ಪರಂಪರೆಯ ಕೊಡೆ ಎಷ್ಟು ಭಾರ ಎಂಬುದನ್ನು ಅಳೆಯುವ ಮೊದಲೇ ಪದಗಳ ಆಟ ಜಗಳವನ್ನು ಕರಗಿಸಿಬಿಡುತ್ತದೆ. ಪಾಶ್ಚಾತ್ಯ ಅಸಂಗತತೆಯ ಕಣ್ಣಿಗೆ ಇದು ಮಿತಿಯಂತೆ ಕಂಡರೂ, ವಾಸ್ತವದಲ್ಲಿ ಇದೇ ಈ ನಾಟಕದ ವಿಶಿಷ್ಟತೆ. “ಜಗಳಾಟಾನೂ ಆಟಾನs, ಹುಡುಗಾಟಾನೂ ಆಟಾನs” ಎಂಬ ಕೊನೆಯ ಸಾಲು ಕನ್ನಡ ಅಸಂಗತದ ಹೊಸ ವ್ಯಾಖ್ಯಾನವಾಗಿ ನಿಲ್ಲುತ್ತದೆ. ಅದು ಮೌನದಲ್ಲಿ ಕೊನೆಗೊಳ್ಳುವ ಒಂಟಿ ಮನುಷ್ಯನ ಅಸಂಗತವಲ್ಲ, ಇಬ್ಬರು ಸೇರಿ ಜೋಡಿ ಹಾಡಾಗುವ ದೇಸಿ ಅಸಂಗತ – ಡಾ. ರವಿ ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಕನ್ನಡದ ಅಸಂಗತ ನಾಟಕಗಳನ್ನು ಬೆಕೆಟ್, ಐನೆಸ್ಕೋ ಅವರ ಪ್ರಭಾವದ ಮೂಲಕವೇ ಓದುವ ರೂಢಿ ನಮ್ಮಲ್ಲಿದೆ. ಆ ದಾರಿಯಲ್ಲಿ ಚಂದ್ರಶೇಖರ ಪಾಟೀಲರ(ಚಂಪಾ) ಈ ಏಕಾಂಕವು ಯೂರೋಪಿನ ಹತಾಶೆಯ ಕನ್ನಡ ರೂಪದಂತೆ ಕಾಣುತ್ತದೆ. ಆದರೆ ಇದನ್ನು ವಿರುದ್ಧ ದಿಕ್ಕಿನಿಂದ ಓದಿದರೆ, ಇದು ಸಂಬಂಧವಿಲ್ಲದಿರುವಿಕೆಯ ದುರಂತವಲ್ಲ; ಅಪರಿಚಿತರಿಬ್ಬರು ಸಂವಾದದ ಮೂಲಕವೇ ಸಂಬಂಧ ಸೃಷ್ಟಿಸಿಕೊಳ್ಳುವ ಲೀಲೆ.
ಇಲ್ಲಿನ ಪಾತ್ರಗಳಿಗೆ ಹೆಸರಿಲ್ಲ; ಬೀಜಗಣಿತದ ಅಜ್ಞಾತ ಸಂಕೇತಗಳಾದ ಇಂಗ್ಲಿಷಿನ X, Y ಗಳನ್ನೇ ಚಂಪಾ ಇಲ್ಲಿ ‘ಕ್ಷ’ ಮತ್ತು ‘ಯ’ ಮಾಡಿದಂತಿದೆ. ‘ಕ್ಷ’ ಸಂಯುಕ್ತಾಕ್ಷರವಾದರೆ, ‘ಯ’ ಅವರ್ಗೀಯ ವ್ಯಂಜನದ ಮೊದಲ ವರ್ಣ; ಇವೆರಡೂ ಯಾರನ್ನು ಬೇಕಾದರೂ ಸೂಚಿಸಬಲ್ಲ ಖಾಲಿ ಪಾತ್ರೆಗಳು. ಇಬ್ಬರ ಕೈಯಲ್ಲೂ ‘ಅಪ್ಪನ ಅಪ್ಪನ ಅಪ್ಪ’ನಿಂದ ಬಳುವಳಿಯಾಗಿ ಬಂದ ಕೊಡೆಯಿದೆ; ಆದರೆ ಒಬ್ಬ ಎಂದೂ ಬಿಚ್ಚುವುದಿಲ್ಲ, ಇನ್ನೊಬ್ಬ ಎಂದೂ ಇಳಿಸುವುದಿಲ್ಲ. ಇವು ಪರಂಪರೆ ಕೊಟ್ಟ ಎರಡು ಸ್ವಯಂಕೃತ ನಿಷೇಧಗಳು. ಒಬ್ಬನನ್ನೊಬ್ಬ ‘ವಿರುದ್ಧ’ ಎಂದು ಜರೆಯುವ ಈ ಇಬ್ಬರು ಒಂದೇ ಹಟದ ಎರಡು ಮುಖಗಳು ಎಂಬ ಸತ್ಯ ಮಾತುಕತೆಯ ನಡುವೆ ತಾನಾಗಿಯೇ ಬಯಲಾಗುತ್ತದೆ- “ಹಂಗಾರ ನಾವಿಬ್ರೂ ಒಂದs ಅಂಧಾಂಗಾತು.”
ನಾಟಕದ ತಾತ್ವಿಕ ಕೇಂದ್ರ ‘ಬತ್ತಲೆ’ಯ ಭಯ. ಧಾರವಾಡದ ಎಮ್ಮೆ, ಗುಬ್ಬಿ, ಸುಡುಗಾಡು, ಸೂರ್ಯ, ಚಂದ್ರ ಎಲ್ಲವೂ ಬತ್ತಲೆಯೇ; ತನಗೇಕೆ ಹೆದರಿಕೆ ಎಂಬುದಕ್ಕೆ “ನಾ ಮನಸ್ಯಾ, ಅದಕs ಹೆದರಿಕಿ” ಎಂಬ ಉತ್ತರವಿದೆ. ಮನುಷ್ಯತ್ವ ಎಂದರೆ ಬತ್ತಲೆಯನ್ನು ಮುಚ್ಚಿಕೊಳ್ಳುವ ಹಂಬಲ, ಕೊಡೆ ಎಂದರೆ ಸಂಸ್ಕೃತಿ ತೊಡಿಸಿದ ಉಡುಗೆ ಎಂಬ ದೊಡ್ಡ ಮಾನವಶಾಸ್ತ್ರೀಯ ಹೇಳಿಕೆಯನ್ನು ಈ ‘ಅಸಂಬದ್ಧ’ ಮಾತು ನಗುತ್ತಲೇ ಮಂಡಿಸುತ್ತದೆ. ಕೊಡೆ ಬಿಚ್ಚಿದರೆ ಯಾರೋ ಬೆನ್ನಿನ ಬಟನ್ನು ಬಿಚ್ಚಿದಂತೆ ಅನಿಸುವ ಒಬ್ಬನ ಭಯಕ್ಕೂ, ಇಳಿಸಿದರೆ ಪ್ರಕೃತಿಯ ಇತರ ಜೀವಿಗಳಂತೆ ಬತ್ತಲಾಗುತ್ತೇನೆ ಎನ್ನುವ ಇನ್ನೊಬ್ಬನ ಭಯಕ್ಕೂ ಮೂಲ ಒಂದೇ. ಮುಂದೆ “ನಾ ಗುಬ್ಬಿ ಅಲ್ಲ, ಕಾಗಿ ಅಲ್ಲ, ಸೂರ್ಯ ಅಲ್ಲ” ಎಂಬ ನಿರಾಕರಣೆಯ ಪಠಣದಲ್ಲಿ, ಮನುಷ್ಯ ತಾನು ಮುಚ್ಚಿಟ್ಟ ಪ್ರಕೃತಿಯ ವಿರುದ್ಧವಾಗಿ, ತಾನು ‘ಏನಲ್ಲ’ ಎಂಬುದರ ಮೂಲಕವೇ ಗುರುತಿಸಿಕೊಳ್ಳುತ್ತಾನೆಂಬ ಒಳನೋಟವಿದೆ.

ಇಲ್ಲಿ ಭಾಷೆಯೇ ಪ್ರಧಾನ ಪಾತ್ರ; ‘ಮಾತು’ ಮತ್ತು ‘ಆಟ’ ಒಂದಾಗುತ್ತವೆ. ನಾಮಪದ-ಕ್ರಿಯಾಪದಗಳೆರಡೂ ಆಗುವ ‘ಬಾಳು’, ಕಾಯಿಪಲ್ಯವಾಗುವ ಹೆಸರುಗಳ ನಡುವೆ “ಏನ್ ರಿಚ್ ಅದsರಿ ನಮ್ಮ ಭಾಷಾ” ಎಂಬ ಉದ್ಗಾರ ಮರುಕಳಿಸುತ್ತದೆ. ಇದು ಭಾಷಾಭಿಮಾನವೂ ಹೌದು, ಆ ಶ್ರೀಮಂತಿಕೆಯೇ ತಪ್ಪುಗ್ರಹಿಕೆಗೆ ದಾರಿಯೆಂಬ ವ್ಯಂಗ್ಯವೂ ಹೌದು. ಪಾತ್ರಗಳೇ ‘ಅಸಂಬದ್ಧ’, ‘ಅಬ್ಸರ್ಡ್ ಡ್ರಾಮಾ’ ಎಂಬ ಪದಗಳನ್ನು ಬಳಸುತ್ತಾ, ನಾಟಕ ತನ್ನ ಪ್ರಕಾರವನ್ನೇ ಗೇಲಿ ಮಾಡಿಕೊಳ್ಳುತ್ತದೆ. ಅದಕ್ಕಿಂತ ಮುಖ್ಯ ಇದರ ರಚನೆ. “ಪಾಳೆಯ ಪ್ರಕಾರ” ಹಾಡುವ ರಂಗಸೂಚನೆ, ಸವಾಲ್–ಜವಾಬಿನಂತೆ ಒಬ್ಬರ ಮಾತನ್ನು ಇನ್ನೊಬ್ಬರು ಮರುಕಳಿಸುವ ಧಾಟಿ, ಒಗಟಿನಂತಹ ಪ್ರಶ್ನೆಗಳು, ಉತ್ತರ ಕರ್ನಾಟಕದ ಆಡುನುಡಿ ಇವು ಈ ಅಸಂಗತಕ್ಕೆ ಯೂರೋಪಿನ ಬದಲು ನಮ್ಮದೇ ಜಾನಪದ ಹಾಗೂ ತತ್ವಪದ ಪರಂಪರೆಯ ಬೇರನ್ನು ಕೊಡುತ್ತವೆ. ಇಲ್ಲಿ ಅಸಂಬದ್ಧ ಆಮದಾದ ಅವ್ಯವಸ್ಥೆಯಲ್ಲ; ಒಗಟಿನ ಒಳಗಿರುವ ಜ್ಞಾನದ ಇನ್ನೊಂದು ಮುಖ.
ಮಧ್ಯದ ದೃಶ್ಯವೊಂದು ನಾಟಕದ ಹೃದಯ. ಇಬ್ಬರ ನಡುವಿನ ‘ಖಾಲೀ ಹವಾ’ವನ್ನೇ ಅವರು ದೇಸಿಯಲ್ಲಿ ‘ಕನಡಿ’(ಕನ್ನಡಿ) ಎನ್ನುತ್ತಾರೆ; ಇದರಲ್ಲಿ ‘ಕನ್ನಡ’ದ ಪ್ರತಿಧ್ವನಿಯೂ ಇದೆ. ಅಲ್ಲಿಂದ ಮುಂದೆ ‘ಕ್ಷ’ನ ದನಿ ‘ಯ’ನ ಪ್ರತಿಧ್ವನಿಯಾಗುತ್ತದೆ, ಇಬ್ಬರೂ ಜಾಗ ಅದಲು ಬದಲು ಮಾಡುತ್ತಾರೆ, ಒಬ್ಬ ಕೊಡೆ ಇಳಿಸಿದರೆ ಇನ್ನೊಬ್ಬಬಿಚ್ಚುತ್ತಾನೆ. ಇಲ್ಲೇ ಕೊಡೆ ತನ್ನ ಸೀಮಿತ ಅರ್ಥವನ್ನು ಕಳಚಿಕೊಳ್ಳುತ್ತದೆ. ಹರಿಯುವ ಹೊಳೆಯಲ್ಲಿ ಹರಿಗೋಲು, ಕವಿತೆ ಬರೆಯುವ ಲೇಖನಿ, ನಕ್ಷೆ ಬರೆಯುವ ಕುಂಚ ಆಗುತ್ತದೆ. ರಕ್ಷಣೆಯ ಸಾಧನ ಸೃಷ್ಟಿಯ ಸಾಧನವಾಗುವ ಈ ರೂಪಾಂತರವೇ ನಾಟಕದ ಬೌದ್ಧಿಕ ಉತ್ತುಂಗ. ಕೊನೆಯಲ್ಲಿ ಬಿಸಿಲು ಮತ್ತು ಮಳೆ ಒಟ್ಟಿಗೆ ಬರುವ ‘ನರಿ ಮದುವೆ’ಯ ಜಾನಪದ ಚಿತ್ರ ಬರುತ್ತದೆ. ಬಿಚ್ಚು-ಇಳಿಸು, ಮಳೆ-ಬಿಸಿಲು ಎಂಬ ದ್ವಂದ್ವ ಅಲ್ಲಿ ಹಾಡು-ನಗು-ಕುಣಿತವಾಗಿ ಕರಗುತ್ತದೆ. ಆರಂಭದಲ್ಲಿ ಕೈಯಲ್ಲಿ ಗಡಿಯಾರವಿದ್ದರೂ ಮುಗಿಲು ನೋಡಿ ಸಮಯ ಹೇಳುತ್ತಾ ಯಂತ್ರ ಮತ್ತು ನಿಸರ್ಗದ ನಡುವಿನ ನಂಬಿಕೆಯ ಪ್ರಶ್ನೆ ಎತ್ತಿದ್ದ ಪಾತ್ರಗಳು, ಕೊನೆಯಲ್ಲಿ ಗಡಿಯಾರ ‘ಹದಿಮೂರು, ಹದಿನಾಲ್ಕು’ ತೋರಿಸುವಲ್ಲಿಗೆ ಕಾಲದ ತಾರ್ಕಿಕ ಚೌಕಟ್ಟನ್ನೂ ಮುರಿಯುತ್ತವೆ.
ಪ್ರತಿಧ್ವನಿಯ ತಂತ್ರ ಕೆಲವೆಡೆ ಯಾಂತ್ರಿಕವಾಗುವುದು, ಭಾಷೆಯ ಲಯ ರಂಗದಷ್ಟು ಪುಟದ ಮೇಲೆ ಜೀವ ತಳೆಯದಿರುವುದು ನಾಟಕದ ಮಿತಿಗಳು. ಬೆಕೆಟ್ ನ ನಿರಾಕರಣೆಯ ಕಠೋರತೆಗೆ ಹೋಲಿಸಿದರೆ ಇಲ್ಲಿ ಸಮಾಧಾನ ತುಸು ಬೇಗ ಬರುತ್ತದೆ; ಪರಂಪರೆಯ ಕೊಡೆ ಎಷ್ಟು ಭಾರ ಎಂಬುದನ್ನು ಅಳೆಯುವ ಮೊದಲೇ ಪದಗಳ ಆಟ ಜಗಳವನ್ನು ಕರಗಿಸಿಬಿಡುತ್ತದೆ. ಪಾಶ್ಚಾತ್ಯ ಅಸಂಗತತೆಯ ಕಣ್ಣಿಗೆ ಇದು ಮಿತಿಯಂತೆ ಕಂಡರೂ, ವಾಸ್ತವದಲ್ಲಿ ಇದೇ ಈ ನಾಟಕದ ವಿಶಿಷ್ಟತೆ. “ಜಗಳಾಟಾನೂ ಆಟಾನs, ಹುಡುಗಾಟಾನೂ ಆಟಾನs” ಎಂಬ ಕೊನೆಯ ಸಾಲು ಕನ್ನಡ ಅಸಂಗತದ ಹೊಸ ವ್ಯಾಖ್ಯಾನವಾಗಿ ನಿಲ್ಲುತ್ತದೆ. ಅದು ಮೌನದಲ್ಲಿ ಕೊನೆಗೊಳ್ಳುವ ಒಂಟಿ ಮನುಷ್ಯನ ಅಸಂಗತವಲ್ಲ, ಇಬ್ಬರು ಸೇರಿ ಜೋಡಿ ಹಾಡಾಗುವ ದೇಸಿ ಅಸಂಗತ.
ಡಾ. ರವಿ ಎಂ ಸಿದ್ಲಿಪುರ
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಉರಿಯುವ ನೆರಳಿನ ಆತ್ಮ ಕಥನ ‘ಆಫ್ಟರ್ ಶಾಕ್’


