ಬೆಂಗಳೂರು, ಅ.29 : ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಪ್ರಕರಣದ ಹಿಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಅಧಿಕಾರಿ ಯೋಗೀಶ್ ಅವರ ವಿಚಾರಣೆ ಇಂದು ಅಂತ್ಯಗೊಂಡಿದೆ. ಬೆಳಗ್ಗೆಯಿಂದ ಸಂಜೆವರೆಗೆ ವಿಚಾರಣೆ ನಡೆಸಲಾಗಿದ್ದು, ಯೋಗೀಶ್ ಅವರು ತನಿಖಾಧಿಕಾರಿ ಲೋಕೇಶ್ ಜಗಲಸಾರ್ ಅವರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
ಸೌಜನ್ಯ ಕೊಲೆ ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಯೋಗೀಶ್ ಅವರು ಈ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕೈಗೊಂಡ ಕ್ರಮಗಳು, ಸಾಕ್ಷ್ಯಗಳ ಸಂಗ್ರಹ ಮತ್ತು ತನಿಖೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದೇ ವೇಳೆ, ಅಂದಿನ ಸಿಐಡಿ ಡಿವೈಎಸ್‌ಪಿಯಾಗಿದ್ದ ರುದ್ರಮುನಿ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಪ್ರಕರಣದ ತನಿಖಾಧಿಕಾರಿಯಾಗಿದ್ದ ಭಾಸ್ಕರ್ ರೈ ಅವರೂ ಇಂದು ವಿಚಾರಣೆಗೆ ಹಾಜರಾಗಿದ್ದರು.
ಸೌಜನ್ಯ ಪ್ರಕರಣದ ಮರುತನಿಖೆಯ ಭಾಗವಾಗಿ ಈ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. ಹಿಂದಿನ ತನಿಖೆಯಲ್ಲಿ ನಡೆದಿರಬಹುದಾದ ಲೋಪಗಳು, ಸಾಕ್ಷ್ಯಗಳ ನಿರ್ವಹಣೆ ಹಾಗೂ ತನಿಖೆಯ ವಿವಿಧ ಹಂತಗಳಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮರುಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ಕುತೂಹಲ ಮೂಡಿಸಿದೆ.

