ಮೈಸೂರು, ಅ. 27: ಸಚಿವ ಸಂಪುಟ ಪುನರ್ ರಚನೆಯಾದ ನಂತರದಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಒಂದೇ ತಿಂಗಳಲ್ಲಿ ಎರಡು ಬಾರಿ ಮೈಸೂರಿನಲ್ಲಿ ದಲಿತ ಮುಖಂಡರ ಸಭೆ ನಡೆಸಿದ್ದಾರೆ. ಇದು ರಾಜಕೀಯ ವಲದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೇ ಅ.12 ರಂದು ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ದಲಿತ ಸಂಘಟನೆಗಳ ಮುಖಂಡರ ಸಭೆ ನಡೆಸಿದ್ದರು. ಅ.26 ರಂದು (ಸೋಮವಾರ) ದಲಿತ ಮುಖಂಡರ ಸಭೆಯನ್ನು ನಗರದಲ್ಲಿ ನಡೆಸಿದ್ದಾರೆ.
ಸಂವಿಧಾನದ 77 ನೇ ದಿನಾಚರಣೆಯ ಅಂಗವಾಗಿ ನ.26-27 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸಂವಿಧಾನ ಸಮ್ಮೇಳನ ಆಯೋಜನೆ ಮಾಡುವ ಬಗ್ಗೆ ಇಂದಿನ ಸಭೆಯಲ್ಲೂ ಚರ್ಚಿಸಲಾಯಿತು ಎಂದು ಹೇಳಲಾಗಿದೆ.
ಆದರೆ, ದಲಿತ ನಾಯಕರನ್ನುಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ 77 ನೇ ದಿಚಾರಣೆ ಮೂಲಕ ದಲಿತ ಸಮುದಾಯ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆ ಕೂಡ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಿತು. ಸಭೆಯಲ್ಲಿ ಸಂಘಟನೆ ಮತ್ತು ಸಮುದಾಯದ ಬಗ್ಗೆ ಚರ್ಚೆ ನಡೆಸಲಾಯಿತು.
ಬರುವ ನ.26 ರಂದು ವಿಧಾನ ದಿನಾಚರಣೆಯಂದು ನಡೆಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದ ಕುರಿತಾಗಿಯೂ ಮಹತ್ವದ ಚರ್ಚೆ ನಡೆಸಿ, ಡಾ.ಎಚ್.ಸಿ. ಮಹದೇವಪ್ಪ ಅವರು ಎಲ್ಲ ಮುಖಂಡರ ಅಭಿಪ್ರಾಯಗಳನ್ನು ಆಲಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಪತ್ರಕರ್ತ ಇಂದೂಧರ ಹೊನ್ನಾಪುರ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ಡಿ.ಜಿ.ಸಾಗರ್, ವಿ.ನಾಗರಾಜ, ಎನ್ ಮುನಿಸ್ವಾಮಿ, ಎನ್ ವೆಂಕಟೇಶ್, ಚಿಂತಕ ತುಕರಾಂ, ವೆಂಕಟ ರಾಮಣಸ್ವಾಮಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಅಲಗೂಡು ಶಿವಕುಮಾರ್, ಮಾಜಿ ಮೇಯರ್ ಪುರುಷೋತ್ತಮ್ , ಡಾ.ಎಸ್.ತುಕರಾಂ, ಬೆಟ್ಟಯ್ಯ ಕೋಟೆ, ಹರಿಹರ ಆನಂದಸ್ವಾಮಿ, ಜೆ.ಸೋಮಶೇಖರ್, ಅಣ್ಣಯ್ಯ ನಾಗರಾಜು, ದೇವಗಳ್ಳಿ ಸೋಮಶೇಖರ್ ಮೊದಲಾದವರು ಇದ್ದರು.
ಸಭೆಯಲ್ಲಿ ಸ್ವಾತಂತ್ರ್ಯ ಬಂದು ಹಲವು ದಶಕಗಳಾದರೂ ರಾಜ್ಯದಲ್ಲಿ ದಲಿತರು ಸಿಎಂ ಆಗಿಲ್ಲ. ಇದು ನಾಚಿಗೇಡಿನ ಸಂಗತಿ. ಇಲ್ಲಿಯವರೆಗೆ ಮುಖ್ಯಮಂತ್ರಿ ಅದಾವರೆಲ್ಲರೂ ದಲಿತರ ಪರ ಮಾತನಾಡಿದಲ್ಲದೇ, ನಾನು ದಲಿತನೇ ಎಂದೆಲ್ಲಾ ಹೇಳಿ ಮತ ಹಾಕಿಸಿಕೊಂಡು ಅಧಿಕಾರ ಹಿಡಿದರು. ಆದರೆ ಮುಖ್ಯಮಂತ್ರಿ ಆದಾಗ ದಲಿತ ಸಿಎಂ ಬಗ್ಗೆ ಚಕಾರವೇ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತವಾಯಿತು ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲು ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಆಯೋಜನೆ ಮಾಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಸಮ್ಮೇಳನಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡುವ ಸಾಧ್ಯತೆಗಳು ಕಾಣುತ್ತಿಲ್ಲ.
ಕಳೆದ ಬಾರಿ ನಡೆದ ಪೂರ್ವಭಾವಿ ಸಭೆ ನಂತರ ಮಾತನಾಡಿದ ಡಾ. ಎಚ್.ಸಿ. ಮಹದೇವಪ್ಪ ಅವರು, ಸಿದ್ದರಾಮಯ್ಯ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸುವುದಿಲ್ಲವೇ ಎಂಬ ಪ್ರಶ್ನೆಗೆ, ಇಲ್ಲಿ ಯಾವ ವ್ಯಕ್ತಿಯ ಪ್ರಶ್ನೆಯೂ ಇರಲ್ಲ. ಸಂವಿಧಾನ ರಕ್ಷಕರು ಎಲ್ಲಾ ಸೇರಿ ಇದರಲ್ಲಿ ಭಾಗವಹಿಸುತ್ತಾರೆ ಎಂದೇಳಿದರೆ ಹೊರತು, ಸಿದ್ದರಾಮಯ್ಯ ಹೆಸರನ್ನು ತಮ್ಮ ಬಾಯಿಂದ ಹೇಳಲೇ ಇಲ್ಲ.
ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸ್ನೇಹದ ಕುರಿತ ಪ್ರಶ್ನೆಗೂ ಮಹದೇವಪ್ಪಅವರು, ಒಮ್ಮೆ ಸ್ನೇಹಿತರಾದರೆ ಯಾವಾಗಲೂ ಸ್ನೇಹಿತರೇ, ಸ್ನೇಹದ ಪ್ರೀತಿ ಜಾಸ್ತಿಯೂ ಕಡಿಮೆಯೂ ಆಗಲ್ಲ. ನಾನು ಈಗ ಬೇರೆ ಯಾವ ಪ್ರಶ್ನೆಗಳಿಗೂ ಈಗ ಉತ್ತರ ಕೊಡಲ್ಲ ಎಂದು ಹೇಳಿ ಮಾತಿಗೆ ವಿರಾಮ ಹೇಳಿದ್ದರು.

