12 ರಿಂದ 14ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಬೌದ್ಧ ಧರ್ಮವು ತನ್ನ ಸಾಂಸ್ಥಿಕ ನೆಲೆಗಟ್ಟನ್ನು ಕಳೆದುಕೊಳ್ಳುತ್ತಿತ್ತು. ಶಾಸನಗಳಲ್ಲಿ ಬುದ್ಧನನ್ನು ರಾಜನ ‘ಮತಿ’, ‘ಯೋಗಬಲ’ ಮತ್ತು ‘ವಿಷ್ಣುವಿನ ಅವತಾರ’ ಎಂದು ವೈಭವೀಕರಿಸಿದ್ದು ಕೇವಲ ಧಾರ್ಮಿಕ ಸಹಿಷ್ಣುತೆಯ ಕುರುಹಾಗಿರದೆ, ಅದೊಂದು ಬೃಹತ್ ಸಾಂಸ್ಕೃತಿಕ ವಿಲೀನ ಪ್ರಕ್ರಿಯೆಯ ಭಾಗವಾಗಿ ತೋರುತ್ತದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಕಾಲದ ಗರ್ಭದಲ್ಲಿ ಹುದುಗಿರುವ ಇತಿಹಾಸದ ಪುಟಗಳನ್ನು ತೆರೆದಾಗ ಕಲ್ಲುಗಳು ಕೇವಲ ಮೌನ ಸಾಕ್ಷಿಗಳಾಗಿ ಉಳಿಯದೆ, ಅಂದಿನ ಕಾಲದ ಸಾಂಸ್ಕೃತಿಕ ಪಲ್ಲಟಗಳನ್ನೂ ವೈಚಾರಿಕ ಮಥನಗಳನ್ನೂ ನಮಗೆ ಉಸುರುತ್ತವೆ. ಭಾರತೀಯ ಪರಂಪರೆಯಲ್ಲಿ ಬುದ್ಧ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಮಹಾನ್ ತತ್ವವಾಗಿ, ನಂತರದಲ್ಲಿ ವಿಷ್ಣುವಿನ ಅವತಾರವಾಗಿ ಹೇಗೆ ಅರಗಿಸಿಕೊಂಡು ಹೋಗಲ್ಪಟ್ಟ ಎನ್ನುವುದಕ್ಕೆ ಕರ್ನಾಟಕದ ಶಾಸನಗಳು ಅಪೂರ್ವ ಸಾಕ್ಷ್ಯಗಳನ್ನು ಒದಗಿಸುತ್ತವೆ. ಅದರಲ್ಲೂ ಹೊಯ್ಸಳ ಮತ್ತು ವಿಜಯನಗರ ಕಾಲಘಟ್ಟದ ಶಾಸನಗಳಲ್ಲಿ ವ್ಯಕ್ತವಾಗುವ ಬುದ್ಧನ ಚಿತ್ರಣವು ಧಾರ್ಮಿಕ ಸಾಮರಸ್ಯ ಮತ್ತು ರಾಜಪ್ರಭುತ್ವಕ್ಕೆ ದೈವತ್ವದ ಮೆರುಗನ್ನು ನೀಡುವ ಪ್ರಕ್ರಿಯೆಯನ್ನು ಅತ್ಯಂತ ಕುತೂಹಲಕಾರಿಯಾಗಿ ಬಿಂಬಿಸುತ್ತವೆ. ಹನ್ನೆರಡು ಮತ್ತು ಹದಿನಾಲ್ಕನೆಯ ಶತಮಾನದ ಮೂರು ವಿಶಿಷ್ಟ ಶಾಸನ ಪದ್ಯಗಳು ನಮ್ಮ ಚಿಂತನೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುತ್ತವೆ.
ಹನ್ನೆರಡನೆಯ ಶತಮಾನದ ಹೊಯ್ಸಳರ ಕಾಲದ ಹಾಸನದ ಶಾಸನವೊಂದು(ಕ್ರಿ.ಶ. 1170) ವಿಷ್ಣುವಿನ ಅವತಾರಗಳನ್ನು ರಾಜನ ಶರೀರಕ್ಕೆ ಆರೋಪಿಸುವ ಮೂಲಕ ಅದ್ಭುತವಾದ ರೂಪಕವನ್ನು ಸೃಷ್ಟಿಸುತ್ತದೆ. ಆ ಪದ್ಯ ಹೀಗಿದೆ:
ಪದದೊಳ್ ಕೂರ್ಮಸ್ವರೂಪಂ ನಯನಯುಗಳದೊಳ್ ಮತ್ಸ್ಯರೂಪಂ ಘನಗ್ರೀ
ವದೊಳಾದಿಕ್ರೋಡ ರೂಪಂ ನಡುವಿನೊಳು ನೃಸಿಂಹತ್ವ ವಾತ್ಮ ಪ್ರಭಾವಾ
ಸ್ಪದದೊಳ್ ರಾಮತ್ರಯತ್ವಂ ಮತಿವಿಕಸನದೊಳ್ ಬುದ್ಧ ರೂಪಾಗಿ ಗುಬ್ಜಾಂ
ಗದ ಕಲ್ಕಿತ್ವಕ್ಕೆ ಮೆಯ್ದೋರದ ಹರಿಯೆನಿಸಂ ವಿಷ್ಣುಜಿಷ್ಣುಕ್ಸಿತೀಶಂ
ಈ ಪದ್ಯವು ರಾಜನ ಅಂಗಾಂಗಗಳನ್ನು ದಶಾವತಾರಗಳಿಗೆ ಹೋಲಿಸುತ್ತಾ ಸಾಗುತ್ತದೆ. ಇಲ್ಲಿ ಬುದ್ಧನ ಸ್ಥಾನವು ಅತ್ಯಂತ ಆಯಕಟ್ಟಿನದ್ದಾಗಿದೆ. “ಮತಿವಿಕಸನದೊಳ್ ಬುದ್ಧ ರೂಪಾಗಿ” ಎನ್ನುವ ಸಾಲು ರಾಜನ ಬುದ್ಧಿಶಕ್ತಿ ಅಥವಾ ವಿವೇಚನೆಯ ವಿಕಾಸವನ್ನೇ ಬುದ್ಧನ ರೂಪವೆಂದು ಕರೆಯುತ್ತದೆ. ಇಲ್ಲಿ ಬುದ್ಧ ಕೇವಲ ಒಬ್ಬ ಭಿಕ್ಷುವೋ ಅಥವಾ ಸನ್ಯಾಸಿಯೋ ಅಲ್ಲ; ಬದಲಿಗೆ ಆತ ಅರಿವಿನ, ಜ್ಞಾನದ ಮತ್ತು ಪರಿಪಕ್ವ ಮತಿಯ ಸಂಕೇತ. ಅರಸನೊಬ್ಬನಿಗೆ ಯುದ್ಧದ ಪರಾಕ್ರಮ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಆತನ ಪ್ರಜ್ಞೆಯ ವಿಕಾಸ. ರಾಜನನ್ನು ‘ವಿಷ್ಣುಜಿಷ್ಣುಕ್ಷಿತೀಶ’ ಎಂದು ಕರೆಯುವ ಮೂಲಕ, ವಿಷ್ಣುವಿನ ಅಂಶವಾದ ಬುದ್ಧತ್ವವು ಅರಸನ ವೈಚಾರಿಕತೆಯಲ್ಲಿ ನೆಲೆಸಿದೆ ಎಂಬ ಉನ್ನತ ಕಲ್ಪನೆಯನ್ನು ಇಲ್ಲಿ ಗುರುತಿಸಬಹುದು. ಹಾಗೆಯೇ ಬುದ್ಧನು ಅವತಾರ ಪರಂಪರೆಯ ಭಾಗವಾಗಿ ವೈದಿಕ ಮತದೊಳಗೆ ಸಮ್ಮಿಳಿತಗೊಳಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಹೊಯ್ಸಳ ರಾಜವಂಶದ ಮತ್ತೊಬ್ಬ ಪ್ರಬಲ ದೊರೆ ಬಲ್ಲಾಳ ಭೂಪಾಲನನ್ನು ಸ್ತುತಿಸುವ ಚನ್ನಗಿರಿಯ ಶಾಸನವು(ಕ್ರಿ.ಶ.1220) ಈ ಅವತಾರ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸುತ್ತದೆ. ಶಾಸನದ ಆ ಪದ್ಯ ಇಂತಿದೆ:
ಅನವದ್ಯೆ ಕ್ಷಣಮತ್ಸ್ಯನಂಫ್ರಿಕಮಠಂ ಗ್ರೀವಾವರಾಹಂ ಸುಮ
ಧ್ಯನೃಸಿಂಹಂ ಕ್ಷಿತಿಮಂಡಲಾಕ್ರಮಣಕೇಳೀವಾಮನಂ ಶತ್ರುಶಾಸನ
ರಾಮತ್ರಿತಯಂ ಸ್ವಯೋಗ ಬಳಬುದ್ಧಂ ದುಷ್ಪ ಜೋನ್ಮಾತ
ಕಲ್ಕಿ ನಿಜಾಧೀಶ ದಶಾವತಾರನೊಗೆದಂ ಬಲ್ಲಾಳ ಭೂಪಾಳಕಂ
ಈ ಪದ್ಯದಲ್ಲಿ ಬುದ್ಧನಿಗೆ ನೀಡಲಾದ ವಿಶೇಷಣ ಅತ್ಯಂತ ಮಾರ್ಮಿಕವಾದುದು. “ಸ್ವಯೋಗ ಬಳಬುದ್ಧಂ” ಎಂದು ಕರೆಯುವ ಮೂಲಕ ಬುದ್ಧನನ್ನು ಕೇವಲ ಮೌನಕ್ಕೆ ಸೀಮಿತಗೊಳಿಸದೆ, ‘ಯೋಗಬಲ’ದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಈ ಹಿಂದಿನ ಹಾಸನದ ಶಾಸನದಲ್ಲಿ ಬುದ್ಧನು ‘ಮತಿ’ ಅಥವಾ ಬುದ್ಧಿವಂತಿಕೆಗೆ ಸಾಕ್ಷಿಯಾಗಿದ್ದರೆ, ಇಲ್ಲಿ ಆತ ಆಂತರಿಕ ಶಕ್ತಿಯ ಅಥವಾ ಯೋಗದ ಪ್ರಭಾವಕ್ಕೆ ನಿದರ್ಶನವಾಗುತ್ತಾನೆ. “ಕ್ಷಿತಿಮಂಡಲಾಕ್ರಮಣಕೇಳೀವಾಮನಂ” ಎಂದು ರಾಜನ ದಿಗ್ವಿವಿಜಯವನ್ನು ವರ್ಣಿಸುವ ಬೆನ್ನಲ್ಲೇ, ಬುದ್ಧನ ಪ್ರಶಾಂತತೆಯನ್ನು ರಾಜನ ಆಂತರಿಕ ಸಮತೋಲನಕ್ಕೆ ಹೋಲಿಸಿರುವುದು ಆ ಕಾಲದ ಕವಿಗಳ ಪ್ರತಿಭೆಗೆ ಸಾಕ್ಷಿ. ರಾಜನು ಹೊರಗಿನ ಶತ್ರುಗಳನ್ನು ರಾಮನಂತೆ ಜಯಿಸಿದರೆ, ತನ್ನ ಒಳಗಿನ ಇಂದ್ರಿಯಗಳನ್ನು ಬುದ್ಧನಂತೆ ಯೋಗಬಲದಿಂದ ನಿಯಂತ್ರಿಸುತ್ತಾನೆ ಎಂಬ ಧ್ವನಿ ಇಲ್ಲಿದೆ. ಈ ಮೂಲಕ ಬುದ್ಧನು ಕೇವಲ ಧಾರ್ಮಿಕ ವ್ಯಕ್ತಿಯಾಗದೆ ರಾಜಧರ್ಮದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಡುತ್ತಾನೆ.
ಈ ಬೆಳವಣಿಗೆಯ ಪರಾಕಾಷ್ಠೆಯನ್ನು ನಾವು ಕ್ರಿ.ಶ.1397ರ ಬೇಲೂರಿನ ಪ್ರಸಿದ್ಧ ಶಾಸನದಲ್ಲಿ ಕಾಣುತ್ತೇವೆ. ವಿಜಯನಗರದ ಕಾಲಕ್ಕೆ ಬರುವಷ್ಟರಲ್ಲಿ ಬುದ್ಧನ ಬಗೆಗಿನ ದೃಷ್ಟಿಕೋನವು ಸಂಕುಚಿತ ಅವತಾರ ಕಲ್ಪನೆಯನ್ನು ದಾಟಿ ಸರ್ವಧರ್ಮ ಸಮನ್ವಯದ ಹಂತಕ್ಕೆ ತಲುಪುತ್ತದೆ. ಅತ್ಯಂತ ಸುಪ್ರಸಿದ್ಧವಾದ ಆ ಶ್ಲೋಕ ಹೀಗಿದೆ:
ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮತಿ ವೇದಾಂತಿನೋ
ಬೌದ್ಧಾ ಬುದ್ದ ಇತಿ ವ್ರಮಾಣವಟರ್ಃ ಕರ್ತೇತಿ ನೈಯಾಯಿಕಾಃ
ಅರ್ಹಶ್ಚೇತಿಹ ಜೈನಶಾಸನಮಿತಿ ಕರ್ಮೇತಿ ಮೀಮಾಂಸಕಾಃ
ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವೇಶಸ್ಸದಾ
ಈ ಶ್ಲೋಕವು ಭಾರತೀಯ ದರ್ಶನಶಾಸ್ತ್ರದ ಸತ್ವವನ್ನೇ ಹಿಡಿದಿಟ್ಟಿದೆ. ಶೈವರು ಯಾರನ್ನು ಶಿವನೆಂದೂ, ವೇದಾಂತಿಗಳು ಯಾರನ್ನು ಬ್ರಹ್ಮನೆಂದೂ ಪೂಜಿಸುತ್ತಾರೋ, ಅದೇ ದೈವತ್ವವನ್ನು ಬೌದ್ಧರು ‘ಬುದ್ಧ ಇತಿ’ ಅಂದರೆ ಬುದ್ಧನೆಂದು ಆರಾಧಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಶಾಸನವು ಬುದ್ಧನನ್ನು ವಿಷ್ಣುವಿನ ಒಂದು ಅವಯವಕ್ಕೋ ಅಥವಾ ಕೇವಲ ಅವತಾರಕ್ಕೋ ಸೀಮಿತಗೊಳಿಸದೆ, ಪರತತ್ವದ ಒಂದು ಸ್ವತಂತ್ರ ಆಯಾಮವಾಗಿ ಗುರುತಿಸುತ್ತದೆ. “ಶ್ರೀ ಕೇಶವೇಶಸ್ಸದಾ” ಎನ್ನುವ ಮುಕ್ತಾಯದಲ್ಲಿ ಕೇಶವನೂ ಆ ಬುದ್ಧನೂ ಬೇರೆಯಲ್ಲ ಎಂಬ ಅದ್ವೈತ ಭಾವವಿದೆ. ಸಮಾಜದಲ್ಲಿರುವ ವಿಭಿನ್ನ ದರ್ಶನಗಳನ್ನು, ಅಂದರೆ ನೈಯಾಯಿಕರು, ಜೈನರು, ಮೀಮಾಂಸಕರ ನಂಬಿಕೆಗಳನ್ನು ಒಪ್ಪಿಕೊಳ್ಳುತ್ತಲೇ ಬುದ್ಧನನ್ನು ಆ ಪರಮಸತ್ಯದ ಒಂದು ಹೆಸರಾಗಿ ಚಿತ್ರಿಸಲಾಗಿದೆ.
ಈ ಮೂರು ಶಾಸನಗಳಲ್ಲಿ ಬುದ್ಧನ ಚಿತ್ರಣವು ಹಂತ ಹಂತವಾಗಿ ವಿಕಸನಗೊಂಡಿರುವುದು ಅರಿವಿಗೆ ಬರುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬುದ್ಧನು ರಾಜನ ‘ಮತಿ’ಯಾಗಿ ಶರೀರದ ಭಾಗವಾಗಿದ್ದರೆ, ಹದಿಮೂರನೆಯ ಶತಮಾನದ ಹೊತ್ತಿಗೆ ‘ಯೋಗಬಲ’ದ ಸಂಕೇತವಾಗುತ್ತಾನೆ. ಆದರೆ ಹದಿನಾಲ್ಕನೆಯ ಶತಮಾನದ ಅಂತ್ಯಕ್ಕೆ ಬುದ್ಧ ಕೇವಲ ರಾಜನ ಗುಣವಾಗದೆ, ಸಮಸ್ತ ಮಾನವಕುಲವು ಕಾಣಬಯಸುವ ‘ವಿದಧಾತು ವಾಂಛಿತಫಲಂ’ ಅಂದರೆ ಇಷ್ಟಾರ್ಥ ಸಿದ್ಧಿಸುವ ಪರಮ ಚೈತನ್ಯದ ರೂಪವಾಗಿ ಉನ್ನತೀಕರಿಸಲ್ಪಡುತ್ತಾನೆ. ಇದು ಕೇವಲ ಧಾರ್ಮಿಕ ವಿಲೀನ ಪ್ರಕ್ರಿಯೆಯಲ್ಲ, ಬದಲಿಗೆ ಬುದ್ಧನ ಅಹಿಂಸೆ ಮತ್ತು ಜ್ಞಾನದ ಹಾದಿಯನ್ನು ಅಂದಿನ ಸಮಾಜವು ತನ್ನದೇ ಆದ ಚೌಕಟ್ಟಿನಲ್ಲಿ ಗೌರವಿಸಿದ ರೀತಿಯಾಗಿದೆ.
ಈ ಶಾಸನ ಪದ್ಯಗಳು ತೋರುವ ಬುದ್ಧನು ಯಾವುದೇ ಸಂಘರ್ಷದ ಸಂಕೇತವಾಗಿರದೆ, ಸಮನ್ವಯದ ಕೊಂಡಿಯಾಗಿದ್ದಾನೆ. “ಕಲ್ಕಿತ್ವಕ್ಕೆ ಮೆಯ್ದೋರದ ಹರಿಯೆನಿಸಂ” ಎಂಬ ಹಾಸನದ ಶಾಸನದ ಸಾಲು ಅಸ್ಪಷ್ಟತೆಯ ನಡುವೆಯೂ ಹರಿಯ ಅಂತಿಮ ರೂಪದ ನಿರೀಕ್ಷೆಯನ್ನು ಒತ್ತಿ ಹೇಳುತ್ತಿದ್ದರೆ, ಬೇಲೂರಿನ ಶಾಸನವು ಆ ಎಲ್ಲ ಹುಡುಕಾಟಗಳಿಗೆ “ಕೇಶವೇಶ”ನ ರೂಪದಲ್ಲಿ ಉತ್ತರವನ್ನು ನೀಡುತ್ತದೆ. ಹೀಗೆ ಈ ಶಾಸನೋಕ್ತ ಪದ್ಯಗಳು, ಸತ್ಯವು ಒಂದೇ ಆದರೂ ಅದನ್ನು ಗ್ರಹಿಸುವ ದಾರಿಗಳು ವಿಭಿನ್ನ ಎಂಬ ಸಾರ್ವಕಾಲಿಕ ತತ್ವವನ್ನು ಬಹುಮಾರ್ಮಿಕವಾಗಿ ಬಿಂಬಿಸುತ್ತವೆ. ಅರಸನ ವಿವೇಚನೆಯ ವಿಕಾಸದಲ್ಲಿ ಬುದ್ಧನ ಪ್ರಜ್ಞೆ, ರಾಜನ ಆತ್ಮಬಲದ ಯೋಗಸಾಧನೆಯಲ್ಲಿ ಆತನ ಸ್ಥಿರತೆ ಹಾಗೂ ಪ್ರತಿಯೊಬ್ಬ ಭಕ್ತನ ಆರಾಧ್ಯ ದೈವದಲ್ಲಿಯೂ ಬುದ್ಧನ ತತ್ವಗಳು ಅಂತರ್ಗತವಾಗಿರಬೇಕು ಎಂಬ ಉದಾತ್ತವಾದ ಆಶಯವು ಈ ಶಾಸನಗಳ ಅಂತರಂಗದಲ್ಲಿ ಮಿಡಿಯುತ್ತಿದೆ. ಈ ಕಾವ್ಯಜನ್ಯ ಸಾಲುಗಳಲ್ಲಿ ಮಿಳಿತವಾಗಿರುವ ಸಮನ್ವಯದ ದೃಷ್ಟಿಕೋನವು ಬುದ್ಧನ ವಿಚಾರಧಾರೆಗಳು ಕನ್ನಡ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಎಷ್ಟು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಸಮೀಕೃತಗೊಂಡಿದ್ದವು ಎಂಬುದಕ್ಕೆ ಒಂದು ಅಪೂರ್ವ ಸಾಕ್ಷಿಯಾಗಿದೆ.
ಆದರೆ, ಈ ಸಮೀಕರಣದ ಹಿನ್ನೆಲೆಯಲ್ಲಿ, ಶಾಸನಗಳಲ್ಲಿ ಬುದ್ಧನನ್ನು ಬಳಸಲಾಗಿರುವುದು ಕೇವಲ ಸಮನ್ವಯವೋ ಅಥವಾ ಸಾಂಸ್ಕೃತಿಕ ವಿಲೀನವೋ? ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾಗುತ್ತದೆ. ಹೊಯ್ಸಳ ಮತ್ತು ವಿಜಯನಗರ ಕಾಲದ ಶಾಸನಗಳಲ್ಲಿ ಬುದ್ಧನ ಚಿತ್ರಣವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟರೂ, ಅಂದಿನ ಐತಿಹಾಸಿಕ ವಾಸ್ತವವನ್ನು ನಾವು ಗಮನಿಸುವುದು ಅತ್ಯಗತ್ಯ. 12 ರಿಂದ 14ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಬೌದ್ಧ ಧರ್ಮವು ತನ್ನ ಸಾಂಸ್ಥಿಕ ನೆಲೆಗಟ್ಟನ್ನು ಕಳೆದುಕೊಳ್ಳುತ್ತಿತ್ತು. ಶಾಸನಗಳಲ್ಲಿ ಬುದ್ಧನನ್ನು ರಾಜನ ‘ಮತಿ’, ‘ಯೋಗಬಲ’ ಮತ್ತು ‘ವಿಷ್ಣುವಿನ ಅವತಾರ’ ಎಂದು ವೈಭವೀಕರಿಸಿದ್ದು ಕೇವಲ ಧಾರ್ಮಿಕ ಸಹಿಷ್ಣುತೆಯ ಕುರುಹಾಗಿರದೆ, ಅದೊಂದು ಬೃಹತ್ ಸಾಂಸ್ಕೃತಿಕ ವಿಲೀನ ಪ್ರಕ್ರಿಯೆಯ ಭಾಗವಾಗಿ ತೋರುತ್ತದೆ.
ಶ್ರಮಣ ಪರಂಪರೆಯ ಆಧಾರಸ್ತಂಭವಾಗಿದ್ದ ಬೌದ್ಧ ಧರ್ಮವನ್ನು ವೈದಿಕ ಚೌಕಟ್ಟಿನೊಳಗೆ ಮತ್ತು ದಶಾವತಾರದ ಪರಿಕಲ್ಪನೆಯೊಳಗೆ ಅರಗಿಸಿಕೊಳ್ಳುವ ಮೂಲಕ, ಬುದ್ಧನನ್ನು ಒಬ್ಬ ಐತಿಹಾಸಿಕ ವಿಚಾರವಾದಿಯ ಸ್ಥಾನದಿಂದ ಪೌರಾಣಿಕ ದೈವದ ಸ್ಥಾನಕ್ಕೆ ರೂಪಾಂತರಿಸಲಾಯಿತು. ಈ ಶಾಸನ ಪದ್ಯಗಳು ಕೇವಲ ಸೈದ್ಧಾಂತಿಕ ಸಮನ್ವಯವನ್ನು ಮಾತ್ರವಲ್ಲದೆ, ಬೌದ್ಧ ಧರ್ಮವು ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡು ಭಾರತೀಯ ವೈದಿಕ ಪರಂಪರೆಯೊಳಗೆ ಲೀನವಾದ ಕಾಲಘಟ್ಟದ ಐತಿಹಾಸಿಕ ಪಲ್ಲಟಗಳಿಗೂ ಮೂಕಸಾಕ್ಷಿಯಾಗಿವೆ. ಆದುದರಿಂದ, ಈ ಶಾಸನಗಳನ್ನು ಕೇವಲ ‘ಧಾರ್ಮಿಕ ಸಾಮರಸ್ಯ’ದ ದೃಷ್ಟಿಯಿಂದಷ್ಟೇ ಅಲ್ಲದೆ, ಪ್ರಬಲ ರಾಜಪ್ರಭುತ್ವ ಮತ್ತು ವೈದಿಕ ಮತಗಳು ಬೌದ್ಧ ತತ್ವಗಳನ್ನು ತಮ್ಮದಾಗಿಸಿಕೊಂಡ ರಾಜಕೀಯ-ಸಾಂಸ್ಕೃತಿಕ ಪ್ರಕ್ರಿಯೆಯಾಗಿಯೂ ನೋಡಬೇಕಿದೆ.
ಡಾ. ರವಿ ಎಂ ಸಿದ್ಲಿಪುರ
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಗ್ಯಾನೇಶನ ಅವಾಂತರ ಇಕ್ಕಟ್ಟಿನಲ್ಲಿ ಮೋದಿ ಸರಕಾರ


