ದಕ್ಷಿಣಭಾರತದ ಯಾವ ಪ್ರದೇಶದಲ್ಲೂ ರಾವಣನ ಪ್ರತಿಕೃತಿಯನ್ನು ದಹಿಸಲಾಗುವುದಿಲ್ಲ. ಕಂಬ ರಾಮಾಯಣದಂಥ ಕೃತಿಗಳಲ್ಲಿ ರಾವಣನೇ ನಾಯಕ. ಜೈನ ಪರಂಪರೆಯ ಕವಿ ನಾಗಚಂದ್ರನ ‘ರಾಮಚಂದ್ರ ಚರಿತಪುರಾಣ’ ದಲ್ಲಿ ರಾವಣ ಚಾರಿತ್ರ್ಯವಂತ. ಸೀತೆಯನ್ನು ಅಪಹರಿಸುವ ಒಂದು ತಪ್ಪನ್ನು ಬಿಟ್ಟರೆ, ಯಾವ ಅಪವಾದವೂ ಅವನ ಮೇಲಿಲ್ಲ. ಸೀತೆಯ ಅಪಹರಣಕ್ಕೂ ರಾವಣನು ಪಶ್ಚಾತಾಪಪಡುತ್ತಾನೆ. ಯುದ್ಧದಲ್ಲಿ ರಾಮನನ್ನು ಗೆದ್ದು, ಸೀತೆಯನ್ನು ರಾಮನಿಗೆ ಮರಳಿಸಲು ನಿರ್ಧರಿಸುತ್ತಾನೆ. ಅಂದರೆ, ದಕ್ಷಿಣಭಾರತದಲ್ಲಿ ರಾವಣನನ್ನು ಖಳನಾಯಕನಾಗಿ ನೋಡುವ ಪರಂಪರೆ ಇಲ್ಲವೆಂದೇ ಹೇಳಬೇಕು – ಡಾ. ಗಣನಾಥ ಎಕ್ಕಾರು, ಸಂಸ್ಕೃತಿ ಚಿಂತಕರು, ಜಾನಪದ ವಿದ್ವಾಂಸರು.
ಹತ್ತು ದಿನಗಳ ಕಾಲ ನಡೆಯುವ ದಸರಾ ಸಾಂಸ್ಕೃತಿಕ ಹಬ್ಬದ ಕೊನೆಯ ದಿನ ವಿಜಯದಶಮಿ. ಇದನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಉತ್ತರಭಾರತ, ಪೂರ್ವಭಾರತ, ದಕ್ಷಿಣಭಾರತಗಳಲ್ಲಿ ವಿಭಿನ್ನ ಹಿನ್ನೆಲೆ ಮತ್ತು ಆಚರಣೆಗಳ ಸ್ವರೂಪವಿದೆ. ಈ ಆಚರಣೆಯಲ್ಲಿ ಆರ್ಯ-ದ್ರಾವಿಡ ಸಂಘರ್ಷದ ಎಳೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಉತ್ತರಭಾರತದಲ್ಲಿ ವಿಜಯದಶಮಿಯ ಆಚರಣೆಯು ರಾಮಾಯಣದ ಕಥೆಯೊಂದಿಗೆ ಮಿಳಿತವಾಗಿದೆ. ಹತ್ತು ದಿನ ರಾಮ-ರಾವಣರ ಯುದ್ಧ ನಡೆಯುತ್ತದೆ. ಹತ್ತನೇ ದಿನ ರಾಮನು ರಾವಣನನ್ನು ಕೊಲ್ಲುತ್ತಾನೆ. ಈ ವಿಜಯದ ಸಂಕೇತವಾಗಿ ವಿಜಯದಶಮಿಯ ಆಚರಣೆ ಇದೆ. ಉತ್ತರಭಾರತದ ಕಡೆ ವಿಜಯದಶಮಿಯಂದು ಹತ್ತು ತಲೆಯ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ಅದರಲ್ಲೂ ಈ ವರ್ಷ ರಾವಣನೊಂದಿಗೆ ʼಜಿರಳೆʼಗಳ ಪ್ರತಿಕೃತಿಯನ್ನು ಸುಡಲಾಯಿತು ಎಂಬುದು ಈ ಕಥೆಯ ಸಂಘರ್ಷಕ್ಕೆ ಸಂಕೇತದಂತಿದೆ.
ಆದರೆ, ಈ ಆಚರಣೆಯಲ್ಲಿ ದಕ್ಷಿಣಭಾರತದ ಯಾವ ಪ್ರದೇಶದಲ್ಲೂ ರಾವಣನ ಪ್ರತಿಕೃತಿಯನ್ನು ದಹಿಸಲಾಗುವುದಿಲ್ಲ. ಕಂಬ ರಾಮಾಯಣದಂಥ ಕೃತಿಗಳಲ್ಲಿ ರಾವಣನೇ ನಾಯಕ. ಜೈನ ಪರಂಪರೆಯ ಕವಿ ನಾಗಚಂದ್ರನ ‘ರಾಮಚಂದ್ರ ಚರಿತಪುರಾಣ’ ದಲ್ಲಿ ರಾವಣ ಚಾರಿತ್ರ್ಯವಂತ. ಸೀತೆಯನ್ನು ಅಪಹರಿಸುವ ಒಂದು ತಪ್ಪನ್ನು ಬಿಟ್ಟರೆ, ಯಾವ ಅಪವಾದವೂ ಅವನ ಮೇಲಿಲ್ಲ. ಸೀತೆಯ ಅಪಹರಣಕ್ಕೂ ರಾವಣನು ಪಶ್ಚಾತಾಪಪಡುತ್ತಾನೆ. ಯುದ್ಧದಲ್ಲಿ ರಾಮನನ್ನು ಗೆದ್ದು, ಸೀತೆಯನ್ನು ರಾಮನಿಗೆ ಮರಳಿಸಲು ನಿರ್ಧರಿಸುತ್ತಾನೆ. ಅಂದರೆ, ದಕ್ಷಿಣಭಾರತದಲ್ಲಿ ರಾವಣನನ್ನು ಖಳನಾಯಕನಾಗಿ ನೋಡುವ ಪರಂಪರೆ ಇಲ್ಲವೆಂದೇ ಹೇಳಬೇಕು.

ರಾಮಾಯಣದ ಕಥೆಯನ್ನು ಆರ್ಯ-ದ್ರಾವಿಡ ಸಂಘರ್ಷವಾಗಿ ಹಲವು ಎಡಪಂಥೀಯ ಲೇಖಕರು ಕಂಡಿದ್ದಾರೆ. ಅವರ ವಾದದಲ್ಲಿ ಖಂಡಿತಾ ಹುರುಳಿದೆ. ಈ ದೃಷ್ಟಿಯಿಂದ ನೋಡಿದರೆ, ವಿಜಯದಶಮಿಯ ಆಚರಣೆಯು ಉತ್ತರಭಾರತಕ್ಕಿಂತ ದಕ್ಷಿಣಭಾರತದಲ್ಲಿ ಭಿನ್ನ ನೆಲೆಯಲ್ಲಿದೆ. ಅಂದರೆ, ಉತ್ತರಭಾರತದಲ್ಲಿ ಆರ್ಯರ ವಿಜಯವನ್ನು ಪರೋಕ್ಷವಾಗಿ ವಿಜಯದಶಮಿಯ ರೂಪದಲ್ಲಿ ಆಚರಿಸಲಾಗುತ್ತದೆ ಎನ್ನುವುದು ಸತ್ಯ.
ದಕ್ಷಿಣಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ದಸರಾ ಅಥವಾ ವಿಜಯದಶಮಿಯು ಇನ್ನೊಂದು ಸಂಘರ್ಷದ ಕಥೆಯನ್ನು ಹೇಳುತ್ತದೆ. ಅದು ಮಹಿಷಾಸುರನಿಗೆ ಸಂಬಂಧಿಸಿದ ಕಥೆ. ರಾಮಾಯಣದಲ್ಲಿ ರಾವಣನನ್ನು ಚಿತ್ರಿಸಿದಂತೆ ʼದೇವಿಭಾಗವತʼದಲ್ಲಿ ಮಹಿಷಾಸುರನನ್ನು ಅಸುರನಂತೆ ಚಿತ್ರಿಸಲಾಗಿದೆ. ಕೋಣದ ಮುಖ ಇರುವ ಮನುಷ್ಯ ಮಹಿಷಾಸುರ. ಮಹಿಷನ ಉಪಟಳ ತಾಳಲಾರದೆ ದೇವತೆಗಳ ಪ್ರಾರ್ಥನೆಯಂತೆ ದುರ್ಗಾದೇವಿಯು ಮಹಿಷಾಸುರನೊಂದಿಗೆ ಹತ್ತು ದಿನ ಹೋರಾಡಿ ಹತ್ತನೆ ದಿನ ಕೊಲ್ಲುತ್ತಾಳೆ. ಅದನ್ನು ವಿಜಯದಶಮಿಯಾಗಿ ಆಚರಿಸಲಾಗುತ್ತದೆ.
ಆದರೆ, ಮಹಿಷಾಸುರನಿಗೆ ಸಂಬಂಧಿಸಿದ ಕಥೆಗೆ ಇನ್ನೊಂದು ಆಯಾಮವೂ ಇದೆ. ಮೈಸೂರು ಎಂಬ ಹೆಸರು ಬಂದಿರುವುದು ಮಹಿಷರಾಜನಿಂದ ಎಂದು ನಂಬಲಾಗಿದೆ. ಇದರಿಂದ ಕರ್ನಾಟಕದ ಆ ಭಾಗವನ್ನು ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತು. ಐತಿಹ್ಯದ ಪ್ರಕಾರ, ಮಹಿಷ ಅಸುರನಲ್ಲ. ಪ್ರಜೆಗಳು ಅತ್ಯಂತ ಪ್ರೀತಿಸುವ ರಾಜ. ಬೌದ್ಧಧರ್ಮದ ಅನುಯಾಯಿಯಾಗಿದ್ದ. ಅವನು ಇಲ್ಲಿನ ಮೂಲನಿವಾಸಿಗಳ ದೊರೆ. ಆದರೆ, ದಕ್ಷಿಣಕ್ಕೆ ಬಂದ ಆರ್ಯದೊರೆಗಳು ಆತನನ್ನು ಅಧಿಕಾರದಿಂದ ಇಳಿಸಿ, ಮೋಸದಿಂದ ಕೊಂದರು. ಬಳಿಕ ಪೌರಾಣಿಕ ಕಥೆ ಕಟ್ಟಲಾಯಿತು. ದೀಪಾವಳಿಗೆ ಸಂಬಂಧಿಸಿದಂತೆ, ಕರಾವಳಿಯಲ್ಲಿ ಪ್ರಚಲಿತವಿರುವ ಬಲಿಚಕ್ರವರ್ತಿಯ ಕಥೆಯಂತೆ ಮೈಸೂರಿನ ಮಹಿಷಾಸುರನ ಕಥೆ.
ಇಲ್ಲಿ ಹಲವು ವಿಚಾರಗಳು ವಿಶೇಷಣೆಗೆ ಅರ್ಹವಾಗಿದೆ. ಒಂದು, ಉತ್ತರದಲ್ಲಿ ರಾವಣಾಸುರನನ್ನು ನೆನಪಿಸಲು ರಾವಣನ ಪ್ರತಿಕೃತಿ ಸುಡುವುದು, ಇಲ್ಲಿ ಅಸುರ ಮಹಿಷಾಸುರನನ್ನು ಚಾಮುಂಡಿ ಕೊಂದಳು ಎಂಬ ಪೌರಾಣಿಕ ಕಥೆ. ಎರಡರಲ್ಲೂ ಸಾಮ್ಯವಿದೆ. ಅವರನ್ನು ಅಸುರರಂತೆ ಚಿತ್ರಿಸಲಾಯಿತು ಎಂಬುದಂತೂ ಸತ್ಯ. ಎರಡು, ದಕ್ಷಿಣಭಾರತದಲ್ಲಿ ರಾವಣನನ್ನು ದ್ವೇಷಿಸುವ ಪರಂಪರೆಯಿಲ್ಲ. ಬದಲಾಗಿ ಅನುಕಂಪದಿಂದ ನೋಡಲಾಗುತ್ತದೆ. ಹಾಗೆಯೇ, ಮೈಸೂರಿನಂಥ ನಾಡಿಗೆ ಮಹಿಷನ ಹೆಸರನ್ನು ಇಡಬೇಕಾದರೆ ಆತ ಪ್ರಜಾಪೂರಕನಾದ ಅರಸನಾಗಿದ್ದ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮೂರು, ರಾವಣ ಮತ್ತು ಮಹಿಷ ಇಬ್ಬರೂ ದಕ್ಷಿಣಭಾರತಕ್ಕೆ ಸೇರಿದವರು ಎಂಬುದು ಮಹತ್ತ್ವದ ಸಂಗತಿ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಪ್ರಚಲಿತವಿರುವ ದಸರಾಕ್ಕೆ ಸಂಬಂಧಿಸಿದ ಪುರಾಣಕಥೆಗಳು ಆರ್ಯ-ದ್ರಾವಿಡ ಸಂಘರ್ಷವನ್ನು ಸಂಕೇತಿಸುತ್ತದೆ ಎಂಬುದಂತೂ ಸತ್ಯ.

ನಮ್ಮ ದೇಶದಲ್ಲಿ ಪುರಾಣ ಕಥೆಗಳಿಗೆ ಭಿನ್ನವಾಗಿ, ಪ್ರತಿ ಪ್ರದೇಶದಲ್ಲೂ ಅದಕ್ಕೆ ವಿರುದ್ಧವಾದ ಜನಪದ ಕಥೆ ಅಥವಾ ಐತಿಹ್ಯಗಳು ಪ್ರಚಲಿತವಿರುವುದನ್ನು ಕಾಣುತ್ತೇವೆ. ರಾಮಾಯಣ, ರಾವಣ, ಮಹಿಷ, ಬಲಿ-ಹೀಗೆ ಪುರಾಣಕ್ಕೆ ಭಿನ್ನವಾದ ಜನಪದ ಕಥೆ, ಐತಿಹ್ಯ, ಪುರಾಣಗಳು ಅಸ್ತಿತ್ವದಲ್ಲಿದೆ. ಪುರಾಣಗಳು ಆಳುವ ವರ್ಗವಾದ ಮೇಲ್ಜಾತಿ, ಮೇಲ್ವರ್ಗಗಳ ಶೌರ್ಯದ ಕಥೆಯಾದರೆ, ಜನಪದ ಕಥೆ, ಐತಿಹ್ಯಗಳು ದುಡಿಯುವ ವರ್ಗದ ಅಸಹಾಯಕತೆಯ ಅಭಿವ್ಯಕ್ತಿಯಾಗಿದೆ.
ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುವ ಕಟೀಲಿನ ಹೆಸರಿನ ಬಗೆಗಿರುವ ಐತಿಹ್ಯವನ್ನು ಇಲ್ಲಿ ಪ್ರಸ್ತಾಪಿಸಬಹುದು. ಅರುಣಾಸುರನನ್ನು ಕೊಂದು ನಂದಿನಿ ನದಿಯ ಕಟಿ ಪ್ರದೇಶದಲ್ಲಿ ದುರ್ಗಾದೇವಿ ನೆಲೆಯಾದುದರಿಂದ ಕಟೀಲು ಎಂದು ಹೆಸರಾಯಿತು ಎಂದು ಪುರಾಣ ಹೇಳಿದರೆ. ಪರಿಶಿಷ್ಟವರ್ಗಕ್ಕೆ ಸೇರಿದ ತಾಯಿಯೊಬ್ಬಳು ಮಗ ಕಟಿಲನೊಂದಿಗೆ ಗುಡ್ಡದ ಸೊಪ್ಪು ಕತ್ತರಿಸುವಾಗ, ಕತ್ತಿ ಶಿವಲಿಂಗದ ಕಲ್ಲಿಗೆ ತಾಗಿ ರಕ್ತ ಚಿಮ್ಮಿದಾಗ, ಹೆದರಿ ‘ಓ ಮಗ ಕಟೀಲ’ ಎಂದು ಮಗನ ಹೆಸರು ಕರೆದು, ಬೊಬ್ಬೆ ಹೊಡೆಯುತ್ತಾಳೆ. ಇದರಿಂದ ಕಟೀಲು ಎಂಬ ಹೆಸರು ಬಂತು ಎಂದು ಜನಪದ ಐತಿಹ್ಯ ಹೇಳುತ್ತದೆ. ಹೀಗೆ ಭಾರತೀಯ ಸಂದರ್ಭದ ಸಾಂಸ್ಕೃತಿಕ ವಿಶ್ಲೇಷಣೆಯಲ್ಲಿ ಪುರಾಣಕ್ಕಿಂತ ಜನಪದ ಪುರಾಣ ಮತ್ತು ಐತಿಹ್ಯಗಳು ವಸ್ತುಸ್ಥಿತಿಗೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು.

ಡಾ. ಗಣನಾಥ ಎಕ್ಕಾರು
ಜಾನಪದ ವಿದ್ವಾಂಸರು
ಮೊ: 9964583433
ಇದನ್ನೂ ಓದಿ- ಗ್ಯಾನೇಶನ ಅವಾಂತರ ಇಕ್ಕಟ್ಟಿನಲ್ಲಿ ಮೋದಿ ಸರಕಾರ


