತಾಸಕ್ತಿಗೆ ಧಕ್ಕೆ ತರುವವರೇ ಹೆಚ್ಚು ಅಪಾಯಕಾರಿ.
ದಲಿತ ಸಮುದಾಯದ ಮನೋಭಾವ
ದಲಿತ ಸಮುದಾಯದ ಕೆಲವು ವಿದ್ಯಾವಂತರು ಮತ್ತು ಶ್ರೀಮಂತರು ಆರ್ಥಿಕವಾಗಿ ಬೆಳೆದರೂ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಾರೆ. ಈ ಕಾರಣದಿಂದ ಕೆಲವರು ತಮ್ಮ ಮೂಲ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯಿಂದ ದೂರವಾಗಿ, ಮನುವಾದಿ ವ್ಯವಸ್ಥೆಯ ಆಚರಣೆಗಳು ಮತ್ತು ಸಂಕೇತಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಶ್ರೇಷ್ಠತೆ ಪಡೆಯಬಹುದು ಎಂದು ಭಾವಿಸುತ್ತಾರೆ.
ತಮ್ಮ ಮನೆಗಳಲ್ಲಿ ವಿವಿಧ ಧಾರ್ಮಿಕ ಪೂಜೆ, ಹೋಮಗಳನ್ನು ಆಚರಿಸುವುದು, ಮಠ-ಮಂದಿರಗಳೊಂದಿಗೆ ಗುರುತಿಸಿಕೊಳ್ಳುವುದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಇಂತಹ ಗುರುತಿನಿಂದ ಜಾತಿಯ ಕಳಂಕ ದೂರವಾಗಿ ಸಮಾಜದಲ್ಲಿ ಶ್ರೇಷ್ಠತೆ ದೊರೆಯುತ್ತದೆ ಎಂಬ ಭ್ರಮೆ ಅಪಾಯಕಾರಿ. ಇದೇ ಮನೋಭಾವ ಕೆಲವರನ್ನು RSS ಮತ್ತು ಬಿಜೆಪಿ ರಾಜಕಾರಣದತ್ತ ಕೊಂಡೊಯ್ಯುತ್ತದೆ. ಆದರೆ ರಾಜಕೀಯವಾಗಿ ಗುರುತಿಸಿಕೊಂಡ ಮಾತ್ರಕ್ಕೆ ಜಾತಿ ಆಧಾರಿತ ತಾರತಮ್ಯ ಕೊನೆಗೊಳ್ಳುವುದಿಲ್ಲ.
ಹಿಂದುಳಿದ ಸಮುದಾಯಗಳ ಮನೋಭಾವ
ಕೆಲವು ಹಿಂದುಳಿದ ಜಾತಿಗಳಲ್ಲಿ ದಲಿತರಿಗಿಂತ ತಾವು ಮೇಲು ಎಂಬ ಭಾವನೆ ಕಂಡುಬರುತ್ತದೆ. ಆದರೆ ಮನುವಾದಿ ಜಾತಿ ಶ್ರೇಣೀಕರಣದಲ್ಲಿ ಅವರಿಗೂ ಸಂಪೂರ್ಣ ಸಮಾನ ಸ್ಥಾನಮಾನವಿಲ್ಲ. ದಲಿತರಿಗಿಂತ ಸ್ವಲ್ಪ ಹೆಚ್ಚಿನ ಸಾಮಾಜಿಕ ಗೌರವ ದೊರೆತಿದೆ ಎಂಬ ಕಾರಣಕ್ಕೆ ಅದೇ ವ್ಯವಸ್ಥೆಯನ್ನು ಪೋಷಿಸುವ ರಾಜಕಾರಣದ ಭಾಗವಾಗುವುದು ತಮ್ಮ ಸಮುದಾಯದ ಭವಿಷ್ಯಕ್ಕೆ ಅಪಾಯಕಾರಿಯಾಗಬಹುದು. ಜಾತಿ ಶ್ರೇಣೀಕರಣದಲ್ಲಿ ಸ್ಥಾನ ಬೇರೆಯಾಗಿರಬಹುದು; ಆದರೆ ಸಮಾನತೆಯ ಹಕ್ಕು ಎಲ್ಲರಿಗೂ ಒಂದೇ ಆಗಿರಬೇಕು.
ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಮನೋಭಾವ
ಈ ಸಮುದಾಯಗಳಲ್ಲಿಯೂ ಕೆಲವು ಶ್ರೀಮಂತರು ಮತ್ತು ಉದ್ಯಮಿಗಳು ತಮ್ಮ ವ್ಯಾಪಾರ, ಆರ್ಥಿಕ ಭದ್ರತೆ ಹಾಗೂ ವೈಯಕ್ತಿಕ ಸ್ಥಾನಮಾನಕ್ಕಾಗಿ ಅಧಿಕಾರದಲ್ಲಿರುವ ರಾಜಕೀಯ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಅವರ ವೈಯಕ್ತಿಕ ಹಿತಾಸಕ್ತಿಗಳು ಸಮುದಾಯದ ಬಡವರ ಹಕ್ಕುಗಳು, ಭದ್ರತೆ ಮತ್ತು ಸ್ವಾಭಿಮಾನಕ್ಕಿಂತ ಮುಖ್ಯವಾಗಬಾರದು. ಕೆಲವರು ತಮ್ಮ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ವೈಯಕ್ತಿಕವಾಗಿ ಸುರಕ್ಷಿತರಾಗಬಹುದು. ಆದರೆ ಸಾಮಾನ್ಯ ಜನರ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ.

ಜಾತಿ ಬಂದಾಗ ಬೇರೆ, ಧರ್ಮ ಬಂದಾಗ ಒಂದೇ!
ಇಲ್ಲಿ ಗಮನಿಸಬೇಕಾದ ಪ್ರಮುಖ ರಾಜಕೀಯ ವಿರೋಧಾಭಾಸವಿದೆ. ಜಾತಿಯ ಪ್ರಶ್ನೆ ಬಂದಾಗ ಹಿಂದೂ ಸಮಾಜದಲ್ಲಿ ಎಲ್ಲರೂ ಒಂದೇ ಅಲ್ಲ. ಪ್ರತಿಯೊಬ್ಬರೂ ತಮ್ಮ ಜಾತಿಯ ಶ್ರೇಷ್ಠತೆ ಮತ್ತು ಕೀಳರಿಮೆಯ ಭಾವನೆಗಳೊಂದಿಗೆ ಬದುಕಬೇಕಾಗುತ್ತದೆ.ಆದರೆ ಧರ್ಮದ ಪ್ರಶ್ನೆ ಬಂದಾಗ ಮಾತ್ರ “ಹಿಂದೂ ನಾವೆಲ್ಲ ಒಂದು” ಎಂಬ ಘೋಷಣೆ ಕೇಳಿಬರುತ್ತದೆ. ಅಂದರೆ ಜಾತಿ ವ್ಯವಸ್ಥೆ ಮತ್ತು ಶ್ರೇಣೀಕರಣ ಮುಂದುವರಿಯಲಿ; ಆದರೆ ರಾಜಕೀಯ ಅಧಿಕಾರದ ಅಗತ್ಯ ಬಂದಾಗ ಮಾತ್ರ ಎಲ್ಲರೂ ಒಂದಾಗಬೇಕು ಎಂಬ ರಾಜಕೀಯ ತಂತ್ರ ಇಲ್ಲಿ ಕಾಣುತ್ತದೆ. ಅಧಿಕಾರ, ಆಡಳಿತ, ವ್ಯಾಪಾರ, ಉದ್ಯಮ ಮತ್ತು ಸಂಪನ್ಮೂಲಗಳ ಮೇಲಿನ ಹಿಡಿತ ಕೆಲವೇ ವರ್ಗಗಳ ಕೈಯಲ್ಲಿ ಉಳಿಯಬೇಕೆಂಬ ವ್ಯವಸ್ಥೆಯನ್ನು ಪ್ರಶ್ನಿಸದೆ ಹೋದರೆ ಸಾಮಾಜಿಕ ನ್ಯಾಯ ಸಾಧ್ಯವೇ?
ನಮ್ಮ ರಾಜಕೀಯ ಆಯ್ಕೆ ಯಾವುದು?
ಬಹುಜನ ಸಮುದಾಯಗಳ ಅಸ್ತಿತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಉಳಿಸಬೇಕಾದರೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ರಾಜಕೀಯ ಶಕ್ತಿಯನ್ನು ಬೆಂಬಲಿಸಬೇಕು. ಇದಕ್ಕಾಗಿ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ಕಾನ್ಷಿರಾಮ್ ಅವರ ನಂತರದ BSP ರಾಜಕೀಯವನ್ನು ಗಮನಿಸಿದರೆ, ಮಾಯಾವತಿ ಅವರ ನಾಯಕತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸುವ ರಾಜಕೀಯ ನಿಲುವು ಕಾಣಿಸುತ್ತಿಲ್ಲ ಎಂಬ ಟೀಕೆಗಳಿವೆ. ಹೀಗಾಗಿ BSP ಯ ಪರ್ಯಾಯ ರಾಜಕೀಯ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಇನ್ನೊಂದೆಡೆ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದ ನೀತಿಗಳು, ಅಮಿತ್ ಷಾ ಅವರ ರಾಜಕೀಯ ಕಾರ್ಯವೈಖರಿ, RSS ಮತ್ತು ಮನುವಾದಿ ಚಿಂತನೆಗಳನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಜಾತಿಗಣತಿ, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಮತ್ತು ಅಧಿಕಾರದಲ್ಲಿ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ದೊರೆಯಬೇಕೆಂಬ ವಿಚಾರಗಳನ್ನು ಮುಂಚೂಣಿಗೆ ತರುತ್ತಿದ್ದಾರೆ.
RSS ಮತ್ತು ಮನುವಾದಿ ಚಿಂತನೆಗಳ ವಿರುದ್ಧ ಪ್ರಬಲ ರಾಜಕೀಯ ಧ್ವನಿ ಎತ್ತುತ್ತಿರುವ ಪ್ರಮುಖ ನಾಯಕರಲ್ಲಿ ರಾಹುಲ್ ಗಾಂಧಿ ಒಬ್ಬರು ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಹೋರಾಟಕ್ಕೆ ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಒಂದು ಪ್ರಮುಖ ರಾಜಕೀಯ ವೇದಿಕೆಯಾಗಬಲ್ಲದು ಎಂದು ನಾನು ಭಾವಿಸುತ್ತೇನೆ.
ಯುವಜನರಿಗೆ ನನ್ನ ಮನವಿ
ದಲಿತ, ಹಿಂದುಳಿದ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಯುವಕರು ತಮ್ಮ ರಾಜಕೀಯ ಆಯ್ಕೆಯನ್ನು ಭಾವನೆ ಅಥವಾ ವ್ಯಕ್ತಿಗತ ಸ್ವಾರ್ಥದ ಆಧಾರದ ಮೇಲೆ ಮಾಡಬಾರದು. ಯಾವ ಪಕ್ಷದ ರಾಜಕಾರಣದಿಂದ ತಮ್ಮ ಸಮುದಾಯದ ಬಡವರಿಗೆ, ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಮತ್ತು ಅವಕಾಶವಂಚಿತರಿಗೆ ನ್ಯಾಯ ಸಿಗುತ್ತದೆ ಎಂಬುದನ್ನು ಯೋಚಿಸಬೇಕು. ಬಹುಜನ ರಾಜಕಾರಣದ ಹೆಸರಿನಲ್ಲಿ ಮತಗಳು ವಿಭಜನೆಯಾಗಿ, ಅದರ ಲಾಭ ಬಿಜೆಪಿಗೆ ದೊರೆತರೆ, ಅಂತಿಮವಾಗಿ ಬಲಗೊಳ್ಳುವುದು ಮನುವಾದಿ ರಾಜಕಾರಣವೇ ಆಗಿರುತ್ತದೆ.
ಅಂತಿಮ ಮಾತು:
ನನಗೆ ಬೇಕಾಗಿರುವುದು ಯಾವುದೇ ಒಂದು ಜಾತಿ ಅಥವಾ ಧರ್ಮದ ಪ್ರಾಬಲ್ಯವಲ್ಲ. ಎಲ್ಲ ಸಮುದಾಯಗಳಿಗೂ ಶಿಕ್ಷಣ, ಉದ್ಯೋಗ, ಅಧಿಕಾರ, ಆಸ್ತಿ ಮತ್ತು ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ದೊರೆಯಬೇಕು. ನಮ್ಮ ಮೂಲನಿವಾಸಿ ಸಮುದಾಯಗಳ ಸಂಸ್ಕೃತಿ, ಆಚರಣೆ, ಆಚಾರ-ವಿಚಾರ ಮತ್ತು ಧಾರ್ಮಿಕ ನಂಬಿಕೆಗಳ ಸ್ವಾತಂತ್ರ್ಯವನ್ನು ಸಂವಿಧಾನ ರಕ್ಷಿಸಬೇಕು. ಸಂವಿಧಾನ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ; ಪ್ರಜಾಪ್ರಭುತ್ವ ಉಳಿದರೆ ಮಾತ್ರ ಸಾಮಾಜಿಕ ನ್ಯಾಯದ ಹೋರಾಟ ಮುಂದುವರಿಯುತ್ತದೆ.
ಆದ್ದರಿಂದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ಗೆ ಒಂದು ಅವಕಾಶ ನೀಡುವುದರಲ್ಲಿ ತಪ್ಪೇನಿದೆ? ಒಮ್ಮೆ ಯೋಚಿಸಿ! ನಮ್ಮ ರಾಜಕೀಯ ಆಯ್ಕೆ ವೈಯಕ್ತಿಕ ಲಾಭಕ್ಕಾಗಿರಬಾರದು; ನಮ್ಮ ಮುಂದಿನ ಪೀಳಿಗೆಯ ಸಮಾನತೆ, ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಭವಿಷ್ಯಕ್ಕಾಗಿ ಇರಬೇಕು.
ಸುನಿಲ್ ಕುಮಾರ್ ಎಸ್.
ಪಬ್ಲಿಕ್ ಹೆಲ್ತ್ ಇಂಜಿನಿಯರ್
ಇದನ್ನೂ ಓದಿ – ಗಾಂಧಿ ತತ್ತ್ವದ ಪ್ರಸ್ತುತತೆ ತಿಳಿಸಿದ ʼಮಸಿʼ ಪ್ರಕರಣ


