ಬೆಂಗಳೂರು, ಅ. 14 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನವೆಂಬರ್ ತಿಂಗಳ ಅಂತ್ಯದೊಳಗೆ 800 ಕೋಟಿ ರೂ. ವೆಚ್ಚದಲ್ಲಿ 100 ಶಾಲೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ವಿದ್ಯಾರ್ಥಿವೇತನ ಯೋಜನೆಗಳು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೌಲನಾ ಆಜಾದ್ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಶಾಲೆಗಳ ಶಂಕು ಸ್ಥಾಪನೆಗೆ ಬೇಕಾದ ಸಿದ್ಧತೆಯನ್ನು ಮಾಡುತ್ತಿದ್ದೇವೆ ಎಂದರು.
ಇದರ ಜೊತೆಗೆ ಈಗಾಗಲೇ ಪ್ರಾರಂಭ ಮಾಡಿದಂತಹ ಸುಮಾರು 77 ಶಾಲೆಗಳ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದು, ಬಾಕಿ ಇರುವ ಶಾಲೆಗಳ ಕಟ್ಟಡಗಳನ್ನು ಪೂರ್ಣಗೊಳಿಸಲು ಬೇಕಾದ ಸಹಕಾರವನ್ನು ನೀಡಿ, ನವೆಂಬರ್ ಅಂತ್ಯದೊಳಗೆ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.
ಶಿಶುನಾಳ ಷರೀಫ್ ಶಾಲೆಗಳನ್ನು ಕೂಡ ಅಗತ್ಯ ಇರುವಂತಹ ಮತ್ತು ವಿದ್ಯಾರ್ಥಿಗಳು ಶಾಲೆಗೆ ಬರಬಹುದಾದ ಪ್ರದೇಶ ನೋಡಿಕೊಂಡು ಶಾಲೆಯನ್ನು ಪ್ರಾರಂಭಿಸಲಾಗುವುದು. ಈ ವರ್ಷ ನಮ್ಮ ಇಲಾಖೆ ಮುಖಾಂತರ ಸುಮಾರು 494.71 ಕೋಟಿ ರೂ.ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ನೀಡಲಾಗುವುದು ಎಂದರು.
ಪದವಿ ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ದೂರಶಿಕ್ಷಣ ಪದ್ಧತಿಯ ಮೂಲಕ ಪದವಿ/ಸ್ನಾತ್ತಕೋತ್ತರ ಪದವಿ ಶಿಕ್ಷಣ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕಿ ಯಾಸ್ಮಿನ್ ಬೇಗಂ ಉಪಸ್ಥಿತರಿದ್ದರು.

